Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು

ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು

ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಒತ್ತು

(ಸುದ್ದಿಕಿರಣ ವರದಿ)
ಉಡುಪಿ: ರಾಜ್ಯದಲ್ಲಿ ಪರಿಸರ ಸ್ನೇಹಿ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಒತ್ತುನೀಡಲಾಗುವುದು ಎಂದು ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಚಿವ ವಿ. ಸುನಿಲ್ ಕುಮಾರ್ ಹೇಳಿದರು.

ಉಡುಪಿ ಜಿಲ್ಲಾಡಳಿತ ವತಿಯಿಂದ ಭಾನುವಾರ ನಗರದ ಅಜ್ಜರಕಾಡು ಮಹಾತ್ಮ ಗಾಂಧಿ ಕ್ರೀಡಾಂಗಣದಲ್ಲಿ ನಡೆದ 75ನೇ ಸ್ವಾತಂತ್ರ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಸಂದೇಶ ನೀಡಿದರು.

ರಾಜ್ಯದಲ್ಲಿ ಕಲ್ಲಿದ್ದಲು ಆಧರಿತ ವಿದ್ಯುತ್ ಉತ್ಪಾದನೆಯನ್ನು ಆದಷ್ಟು ಕಡಿಮೆ ಮಾಡಿ ಪರಿಸರ ಸ್ನೇಹಿಯಾದ ಸೌರಶಕ್ತಿ ಮತ್ತು ವಿಂಡ್ ವಿದ್ಯುತ್ ಉತ್ಪಾದನೆಗೆ ಹೆಚ್ಚಿನ ಆದ್ಯತೆ ನೀಡಲು ಚಿಂತನೆ ನಡೆಸಲಾಗಿದೆ. ಆ ಮೂಲಕ ಗ್ರಾಹಕರು, ರೈತರು ಹಾಗೂ ಉದ್ಯಮಿ ಸ್ನೇಹಿ ನೀತಿ ಜಾರಿಗೊಳಿಸಲಾಗುವುದು.

ರಾಜ್ಯದ ಎಲ್ಲ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವ ಉದ್ದೇಶ ಹೊಂದಲಾಗಿದ್ದು, ಶೀಘ್ರದಲ್ಲಿ ಕ್ರಿಯಾಯೋಜನೆ ಸಿದ್ಧಪಡಿಸಲಾಗುವುದು ಎಂದರು.

ಸಂಸ್ಕೃತಿ ಇಲಾಖೆಗೆ ಪ್ರತ್ಯೇಕ ನೀತಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ಇದುವರೆಗೂ ಪ್ರತ್ಯೇಕ ನೀತಿ ಇರಲಿಲ್ಲ. ಈ ಸಂಬಂಧ ಹಿರಿಯರ ಸಮಿತಿ ರಚಿಸಿ ವರದಿ ಪಡೆದು ಶೀಘ್ರ ಪ್ರತ್ಯೇಕ ನೀತಿ ರಚನೆ ಮಾಡಲಾಗುವುದು. ಸಮಿತಿ ವರದಿಯಂತೆ ಮುಂದೆ ಕನ್ನಡ ಮತ್ತು ಸಂಸ್ಕೃತಿಗೆ ಸಂಬಂಧಪಟ್ಟ ನೀತಿ ರೂಪಿಸಲಾಗುವುದು.

ಯಕ್ಷಗಾನಕ್ಕೆ ಒತ್ತು, ತುಳು ಭಾಷೆಯನ್ನು 8ನೇ ಪರಿಚ್ಛೇದಕ್ಕೆ ಸೇರ್ಪಡೆಗೆ ಯತ್ನ, ದಕ್ಷಿಣ ಕನ್ನಡ ಜಿಲ್ಲೆಯ ಉಬ್ಬರಡ್ಕ ಹಾಗೂ ಮಿತ್ತೂರು ಗ್ರಾಮಗಳನ್ನು ಪಾರಂಪರಿಕ ಗ್ರಾಮಗಳನ್ನಾಗಿ ಮಾಡುವುದು, ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಲು ಅಗತ್ಯ ಕ್ರಮ ತೆಗೆದುಕೊಳ್ಳುವುದರ ಜತೆಗೆ ಭಾಷೆ ಮತ್ತು ಸಂಸ್ಕೃತಿಯನ್ನು ಒಟ್ಟಾಗಿ ತೆಗೆದುಕೊಂಡು ಹೋಗಲಾಗುವುದು ಎಂದರು.

ಉಡುಪಿಯಲ್ಲಿ 250 ಹಾಸಿಗೆಗಳ ಜಿಲ್ಲಾ ಆಸ್ಪತ್ರೆ ಕಟ್ಟಡ ನಿರ್ಮಾಣ ತ್ವರಿತಗತಿಯಲ್ಲಿ ಪೂರ್ಣಗೊಳಿಸುವುದು. ಪಶ್ಚಿಮ ವಾಹಿನಿ ಯೋಜನೆಯಡಿ ಕಿಂಡಿ ಅಣೆಕಟ್ಟು ನಿರ್ಮಾಣ, ಕಾರ್ಕಳ ಮತ್ತು ಉಡುಪಿ ನಗರಕ್ಕೆ ಯುಜಿಡಿ ವ್ಯವಸ್ಥೆ, ವಾರಾಹಿ ನದಿಯಿಂದ ಜಿಲ್ಲೆಯ ಐದು ತಾಲೂಕುಗಳಿಗೆ ಜಲಜೀವನ್ ಮಿಷನ್ ಯೋಜನೆಯಡಿ ಕುಡಿಯುವ ನೀರು ಪೂರೈಸಲಾಗುವುದು ಎಂದರು.

ದೇಶ ಮೊದಲು ಎಂಬ ಚಿಂತನೆಯೊಂದಿಗೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳ ಜೊತೆಗೆ ಸಾರ್ವಜನಿಕರೂ ಕೈಜೋಡಿಸಿದಲ್ಲಿ ಅಭಿವೃದ್ಧಿ ಸಾಧ್ಯ ಎಂದು ಸಚಿವ ಸುನಿಲ್ ಅಭಿಪ್ರಾಯ ವ್ಯಕ್ತಪಡಿಸಿದರು.

ಉಡುಪಿ ಶಾಸಕ ಕೆ. ರಘುಪತಿ ಭಟ್, ಕರಾವಳಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ರಾಘವೇಂದ್ರ ಕಿಣಿ, ಜಿಲ್ಲಾಧಿಕಾರಿ ಜಿ. ಜಗದೀಶ್, ಜಿ.ಪಂ. ಸಿಇಓ ಡಾ. ನವೀನ್ ಭಟ್, ಜಿಲ್ಲಾ ಪೊಲೀಸ್ ಅಧೀಕ್ಷಕ ವಿಷ್ಣುವರ್ಧನ್, ಕರಾವಳಿ ಕಾವಲು ಪೊಲೀಸ್ ಎಸ್.ಪಿ. ನಿಖಿಲ್, ಹೆಚ್ಚುವರಿ ಜಿಲ್ಲಾಧಿಕಾರಿ ಸದಾಶಿವ ಪ್ರಭು ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಕೋವಿಡ್ ವಾರಿಯರ್ ಗಳಾದ ವೈದ್ಯರು ಹಾಗೂ ವೈದ್ಯಕೀಯ ಸಿಬಂದಿಗಳನ್ನು ಗೌರವಿಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!