Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕೋವಿಡ್ 3ನೇ ಅಲೆ ಎದುರಿಸಲು ಮಕ್ಕಳ ಸಮಾಲೋಚಕರಿಗೆ ತರಬೇತಿ

ಕೋವಿಡ್ 3ನೇ ಅಲೆ ಎದುರಿಸಲು ಮಕ್ಕಳ ಸಮಾಲೋಚಕರಿಗೆ ತರಬೇತಿ

ಉಡುಪಿ: ಕೋವಿಡ್ 3ನೇ ಅಲೆ ಮಕ್ಕಳನ್ನು ಬಾಧಿಸಬಹುದಾದ ಹಿನ್ನೆಲೆಯಲ್ಲಿ ಮಕ್ಕಳೊಂದಿಗೆ ಮಕ್ಕಳ ಸ್ನೇಹಿಯಾಗಿ ಬೆರೆತು ಅವರೊಂದಿಗೆ ಆಪ್ತ ಸಮಾಲೋಚನೆ ನಡೆಸಿ ಕೋವಿಡ್ ಚಿಕಿತ್ಸೆ ನೀಡಲು ಅನುಕೂಲವಾಗುವಂತೆ ಮಕ್ಕಳ ಸಮಾಲೋಚಕರಿಗೆ ಅಗತ್ಯ ತರಬೇತಿ ಕಾರ್ಯಕ್ರಮಗಳನ್ನು ಆದ್ಯತೆಯ ಮೇರೆಗೆ ಆಯೋಜಿಸುವಂತೆ ಜಿಲ್ಲಾಧಿಕಾರಿ ಜಿ. ಜಗದೀಶ್ ತಿಳಿಸಿದರು.

ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ವಿವಿಧ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜಿಲ್ಲೆಯ ಎಲ್ಲಾ ಮಕ್ಕಳ ಪಾಲನಾ ಸಂಸ್ಥೆಗಳಲ್ಲಿಯೂ ಮಕ್ಕಳ ಸಮಾಲೋಚಕರನ್ನು ನೇಮಿಸಿ. ಮಕ್ಕಳ ಸಮಾಲೋಚಕರಾಗಿ ಕಾರ್ಯನಿರ್ವಹಿಸಲು ಆಸಕ್ತರಿರುವ ಎಂ.ಎಸ್.ಡಬ್ಲ್ಯೂ ಮತ್ತು ಮನಃಶಾಸ್ತ್ರದ ವಿದ್ಯಾರ್ಥಿಗಳಿಗೆ ಕೋವಿಡ್ ಬಾಧಿತರಾದ ಮಕ್ಕಳೊಂದಿಗೆ ಬೆರೆತು, ಮಕ್ಕಳು ಕೋವಿಡ್ ಮಾರ್ಗಸೂಚಿ ಪಾಲನೆ ಮತ್ತು ಚಿಕಿತ್ಸೆಗೆ ಉತ್ತಮ ರೀತಿಯಲ್ಲಿ ಸ್ಪಂದಿಸುವಂತೆ ಮನವೊಲಿಸುವ ವಿಧಾನಗಳ ಬಗ್ಗೆ ಸೂಕ್ತ ತರಬೇತಿ ನೀಡಿ, ಅವರನ್ನು ಕೋವಿಡ್ ಕಾಲ್ ಸೆಂಟರ್ ಹಾಗೂ ಟೆಲಿ ಕೌನ್ಸಿಲಿಂಗ್ ಸೇವೆಗಳಿಗೂ ನಿಯೋಜಿಸಿ ಎಂದರು.

ಮಕ್ಕಳ ಸಹಾಯವಾಣಿ 1098 ಬಗ್ಗೆ ಜಿಲ್ಲೆಯಾದ್ಯಂತ ವ್ಯಾಪಕ ಅರಿವು ಮೂಡಿಸಿ. ಪಿಡಿಓಗಳು, ಆಶಾ ಕಾರ್ಯಕರ್ತೆಯರು, ಹಿರಿಯ ಆರೋಗ್ಯ ಸಹಾಯಕಿಯರಿಗೆ ತರಬೇತಿ ಆಯೋಜಿಸಿ. ಶಾಲೆ ಆರಂಭವಾದ ಕೂಡಲೇ ಶಾಲಾ ಮುಖ್ಯೋಪಾಧ್ಯಾಯರಿಗೂ ತರಬೇತಿ ಆಯೋಜಿಸಲು ಸೂಚಿಸಿದರು.

ಬಾಲನ್ಯಾಯ ಮಂಡಳಿಯಲ್ಲಿ 2021ರ ಜೂನ್ ಅಂತ್ಯದ ವರೆಗೆ ಬಾಕಿ ಇದ್ದ 23 ಪ್ರಕರಣಗಳಲ್ಲಿ 1 ಪ್ರಕರಣ ಇತ್ಯರ್ಥಗೊಂಡಿದ್ದು, ಪೊಕ್ಸೋ 8, ಅಪಘಾತ 3 ಸೇರಿದಂತೆ ಇತರ ಒಟ್ಟು 22 ಪ್ರಕರಣ ಬಾಕಿ ಇವೆ. ಮಕ್ಕಳ ಕಲ್ಯಾಣ ಸಮಿತಿ ಮುಂದೆ 26 ಪ್ರಕರಣಗಳು ಬಂದಿದ್ದು, 15ನ್ನು ಮಕ್ಕಳ ಪಾಲನಾ ಸಂಸ್ಥೆಗಳಿಗೆ, 2 ಬೇರೆ ಜಿಲ್ಲೆಗೆ, 9 ಪೋಷಕರ ವಶಕ್ಕೆ ಬಿಡುಗಡೆ ಮಾಡಲಾಗಿದ್ದು, ಜಿಲ್ಲೆಯಲ್ಲಿ ಒಟ್ಟು 28 ಮಕ್ಕಳ ಪಾಲನಾ ಸಂಸ್ಥೆಗಳಲ್ಲಿ 132 ಮಕ್ಕಳಿದ್ದಾರೆ. ಜಿಲ್ಲೆಯಲ್ಲಿ ಬಾಲ್ಯ ವಿವಾಹ ಪ್ರಕರಣ ವರದಿಯಾಗಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಉಪ ನಿರ್ದೇಶಕ ಶೇಷಪ್ಪ ಮಾಹಿತಿ ನೀಡಿದರು.

ಸಭೆಯಲ್ಲಿ ಜಿ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಶರ್ಮಿಳಾ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು ಹಾಗೂ ಮಕ್ಕಳ ರಕ್ಷಣೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಸ್ವಯಂಸೇವಾ ಸಂಸ್ಥೆಗಳ ಪ್ರತಿನಿಧಿಗಳು ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!