Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗುರಿ

ಕಾರ್ಯಕರ್ತರನ್ನು ನಾಯಕರನ್ನಾಗಿಸುವ ಗುರಿ

ಉಡುಪಿ: ಕಾರ್ಯಕರ್ತರನ್ನು ನಾಯಕರನ್ನಾಗಿಸಿ, ಆ ಮೂಲಕ ಭಾರತೀಯತೆಯ ಪರಿಕಲ್ಪನೆಯ ಆಡಳಿತ ನಡೆಸುವುದು ಭಾರತೀಯ ಜನತಾ ಪಕ್ಷದ ಗುರಿ. ಆ ದಿಸೆಯಲ್ಲಿ ಅಭ್ಯಾಸ ವರ್ಗ ಆಯೋಜಿಸುತ್ತಿರುವುದಾಗಿ ಬಿಜೆಪಿ ರಾಜ್ಯಾಧ್ಯಕ್ಷ, ಮಂಗಳೂರು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.

ಉಡುಪಿ ಜಿಲ್ಲಾ ಬಿಜೆಪಿ ನೇತೃತ್ವದಲ್ಲಿ ಇಂದಿಲ್ಲಿ ನಡೆದ ಉಡುಪಿ, ದಕ್ಷಿಣ ಕನ್ನಡ ಮತ್ತು ಕೊಡಗು ಜಿಲ್ಲೆಗಳನ್ನೊಳಗೊಂಡ ಮಂಗಳೂರು ವಿಭಾಗ ಮಟ್ಟದ ಬಿಜೆಪಿ ಜಿಲ್ಲಾ ಪ್ರಶಿಕ್ಷಣ ಅಭ್ಯಾಸ ವರ್ಗ ಉದ್ಘಾಟಿಸಿ ಮಾತನಾಡಿದರು.
ಸ್ವಾತಂತ್ರ್ಯಾ ನಂತರ ದೀರ್ಘಕಾಲ ಆಡಳಿತ ನಡೆಸಿದ ಕಾಂಗ್ರೆಸ್ ಅಧಿಕಾರಕ್ಕಾಗಿ ಭಾರತೀಯತೆಯನ್ನು ಮರೆಯಿತು, ವ್ಯಕ್ತಿಪೂಜೆಗೆ ಆದ್ಯತೆ ನೀಡಿತು. ಬಿಜೆಪಿ ಅಧಿಕಾರಕ್ಕಾಗಿ ಆಸೆ ಪಡದೆ ಅವಕಾಶಕ್ಕಾಗಿ ಹಾತೊರೆಯುತ್ತಿದೆ. ವ್ಯಕ್ತಿಪೂಜೆಗಿಂತ ತತ್ವ ಪೂಜೆಗೆ ಆದ್ಯತೆ ನೀಡಲಾಗುತ್ತದೆ. ಬಿಜೆಪಿಗೆ ಅಧಿಕಾರ ಮಾಧ್ಯಮ ಮಾತ್ರ ಎಂದರು.
ಮುಂದಿನ ಎಲ್ಲ ಚುನಾವಣೆಗಳಲ್ಲಿ ಬಿಜೆಪಿ ಗೆಲುವು ಸಾಧಿಸಲಿದೆ. ಮುಂದಿನ ವಿಧಾನ ಸಭೆ ಚುನಾವಣೆಯಲ್ಲಿ ರಾಜ್ಯದಲ್ಲಿ ಕಾಂಗ್ರೆಸ್ 30ಕ್ಕಿಂತ ಹೆಚ್ಚಿನ ಸ್ಥಾನ ಪಡೆಯದು ಎಂದು ಭವಿಷ್ಯ ನುಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಮಂಗಳೂರು ವಿಭಾಗ ಪ್ರಭಾರಿ ಉದಯಕುಮಾರ್ ಶೆಟ್ಟಿ, ಒಂದು ದಿನದ ಕಾರ್ಯಾಗಾರದಲ್ಲಿ ಪಕ್ಷದ ಇತಿಹಾಸ, ಸಂಘಟನೆ, ವ್ಯಕ್ತಿತ್ವ ವಿಕಸ ಇತ್ಯಾದಿ ಮೌಲ್ಯಾಧಾರಿತ ವಿಚಾರಗಳ ಬಗ್ಗೆ ಜಿಲ್ಲಾ ಪ್ರಮುಖರಿಗೆ ಮಾಹಿತಿ ನೀಡಲಾಗುತ್ತಿದೆ ಎಂದರು.
ಉಡುಪಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್ ಸ್ವಾಗತಿಸಿದರು. ದ.ಕ. ಬಿಜೆಪಿ ಅಧ್ಯಕ್ಷ ಎಂ. ಸುದರ್ಶನ ಮೂಡುಬಿದಿರೆ, ಮಂಗಳೂರು ವಿಭಾಗ ಸಹಪ್ರಭಾರಿ ಗೋಪಾಲಕೃಷ್ಣ ಹೇರ್ಳೆ, ಪ್ರಕೋಷ್ಠ ಪ್ರಮುಖೆ ಡಾ. ಮಂಜುಳಾ ಇದ್ದರು.
ಬಳಿಕ ನಡೆದ ಅಭ್ಯಾಸ ವರ್ಗದಲ್ಲಿ ವಿಧಾನ ಪರಿಷತ್ ಮಾಜಿ ಸದಸ್ಯ ಕ್ಯಾ. ಗಣೇಶ ಕಾರ್ಣಿಕ್, ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್ ಮೊದಲಾದವರು ಮಾಹಿತಿ ನೀಡಿದರು.
ಮೂರೂ ಜಿಲ್ಲೆಗಳ ಸುಮಾರು 100 ಮಂದಿ ಭಾಗವಹಿಸಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!