ಸುದ್ದಿಕಿರಣ ವರದಿ
ಗುರುವಾರ, ಜುಲೈ 14
ಕರಾವಳಿ ಜಿಲ್ಲೆಗಳಲ್ಲಿ ಪಡಿತರ ಕುಚಲಕ್ಕಿ ವಿತರಣೆಗೆ ಸರ್ಕಾರ ನಿರ್ಧಾರ
ಬೆಂಗಳೂರು: ಕರಾವಳಿ ಜಿಲ್ಲೆಗಳಿಗೆ ಪಡಿತರ ಕುಚಲಕ್ಕಿ ವಿತರಿಸಲು ಸರ್ಕಾರ ನಿರ್ಧರಿಸಿದೆ ಎಂದು ಹಿಂದುಳಿದ ವರ್ಗ ಹಾಗೂ ಸಮಾಜ ಕಲ್ಯಾಣ ಖಾತೆ ಸಚಿವ ಕೋಟ ಶ್ರೀನಿವಾಸ ಪೂಜಾರಿ ತಿಳಿಸಿದರು.
ವಿಧಾನಸೌಧದಲ್ಲಿ ಗುರುವಾರ ಸಚಿವ ಕೋಟ ಅಧ್ಯಕ್ಷತೆಯಲ್ಲಿ ನಡೆದ ವಿಶೇಷ ಸಭೆಯಲ್ಲಿ ಈ ನಿರ್ಧಾರ ತಳೆಯಲಾಯಿತು.
ಕರಾವಳಿ ಜಿಲ್ಲೆಗಳಾದ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಪಡಿತರದಾರರ ಬಹುಕಾಲದ ಬೇಡಿಕೆಯಾದ ಕುಚಲಕ್ಕಿ ವಿತರಣೆಗೆ ರಾಜ್ಯ ಸರ್ಕಾರ ಮುಂದಾಗಿದ್ದು, ಈಗಾಗಲೇ ಕೇರಳಕ್ಕೆ ರಾಜ್ಯದ ನಿಯೋಗ ಭೇಟಿ ನೀಡಿ ಅಧ್ಯಯನ ನಡೆಸಿದೆ.
18 ಕ್ವಿಂಟಾಲ್ ಭತ್ತ ಬೇಡಿಕೆ
ಕರಾವಳಿ ಜಿಲ್ಲೆಗಳಿಗೆ ಪ್ರತೀ ತಿಂಗಳು 1 ಲಕ್ಷ ಕ್ವಿಂಟಾಲ್ ನಂತೆ ವರ್ಷಕ್ಕೆ 12 ಲಕ್ಷ ಕ್ವಿಂಟಾಲ್ ಕುಚಲಕ್ಕಿಯ ಅಗತ್ಯವಿದ್ದು, ವರ್ಷಕ್ಕೆ ಕನಿಷ್ಠ 18 ಲಕ್ಷ ಕ್ವಿಂಟಾಲ್ ಭತ್ತ ಬೇಕಾಗಿದೆ.
ಜಯ, ಜ್ಯೋತಿ, ಎಂಎಫ್4ನಂಥ ಭತ್ತದ ತಳಿಗಳಿಂದ ಮಾತ್ರ ಕುಚಲಕ್ಕಿ ಸಿದ್ಧಪಡಿಸಲು ಸಾಧ್ಯವಿದ್ದು, ಉಭಯ ಜಿಲ್ಲೆಗಳಿಂದ ಕೇವಲ ಎರಡೂವರೆ ಲಕ್ಷ ಕ್ವಿಂಟಾಲ್ ಭತ್ತ ಮಾತ್ರ ಉತ್ಪಾದನೆಯಾಗುತ್ತಿದೆ. ಇನ್ನುಳಿದ ಭತ್ತವನ್ನು ಮೈಸೂರು, ಮಂಡ್ಯ, ಶಿವಮೊಗ್ಗ, ಬೆಳಗಾವಿ ಜಿಲ್ಲೆಗಳಿಂದ ಖರೀದಿಗೆ ಕ್ರಮ ವಹಿಸಲಾಗುವುದು. ಅದೂ ಪೂರ್ಣ ಪ್ರಮಾಣದಲ್ಲಿ ಭತ್ತ ಸಿಗುತ್ತಿಲ್ಲ ಎಂದು ಸಚಿವ ಕೋಟ ತಿಳಿಸಿದರು.
ಈ ಸಂಬಂಧ ಹೆಚ್ಚುವರಿ ಬೇಡಿಕೆಯನ್ನು ಕೇರಳ ಮತ್ತು ತೆಲಂಗಾಣ ಜಿಲ್ಲೆಗಳಿಂದ ಭತ್ತ ಪೂರೈಸಿಕೊಳ್ಳಲು ಯೋಜಿಸಲಾಗಿದ್ದು, ಈ ವಾರಾಂತ್ಯದಲ್ಲಿ ಮತ್ತೊಂದು ಅಧ್ಯಯನ ತಂಡ ತೆಲಂಗಾಣಕ್ಕೆ ಭೇಟಿ ನೀಡಲಿದೆ ಎಂದರು.
ಅಧ್ಯಯನ ತಂಡಗಳ ವರದಿ ಆಧರಿಸಿ ಕರಾವಳಿ ಜಿಲ್ಲೆಗಳ ಶಾಸಕರು ಹಾಗೂ ಸಂಸದರ ನಿಯೋಗದೊಂದಿಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿ ಮುಂದಿನ ವರ್ಷದಿಂದಲೇ ಈ ಜಿಲ್ಲೆಗಳಿಗೆ ಕುಚಲಕ್ಕಿ ವಿತರಣೆಗೆ ಕ್ರಮ ವಹಿಸಲಾಗುವುದು ಎಂದರು.
ಸಭೆಯಲ್ಲಿ ಅಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಆಯುಕ್ತೆ ಕನಗವಲ್ಲಿ, ರಾಜ್ಯ ಆಹಾರ ನಿಗಮ ಉಪಾಧ್ಯಕ್ಷ ಕಿರಣ್ ಕುಮಾರ್ ಕೊಡ್ಗಿ, ನಿಗಮ ವ್ಯವಸ್ಥಾಪಕ ನಿರ್ದೇಶಕ ಬಸವರಾಜ ಸೋಮಣ್ಣನವರ್, ಇಲಾಖೆ ಜಂಟಿ ನಿರ್ದೇಶಕ ವಿಜಯಕುಮಾರ್ ಇದ್ದರು.