Monday, July 4, 2022
Home ಸಮಾಚಾರ ರಾಜ್ಯ ವಾರ್ತೆ ಕೃಷ್ಣಮಠದ ಧರ್ಮ ಸಂರಕ್ಷಣೆ ಕಾರ್ಯಕ್ಕೆ ಸರಕಾರದ ಬೆಂಬಲ

ಕೃಷ್ಣಮಠದ ಧರ್ಮ ಸಂರಕ್ಷಣೆ ಕಾರ್ಯಕ್ಕೆ ಸರಕಾರದ ಬೆಂಬಲ

ಉಡುಪಿ: ಇಲ್ಲಿನ ಶ್ರೀಕೃಷ್ಣ ಮಠ ನಡೆಸುವ ಧರ್ಮ ಸಂರಕ್ಷಣೆಯ ಕಾರ್ಯಕ್ಕೆ ಸದಾ ಸರಕಾರದ ಬೆಂಬಲ ಇದೆ ಎಂದು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಭರವಸೆ ನೀಡಿದರು.

ಪರ್ಯಾಯ ಅದಮಾರು ಶ್ರೀಕೃಷ್ಣ ಮಠ ಆಶ್ರಯದಲ್ಲಿ ನಡೆಯುತ್ತಿರುವ ಪರ್ಯಾಯ ಪಂಚಶತಮಾನೋತ್ಸವ ಕಾರ್ಯಕ್ರಮವನ್ನು ಸೋಮವಾರ ಉದ್ಘಾಟಿಸಿ ಮಾತನಾಡಿದರು.

ಸಮಾಜಕ್ಕೆ ಉಡುಪಿ ಕೃಷ್ಣಮಠ ಹಾಗೂ ಅಷ್ಟ ಮಠಗಳ ಕೊಡುಗೆ ಗಮನೀಯ ಎಂದರು.

ಗ್ರಾಮ ಭಾರತ ನಿರ್ಮಾಣ ಆಸಕ್ತಿ ಶ್ಲಾಘನೀಯ
ಧಾರ್ಮಿಕ ಕ್ಷೇತ್ರದೊಂದಿಗೆ ಶೈಕ್ಷಣಿಕ ಮತ್ತು ಸಾಮಾಜಿಕ ಕ್ಷೇತ್ರದಲ್ಲಿ ಅದಮಾರು ಮಠ ಗಣನೀಯ ಕೊಡುಗೆ ನೀಡಿದ್ದು, ಗ್ರಾಮ ಭಾರತ ನಿರ್ಮಾಣದಲ್ಲಿಯೂ ಆಸಕ್ತಿ ವಹಿಸಿರುವುದು ಶ್ಲಾಘನೀಯ. ಗ್ರಾಮೀಣ ಕರಕುಶಲ ಕಲೆಗೆ ಪ್ರೋತ್ಸಾಹ ನೀಡುವ ಜೊತೆಗೆ ನೇಕಾರರು, ಕುಂಬಾರಿಕೆಗೂ ಪ್ರೋತ್ಸಾಹ ನೀಡುತ್ತಿರುವುದು ಸಂತಸದಾಯಕ ಎಂದರು.

ಉಡುಪಿ ಮಠದೊಂದಿಗೆ ಸರಕಾರದ ಬಾಂಧವ್ಯ ಬಹು ಹಿಂದಿನಿಂದಲೂ ಉತ್ತಮವಾಗಿದೆ. ಅಯೋಧ್ಯೆ ರಾಮ ಜನ್ಮ ಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನಲ್ಲಿ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ವಿಶ್ವಸ್ಥರಾಗಿರುವುದು ಉಡುಪಿ ಕೃಷ್ಣಮಠದ ಘನತೆಗೆ ಸಾಕ್ಷಿ ಎಂದು ವಿಶ್ಲೇಷಿಸಿದ ಸಿಎಂ ಯಡಿಯೂರಪ್ಪ, ಅಯೋಧ್ಯೆಯ ಬಾಲಾಲಯದಲ್ಲಿ ರಾಮಲಲ್ಲಾ ಮೂರ್ತಿ ಪ್ರತಿಷ್ಠಾಪಿಸಿದ್ದ ಪೇಜಾವರ ಶ್ರೀ ವಿಶ್ವೇಶತೀರ್ಥ ಶ್ರೀಪಾದರೊಂದಿಗೆ ತಾನೂ ಭಾಗವಹಿಸಿದ್ದು ನನ್ನ ಜೀವನದ ಅವಿಸ್ಮರಣೀಯ ಕ್ಷಣ ಎಂದರು.

ನನಸಾಗುತ್ತಿರುವ ವಿಶ್ವೇಶತೀರ್ಥರ ಕನಸು
ಕೃಷ್ಣೈಕ್ಯ ಪೇಜಾವರ ಶ್ರೀ ವಿಶ್ವೇಶತೀರ್ಥರ ಆಶಯದ ರಾಮಮಂದಿರ ನಿರ್ಮಾಣ ಕಾರ್ಯವನ್ನು ಸ್ವತಃ ಪ್ರಧಾನಿ ಮೋದಿ ಮುಂದೆ ನಿಂತು ನಡೆಸುತ್ತಿರುವುದು ಹಾಗೂ ಕೂಲಿ ಕಾರ್ಮಿಕನಿಂದ ತೊಡಗಿ ಎಲ್ಲ ಸ್ತರದ ಮಂದಿ ತಮ್ಮ ಕೈಲಾದ ದೇಣಿಗೆ ನೀಡಿ ರಾಮಮಂದಿರ ನಿರ್ಮಾಣದಲ್ಲಿ ಸಹಕರಿಸುತ್ತಿರುವುದು ಸ್ವಾಗತಾರ್ಹ ಸಂಗತಿ.
ಗಾಂಧಿ ಕನಸಿನ ರಾಮ ರಾಜ್ಯ, ಗ್ರಾಮ ರಾಜ್ಯದ ಕನಸು ನನಸಾಗುತ್ತಿದೆ. ಗಾಂಧಿ ಬಯಸಿದ್ದ ಗೋಹತ್ಯಾ ನಿಷೇಧ ಕಾಯ್ದೆ ಜಾರಿಗೊಳಿಸಲಾಗಿದೆ ಎಂದರು.

ಅಭಿವೃದ್ಧಿಗೆ ಬದ್ಧ
ರಾಜ್ಯದ ಅಭಿವೃದ್ಧಿಗೆ ಸರಕಾರ ಬದ್ಧ. ಕೊರೊನಾದ ಈ ದಿನಗಳಲ್ಲೂ ಅಗತ್ಯ ಅನುದಾನ ಕಲ್ಪಿಸಲು ಸರಕಾರ ಅಗತ್ಯ ಕ್ರಮ ಕೈಗೊಳ್ಳಲಿದೆ. ಜನತೆ ನೆಮ್ಮದಿಯ ಜೀವನ ನಡೆಸುವಂತಾಗಬೇಕು ಎಂಬುದು ಸರಕಾರದ ಆಶಯ ಎಂದರು.

ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಅಧ್ಯಕ್ಷತೆ ವಹಿಸಿದ್ದರು. ಭಾವಿ ಪರ್ಯಾಯ ಕೃಷ್ಣಾಪುರ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರು, ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಮತ್ತು ಶ್ರೀ ವಿದ್ಯಾರಾಜೇಶ್ವರತೀರ್ಥ ಶ್ರೀಪಾದರು ಸಾನ್ನಿಧ್ಯ ವಹಿಸಿದ್ದರು.

ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ಶಾಸಕರಾದ ರಘುಪತಿ ಭಟ್ ಮತ್ತು ಲಾಲಾಜಿ ಮೆಂಡನ್, ಮುಖ್ಯಮಂತ್ರಿ ಸಂಸದೀಯ ಕಾರ್ಯದರ್ಶಿ ಜೀವರಾಜ್, ಕಟೀಲು ಶ್ರೀ ದುರ್ಗಾಪರಮೇಶ್ವರಿ ದೇವಳ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಅಧ್ಯಕ್ಷ ಮತ್ತು ಸಿಎಂಡಿ ರಾಜಕಿರಣ್ ರೈ ಅಭ್ಯಾಗತರಾಗಿದ್ದರು.
ಮೀನುಗಾರಿಕೆ ಫೆಡರೇಶನ್ ಅಧ್ಯಕ್ಷ ಯಶಪಾಲ ಸುವರ್ಣ, ನಗರಸಭಾಧ್ಯಕ್ಷೆ ಸುಮಿತ್ರಾ ನಾಯಕ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಇದ್ದರು.

ಸಾಧಕರಿಗೆ ಸನ್ಮಾನ
ಈ ಸಂದರ್ಭದಲ್ಲಿ ದೈವಜ್ಞ ಬ್ರಾಹ್ಮಣ ಸಂಘ, ಪಾಕತಜ್ಞ ಅಚ್ಯುತ ಭಟ್, ಕಟೀಲು ದೇವಸ್ಥಾನದ ಅರ್ಚಕ ಅನಂತಪದ್ಮನಾಭ ಆಸ್ರಣ್ಣ, ಉದ್ಯಮಿ ಭುವನೇಂದ್ರ ಕಿದಿಯೂರು, ಬ್ರಾಹ್ಮಣ ಯುವಕ ವೃಂದ ಪಡುಬಿದ್ರಿ, ಯುವ ವಾಹಿನಿ ಉಡುಪಿ ಘಟಕ, ರಾಷ್ಟ್ರಕವಿ ಗೋವಿಂದ ಪೈ ಸಂಶೋಧನ ಕೇಂದ್ರ ಮಾಜಿ ನಿರ್ದೇಶಕ ಹೆರಂಜೆ ಕೃಷ್ಣ ಭಟ್ ಮೊದಲಾದವರನ್ನು ಸನ್ಮಾನಿಸಲಾಯಿತು.

ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ಸ್ವಾಗತಿಸಿದರು. ಶ್ರೀಕೃಷ್ಣ ಸೇವಾ ಬಳಗದ ವೈ. ಎನ್. ರಾಮಚಂದ್ರ ರಾವ್ ವಂದಿಸಿದರು. ಬಳಗದ ಪ್ರದೀಪಕುಮಾರ್, ಸಂತೋಷಕುಮಾರ್, ಚೈತನ್ಯ ಎಂ.ಜಿ. ಸಹಕರಿಸಿದರು. ಜ್ಞಾನಾನಂದ ಆಚಾರ್ಯ ವೇದಘೋಷ ಪಠಿಸಿದರು. ಮೈಸೂರು ರಾಮಚಂದ್ರ ಆಚಾರ್ಯ ದೇವರನಾಮ ಹಾಡಿದರು. ವಿದ್ವಾಂಸ ಕೃಷ್ಣರಾಜ ಭಟ್ ಕುತ್ಪಾಡಿ ನಿರೂಪಿಸಿದರು.

ವಿಶ್ವಪಥ ಮೂಲಕ ಕೃಷ್ಣದರ್ಶನ
ಉಡುಪಿಗೆ ಆಗಮಿಸುವ ಯಾತ್ರಾರ್ಥಿಗಳು ಕೃಷ್ಣಮಠ ಮತ್ತು ಅಷ್ಟಮಠ ಸಹಿತ ಉಡುಪಿಯ ವೈಶಿಷ್ಟ್ಯತೆಯನ್ನು ಕಣ್ತುಂಬಿಸಿಕೊಂಡು, ಕೃಷ್ಣ ದರ್ಶನ ಪಡೆಯುವ ಆಶಯದಿಂದ ಪರ್ಯಾಯ ಅದಮಾರು ಮಠ ರೂಪಿಸಿದ ನೂತನ ಶ್ರೀಕೃಷ್ಣ ದರ್ಶನ ಮಾರ್ಗ ‘ವಿಶ್ವಪಥ‘ವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಉದ್ಘಾಟಿಸಿದರು. ವಿಶ್ವಪಥ ಮೂಲಕ ಸಾಗಿಬಂದ ಮುಖ್ಯಮಂತ್ರಿ, ಕನಕ ನವಗ್ರಹ ಕಿಂಡಿ ಮೂಲಕ ಕೃಷ್ಣದರ್ಶನ ಪಡೆದರು. ಪರ್ಯಾಯ ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ನೂತನ ಪಥದ ಬಗ್ಗೆ ವಿವರಿಸಿದರು. ಬಿಜೆಪಿ ಮಂಗಳೂರು ಪ್ರಭಾರಿ ಉದಯಕುಮಾರ್ ಶೆಟ್ಟಿ ಇದ್ದರು.

ಇದೇ ಸಂದರ್ಭದಲ್ಲಿ ಸಾವಯವ ಉತ್ಪನ್ನಗಳಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಆರಂಭಿಸಲಾದ ಉಡುಪಿ ಸಾವಯವ ಮಳಿಗೆಗೂ ಮುಖ್ಯಮಂತ್ರಿ ಚಾಲನೆ ನೀಡಿದರು.

ಸಾಗಿಬಂದ ಶೋಭಾಯಾತ್ರೆ
ಪರ್ಯಾಯ ಪಂಚಶತಮಾನೋತ್ಸವ ಹಿನ್ನೆಲೆಯಲ್ಲಿ ನಗರದ ಜೋಡುಕಟ್ಟೆಯಿಂದ ಕೃಷ್ಣಮಠ ವರೆಗೆ ಶೋಭಾಯಾತ್ರೆ ನಡೆಯಿತು.

ಆಚಾರ್ಯ ಮಧ್ವರು ಮತ್ತು ವಾದಿರಾಜ ಯತಿಗಳ ಗ್ರಂಥಗಳನ್ನು ಮೇನೆಯಲ್ಲಿಟ್ಟು ಮೆರವಣಿಗೆಯಲ್ಲಿ ತರಲಾಯಿತು. ಭಜನೆ, ಜಾನಪದ ತಂಡ ಇತ್ಯಾದಿ ಮೆರವಣಿಗೆಯಲ್ಲಿತ್ತು.

ಕರ್ನಾಟಕ ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ ಅವರು ಜೋಡುಕಟ್ಟೆಯಲ್ಲಿ ಶೋಭಾಯಾತ್ರೆಗೆ ಚಾಲನೆ ನೀಡಿದರು. ಪರ್ಯಾಯ ಅದಮಾರು ಮಠ ದಿವಾನ ಲಕ್ಷ್ಮೀನಾರಾಯಣ ಮುಚ್ಚಿಂತಾಯ, ಪಿ.ಆರ್.ಓ. ಶ್ರೀಶ ಭಟ್ ಕಡೆಕಾರ್ ಮೊದಲಾದವರಿದ್ದರು.

ಶೋಭಾಯಾತ್ರೆ ಹಳೆ ತಾಲೂಕು ಕಚೇರಿ, ಡಯಾನಾ ವೃತ್ತ, ತೆಂಕಪೇಟೆಯಾಗಿ ರಥಬೀದಿ ಪ್ರವೇಶಿಸಿತು.

ವೇಣುವಾದನ
ಬಳಿಕ ಶ್ರೀಕೃಷ್ಣಮಠದ ರಾಜಾಂಗಣದ ನರಹರಿತೀರ್ಥ ವೇದಿಕೆಯಲ್ಲಿ ಸಾಂಸ್ಕೃತಿಕ ಕಾರ್ಯಕ್ರಮದಂಗವಾಗಿ ಬೆಂಗಳೂರಿನ ರಾಜಕಮಲ್ ಮತ್ತು ವೃಂದದವರಿಂದ ವೇಣು ನಿನಾದ ನಡೆಯಿತು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!