ಉಡುಪಿ: ವಿವಾದಿತ ಕೊಡವೂರು ಕಲ್ಮತ್ ಮಸೀದಿ ಹೆಸರಿನ ಜಾಗ ವರ್ಗಾವಣೆ ಅಥವಾ ತೆರವು ವಿಚಾರದಲ್ಲಿ ನನ್ನ ಪಾತ್ರವಿಲ್ಲ ಎಂದು ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಸ್ಪಷ್ಟಪಡಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ನಾನು ಶಾಸಕನಾಗಿದ್ದಾಗ ವಕ್ಫ್ ಬೋರ್ಡ್ ಮುಖಾಂತರ ಮಸೀದಿಗೆ ಜಾಗ ವರ್ಗಾಯಿಸಲಾಗಿದೆ ಎಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಇದು ಸತ್ಯಕ್ಕೆ ದೂರವಾದ ವಿಚಾರ ಎಂದವರು ಸ್ಪಷ್ಟೀಕರಣ ನೀಡಿದ್ದಾರೆ.
ಕಲ್ಮತ್ ಮಸೀದಿ ಜಾಗ ಹಸ್ತಾಂತರದ ಪ್ರಕ್ರಿಯೆ 2018ರಲ್ಲಿ ನಡೆದಿರುವ ಬಗ್ಗೆ ಮಾಹಿತಿ ಇದ್ದು, ಮೇ ತಿಂಗಳಲ್ಲಿ ನಡೆದ ಚುನಾವಣೆಯಲ್ಲಿ ನಾನು ಪರಾಭವಗೊಂಡಿರುವುದನ್ನು ನನ್ನ ವಿರುದ್ಧ ಅಪಪ್ರಚಾರ ನಡೆಸುತ್ತಿರುವವರು ಮರೆತಿರುವಂತಿದೆ.
2018ರ ಬಳಿಕದ ಎಲ್ಲಾ ಸರಕಾರಿ ಪ್ರಕ್ರಿಯೆಗಳು ಸರಕಾರಿ ಇಲಾಖೆಗಳ ಮೂಲಕವೇ ಆಗಿದೆ ಎನ್ನುವುದನ್ನು ಗಮನಿಸಬೇಕಾಗಿದೆ.
ಆ ಜಾಗಕ್ಕೆ ಸಂಬಂಧಿಸಿದಂತೆ ವೈಯಕ್ತಿಕವಾಗಿ ನಾನು ಯಾವ ಇಲಾಖೆಯ ಅಧಿಕಾರಿಯನ್ನೂ ಸಂಪರ್ಕಿಸಿ ಚರ್ಚಿಸಿಲ್ಲ ಮತ್ತು ಯಾವ ಅಧಿಕಾರಿಗಳೂ ನನ್ನನ್ನು ಸಂಪರ್ಕಿಸಿಲ್ಲ ಎಂದಿರುವ ಪ್ರಮೋದ್, ಈ ಭೂ ಹಸ್ತಾಂತರ ಮತ್ತು ರದ್ದತಿ ಪ್ರಕ್ರಿಯೆಯಲ್ಲಿ ನಾನು ಯಾವುದೇ ರೀತಿಯ ಹಸ್ತಕ್ಷೇಪ ಮಾಡಿಲ್ಲ ಎಂದು ಹೇಳಿದ್ದಾರೆ.