Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಸಂಸ್ಕೃತ ಕಾಲೇಜು ಪ್ರಾಚಾರ್ಯರಿಗೆ ಅಭಿನಂದನೆ

ಸಂಸ್ಕೃತ ಕಾಲೇಜು ಪ್ರಾಚಾರ್ಯರಿಗೆ ಅಭಿನಂದನೆ

ಉಡುಪಿ: ಸದ್ಯವೇ ನಿವೃತ್ತರಾಗಲಿರುವ ಇಲ್ಲಿನ ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಕಾಲೇಜು ಪ್ರಾಂಶುಪಾಲ ಎನ್. ಲಕ್ಷ್ಮೀನಾರಾಯಣ ಭಟ್ (ಎನ್.ಎಲ್. ಎನ್.) ಅವರಿಗೆ ಕೃಷ್ಣಮಠ ರಾಜಾಂಗಣದಲ್ಲಿ ಸನ್ಮಾನಿಸಲಾಯಿತು.

ಅಧ್ಯಕ್ಷತೆ ವಹಿಸಿದ್ದ ಪರ್ಯಾಯ ಅದಮಾರು ಶ್ರೀ ಈಶಪ್ರಿಯತೀರ್ಥ ಶ್ರೀಪಾದರು ಸನ್ಮಾನಿಸಿದರು.
ದೀರ್ಘ ಕಾಲದ ಪಾಠಾನುಭವದ ಎನ್.ಎಲ್.ಎನ್. ನಮ್ಮ ಆಸ್ತಿ. ಅವರ ಅಸಾದೃಶ ಪಾಂಡಿತ್ಯ ಇನ್ನಷ್ಟು ಜನಮಾನಸ ಬೆಳಗುವಂತಾಗಲಿ. ನಿವೃತ್ತಿ ಎಂಬುದು ಸರಕಾರದ ವತಿಯಿಂದಲೇ ಹೊರತು ಸರ್ವ ರೀತಿಯಿಂದಲ್ಲ ಎಂದರು

ಸಾನ್ನಿಧ್ಯ ವಹಿಸಿದ್ದ ಪಲಿಮಾರು ಮಠಾಧೀಶ ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು, ಸಂಸ್ಕೃತ ಸರಸ್ವತಿಯ ಆರಾಧನೆಯಲ್ಲೇ ನಲವತ್ತು ವರ್ಷ ಕಳೆದ ಶತಮಾನದ ಸರಸ್ವತಿಯ ಆರಾಧಕ ಮಹಾಸೌಭಾಗ್ಯವಂತ ಎನ್.ಎಲ್.ಬಿ, ಪೂರ್ವ ಶತಮಾನಗಳ ಉದ್ಗ್ರಂಥವನ್ನೂ ಸಾಣೆಕಲ್ಲಿಗೆ ಹಚ್ಚುವ ಉದ್ಧಾಮ ಪಂಡಿತ. ಸಂಸ್ಕೃತ ಮತ್ತು ಶಾಸ್ತ್ರಗಳ ಜೀವಂತಿಕೆಗೆ ಇವರು ಸಾಕ್ಷಿ ಎಂದರು.

ಅಭ್ಯಾಗತರಾಗಿದ್ದ ಕಟೀಲು ಶ್ರೀ ದುರ್ಗಾಪರಮೇಶ್ವರಿ ಕ್ಷೇತ್ರದ ಅರ್ಚಕ ಹರಿನಾರಾಯಣದಾಸ ಆಸ್ರಣ್ಣ, ಸಂಸ್ಕೃತ ಮತ್ತು ಸಂಸ್ಕೃತ ಕಾಲೇಜಿಗಾಗಿ ತನ್ನನ್ನೇ ಅರ್ಪಿಸಿಕೊಂಡ ಮಹನೀಯರು ಎನ್.ಎಲ್.ಎನ್. ವಿದ್ಯಾರ್ಥಿಗಳನ್ನು ಪ್ರೀತಿಯಿಂದ ತಿದ್ದುವ ಚಾಣಾಕ್ಷತನ, ಸಂಘಟನಾ ಕಲೆ, ಅದ್ಭುತ ವಿದ್ವತ್ತು ವಿದ್ಯಾರ್ಥಿಗಳಲ್ಲಿ ಕೆಲಸ ಮಾಡಿಸುತ್ತದೆ ಎಂದರು.

ಪ್ರಸಿದ್ಧ ಆಗಮ ಪಂಡಿತ ಪಂಜ ಭಾಸ್ಕರ ಭಟ್ಟ, ಕಾಲೇಜಿನ ಏಳಿಗೆಗಾಗಿ ನಿಸ್ವಾರ್ಥ ಶ್ರಮ, ಶುದ್ಧ ಚಾರಿತ್ರ್ಯ, ಶುದ್ಧಹಸ್ತ, ಕಾರ್ಯದಕ್ಷತೆ, ಪೂರ್ವೋತ್ತರ ಸಾಧಕ ಬಾಧಕಗಳ ಚಿಂತನೆ, ವ್ಯವಸ್ಥಿತ ಮತ್ತು ತ್ಯಾಗ ಮನೋಭಾವದಿಂದ ಕೂಡಿದ ಭಟ್ಟರು, ಸಂಸ್ಕೃತ ಕಾಲೇಜೊಂದನ್ನು ಹೇಗೆ ರೂಪಿಸಬೇಕು ಎಂಬುದಕ್ಕೆ ಆದರ್ಶಪ್ರಾಯರು ಎಂದರು.

ಎಸ್.ಎಂ.ಎಸ್.ಪಿ ಸಭಾ ಕಾರ್ಯದರ್ಶಿ ದೇವಾನಂದ ಉಪಾಧ್ಯಾಯ, ಕಾಲೇಜಿನ ಸೌಂದರ್ಯದಲ್ಲಿ ಭಟ್ಟರ ಪಾತ್ರ ಹಿರಿದು ಎಂದರು.

ಸನ್ಮಾನ ಸ್ವೀಕರಿಸಿದ ಲಕ್ಷ್ಮೀನಾರಾಯಣ ಭಟ್ಟ, ಗುರುಗಳು ಸಂಸ್ಕೃತಜ್ಞರ ಸಮ್ಮುಖದಲ್ಲಿ ನಡೆದದ್ದು ಸಮ್ಮಾನವಲ್ಲ. ಇದು ನನಗೆ ಮಾಡಿದ ಪರಮಾನುಗ್ರಹ ಎಂದರು.

ಶ್ರೀಮನ್ಮಧ್ವ ಸಿದ್ಧಾಂತ ಪ್ರಬೋಧಕ ಸಂಸ್ಕೃತ ಅಧ್ಯಯನ ಕೇಂದ್ರ ಪ್ರಭಾರ ಪ್ರಾಂಶುಪಾಲ ಹರಿದಾಸ ಭಟ್ಟ ಸ್ವಾಗತಿಸಿ, ಸಭಾ ಕೋಶಾಧಿಕಾರಿ ಚಂದ್ರಶೇಖರ ಆಚಾರ್ಯ ವಂದಿಸಿದರು. ಡಾ| ಶಿವಪ್ರಸಾದ ತಂತ್ರಿ ನಿರೂಪಿಸಿದರು. ಡಾ| ಷಣ್ಮುಖ ಹೆಬ್ಬಾರ್ ಸನ್ಮಾನಪತ್ರ ವಾಚಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!