ಉಡುಪಿ: ರಾಜ್ಯ ಸರ್ಕಾರ ಅಧಿಕಾರಕ್ಕೆ ಬಂದು 2 ವರ್ಷವಾಗುತ್ತಿದೆ. ಈವರೆಗೆ ಯಾವುದೇ ಜನಪರ ಕಾರ್ಯಕ್ರಮ ಜಾರಿಗೊಳಿಸಿಲ್ಲ, ಮಂತ್ರಿಗಳಲ್ಲೇ ಸಮನ್ವಯತೆ ಇಲ್ಲ. ಇತಿಹಾಸದಲ್ಲೇ ಮೊದಲ ಬಾರಿ ಒಂದೇ ದಿನ ಸಚಿವರ 4 ಇಲಾಖೆ ಬದಲಾವಣೆ ಮಾಡಲಾಗಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧ್ರುವನಾರಾಯಣ್ ಕುಹಕವಾಡಿದರು.
ಭಾನುವಾರ ಇಲ್ಲಿನ ಜಿಲ್ಲಾ ಕಾಂಗ್ರೆಸ್ ಭವನಕ್ಕಾಗಮಿಸಿದ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.
ದಕ್ಷಿಣ ಭಾರತದಲ್ಲಿ ಕರ್ನಾಟಕದಲ್ಲಿ ಮಾತ್ರ ಬಿಜೆಪಿಗೆ ಪ್ರಾಬಲ್ಯವಿದೆ. 2008ರಲ್ಲಿ ಅಧಿಕಾರಕ್ಕೆ ಬಂದ್ದಿದ್ದ ಬಿಜೆಪಿ ಸರ್ಕಾರ 3 ಮಂದಿ ಮುಖ್ಯಮಂತ್ರಿಯನ್ನು ಕಂಡಿತು. 2ನೇ ಬಾರಿ ಜಾರಕಿಹೊಳಿ ಪ್ರಕರಣದಿಂದ ರಾಜ್ಯದ ಜನತೆ ತಲೆತಗ್ಗಿಸುವಂತಾಗಿದೆ. ಆದರೂ ಪ್ರಗತಿಪರ ಕರಾವಳಿ ಜಿಲ್ಲೆಗಳಲ್ಲಿ ಜನರು ಸತತವಾಗಿ ಬಿಜೆಪಿಯನ್ನು ಬೆಂಬಲಿಸುತ್ತಿದ್ದಾರೆ ಎಂಬುದೇ ಆಶ್ಚರ್ಯ ಎಂದರು.
ಜಿ.ಪಂ. ಚುನಾವಣೆಗೆ ಸಜ್ಜು
ಕಾಂಗ್ರೆಸ್ ನ್ನು ತಳಮಟ್ಟದಿಂದ ಸಂಘಟಿಸುವ ಉದ್ದೇಶದಿಂದ ಕಾರ್ಯೋನ್ಮುಖರಾಗಿದ್ದೇವೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಪಕ್ಷಕ್ಕೆ ಹಿನ್ನಡೆಯಾಗಿದೆ. ಆದರೆ, ಗ್ರಾ.ಪಂ. ಚುನಾವಣೆಯಲ್ಲಿ ಉತ್ತಮ ಸಾಧನೆ ಮಾಡಲಾಗಿದ್ದು, ಮುಂದಿನ ತಾ. ಪಂ. ಮತ್ತು ಜಿ. ಪಂ. ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸುವ ಗುರಿ ಹೊಂದಲಾಗಿದೆ ಎಂದರು.
ರಾಜ್ಯಕ್ಕೆ ಅನ್ಯಾಯ
ಕೇಂದ್ರ ಸರ್ಕಾರದ ಪ್ರಸಕ್ತ ಸಾಲಿನ ಬಜೆಟ್ ನಲ್ಲಿ ಹೆದ್ದಾರಿ ಯೋಜನೆಗಳಿಗೆ ಕೇರಳಕ್ಕೆ 30 ಸಾವಿರ ಕೋಟಿ ರೂ., ತಮಿಳುನಾಡಿಗೆ 60 ಸಾವಿರ ಕೋಟಿ, ಪಶ್ಚಿಮ ಬಂಗಾಳಕ್ಕೆ 1 ಲಕ್ಷ ಕೋಟಿ ರೂ. ನಿಗದಿ ಮಾಡಲಾಗಿದೆ. ಆದರೆ, 25 ಮಂದಿ ಬಿಜೆಪಿ ಲೋಕಸಭಾ ಸದಸ್ಯರಿದ್ದರೂ ಕರ್ನಾಟಕಕ್ಕೆ ಅನುದಾನ ಶೂನ್ಯ ಎಂದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ್ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯಕುಮಾರ್ ಸೊರಕೆ, ಕೆಪಿಸಿಸಿ ಕಾರ್ಯದರ್ಶಿ ಎಂ. ಎ. ಗಫೂರ್, ಮಂಗಳೂರು ಕಾರ್ಪೊರೇಟರ್ ನವೀನ ಡಿ’ಸೋಜಾ, ಎನ್.ಎಸ್.ಯು.ಐ ಅಧ್ಯಕ್ಷ ಸೌರಭ್ ಬಲ್ಲಾಳ್, ಯುವ ಕಾಂಗ್ರೆಸ್ ಅಧ್ಯಕ್ಷ ದೀಪಕ್ ಕೋಟ್ಯಾನ್ ಇದ್ದರು.