Thursday, July 7, 2022
Home ಸಮಾಚಾರ ಜಿಲ್ಲಾ ಸುದ್ದಿ ಬಾಲ ಕಾರ್ಮಿಕ ಪದ್ಧತಿ ತೊಲಗಿ ಶಿಕ್ಷಣ ಶುರುವಾಗಲಿ

ಬಾಲ ಕಾರ್ಮಿಕ ಪದ್ಧತಿ ತೊಲಗಿ ಶಿಕ್ಷಣ ಶುರುವಾಗಲಿ

ಸುದ್ದಿಕಿರಣ ವರದಿ
ಭಾನುವಾರ, ಜೂನ್ 12

ಬಾಲ ಕಾರ್ಮಿಕ ಪದ್ಧತಿ ತೊಲಗಿ ಶಿಕ್ಷಣ ಶುರುವಾಗಲಿ
ಉಡುಪಿ: ಬಾಲ ಕಾರ್ಮಿಕರಾಗಿ ದುಡಿಯುತ್ತಿರುವ ಮಕ್ಕಳನ್ನು ಪತ್ತೆಹಚ್ಚಿ ಅವರನ್ನು ದುಡಿಮೆಯಿಂದ ಮುಕ್ತಗೊಳಿಸಿ, ಸೂಕ್ತ ಪುನರ್ವಸತಿ ಕಲ್ಪಿಸಿ ವಿದ್ಯಾಭ್ಯಾಸಕ್ಕೆ ಸಕಲ ವ್ಯವಸ್ಥೆ ಕಲ್ಪಿಸುವ ಮೂಲಕ ಬಾಲ ಕಾರ್ಮಿಕ ಪದ್ಧತಿಯನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಆಶಿಸಿದರು.

ಭಾನುವಾರ ರಜತಾದ್ರಿ ಅಟಲ್ ಬಿಹಾರಿ ವಾಜಪೇಯಿ ಸಭಾಂಗಣದಲ್ಲಿ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ಕಾರ್ಮಿಕ ಇಲಾಖೆ ಹಾಗೂ ಜಿಲ್ಲಾ ಬಾಲ ಕಾರ್ಮಿಕ ಯೋಜನಾ ಸಂಘ ಉಡುಪಿ ಸಂಯುಕ್ತಾಶ್ರಯದಲ್ಲಿ ನಡೆದ ವಿಶ್ವ ಬಾಲ ಕಾರ್ಮಿಕ ಪದ್ಧತಿ ವಿರೋಧಿ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.

ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಿ
ಜಿಲ್ಲೆಯಲ್ಲಿ ಈ ಬಾರಿಯ ಎಸ್.ಎಸ್.ಎಲ್.ಸಿ ಫಲಿತಾಂಶ ಪರಿಶೀಲಿಸಿದಾಗ ಹಲವು ಮಕ್ಕಳು ತಮ್ಮ ಕುಟುಂಬ ನಿರ್ವಹಣೆಗೆ ಕೆಲಸ ಮಾಡುವ ಜೊತೆಗೆ ವಿದ್ಯಾಭ್ಯಾಸದಲ್ಲಿ ಅಸಾಧಾರಣ ಸಾಧನೆ ತೋರಿರುವುದನ್ನು ಕಾಣಬಹುದಾಗಿದೆ.

ಪೋಷಕರು ತಮ್ಮ ಮಕ್ಕಳನ್ನು ಬಾಲ ಕಾರ್ಮಿಕರನ್ನಾಗಿಸದೇ ಅವರ ಶಿಕ್ಷಣಕ್ಕೆ ಪ್ರಾಮುಖ್ಯತೆ ನೀಡಬೇಕು. ಅವರ ಬಾಲ್ಯದ ಹಕ್ಕುಗಳನ್ನು ರಕ್ಷಿಸಿ, ಅವರ ಕಣ್ಣುಗಳಲ್ಲಿ ಬಾಲ್ಯದ ಮುಗ್ಧತೆ ಮೂಡಿಸಬೇಕು.

ಅವರಿಗೆ ಸಮಾಜದ ಬಗ್ಗೆ ಭಯದ ವಾತಾವರಣ ಮೂಡುವ ಬದಲು ನಂಬಿಕೆ ಮೂಡಿಸುವುದು ಸಮಾಜದ ಪ್ರತಿಯೊಬ್ಬರ ಜವಾಬ್ದಾರಿ.

ಈ ನಿಟ್ಟಿನಲ್ಲಿ ಎಲ್ಲಾ ಸಂಘಸಂಸ್ಥೆಗಳು, ಜಿಲ್ಲೆಯ ಎಲ್ಲಾ ಕೈಗಾರಿಕೋದ್ಯಮಿಗಳು, ವ್ಯಾಪಾರಿಗಳು ಹಾಗೂ ಸರಕಾರಿ ಇಲಾಖೆಗಳ ಪಾತ್ರ ಅತ್ಯಂತ ಮಹತ್ವದ್ದಾಗಿದ್ದು, ಬಾಲ ಕಾರ್ಮಿಕ ಪದ್ದತಿ ನಿರ್ಮೂಲನೆಗೆ ಪ್ರತಿಯೊಬ್ಬರೂ ಸಹಕರಿಸಬೇಕು ಎಂದರು.

ಮಾಹಿತಿ ನೀಡಿ
ಜಿಲ್ಲೆಯಲ್ಲಿ ಬಾಲ ಕಾರ್ಮಿಕರನ್ನು ಪತ್ತೆಹಚ್ಚುವ ಸಲುವಾಗಿ ಕಾರ್ಮಿಕ ಇಲಾಖೆ ವತಿಯಿಂದ ಸಮೀಕ್ಷೆ ನಡೆಸಲಾಗುತ್ತಿದ್ದು, ಬಾಲ ಕಾರ್ಮಿಕರು ಪತ್ತೆಯಾದಲ್ಲಿ ಅವರಿಗೆ ಸೂಕ್ತ ಪುನರ್ವಸತಿ ಮತ್ತು ವಿದ್ಯಾಭ್ಯಾಸ ನೀಡಲಾಗುವುದು. ಸಾರ್ವಜನಿಕರು ಜಿಲ್ಲೆಯ ಯಾವುದೇ ಪ್ರದೇಶದಲ್ಲಿ ಬಾಲ ಕಾರ್ಮಿಕರು ಕಂಡುಬಂದಲ್ಲಿ ಉಚಿತ ಸಹಾಯವಾಣಿ ಸಂಖ್ಯೆ 1098ಗೆ ಮಾಹಿತಿ ನೀಡುವಂತೆ ತಿಳಿಸಿದರು.

ಶಿಕ್ಷಾರ್ಹ ಅಪರಾಧ
ಬಾಲ ಕಾರ್ಮಿಕ ಪದ್ಧತಿ ವಿರೋಧ ಕುರಿತಂತೆ ಪ್ರತಿಜ್ಞಾ ವಿಧಿ ಬೋಧಿಸಿದ, ಹಿರಿಯ ಸಿವಿಲ್ ನ್ಯಾಯಾಧೀಶೆ ಮತ್ತು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಬಾಲ ಕಾರ್ಮಿಕರನ್ನು ನೇಮಿಸಿಕೊಳ್ಳುವುದು ಕಾನೂನು ಪ್ರಕಾರ ಅಪರಾಧವಾಗಿದ್ದು, ಅದಕ್ಕಾಗಿ 20ರಿಂದ 50 ಸಾವಿರ ರೂ. ವರೆಗೆ ದಂಡ, 6 ತಿಂಗಳಿಂದ 2 ವರ್ಷ ವರೆಗೆ ಜೈಲು ಶಿಕ್ಷೆ ಅಥವಾ ಈ ಎರಡನ್ನೂ ವಿಧಿಸಲು ಕಾನೂನಿನಲ್ಲಿ ಅವಕಾಶವಿದೆ ಎಂದರು.

ಸುಶಿಕ್ಷಿತರನ್ನಾಗಿಸಿ
ಕರಾವಳಿ ಅಭಿವೃದ್ಧಿ ಪ್ರಾದಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ ಮಾತನಾಡಿ, ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಬಾಲ ಕಾರ್ಮಿಕರ ಸಂಖ್ಯೆ ಕಡಿಮಿ ಇದ್ದು, ಜಿಲ್ಲೆಗೆ ಉದ್ಯೋಗ ನಿಮಿತ್ತ ಆಗಮಿಸುವ ವಲಸೆ ಕಾರ್ಮಿಕರ ಮಕ್ಕಳು ಈ ಪದ್ಧತಿಗೆ ಬಲಿಯಾಗುತ್ತಿದ್ದಾರೆ.

ಈ ಮಕ್ಕಳನ್ನು ಗುರುತಿಸಿ ಸೂಕ್ತ ಪುನರ್ವವಸತಿ ಮತ್ತು ಸರಕಾರದ ವಿವಿಧ ಯೋಜನೆಗಳ ಪ್ರಯೋಜನ ಒದಗಿಸಿ ಅವರನ್ನು ಸುಶಿಕ್ಷಿತರನ್ನಾಗಿ ಮಾಡಬೇಕು ಎಂದರು.

ನಿರ್ಮೂಲನೆಗೆ ಸಹಕರಿಸಿ
ಅಧ್ಯಕ್ಷತೆ ವಹಿಸಿದ್ದ ಉಡುಪಿ ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್ ಮಾತನಾಡಿ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರ ಮಕ್ಕಳು, ಕೊಳಚೆ ಪ್ರದೇಶದಲ್ಲಿರುವ ಮಕ್ಕಳು ಹಾಗೂ ಭಿಕ್ಷಾಟನೆಯಲ್ಲಿ ತೊಡಗಿರುವ ಮಕ್ಕಳು ಬಾಲ ಕಾರ್ಮಿಕರಾಗಿ ದುಡಿಯುತ್ತಿದ್ದು ಅವರನ್ನು ಗುರುತಿಸಿ, ಸೂಕ್ತ ಶಿಕ್ಷಣ, ಪುನರ್ವಸತಿ ಒದಗಿಸುವುದು ಪ್ರಜ್ಞಾವಂತ ನಾಗರಿಕರ ಕರ್ತವ್ಯ.

ಇಂಥ ಮಕ್ಕಳು ಕಂಡುಬಂದಲ್ಲಿ ಮಾಹಿತಿ ನೀಡುವ ಮೂಲಕ ಈ ಪದ್ಧತಿಯ ನಿರ್ಮೂಲನೆಗೆ ಸಹಕರಿಸಬೇಕು ಎಂದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ವೀಣಾ, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ನಾಗರಾಜ ನಾಯಕ್ ಇದ್ದರು.

ಈ ಹಿಂದೆ ಬಾಲ ಕಾರ್ಮಿಕರಾಗಿ ಪತ್ತೆಯಾಗಿ, ಪ್ರಸ್ತುತ ಶಿಕ್ಷಣ ಪಡೆಯುತ್ತಿರುವ ಮಕ್ಕಳಿಗೆ ಶೈಕ್ಷಣಿಕ ಪರಿಕರ ಹಸ್ತಾಂತರಿಸಲಾಯಿತು.

ಬಾಲ ಕಾರ್ಮಿಕ ಮತ್ತು ಕಿಶೋರ ಕಾರ್ಮಿಕ ಪದ್ಧತಿ ನಿರ್ಮೂಲನೆ ಕುರಿತು ಸಂಪನ್ಮೂಲವ್ಯಕ್ತಿಗಳಿಂದ ಮಾಹಿತಿ ಮತ್ತು ಎಂಎಸ್.ಡಬ್ಲ್ಯೂ ಕಾಲೇಜು ವಿದ್ಯಾರ್ಥಿಗಳಿಂದ ಅರಿವು ಮೂಡಿಸುವ ಮೂಕಾಭಿನಯ ಪ್ರದರ್ಶನ ನಡೆಯಿತು.

ಜಿಲ್ಲಾ ಕಾರ್ಮಿಕ ಅಧಿಕಾರಿ ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿ, ಸ್ವಾಗತಿಸಿದರು. ಕಾರ್ಮಿಕ ನಿರೀಕ್ಷಕ ರಾಜಶೇಖರ ರೆಡ್ಡಿ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!