ಉಡುಪಿ: ಜಿಲ್ಲೆಯಲ್ಲಿ ಈ ತಿಂಗಳ 22 ಮತ್ತು 27ರಂದು ಜಿಲ್ಲೆಯ ಒಟ್ಟು 153 ಗ್ರಾ. ಪಂ.ಗಳಿಗೆ ಚುನಾವಣೆ ನಡೆಯಲಿದ್ದು, ಮತದಾರರಲ್ಲಿ ಮತದಾನದ ಮಹತ್ವ ಕುರಿತು ಜಾಗೃತಿ ಮೂಡಿಸಲು ಉಡುಪಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಯಕ್ಷಗಾನ ಮತ್ತು ಜಾನಪದ ಸಂಗೀತ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಪ್ರದೇಶಗಳಲ್ಲಿ ಅರಿವು ಮೂಡಿಸುತ್ತಿದೆ.
ಉಡುಪಿ ಸುಬ್ರಹ್ಮಣ್ಯ ಯಕ್ಷಗಾನ ಕಲಾಮಂಡಳಿ ತಂಡದ ಕಲಾವಿದರು ಜಿಲ್ಲೆಯ ವಿವಿಧ ಗ್ರಾಮಗಳಲ್ಲಿ ಮತದಾನ ಜಾಗೃತಿ ಕುರಿತಂತೆ ಅರಿವು ಮೂಡಿಸುತ್ತಿದ್ದು, ಗ್ರಾಮಸ್ಥರು ಯಾವುದೇ ಆಸೆ ಆಮಿಷಗಳಿಗೆ ಬಲಿಯಾಗದೇ, ತಮ್ಮ ಸಮಸ್ಯೆಗೆ ಸ್ಪಂದಿಸುವ ಅರ್ಹ ವ್ಯಕ್ತಿಗೆ ಮತ ಹಾಕುವ ಮೂಲಕ ಅವರನ್ನು ಆಯ್ಕೆ ಮಾಡುವಂತೆ ಪ್ರೇರೇಪಿಸುತ್ತಿದ್ದಾರೆ.
ಅನರ್ಹ ವ್ಯಕ್ತಿಗೆ ಮತ ಚಲಾಯಿಸಿದಲ್ಲಿ ಅದರ ಪರಿಣಾಮ ಏನಾಗಲಿದೆ, ಅರ್ಹ ವ್ಯಕ್ತಿಗೆ ಮತ ಚಲಾಯಿಸುವುದರಿಂದ ಅಗುವ ಪ್ರಯೋಜನಗಳ ಕುರಿತು ಯಕ್ಷಗಾನ ರೂಪಕದಲ್ಲಿ ಕಥೆ ಸಿದ್ಧಪಡಿಸಿ ಗ್ರಾಮೀಣ ಪ್ರದೇಶಗಳಲ್ಲಿ ಪ್ರದರ್ಶನ ನೀಡಲಾಗುತ್ತಿದೆ.
ಜೊತೆಗೆ ಗಾನ ಲಹರಿ ಬಳಗ, ಕೋಟೇಶ್ವರ ತಂಡದ ಸದಸ್ಯರೂ ಜಾನಪದ ಗೀತೆಗಳ ಮೂಲಕ ಗ್ರಾಮೀಣ ಪ್ರದೇಶದಲ್ಲಿ ಮತದಾನ ಜಾಗೃತಿ ಮೂಡಿಸುತ್ತಿದ್ದಾರೆ