Saturday, July 2, 2022
Home ಸಮಾಚಾರ ರಾಜ್ಯ ವಾರ್ತೆ ಮಾಜಿ ಶಾಸಕ, 3ನೇ ಹಣಕಾಸು ಆಯೋಗ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ವಿಧಿವಶ

ಮಾಜಿ ಶಾಸಕ, 3ನೇ ಹಣಕಾಸು ಆಯೋಗ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ವಿಧಿವಶ

ಸುದ್ದಿಕಿರಣ ವರದಿ
ಸೋಮವಾರ, ಜೂನ್ 13

ಮಾಜಿ ಶಾಸಕ, 3ನೇ ಹಣಕಾಸು ಆಯೋಗ ಮಾಜಿ ಅಧ್ಯಕ್ಷ ಎ.ಜಿ. ಕೊಡ್ಗಿ ವಿಧಿವಶ
ಉಡುಪಿ: ಬೈಂದೂರಿನ ಮಾಜಿ ಶಾಸಕ, ರಾಜ್ಯ 3ನೇ ಹಣಕಾಸು ಆಯೋಗ ಮಾಜಿ ಅಧ್ಯಕ್ಷ, ಕರ್ಣಾಟಕ ಬ್ಯಾಂಕ್ ಮಾಜಿ ನಿರ್ದೇಶಕ ಎ.ಜಿ. ಕೊಡ್ಗಿ ಎಂದೇ ಜನಪ್ರಿಯರಾಗಿದ್ದ ಅಮಾಸೆಬೈಲು ಗೋಪಾಲಕೃಷ್ಣ ಕೊಡ್ಗಿ (93) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ಮಣಿಪಾಲ ಕೆಎಂಸಿ ಆಸ್ಪತ್ರೆಯಲ್ಲಿ ಕೊನೆಯುಸಿರೆಳೆದಿದ್ದಾರೆ.

ಕಳೆದ ಕೆಲವು ದಿನಗಳ ಹಿಂದೆ ಜ್ವರ ಪೀಡಿತರಾಗಿದ್ದ ಅವರು, ಚಿಕಿತ್ಸೆಗಾಗಿ ಕುಂದಾಪುರದ ಖಾಸಗಿ ಆಸ್ಪತ್ರೆಗೆ ಸೇರಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಆಸ್ಪತ್ರೆಗೆ ಸೇರ್ಪಡೆಯಾದ ದಿನದಿಂದಲೂ ಚಿಕಿತ್ಸೆಗೆ ಸ್ಪಂದಿಸದ ಅವರು, ಬಹು ಅಂಗಾಗಳ ವೈಫಲ್ಯಕ್ಕೊಳಗಾಗಿದ್ದರು.

ಕರಾವಳಿಯ ರಾಜಕೀಯ ಭೀಷ್ಮ
ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಹಿರಿಯ ರಾಜಕಾರಣಿಗಳಲ್ಲಿ ಓರ್ವರಾಗಿದ್ದ ಎ.ಜಿ. ಕೊಡ್ಗಿ, ರಾಷ್ಟ್ರೀಯ ಮಟ್ಟದ ನಾಯಕರ ವರೆಗೂ ಸಂಪರ್ಕ ಹೊಂದಿದ್ದರು. ಕರಾವಳಿಯ ರಾಜಕೀಯ ಭೀಷ್ಮ ಎಂದೇ ಜನಪ್ರಿಯರಾಗಿದ್ದ ಅವರು, ಕಳೆದ ಕೆಲವು ವರ್ಷಗಳಿಂದ ಸಕ್ರಿಯ ರಾಜಕಾರಣದಿಂದ ದೂರ ಸರಿದು ಅಮಾಸೆಬೈಲ್ ಚಾರಿಟೇಬಲ್ ಟ್ರಸ್ಟ್ ಮೂಲಕ ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಕೊಂಡಿದ್ದರು.

ಕುಂದಾಪುರ ತಾಲೂಕು ಬೋರ್ಡ್ ಅಧ್ಯಕ್ಷ, ಉಪಾಧ್ಯಕ್ಷರಾಗಿ ಸೇವೆ ಸಲ್ಲಿಸಿರುವ ಕೊಡ್ಗಿ, 8 ವರ್ಷ ತಾಲೂಕು ಬೋರ್ಡ್ ಸದಸ್ಯರಾಗಿದ್ದರು. ಮಂಗಳೂರು ದ,ಕ. ಜಿಲ್ಲಾ ಪರಿಷತ್ ಸದಸ್ಯ, ಆರ್ಥಿಕ ಸಮಿತಿ ಸದಸ್ಯ, 1972- 83ರ ಅವಧಿಯಲ್ಲಿ ಬೈಂದೂರು ಶಾಸಕ, 2006- 08ರ ವರೆಗೆ ರಾಜ್ಯ ಮೂರನೇ ಹಣಕಾಸು ಆಯೋಗ ಅಧ್ಯಕ್ಷ, ಬಳಿಕ ಅದರ ಕಾರ್ಯಪಡೆ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು.

ಸಹಕಾರಿಯಾಗಿ
ಸಹಕಾರ ಕ್ಷೇತ್ರದಲ್ಲಿ ಬಹುದೊಡ್ಡ ಛಾತಿ ಮೂಡಿಸಿರುವ ಕೊಡ್ಗಿ, ಶಂಕರನಾರಾಯಣ ಸಿಎ ಬ್ಯಾಂಕ್ ಅಧ್ಯಕ್ಷ, ಎಪಿಎಂಪಿ ಅಧ್ಯಕ್ಷ, ಮಂಗಳೂರು ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ, ಸ್ಕ್ಯಾಮ್ಸ್ ನಿರ್ದೇಶಕ, ಮಂಗಳೂರು ಎಪಿಎಂಸಿ ಅಧ್ಯಕ್ಷ ಅಲ್ಲದೆ ರಾಜ್ಯ ಮಾರ್ಕೆಟಿಂಗ್ ಬೋರ್ಡ್ ಸದಸ್ಯರಾಗಿ ಸೇವೆ ಸಲ್ಲಿಸಿದ್ದರು. 1982- 1990ರ ಅವಧಿಯಲ್ಲಿ ಕರ್ಣಾಟಕ ಬ್ಯಾಂಕ್ ನಿರ್ದೇಶಕರಾಗಿದ್ದರು.

ಚತುರ ರಾಜಕಾರಣಿ
ಕರಾವಳಿ ಜಿಲ್ಲೆಯ ರಾಜಕೀಯ ಚದುರಂಗದಾಟದಲ್ಲಿ ಕೊಡ್ಗಿ ತನ್ನದೇ ಆದ ಛಾಪು ಮೂಡಿಸಿದ್ದು, ಕರಾವಳಿ ಜಿಲ್ಲೆಯಲ್ಲಿ ಕಾಂಗ್ರೆಸ್ ಭದ್ರಕೋಟೆ ಭೇದಿಸಿ ಬಿಜೆಪಿಯನ್ನು ಕಟ್ಟಿ ಬೆಳೆಸಿದ ಪರಿ ಅದ್ವಿತೀಯ. ಕಾಂಗ್ರೆಸ್ ಪಕ್ಷದಲ್ಲಿರುವಾಗ ಜಿಲ್ಲಾ ಕಾಂಗ್ರೆಸ್ ಸದಸ್ಯ, ರಾಜ್ಯ ಕಾಂಗ್ರೆಸ್ ಸದಸ್ಯರಾಗಿ ದುಡಿದವರು.

ಕಾಂಗ್ರೆಸ್ ನಲ್ಲಿದ್ದಾಗ ತಮ್ಮ ನಿಲುವುಗಳಿಗೆ ಧಕ್ಕೆಯುಂಟಾದಾಗ 1993ರಲ್ಲಿ ಬಿಜೆಪಿ ಸೇರ್ಪಡೆಗೊಂಡ ಕೊಡ್ಗಿ, ಬಿಜೆಪಿ ಕುಂದಾಪುರ ತಾಲೂಕು ಬಿಜೆಪಿ ಅಧ್ಯಕ್ಷ, ಜಿಲ್ಲಾಧ್ಯಕ್ಷ, ರಾಜ್ಯ ಬಿಜೆಪಿ ಉಪಾಧ್ಯಕ್ಷ, ರಾಷ್ಟ್ರೀಯ ಕಾರ್ಯಕಾರಿಣಿ ಸದಸ್ಯರಾಗಿ ಸೇವೆ ಸಲ್ಲಿಸಿದ್ದಾರೆ.

ಕರಾವಳಿಯ ಕುಡಿಯುವ ನೀರು ಸಮಸ್ಯೆ ನಿವಾರಣೆಗೆ ಸೌಭಾಗ್ಯ ಸಂಜಿವಿನಿ ಯೋಜನೆ ಜಾರಿಗೆ ಪಣತೊಟ್ಟಿದ್ದ ಕೊಡ್ಗಿ, ಅದನ್ನು ಈಡೇರಿಸಲಾಗದೇ ವಿಫಲರಾಗಿದ್ದರು.

ಸೆಲ್ಕೊ ಸೋಲಾರ್ ಸಂಸ್ಥೆ ಜೊತೆಗೂಡಿ ನಕ್ಸಲಪೀಡಿತ ಅಮಾಸೆಬೈಲು ಗ್ರಾಮವನ್ನು ಸಂಪೂರ್ಣ ಸೋಲಾರ್ ಗ್ರಾಮವನ್ನಾಗಿ ಪರಿವರ್ತಿಸುವಲ್ಲಿ ದೊಡ್ಡ ಕೊಡುಗೆ ನೀಡಿದ್ದರು.

ಮೃತರು ಪತ್ನಿ ಸುನಂದಾ, ಓರ್ವ ಪುತ್ರಿ, ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ಕ್ಯಾಂಪ್ಕೊ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ ಸೇರಿದಂತೆ ಐವರು ಪುತ್ರರನ್ನು ಅಗಲಿದ್ದಾರೆ.

ಸಂತಾಪಹಿರಿಯ ಬಿಜೆಪಿ ನಾಯಕ ಎ.ಜಿ. ಕೊಡ್ಗಿ ನಿಧನಕ್ಕೆ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು, ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ಬಿಜೆಪಿ ಜಿಲ್ಲಾಧ್ಯಕ್ಷ ಸುರೇಶ ನಾಯಕ್ ಕುಯಿಲಾಡಿ, ಸಚಿವರಾದ ವಿ. ಸುನಿಲ್ ಕುಮಾರ್, ಎಸ್. ಅಂಗಾರ ಮತ್ತು ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ರಘುಪತಿ ಭಟ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಲಾಲಾಜಿ ಮೆಂಡನ್, ಬಿ. ಎಂ. ಸುಕುಮಾರ ಶೆಟ್ಟಿ, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಸಂಸದ ಬಿ. ವೈ. ರಾಘವೇಂದ್ರ, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ಪಕ್ಷ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಗುರ್ಮೆ ಸುರೇಶ ಶೆಟ್ಟಿ, ಪ್ರಮೋದ್ ಮಧ್ವರಾಜ್, ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ ಹೆಗ್ಡೆ, ಬಿಜೆಪಿ ಜಿಲ್ಲಾ ಮಾಜಿ ಅಧ್ಯಕ್ಷ ತಿಂಗಳೆ ವಿಕ್ರಮಾರ್ಜುನ ಹೆಗ್ಡೆ ಮಾಜಿ ಶಾಸಕ ಗೋಪಾಲ ಪೂಜಾರಿ, ವಿಧಾನ ಪರಿಷತ್ ಮಾಜಿ ಸಭಾಪತಿ ಕೆ. ಪ್ರತಾಪಚಂದ್ರ ಶೆಟ್ಟಿ, ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ, ಕಸಾಪ ಮಾಜಿ ರಾಜ್ಯಾಧ್ಯಕ್ಷ ಧರ್ಮದರ್ಶಿ ಹರಿಕೃಷ್ಣ ಪುನರೂರು, ದ.ಕ. ಕಸಾಪ ಮಾಜಿ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ, ಸೆಲ್ಕೋ ಮುಖ್ಯಸ್ಥ ಡಾ| ಹರೀಶ ಹಂದೆ, ಉಡುಪಿ ಜಿ. ಪಂ. ಮಾಜಿ ಅಧ್ಯಕ್ಷ ಕೇಶವ ಕುಂದರ್ ಮೊದಲಾದವರು ಸಂತಾಪ ಸೂಚಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!