Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕೈಗಾರಿಕೆ ಸ್ಥಾಪನೆಗೆ ಮೂಳೂರು, ಬಳ್ಕುಂಜೆಗಳಲ್ಲಿ ಭೂಸ್ವಾಧೀನ

ಕೈಗಾರಿಕೆ ಸ್ಥಾಪನೆಗೆ ಮೂಳೂರು, ಬಳ್ಕುಂಜೆಗಳಲ್ಲಿ ಭೂಸ್ವಾಧೀನ

ಆತ್ಮೀಯ ಓದುಗರೇ,
ಕೋವಿಡ್ ಅನ್ ಲಾಕ್ ಹೇಳಿಲ್ಲ; ಹೇಳಿದ್ದು ಸರ್ಕಾರ. ಇನ್ನೂ ಸಂಪೂರ್ಣ ಕೊರೊನಾ ತೊಲಗಿಲ್ಲ. ಹಾಗಾಗಿ ಸ್ವಚ್ಛತೆ ಕಾಪಾಡಿ, ಮಾಸ್ಕ್ ಧರಿಸಿ, ವ್ಯಕ್ತಿಗತ ಅಂತರ ಪಾಲಿಸಿ. ನೀವು ಸುರಕ್ಷಿತವಿರಿ, ಅನ್ಯರೂ ಸುರಕ್ಷಿತರಾಗಿರಲಿ. ಕೊರೊನಾದಿಂದ ರಕ್ಷಣೆ ನಮ್ಮ ಕೈಯ್ಯಲ್ಲೇ ಇದೆ. ಅಲ್ಲವೇ?
*******************************

(ಸುದ್ದಿಕಿರಣ ವರದಿ)

ಪಡುಬಿದ್ರಿ, ಜು. 5: ದ.ಕ. ಮತ್ತು ಉಡುಪಿ ಜಿಲ್ಲೆಯಲ್ಲಿ ಕೈಗಾರಿಕೆ ಸ್ಥಾಪಿಸಲು ಹೂಡಿಕೆದಾರರು ಉತ್ಸುಕರಾಗಿದ್ದು, ಅದಕ್ಕಾಗಿ ಕಾಪು ಸಮೀಪದ ಮೂಳೂರಿನಲ್ಲಿ 250 ಎಕರೆ ಹಾಗೂ ದ.ಕ. ಜಿಲ್ಲೆಯ ಮೂಲ್ಕಿ ಬಳಿಯ ಬಳ್ಕುಂಜೆಯಲ್ಲಿ 800 ಎಕ್ರೆ ಸ್ಥಳ ಸ್ವಾಧೀನಪಡಿಸಿಕೊಳ್ಳಲು ನಿರ್ಧರಿಸಲಾಗಿದೆ ಎಂದು ಬೃಹತ್ ಮತ್ತು ಮಧ್ಯಮ ಕೈಗಾರಿಕೆ ಸಚಿವ ಜಗದೀಶ ಶೆಟ್ಟರ್ ಹೇಳಿದರು.

ಬೆಳಪು ಕೈಗಾರಿಕೆ ಪ್ರದೇಶದಲ್ಲಿ ನೂತನವಾಗಿ ನಿರ್ಮಿಸಲಾದ ಆಮ್ಲಜನಕ ಘಟಕಕ್ಕೆ ಸೋಮವಾರ ಭೇಟಿ ನೀಡಿ, ಸುದ್ದಿಗಾರರೊಂದಿಗೆ ಮಾತನಾಡಿದರು.

ಬೆಂಗಳೂರನ್ನು ಹೊರತುಪಡಿಸಿ ಉಳಿದ ಜಿಲ್ಲೆಗಳಲ್ಲಿ ಕೈಗಾರಿಕೆ ಅಭಿವೃದ್ಧಿ ಆಗಬೇಕು ಎಂಬುದು ನಮ್ಮ ಆಶಯ. ಆ ಆಶಯದಂತೆ ಹೊಸ ಕೈಗಾರಿಕಾ ನೀತಿಯಲ್ಲಿ ಅವಕಾಶ ಮಾಡಿಕೊಡಲಾಗಿದೆ. ಮಂಗಳೂರು, ಯಾದಗಿರಿ, ಕೊಪ್ಪಳ, ಬೆಳಗಾವಿ, ಹುಬ್ಬಳ್ಳಿ, ಧಾರವಾಡ ಸೇರಿದಂತೆ ಅನೇಕ ಕಡೆಗಳಲ್ಲಿ ಕೈಗಾರಿಕೆ ಸ್ಥಾಪನೆಗೆ ಹೂಡಿಕೆದಾರರು ಮುಂದೆಬರುತ್ತಿದ್ದಾರೆ ಎಂದರು.

ಹೊಸ ಕೈಗಾರಿಕೆ ನೀತಿಯಲ್ಲಿ ಸ್ಥಳೀಯರಿಗೆ ಉದ್ಯೋಗ ನೀಡುವ ಬಗ್ಗೆ ಖರಾರುಪತ್ರದಲ್ಲಿ ಷರತ್ತು ವಿಧಿಸಲಾಗಿದೆ. ಎಲ್ಲ ಕೈಗಾರಿಕೆಗಳಲ್ಲೂ ಕನ್ನಡಿಗರಿಗೆ ಕೆಲಸ ನೀಡಬೇಕು. ಒಂದು ವೇಳೆ ಕೆಲಸ ನೀಡದ ಬಗ್ಗೆ ದೂರು ಬಂದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಶೆಟ್ಟರ್ ಎಚ್ಚರಿಸಿದರು.

ಕೊರೊನಾದಿಂದಾಗಿ ಕೈಗಾರಿಕೆ ಅಭಿವೃದ್ಧಿಯಲ್ಲಿ ಕುಂಠಿತವಾಗಿದ್ದು, ಇತರ ರಾಜ್ಯಗಳಿಗೆ ಹೋಲಿಸಿದಲ್ಲಿ ಕರ್ನಾಟಕದಲ್ಲಿ ಕೈಗಾರಿಕೆ ಬೆಳವಣಿಗೆ ಪ್ರಮಾಣ ಹೆಚ್ಚಿದೆ. ಕೋವಿಡ್ ಶೂನ್ಯಕ್ಕೆ ಬಂದಲ್ಲಿ ಇನ್ನಷ್ಟು ದೊಡ್ಡ ಪ್ರಮಾಣದಲ್ಲಿ ಕೈಗಾರಿಕೆ ಅಭಿವೃದ್ಧಿಯಾಗಲಿದೆ ಎಂದು ಶೆಟ್ಟರ್ ವಿಶ್ವಾಸ ವ್ಯಕ್ತಪಡಿಸಿದರು.

ಬೆಳಪು ಆಕ್ಸಿಜನ್ ಘಟಕ ಈ ಭಾಗದಲ್ಲಿ ಕೊರೊನಾ ನಿಯಂತ್ರಿಸಲು ಸಹಕಾರಿಯಾಗಲಿದ್ದು, ಸಾಕಷ್ಟು ಪ್ರಮಾಣದಲ್ಲಿ ಆಮ್ಲಜನಕ ಲಭ್ಯವಾಗಲಿದೆ ಎಂದರು.

ಶಾಸಕರಾದ ಲಾಲಾಜಿ ಮೆಂಡನ್ ಮತ್ತು ರಘುಪತಿ ಭಟ್, ಜಿಲ್ಲಾ ಬಿಜೆಪಿ ಅಧ್ಯಕ್ಷ ಕುಯಿಲಾಡಿ ಸುರೇಶ ನಾಯಕ್, ರಾಜ್ಯ ಕಾರ್ಯಕಾರಿಣಿ ಸದಸ್ಯ ಗುರ್ಮೆ ಸುರೇಶ ಶೆಟ್ಟಿ, ಎಸ್. ಎಸ್. ಕ್ರೈಯೋಜನಿಕ್ಸ್ ಪ್ರೈ. ಲಿ. ಆಡಳಿತ ನಿರ್ದೇಶಕ ಕೆ. ನಟರಾಜ್ ಹೆಗ್ಡೆ, ಸಣ್ಣ ಕೈಗಾರಿಕೆ ಇಲಾಖೆ ಜಂಟಿ ನಿರ್ದೇಶಕ ಗೋಕುಲದಾಸ್ ನಾಯಕ್ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!