Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕರಂಬಳ್ಳಿ ದೇವಳ ಅನ್ನಛತ್ರ ನಿರ್ಮಾಣಕ್ಕೆ 4 ಕೋ. ಅನುದಾನ

ಕರಂಬಳ್ಳಿ ದೇವಳ ಅನ್ನಛತ್ರ ನಿರ್ಮಾಣಕ್ಕೆ 4 ಕೋ. ಅನುದಾನ

ಉಡುಪಿ: ಕರಂಬಳ್ಳಿ ವೇಂಕಟರಮಣ ದೇವಸ್ಥಾನದಲ್ಲಿ ಯಾತ್ರಾರ್ಥಿಗಳ ಅನುಕೂಲಕ್ಕಾಗಿ ಮಾಜಿ ಸಚಿವ ದಿ. ವಿ. ಎಸ್. ಆಚಾರ್ಯ ಹೆಸರಿನಲ್ಲಿ ಅನ್ನಛತ್ರ ನಿರ್ಮಿಸಲು ಸರಕಾರಿಂದ 4 ಕೋಟಿ ರೂ. ಬಿಡುಗಡೆ ಮಾಡುವುದಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಪ್ರಕಟಿಸಿದರು.

ಕರಂಬಳ್ಳಿ ವೇಂಕಟರಮಣ ದೇವಸ್ಥಾನದಲ್ಲಿ ಬ್ರಹ್ಮಕಲಶೋತ್ಸವ ಅಂಗವಾಗಿ ಆಯೋಜಿಸಿದ್ದ ಧರ್ಮಸಭೆಯಲ್ಲಿ ಮಾತನಾಡಿದ ಅವರು, ನಾಲ್ಕು ದಿನಗಳಲ್ಲಿ ದೇವಸ್ಥಾನಕ್ಕೆ ಹಣ ಬಿಡುಗಡೆ ಮಾಡಲಾಗುವುದು. ಭಕ್ತರ ನೆರವಿನೊಂದಿಗೆ ಸುಂದರ ಹಾಗೂ ಸುಸಜ್ಜಿತವಾಗಿ ಅನ್ನಛತ್ರ ನಿರ್ಮಾಣವಾಗಲಿ ಎಂದು ಆಶಿಸಿದರು.

ರಾಜಕೀಯ ಜಂಟಾಟಗಳಿಂದ ಅಲ್ಪವಿರಾಮ ಪಡೆಯಲು ಉಡುಪಿಯಲ್ಲಿ ದೇವರ ಪೂಜೆಯಲ್ಲಿ ಭಾಗವಹಿಸಲು ಬಂದಿದ್ದೇನೆ. ಮನಸ್ಸಿಗೆ ನೆಮ್ಮದಿ, ಶಾಂತಿ ಇದ್ದರೆ ಆಡಳಿತವನ್ನು ಸುಗಮವಾಗಿ ಮುನ್ನಡೆಸಿಕೊಂಡು ಹೋಗಲು ಸಹಕಾರಿಯಾಗುತ್ತದೆ ಎಂದು ಯಡಿಯೂರಪ್ಪ ಪ್ರಸಕ್ತ ರಾಜಕೀಯ ವಿದ್ಯಮಾನಗಳ ಕುರಿತು ಬೇಸರ ವ್ಯಕ್ತಪಡಿಸಿದರು.

ಧರ್ಮ, ಸಂಸ್ಕೃತಿ, ಪರಂಪರೆ, ಆಚಾರ ವಿಚಾರಗಳು ಜಗತ್ತಿನಲ್ಲಿ ಶ್ರೇಷ್ಠ ಸ್ಥಾನ ಪಡೆದಿದ್ದು, ದೇಶದಲ್ಲಿ ಸಾಧು ಸಂತರು ಧರ್ಮ ಪ್ರಜ್ಞೆ, ರಾಷ್ಟ್ರ ಪ್ರಜ್ಞೆ, ಸಮಾಜ ಪ್ರಜ್ಞೆ ಮೂಡಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದರು.

ಸಾನ್ನಿಧ್ಯ ವಹಿಸಿದ್ದ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು. ಶ್ರೀಕೃಷ್ಣ ಹಾಗೂ ವೆಂಕಟರಮಣನ ನೆಲದಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಗೋಹತ್ಯೆ ನಿಷೇಧ ಕಾನೂನು ಜಾರಿ ಘೋಷಣೆ ಮಾಡಿರುವುದು ಸಂತಸ ತಂದಿದೆ ಎಂದರು.

ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಆಶೀರ್ವಚನ ನೀಡಿದರು.

ಧಾರ್ಮಿಕ ದತ್ತಿ ಸಚಿವ ಕೋಟ ಶ್ರೀನಿವಾಸ ಪೂಜಾರಿ, ಸಂಸದೆ ಶೋಭಾ ಕರಂದ್ಲಾಜೆ, ವಿಧಾನಸಭಾಧ್ಯಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ, ಸಿಎಂ ಸಂಸದೀಯ ಕಾರ್ಯದರ್ಶಿ ಜೀವರಾಜ್ ಅಭ್ಯಾಗತರಾಗಿದ್ದರು.

ದೇವಳದ ಆಡಳಿತ ಮೊಕ್ತೇಸರ, ಶಾಸಕ ರಘುಪತಿ ಭಟ್ ಸ್ವಾಗತಿಸಿ, ಕೊರೊನಾ ಸಂಕಷ್ಟ ಸಮಯದಲ್ಲಿ ಸಂತ್ರಸ್ತರಿಗೆ ಬ್ರಹ್ಮಕಲಶೋತ್ಸವ ಸಮಿತಿ ವತಿಯಿಂದ ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿತ್ತು. ನಾಡಿನ ಸಂಸ್ಕೃತಿ, ಕಲೆ ಇತ್ಯಾದಿಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಮುಂದಿನ ದಿನಗಳಲ್ಲಿ ಅನ್ನಸಂತರ್ಪಣೆ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಗಾಗಿ ಮಾಜಿ ಸಚಿವ ಡಾ. ವಿ. ಎಸ್. ಆಚಾರ್ಯ ನೆನಪಿನಲ್ಲಿ ಸುಮಾರು 4 ಕೋ. ರೂ. ವೆಚ್ಚದಲ್ಲಿ ಸುಸಜ್ಜಿತ ಸಭಾಭವನ ಮತ್ತು ಅನ್ನಛತ್ರ ನಿರ್ಮಿಸಲುದ್ದೇಶಿಸಲಾಗಿದೆ ಎಂದರು.

ಜೀರ್ಣೋದ್ಧಾರ ಸಮಿತಿ ಕಾರ್ಯದರ್ಶಿ ರಮೇಶ ಬಾರಿತ್ತಾಯ ವಂದಿಸಿದರು. ಜಿ. ವಾಸುದೇವ ಭಟ್ ನಿರೂಪಿಸಿದರು. ಶಾಸಕ ಭಟ್ ಪುತ್ರ ರೇಯಾಂಶು ಆರ್. ಭಟ್ ಶ್ಲೋಕ ಮೂಲಕ ಧರ್ಮಸಭೆಗೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಮುಖ್ಯಮಂತ್ರಿಯವರನ್ನು ದೇವಳದ ವತಿಯಿಂದ ಸನ್ಮಾನಿಸಲಾಯಿತು.

ಬ್ರಹ್ಮಕಲಶೋತ್ಸವ ಸಮಿತಿ ಅಧ್ಯಕ್ಷ ಯಶಪಾಲ್ ಸುವರ್ಣ, ಕರಂಬಳ್ಳಿ ದೇವಸ್ಥಾನದ ಆಡಳಿತ ಮಂಡಳಿ ಸದಸ್ಯರಾದ ಕರಂಬಳ್ಳಿ ಗೋಪಾಲ ಶೆಟ್ಟಿ, ಶೇಖರ ಜತ್ತನ್, ಕೆ. ಲಕ್ಷ್ಮಣ ಸೇರಿಗಾರ್, ಸುಂದರ ಅಮೀನ್, ಲಕ್ಷ್ಮೀನಾರಾಯಣ ಬಿ. ಆಚಾರ್ಯ, ಶೈಲಶ್ರೀ ದಿವಾಕರ ಶೆಟ್ಟಿ, ಕೆ. ವಿಶ್ವನಾಥ ಆಚಾರ್ಯ ಇದ್ದರು.

ಈ ಸಂದರ್ಭದಲ್ಲಿ ದೇವಳದ ತಂತ್ರಿ ಪಾಡಿಗಾರು ವಾಸುದೇವ ತಂತ್ರಿ ಮತ್ತು ಪಾಕತಜ್ಞ ಗುರುರಾಜ ಭಟ್ಟ ಅವರನ್ನು ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸನ್ಮಾನಿಸಿದರು.

ಶಾಸಕ ಭಟ್ ಗೆ ಸಿಎಂ ಅಭಿನಂದನೆ
ಕರಂಬಳ್ಳಿ ವೇಂಕಟರಮಣ ದೇವಸ್ಥಾನದ ಬ್ರಹ್ಮಕಲಶೋತ್ಸವ ಪ್ರಯುಕ್ತ ನಡೆದ ಧರ್ಮಸಭೆಯಲ್ಲಿ 2004ರಿಂದ ಈವರೆಗೆ ಶ್ರೀದೇವಳವನ್ನು ಸಮಗ್ರವಾಗಿ ಅಭಿವೃದ್ಧಿಗೊಳಿಸುವಲ್ಲಿ ಅಧ್ವರ್ಯುವಾಗಿ ಪ್ರಮುಖ ಪಾತ್ರ ವಹಿಸಿದ ಶ್ರೀದೇವಳದ ಆಡಳಿತ ಮೊಕ್ತೇಸರ ಹಾಗೂ ಶಾಸಕ ಕೆ. ರಘುಪತಿ ಭಟ್ ಅರನ್ನು ಜೀರ್ಣೋದ್ಧಾರ ಸಮಿತಿ, ಬ್ರಹ್ಮಕಲಶೋತ್ಸವ ಸಮಿತಿ, ಆಡಳಿತ ಮಂಡಳಿ ಮತ್ತು ಗ್ರಾಮಸ್ಥರ ಪರವಾಗಿ ಮುಖ್ಯಮಂತ್ರಿ ಬಿ. ಎಸ್. ಯಡಿಯೂರಪ್ಪ ಸನ್ಮಾನಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!