Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಕ್ರೈಸ್ತರ ವಿರುದ್ಧ ಮತಾಂತರ ಆರೋಪ ಖಂಡನೀಯ

ಕ್ರೈಸ್ತರ ವಿರುದ್ಧ ಮತಾಂತರ ಆರೋಪ ಖಂಡನೀಯ

ಕ್ರೈಸ್ತರ ವಿರುದ್ಧ ಮತಾಂತರ ಆರೋಪ ಖಂಡನೀಯ
(ಸುದ್ದಿಕಿರಣ ವರದಿ)

ಉಡುಪಿ: ರಾಜ್ಯದಲ್ಲಿ ಈಚಿನ ದಿನಗಳಲ್ಲಿ ಕ್ರೈಸ್ತರ ವಿರುದ್ಧ ಮತಾಂತರ ಆರೋಪವನ್ನು ಕೆಲವೊಂದು ಸಂಘಟನೆಗಳು ಮಾಡುತ್ತಿದ್ದು, ಪುರಾವೆ ಇಲ್ಲದ ಸುಳ್ಳು ಆರೋಪಗಳ ಮೂಲಕ ಸಮಾಜದಲ್ಲಿ ದ್ವೇಷದ ವಿಷ ಬೀಜ ಬಿತ್ತುತ್ತಿರುವುದು ಖಂಡನೀಯ.

ಕ್ರೈಸ್ತ ಸಮುದಾಯ ಎಂದಿಗೂ ಆಮಿಷದ ಅಥವಾ ಬಲವಂತದ ಮತಾಂತರವನ್ನು ವಿರೋಧಿಸುತ್ತೇವೆ ಎಂದು ಭಾರತೀಯ ಕ್ರೈಸ್ತ ಒಕ್ಕೂಟ ಉಡುಪಿ ಜಿಲ್ಲಾಧ್ಯಕ್ಷ ಪ್ರಶಾಂತ್ ಜತ್ತನ್ನ ಹೇಳಿದರು.

ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಮ್ಮ ದೇಶದಲ್ಲಿ ಮೇಲ್ವರ್ಗ ಮಾತ್ರ ಶಿಕ್ಷಣ ಪಡೆಯುತ್ತಿದ್ದ ಸಂದರ್ಭದಲ್ಲಿ ಹಿಂದುಳಿದ ವರ್ಗ, ದಲಿತರು, ಜನಸಾಮಾನ್ಯರಿಗೂ ಶಿಕ್ಷಣ ಸಿಗಬೇಕು. ಅವರೂ ಸಮಾಜದಲ್ಲಿ ಉತ್ತಮ ವ್ಯಕ್ತಿಗಳಾಗಿ ಬಾಳಬೇಕು ಎಂಬ ಆಶಯದಿಂದ ದೇಶದಲ್ಲಿ ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭ ಮಾಡಿದ್ದೇ ಹೊರತು ಮತಾಂತರ ಮಾಡಲಿಕ್ಕಲ್ಲ. ಈಗಾಗಲೇ ಕ್ರೈಸ್ತ ಶಿಕ್ಷಣ ಸಂಸ್ಥೆಯಲ್ಲಿ ಕೋಟಿಗಟ್ಟಲೆ ಜನ ಶಿಕ್ಷಣ ಪಡೆದಿದ್ದಾರೆ. ಅಲ್ಲಿ ಯಾರನ್ನೂ ಬಲವಂತ ಮಾಡಿ ಅಥವಾ ನೀವು ಮತಾಂತರಗೊಂಡರೆ ಮಾತ್ರ ನಿಮಗೆ ಶಿಕ್ಷಣ ಕೊಡುತ್ತೇವೆ ಎಂದು ಎಲ್ಲೂ ಹೇಳಿಲ್ಲ ಎಂದರು.

ದೇಶದಲ್ಲಿ ಕುಷ್ಠರೋಗ ಇತ್ಯಾದಿ ಬೇರೆ ಬೇರೆ ಕಾಯಿಲೆಗಳಿಂದ ಜನರು ಸಾವನ್ನಪ್ಪುವ ಸಂದರ್ಭದಲ್ಲಿ ಆಸ್ಪತ್ರೆ ಇಲ್ಲದ ಸಮಯದಲ್ಲಿ ಆರೋಗ್ಯ ಸಂಸ್ಥೆಗಳನ್ನು ಸ್ಥಾಪಿಸಿ ಎಲ್ಲರಿಗೂ ಶುಶ್ರೂಷೆ ಮಾಡಿದರು. ಆದರೆ, ಚಿಕಿತ್ಸೆ ನೆಪದಲ್ಲಿ ಮತಾಂತರ ಮಾಡಿದರು ಎಂಬ ಸುಳ್ಳು ಹಬ್ಬಿಸಲಾಗುತ್ತಿದೆ. ಕೋಟಿಗಟ್ಟಲೆ ಜನ ಆರೋಗ್ಯ ಪಡೆದಿದ್ದಾರೆ. ಅಲ್ಲಿ ಬಲವಂತದ, ಅಮಿಷದ ಮತಾಂತರ ನಡೆದದ್ದು ಕಂಡುಬಂದಿಲ್ಲ. ಕ್ರೈಸ್ತ ಪ್ರಾರ್ಥನಾ ಮಂದಿರಗಳು, ಚರ್ಚುಗಳು ಮತಾಂತರ ಮಾಡಲು ಹೊರಟಿದ್ದಾವೆ ಎಂಬ ಆಧಾರ ರಹಿತ ಆರೋಪ ಸತ್ಯಕ್ಕೆ ದೂರವಾದ ಸಂಗತಿ ಎಂದು ಜತ್ತನ್ನ ಹೇಳಿದರು.

ಇತ್ತೀಚೆಗೆ ಕರಾವಳಿ ಭಾಗದಲ್ಲಿ ಬಹಳಷ್ಟು ಮತಾಂತರಗಳು ನಡೆದಿವೆ ಎಂಬುದಾಗಿ ಕೆಲವೊಂದು ಸಂಘಟನೆಗಳು ಪ್ರಚಾರ ಮಾಡಿ ಪ್ರಾರ್ಥನಾ ಮಂದಿರಗಳಿಗೆ ಅಕ್ರಮ ಪ್ರವೇಶ ಮಾಡಿ ಪ್ರಾರ್ಥನೆಗೆ ಬಂದವರ ಮೇಲೆ ಹಲ್ಲೆ ಮಾಡಿ ಅವಾಚ್ಯ ಶಬ್ದಗಳಿಂದ ನಿಂದಿಸಿ, ಮತ್ತೆ ನಾವು ದಾಳಿ ಮಾಡಿದ್ದೇವೆ ಎಂಬುದಾಗಿ ಬಹಿರಂಗ ಹೇಳಿಕೆಯನ್ನು ಕೊಡುತ್ತಾರೆ. ಮಾಡಿದ ಕಾನೂನುಬಾಹಿರ ಕೃತ್ಯಗಳನ್ನು ಬಹಿರಂಗವಾಗಿ ಒಪ್ಪಿಕೊಂಡಿದ್ದರೂ ಪೊಲೀಸ್ ಇಲಾಖೆ ಯಾವುದೇ ಕಾನೂನು ಕ್ರಮ ತೆಗೆದುಕೊಳ್ಳದೆ ಕಣ್ಣುಮುಚ್ಚಿ ಕುಳಿತಿರುವುದು ದುರದೃಷ್ಟಕರ.

ಒಂದುವೇಳೆ ಇಂತಹ ಸಂಘಟನೆಗಳಿಗೆ ಪೊಲೀಸ್ ಇಲಾಖೆಯೇ ನೇರವಾಗಿ ದಾಳಿ ಮಾಡಲು ಪರವಾನಿಗೆ ನೀಡಿದೆಯೇ? ಪೊಲೀಸ್ ಇಲಾಖೆಯ ಸಮ್ಮತಿ ಇಲ್ಲದೆ ಇದ್ದರೆ ಯಾಕೆ ಅಂಥ ಸಂಘಟನೆಗಳ ವಿರುದ್ಧ ಸ್ವಯಂಪ್ರೇರಿತ ಕೇಸು ದಾಖಲಿಸಬಾರದು ಎಂದು ಪ್ರಶ್ನಿಸಿರುವ ಪ್ರಶಾಂತ ಜತ್ತನ್ನ, ಕೆಲವೊಂದು ಸಂಘಟನೆಗಳು ದಾಳಿಯನ್ನು ಪೊಲೀಸ್ ಇಲಾಖೆ ಜೊತೆ ಜಂಟಿಯಾಗಿ ನಡೆಸಿರುವುದಾಗಿ ಹೇಳಿಕೊಂಡಿರುವುದನ್ನು ನೋಡಿದಾಗ ಪೊಲೀಸರು ದಾಳಿ ನಡೆಸಲು ಬೇರೆ ಸಂಘಟನೆಗಳನ್ನು ಬಳಸಿಕೊಳ್ಳುತ್ತಿದ್ದಾರೆಯೇ ಎಂಬ ಸಂದೇಹ ಮೂಡುತ್ತದೆ ಎಂದರು.

ರಾಜ್ಯದ ಶಾಸಕನಾಗಿರುವ ಗೂಳಿಹಟ್ಟಿ ಶೇಖರ್ ತನ್ನ ತಾಯಿಯನ್ನು ಬಲವಂತದಿಂದ ಮತಾಂತರ ಮಾಡಿದ್ದಾರೆ ಎಂದು ವಿಧಾನಸಭೆಯಲ್ಲಿ ಆರೋಪಿಸಿದ್ದಾರೆ. ಆದರೆ, ಅದಕ್ಕೆ ಸ್ಪಷ್ಟನೆ ಎಂಬಂತೆ ರಾಜ್ಯದ ಸುದ್ದಿ ವಾಹಿನಿಯೊಂದು ಅವರ ತಾಯಿಯೊಂದಿಗೆ ನೇರವಾಗಿ ಮಾತನಾಡಿ ಸ್ಪಷ್ಟನೆಯನ್ನೂ ಪಡೆದಿದೆ. ಎಲ್ಲೋ ಒಂದೆರಡು ಕಡೆ ಅಂಥ ಘಟನೆಗಳು ನಡೆದಾಗ ಇಡೀ ಸಮುದಾಯವನ್ನು ಕೀಳಾಗಿ ಬಿಂಬಿಸುತ್ತಿರುವುದು ನಿಜಕ್ಕೂ ಬೇಸರದ ಸಂಗತಿ.

ದೇಶದ ಪ್ರಗತಿಗೆ ಕ್ರೈಸ್ತ ಸಮುದಾಯ ತನ್ನದೇ ಆದ ಕೊಡುಗೆಯನ್ನು ಫಲಾಪೇಕ್ಷೆಯಿಲ್ಲದೆ ನೀಡಿಕೊಂಡು ಬಂದಿರುವುದನ್ನು ಯಾರೂ ಅಲ್ಲಗಳೆಯುವಂತಿಲ್ಲ. ಕೇವಲ ಪ್ರಚಾರದ ದೃಷ್ಟಿಯಿಂದ ದಾಳಿ ನಡೆಸಿ, ಸಮುದಾಯವನ್ನು ಆರೋಪಿ ಸ್ಥಾನದಲ್ಲಿ ನಿಲ್ಲಿಸುವುದನ್ನು ಅಂಥ ಸಂಘಟನೆಗಳು ಇನ್ನಾದರೂ ಕೈಬಿಡಬೇಕು ಎಂದು ಆಗ್ರಹಿಸಿದರು.

ಈ ಸಂಘಟನೆಗಳಿಗೆ ಬಡವರು, ದೀನ ದಲಿತರ ಮೇಲೆ ನಿಜವಾದ ಕಾಳಜಿ ಇದ್ದರೆ ಮೊದಲು ಅವರನ್ನು ಅಸ್ಪೃಶ್ಯತೆಯಿಂದ ಕಾಣುವುದನ್ನು ನಿಲ್ಲಿಸಲಿ. ಇಂದಿಗೂ ಎಷ್ಟೋ ಮಂದಿ ದಲಿತರು ಅಂಥ ನೋವನ್ನು ಅನುಭವಿಸುತ್ತಿದ್ದಾರೆ. ಅವರ ಬಗ್ಗೆ ಒಮ್ಮೆಯಾದರೂ ಇಂಥ ಸಂಘಟನೆಗಳು ಕಣ್ಣೆತ್ತಿ ನೋಡುವ ಕೆಲಸ ಮಾಡಲಿ. ಸರಕಾರ ಕ್ರೈಸ್ತ ಸಮುದಾಯದ ಸಂಸ್ಥೆಗಳ ಮೇಲೆ ದಾಳಿ ನಡೆಸುತ್ತಿರುವ ಸಂಘಟನೆಗಳ ಬಗ್ಗೆ ಎಚ್ಚರ ವಹಿಸುವ ಅಗತ್ಯವಿದೆ. ಇಂಥ ದಾಳಿಗಳು ಮುಂದುವರಿಯಲು ಅವಕಾಶ ನೀಡದೆ ಸರಕಾರ ಸೂಕ್ತ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಜತ್ತನ್ನ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಐಎಫ್.ಕೆ.ಸಿ.ಎ ಅಧ್ಯಕ್ಷ ಡಾ| ನೇರಿ ಕರ್ನೇಲಿಯೊ, ಗೌರವಾಧ್ಯಕ್ಷ ಲೂವಿಸ್ ಲೋಬೊ, ಕ್ರೈಸ್ತ ಮುಖಂಡ ರೋಬರ್ಟ್ ಮಿನೇಜಸ್, ಭಾರತೀಯ ಕ್ರೈಸ್ತ ಒಕ್ಕೂಟ ಕಾರ್ಯದರ್ಶಿ ಪೀಟರ್ ದಾಂತಿ, ಸಂಯೋಜಕ ಗ್ಲ್ಯಾಡ್ಸನ್ ಕರ್ಕಡ, ಎಸ್.ಎಮ್.ಎಸ್ ಸೀರಿಯನ್ ಕ್ಯಾಥೆಡ್ರಲ್ ಟ್ರಸ್ಟಿ ಥೋಮಸ್ ಸುವಾರಿಸ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!