Monday, August 15, 2022
Home ಸಮಾಚಾರ ಜಿಲ್ಲಾ ಸುದ್ದಿ ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆಗೆ ಶೀಘ್ರ ಪರಿಹಾರ ಒದಗಿಸಿ

ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆಗೆ ಶೀಘ್ರ ಪರಿಹಾರ ಒದಗಿಸಿ

ಸುದ್ದಿಕಿರಣ ವರದಿ
ಸೋಮವಾರ, ಜುಲೈ 11

ಮಳೆಯಿಂದ ಹಾನಿಗೊಳಗಾದ ಭತ್ತದ ಬೆಳೆಗೆ ಶೀಘ್ರ ಪರಿಹಾರ ಒದಗಿಸಿ
ಉಡುಪಿ: ಜಿಲ್ಲೆಯಲ್ಲಿ ವ್ಯಾಪಕ ಮಳೆಯಿಂದಾಗಿ ಬಿತ್ತನೆ ಮಾಡಿದ ಭತ್ತದ ಬೆಳೆ ಹಾನಿಯಾಗಿದ್ದು, ರೈತರಿಗೆ ಹಾನಿ ಮೊತ್ತವನ್ನು ಶೀಘ್ರ ಒದಗಿಸಬೇಕು. ಅವರು ಮತ್ತೊಮ್ಮೆ ಬಿತ್ತನೆ ಮಾಡಲು ಪೂರಕವಾಗಿ ಬಿತ್ತನೆ ಬೀಜ ಸಮರ್ಪಕ ವಿತರಣೆಗೆ ಮುಂದಾಗಬೇಕು ಎಂದು ಕೇಂದ್ರ ಕೃಷಿ ಮತ್ತು ರೈತ ಕಲ್ಯಾಣ ಖಾತೆ ರಾಜ್ಯ ಸಚಿವೆ ಶೋಭಾ ಕರಂದ್ಲಾಜೆ ಕೃಷಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಿದರು.

ಸೋಮವಾರ ಜಿಲ್ಲಾಧಿಕಾರಿ ಕಚೇರಿ ಕೋರ್ಟ್ ಹಾಲ್ ನಲ್ಲಿ ನಡೆದ ಜಿಲ್ಲೆಯ ಪ್ರಾಕೃತಿಕ ವಿಕೋಪ ಸಂಬಂಧಿಸಿದ ಪರಿಶೀಲನ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

1,300 ಹೆಕ್ಟೇರ್ ಭತ್ತ ಬೆಳೆ ನಷ್ಟ
ಜಿಲ್ಲೆಯಲ್ಲಿ ಜೂನ್ ತಿಂಗಳಲ್ಲಿ ವಾಡಿಕೆ ಮಳೆಗಿಂತ ಶೇ. 31ರಷ್ಟು ಕಡಿಮೆ ಮಳೆಯಾಗಿ ಜುಲೈ 1ರಿಂದ ಈವರೆಗೆ ವಾಡಿಕೆ ಮಳೆಗಿಂತ ಶೇ. 136ರಷ್ಟು ಹೆಚ್ಚುವರಿ ಮಳೆಯಾಗಿದೆ. ಕಳೆದ ತಿಂಗಳಲ್ಲಿ ಕುಂಠಿತ ಮಳೆಯಿಂದಾಗಿ ಬಿತ್ತನೆ ಕಾರ್ಯ ನಿಗದಿತ ಪ್ರಮಾಣದಲ್ಲಿ ಆಗದೇ ಜೂನ್ ಕೊನೆಯ ವಾರ ಹಾಗೂ ಜುಲೈ ಮೊದಲ ವಾರದಲ್ಲಿ ಬಿತ್ತನೆ ಕಾರ್ಯ ಚುರುಕುಗೊಂಡಿದ್ದು, ಇದುವರೆಗೆ 13,526 ಹೆಕ್ಟೇರ್ ಬಿತ್ತನೆಯಾಗಿದ್ದು, ಕಳೆದ 4- 5 ದಿನದಿಂದ ಸುರಿದ ಹೆಚ್ಚಿನ ಮಳೆಯಿಂದಾಗಿ ಅಂದಾಜು 1,300 ಹೆಕ್ಟೇರ್ ಗೂ ಅಧಿಕ ಬೆಳೆ ಹಾನಿ ಉಂಟಾಗಿದೆ.

ಮಳೆ ಪ್ರಮಾಣ ತಗ್ಗಿದ ನಂತರ ಬೆಳೆ ಹಾನಿಯನ್ನು ನಿಖರವಾಗಿ ಗುರುತಿಸಿ ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿಯಡಿ ಪರಿಹಾರ ಒದಗಿಸುವ ಜೊತೆಗೆ ಸ್ಥಳೀಯವಾಗಿ ಬೇಡಿಕೆ ಇರುವ ಎಂ.ಓ.4 ಬಿತ್ತನೆ ಬೀಜವನ್ನು ರೈತರಿಗೆ ಸಹಾಯಧನದಡಿ ವಿತರಿಸಲು ಸೂಚಿಸಿದರು.

ಶಾಶ್ವತ ಪರಿಹಾರ
ಜಿಲ್ಲೆಯಲ್ಲಿ ಮಳೆಯಿಂದಾಗಿ ಕಡಲ್ಕೊರೆತ ಉಂಟಾಗಿ ಸಮುದ್ರ ತೀರದಲ್ಲಿರುವ ಮೀನುಗಾರರಲ್ಲಿ ಆತಂಕ ಉಂಟಾಗಿದೆ. ಕಡಲ್ಕೊರೆತ ಉಂಟಾಗದಂತೆ ಶಾಶ್ವತ ಕಾಮಗಾರಿ ಕೈಗೊಳ್ಳಲು ಮುಂದಾಗಬೇಕು. ಪ್ರಸ್ತುತ ಎನ್.ಡಿ.ಆರ್.ಎಫ್ ನಿಯಮಾವಳಿಯಲ್ಲಿ ಕಡಲ್ಕೊರೆತ ಕಾಮಗಾರಿಗಳಿಗೆ ಅವಕಾಶವಿಲ್ಲ. ಅದನ್ನು ಈ ವ್ಯಾಪ್ತಿಗೆ ತರಲು ಕೇಂದ್ರ ಸರ್ಕಾರಕ್ಕೆ ಪ್ರಸ್ತಾವನೆ ಕಳುಹಿಸಿ, ಮಾಹಿತಿ ನೀಡಿದಲ್ಲಿ ಈ ಬಗ್ಗೆ ಕೇಂದ್ರ ಸರ್ಕಾರದ ಮಟ್ಟದಲ್ಲಿ ಚರ್ಚಿಸಿ ಅನುಕೂಲ ಮಾಡಿಕೊಡುವುದಾಗಿ ಭರವಸೆ ನೀಡಿದರು.

ಅತಿವೃಷ್ಟಿಯಿಂದಾಗಿ ರಸ್ತೆ, ಶಾಲೆ, ಅಂಗನವಾಡಿ, ಸರ್ಕಾರಿ ಕಟ್ಟಡ, ಸೇತುವೆಗಳೂ ಸೇರಿದಂತೆ ಮತ್ತಿತರ ಶಾಶ್ವತ ಕಾಮಗಾರಿಗಳಿಗೆ ಹಾನಿ ಉಂಟಾಗಿದ್ದು, ಅದರ ಹಾನಿಯ ಮೊತ್ತವನ್ನು ನಿಖರವಾಗಿ ಗುರುತಿಸಿ ಸರ್ಕಾರಕ್ಕೆ ವರದಿ ನೀಡುವಂತೆ ಸೂಚಿಸಿದ ಅವರು, ಗ್ರಾಮೀಣ ಭಾಗದ ರಸ್ತೆಗಳನ್ನು ಜಿಲ್ಲಾ ಪಂಚಾಯತ್ ರಸ್ತೆಗಳನ್ನಾಗಿ ಮೇಲ್ದರ್ಜೆಗೇರಿಸಿದಲ್ಲಿ ಶೀಘ್ರ ದುರಸ್ತಿಗೆ ಅನುಕೂಲವಾಗಲಿದೆ ಎಂದರು.

ಗ್ರಾಮೀಣ ಭಾಗದಲ್ಲಿ ಮೊಬೈಲ್ ಸಿಗ್ನಲ್ ಸಿಗುತ್ತಿಲ್ಲ ಎಂಬ ದೂರು ಹೆಚ್ಚಾಗಿ ಕೇಳಿಬರುತ್ತಿದ್ದು, ಅದಕ್ಕೆ ಮುಖ್ಯ ಕಾರಣ ಟವರ್ ಗಳಿಗೆ ವಿದ್ಯುಚ್ಛಕ್ತಿ ಸರಬರಾಜಿನ ಕೊರತೆ. ಅದಕ್ಕೆ ಸೂಕ್ತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಮೆಸ್ಕಾಂ ಇಲಾಖೆ ಅಧಿಕಾರಿಗಳು ಹಾಗೂ ಜಿಲ್ಲಾಡಳಿತ ಮುಂದಾಗಬೇಕು ಎಂದು ಸೂಚಿಸಿದರು.

ಬಾಕಿ ಕಾಮಗಾರಿ ಪೂರ್ಣಗೊಳಿಸಿ
ರಾಷ್ಟ್ರೀಯ ಹೆದ್ದಾರಿ ಬಾಕಿ ಕಾಮಗಾರಿ ಶೀಘ್ರ ಪೂರ್ಣಗೊಳಿಸಬೇಕು. ಜಿಲ್ಲಾಡಳಿತದಿಂದ ಗುರುತಿಸಲಾಗಿರುವ ಅಪಘಾತ ಸ್ಥಳಗಳಲ್ಲಿ ವೈಜ್ಞಾನಿಕ ರೀತಿಯಲ್ಲಿ ಕಾಮಗಾರಿ ಕೈಗೊಂಡು ವಾಹನಗಳು ಸುರಕ್ಷಿತವಾಗಿ ಚಾಲನೆ ಆಗುವಂತೆ ನೋಡಿಕೊಳ್ಳಬೇಕು. ಕಾಲ ಕಾಲಕ್ಕೆ ರಸ್ತೆ ನಿರ್ವಹಣೆ ಕಾಮಗಾರಿ ಕೈಗೊಳ್ಳಬೇಕೆಂದು ಸೂಚಿಸಿದರು.

ಸಭೆಯಲ್ಲಿ ಶಾಸಕ ರಘುಪತಿ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಪ್ರಸನ್ನ ಎಚ್., ಎಸ್.ಪಿ ವಿಷ್ಣುವರ್ಧನ್, ಹೆಚ್ಚುವರಿ ಜಿಲ್ಲಾಧಿಕಾರಿ ವೀಣಾ ಹಾಗೂ ವಿವಿಧ ಇಲಾಖೆಗಳ ಅಧಿಕಾರಿಗಳು ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!