ಉಡುಪಿ: ರಾಜಕೀಯ ಪಕ್ಷಗಳು ಚುನಾವಣೆ ಬಳಿಕ ಅಧಿಕಾರ ಗಳಿಸುವ ಸಲುವಾಗಿ ತಮ್ಮ ಪಕ್ಷಗಳ ಸಿದ್ಧಾಂತಗಳಿಗೆ ಬದಲಾಗಿ ಅನೇಕ ಪಕ್ಷಗಳ ಜೊತೆಗೂಡಿ ಸಾಮಾನ್ಯ ಕನಿಷ್ಟ ಕಾರ್ಯಕ್ರಮ ಶೀರ್ಷಿಕೆಯಡಿ ಸರಕಾರ ನಡೆಸುವಂತೆ ತ್ರಿಮತಸ್ಥ ಬ್ರಾಹ್ಮಣರೂ ತಂತಮ್ಮ ಸೈದ್ಧಾಂತಿಕ ವಿಚಾರಗಳನ್ನು ಒಂದು ಹಂತದ ವರೆಗೆ ಮಿತಗೊಳಿಸಿ ಉಳಿದಂತೆ ಕನಿಷ್ಟ ಸಂಖ್ಯೆಯಲ್ಲಿರುವ ಬ್ರಾಹ್ಮಣ ಸಮುದಾಯದ ಸಮಷ್ಟಿ ಹಿತಕ್ಕಾಗಿ ಸಾಮಾನ್ಯ ಕನಿಷ್ಟ ಕಾರ್ಯಸೂಚಿಯೊಂದಿಗೆ ಮುಂದಡಿ ಇಡಬೇಕಾದ ಅನಿವಾರ್ಯತೆ ಇದೆ ಎಂದು ಕಾಂಚಿ ಕಾಮಕೋಟಿ ಜಗದ್ಗುರು ಶಂಕರಾಚಾರ್ಯ ಸಂಸ್ಥಾನದ ಶ್ರೀ ವಿಜಯೇಂದ್ರ ಸರಸ್ವತಿ ಸ್ವಾಮೀಜಿ ಅಭಿಪ್ರಾಯ ವ್ಯಕ್ತಪಡಿಸಿದರು.
ಶ್ರೀಸಂಸ್ಥಾನಕ್ಕೆ ಭೇಟಿ ನೀಡಿದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರೊಂದಿಗೆ ದೇಶ, ಹಿಂದೂ ಸಮಾಜ ಹಾಗೂ ಬ್ರಾಹ್ಮಣ ಸಮಾಜದ ವರ್ತಮಾನಗಳ ಕುರಿತು ಗಂಭೀರವಾಗಿ ವಿಚಾರ ಮಂಥನ ನಡೆಸಿದರು. ನಮ್ಮ ವಿಚಾರ ಭಿನ್ನತೆಗಳು ಮಠಗಳ ನಡುವಿನ ಸ್ನೇಹ ಸೇತುವೆಗೆ ಭಂಗವಾಗದಂತೆ ಕಾಂಚಿ ಮಠದಲ್ಲೂ ಪ್ರತಿನಿತ್ಯ ಶ್ರೀಕೃಷ್ಣನಿಗೆ ಪೂಜೆ ಸಲ್ಲಬೇಕು. ಜಗತ್ತಿನಲ್ಲಿ ಬದಲಾವಣೆಯ ಬಿರುಗಾಳಿ ಎದುರಿಗೆ ನಮ್ಮ ಮೂಲ ಸತ್ವ ಉಳಿಸಿಕೊಳ್ಳಲೇಬೇಕಾದ ಅಗತ್ಯತೆ ಹಿಂದೆಂದಿಗಿಂತ ಪ್ರಸ್ತುತ ಹೆಚ್ಚಿದೆ. ಈ ಹಂತದಲ್ಲಿ ಸೈದ್ಧಾಂತಿಕ ವಿಚಾರ ಮುಂದಿಟ್ಟುಕೊಂಡು ವೈಮನಸ್ಸು ಬೆಳೆಸಿಕೊಂಡರೆ ಪರಿಸ್ಥಿತಿ ವಿಪರೀತಕ್ಕೆ ಹೋಗಿ ನಮ್ಮ ಕಾಲ ಮೇಲೆ ನಾವೇ ಕಲ್ಲು ಹಾಕಿಕೊಂಡಂತಾಗುತ್ತದೆ. ಅವುಗಳ ರಕ್ಷಣೆಯ ಬದ್ಧತೆಯನ್ನು ಆಯಾ ಮತಸ್ಥರು ಅಗತ್ಯವಾಗಿ ಮಾಡಿಕೊಂಡೇ ಬ್ರಾಹ್ಮಣ ಸಮಾಜದ ಸಮಷ್ಟಿ ಹಿತಕ್ಕೆ ಮೂವರಲ್ಲೂ ಇರುವ ಸಮಾನ ಅಂಶಗಳ ಪಟ್ಟಿ ಮಾಡಿ ಅವುಗಳ ಅನುಷ್ಠಾನಕ್ಕೆ ಪ್ರವೃತ್ತರಾಗಬೇಕು ಎಂದು ಪೇಜಾವರ ಶ್ರೀಗಳು ಹೇಳಿದರು.
ಬ್ರಾಹ್ಮಣನ ವ್ಯಷ್ಟಿ ಹಿತಕ್ಕೆ ಮಿತಿಯಾಗದೆ ಸಮಷ್ಟಿ ಹಿತಕ್ಕೆ ಚಿಂತಿಸಿ ಸಾಂಪ್ರದಾಯಿಕ ಜೀವನ ಪದ್ಧತಿ, ವೇದ ರಕ್ಷಣೆ, ವರ್ಧನೆ, ಸಂಸ್ಕೃತ ಅಧ್ಯಯನ, ಪುರಾಣ ಉಪನಿಷತ್ ಗಳ ಅಧ್ಯಯನ, ಆಹಾರ ವಿಹಾರ ಆಚಾರ ವಿಚಾರಗಳಲ್ಲಿ ಬ್ರಾಹ್ಮಣ್ಯ ಉಳಿಸುವ ಕರ್ತವ್ಯಗಳನ್ನು ನಾವೂ ಮಾಡಿಕೊಂಡು ಮುಂದಿನ ಪೀಳಿಗೆಗೂ ದಾಟಿಸುವ ಕೆಲಸ ಮಾಡಲೇಬೇಕಾಗಿದೆ. ಆ ಬಗೆಯ ಮಾನಸಿಕ ಉದಾರತೆ ಮತ್ತು ಪ್ರಾಮಾಣಿಕ ಕ್ರಿಯಾಯೋಜನೆ ಅನುಷ್ಠಾನಗಳನ್ನು ತ್ರಿಮತಸ್ಥ ಮಠ ಸಂಸ್ಥಾನಗಳು ಹಾಕಿಕೊಂಡು ನಿರ್ದೇಶನ ನೀಡಬೇಕು. ಕಾಂಚಿ ಸಂಸ್ಥಾನ ಈ ಹಿನ್ನೆಲೆಯಲ್ಲಿ ಬ್ರಾಹ್ಮಣ ಬಾಲಕ- ಬಾಲಕಿಯರು, ತರುಣ- ತರುಣಿಯರು ಮತ್ತು ಮಹಿಳೆ ಪುರುಷರಿಗಾಗಿ ಪ್ರತ್ಯೇಕವಾಗಿ ಹಮ್ಮಿಕೊಂಡಿರುವ ಮತ್ತು ಮುಂದಿನ ಹಂತದ ಕಾರ್ಯಯೋಜನೆಗಳನ್ನು ಎಳೆ ಎಳೆಯಾಗಿ ವಿವರಿಸಿದರು.
ಪೇಜಾವರ ಮಠದ ವಾಸುದೇವ ಭಟ್ ಪೆರಂಪಳ್ಳಿ, ವಿಷ್ಣುಮೂರ್ತಿ ಆಚಾರ್ಯ ಮತ್ತು ಕೃಷ್ಣ ಭಟ್ ಹಾಗೂ ಕಾಂಚಿ ಮಠದ ಗೋಪಿನಾಥ್ ಇದ್ದರು