Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಮೊದಲ ಸಂಪುಟ ಸಭೆಯಲ್ಲೇ ಜನಪರ ಯೋಜನೆ ಪ್ರಕಟಿಸಿದ ಬಸವ 'ರಾಜ'

ಮೊದಲ ಸಂಪುಟ ಸಭೆಯಲ್ಲೇ ಜನಪರ ಯೋಜನೆ ಪ್ರಕಟಿಸಿದ ಬಸವ ‘ರಾಜ’

ಬೆಂಗಳೂರು: ರಾಜ್ಯದ ನೂತನ ಮುಖ್ಯಮಂತ್ರಿಯಾಗಿ ಬಸವರಾಜ ಬೊಮ್ಮಾಯಿ ದೇವರ ಹೆಸರಿನಲ್ಲಿ ಪ್ರಮಾಣ ವಚನ ಸ್ವೀಕರಿಸಿದ ನಂತರ ವಿಧಾನಸೌಧಕ್ಕೆ ಆಗಮಿಸಿ, ವಿಧಾನಸೌಧದ ಬಾಗಿಲಿಗೆ ನಮಸ್ಕರಿಸಿ ಒಳಪ್ರವೇಶಿಸಿದರು.

ಇಲಾಖೆಗಳಿಗೆ ಶ್ರೇಯಾಂಕ
ತಮ್ಮ ಪ್ರಥಮ ಸಚಿವ ಸಂಪುಟ ಸಭೆ ಬಳಿಕ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ, ವಿಶ್ವಾಸಾರ್ಹ ಜವಾಬ್ದಾರಿಯುತ ಪಾರದರ್ಶಕ ಹಾಗೂ ದಕ್ಷ ಆಡಳಿತ ನೀಡಲು ತಂಡಸ್ಪೂರ್ತಿಯಿಂದ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು. ಇಲಾಖೆಗಳ ದಕ್ಷ ಕಾರ್ಯನಿರ್ವಹಣೆಗೆ ಶ್ರೇಯಾಂಕ ನೀಡುವ ಮೂಲಕ ಉತ್ತೇಜನ ನೀಡಲಾಗುವುದು.

ರಾಜ್ಯದಲ್ಲಿ ಅಧಿಕಾರಿಗಳು ಏನು ಮಾಡಿದರೂ ನಡೆಯುತ್ತದೆ ಎಂಬ ನಡವಳಿಕೆಗೆ ಇನ್ನು ಅವಕಾಶವಿಲ್ಲ. ಅಧಿಕಾರಿಗಳು 15 ದಿನದೊಳಗೆ ತಮ್ಮ ಇಲಾಖೆಯ ಎಲ್ಲಾ ಫೈಲ್ ಕ್ಲಿಯರ್ ಮಾಡಬೇಕು ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದರು.

ಆರ್ಥಿಕ ಶಿಸ್ತು
ನನ್ನದು ದಕ್ಷ, ಪ್ರಾಮಾಣಿಕ ಹಾಗೂ ಜನರಪರ ಆಡಳಿತ ಎಂದ ಬೊಮ್ಮಾಯಿ, ರಾಜ್ಯದಲ್ಲಿ ಆರ್ಥಿಕ ಶಿಸ್ತು ತರುವ ನಿಟ್ಟಿನಲ್ಲಿ ಚಿಂತನೆ ನಡೆಸಲಾಗಿದೆ. ಅಧಿಕಾರಿಗಳು ತಮ್ಮ ಇಲಾಖೆಯಲ್ಲಿ ಅನಗತ್ಯ ಖರ್ಚುಗಳಿಗೆ ಕಡಿವಾಣ ಹಾಕಬೇಕು. ಯೋಜನೆಗಳಿಗೆ ಯಾವುದೇ ರೀತಿಯಲ್ಲಿಯೂ ಸಮಸ್ಯೆಯಾಗದ ರೀತಿಯಲ್ಲಿ ಕನಿಷ್ಠ ಶೇ. 5ರಷ್ಟನ್ನು ಉಳಿಕೆ ಮಾಡಬೇಕು ಎಂದು ಸೂಚನೆ ನೀಡಿರುವುದಾಗಿ ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಪ್ರವಾಹ ಪರಿಸ್ಥಿತಿ ಎದುರಿಸುವುದು ಹಾಗೂ ಕೋವಿಡ್ ನಿಯಂತ್ರಣ ಹಾಗೂ ನಿರ್ವಹಣೆ ನಮ್ಮ ಆದ್ಯತೆ.

ಸರ್ಕಾರದ ಎಲ್ಲಾ ಇಲಾಖೆಗಳ ನಡುವೆ ಸಮನ್ವಯ, ಸಹಕಾರ ಇರಬೇಕು. ನಾವೆಲ್ಲರೂ ಒಂದು ತಂಡದಂತೆ ಕೆಲಸ ಮಾಡಬೇಕು. ನಿಗದಿತ ಸಮಯದೊಳಗೆ ಕೆಲಸ ಮಾಡುವ ಜವಾಬ್ದಾರಿ ಅಧಿಕಾರಿಗಳದ್ದು. ಅಧಿಕಾರಶಾಹಿ ಚಲ್ತಾ ಹೈ ವರ್ತನೆ ಬಿಡಬೇಕು. ಎಲ್ಲಾ ಅಧಿಕಾರಿಗಳಿಗೆ ನನ್ನ ಕಚೇರಿ ಸದಾ ತೆರೆದಿರುತ್ತದೆ. ಯಾವುದೇ ಸಮಯದಲ್ಲಿ ನನ್ನೊಂದಿಗೆ ಚರ್ಚಿಸಬಹುದು.

ಎಲ್ಲ ವರ್ಗದವರ ಪರವಾಗಿ ನನ್ನ ಸರ್ಕಾರ ಕೆಲಸ ಮಾಡಲಿದೆ. ಅವರೆಲ್ಲರಿಗೂ ನಮಗಾಗಿ ಸರ್ಕಾವಿದೆ ಎನ್ನುವ ಭಾವನೆ ಬರುವಂತೆ ನಾವು ಕೆಲಸ ಮಾಡಬೇಕು ಎಂದು ಸುದ್ದಿಗೋಷ್ಟಿಯಲ್ಲಿ ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದರು.

ಸಿಎಂ ಬೊಮ್ಮಾಯಿ ಪ್ರಕಟಿಸಿದ ಪ್ರಮುಖ ನಿರ್ಣಯಗಳು

ರೈತರ ಮಕ್ಕಳಿಗಾಗಿ ನೂತನ ವಿದ್ಯಾರ್ಥಿ ವೇತನ ಯೋಜನೆ ಜಾರಿ. ಈ ಯೋಜನೆಗೆ 1000 ಕೋ. ರೂ. ಮೀಸಲು

ಸಂಧ್ಯಾ ಸುರಕ್ಷಾ ಯೋಜನೆಯಡಿ ವೃದ್ಧಾಪ್ಯ ವೇತನವನ್ನು 1,000 ರೂ.ನಿಂದ 1,200 ರೂ. ಹೆಚ್ಚಳ. ಅದರಿಂದ 35.98 ಲಕ್ಷ ಫಲಾನುಭವಿಗಳಿಗೆ ಪ್ರಯೋಜನ

ವಿಧವಾ ವೇತನವನ್ನು 600 ರೂ.ನಿಂದ 800ಕ್ಕೆ ಹೆಚ್ಚಳ. 17.25 ಲಕ್ಷ ಫಲಾನುಭವಿಗಳಿಗೆ ಅನುಕೂಲ

ದಿವ್ಯಾಂಗರ ಮಾಸಿಕ ವೇತನ 600 ರೂ.ನಿಂದ 800ಕ್ಕೆ ಹೆಚ್ಚಳ. ಅದರಿಂದ 3.66 ಲಕ್ಷ ಫಲಾನುಭವಿಗಳಿಗೆ ಅನುಕೂಲ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!