Wednesday, July 6, 2022
Home ಸಮಾಚಾರ ಜಿಲ್ಲಾ ಸುದ್ದಿ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾನೋತ್ಸವ ಸಂಭ್ರಮ

ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾನೋತ್ಸವ ಸಂಭ್ರಮ

ಸುದ್ದಿಕಿರಣ ವರದಿ
ಸೋಮವಾರ, ಜೂನ್ 13

ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾನೋತ್ಸವ ಸಂಭ್ರಮ
ಉಡುಪಿ: ಮಿಷನ್ ಆಸ್ಪತ್ರೆ ಎಂದೇ ಜನಜನಿತವಾದ ಇಲ್ಲಿನ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾನೋತ್ಸವ ಸಂಭ್ರಮ ಆಚರಿಸಲಿದ್ದು, ಜೂನ್ 15ರ0ದು ಔಪಚಾರಿಕ ಉದ್ಘಾಟನೆ ನಡೆಯಲಿದೆ ಎಂದು ಆಸ್ಪತ್ರೆ ನಿರ್ದೇಶಕ ಡಾ. ಸುಶಿಲ್ ಜತನ್ನಾ ತಿಳಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, 100 ನೇ ವರ್ಷಕ್ಕೆ ಪಾದಾರ್ಪಣೆ ಮಾಡುತ್ತಿರುವ ಈ ಸಂದರ್ಭದಲ್ಲಿ ಉಡುಪಿಯ ಜನತೆಗೆ ಕೈಗೆಟಕುವ ದರದಲ್ಲಿ ಗುಣಮಟ್ಟದ ಆರೋಗ್ಯ ಸೇವೆ ಒದಗಿಸುವ ತನ್ನ ಧ್ಯೇಯವನ್ನು ಮುಂದುವರಿಸಲಿದೆ ಎಂದರು.

3 ಆಯಾಮಗಳಲ್ಲಿ ಕಾರ್ಯಕ್ರಮ
ಶತಮಾನೋತ್ಸವ ಸಂಭ್ರಮಾಚರಣೆಯನ್ನು ಮೂರು ಆಯಾಮಗಳಲ್ಲಿ ನಡೆಯಲಿದೆ. ಬೆಳಿಗ್ಗೆ 9 ಗಂಟೆಗೆ ರಕ್ತದಾನ ಶಿಬಿರ, ಅಪರಾಹ್ನ 3 ಗಂಟೆಗೆ ದೇವರಿಗೆ ಧನ್ಯವಾದ ಸಮರ್ಪಣೆ (ಪೂಜೆ ಪ್ರಾರ್ಥನೆ) ಮತ್ತು ಸಂಜೆ 5 ಗಂಟೆಗೆ ನರ್ಸಿಂಗ್ ಕಾಲೇಜಿನ ಹೊಸ ಬ್ಲಾಕ್ ಉದ್ಘಾಟನೆ ನಡೆಯಲಿದೆ.

ರಕ್ತದಾನ ಶಿಬಿರವನ್ನು ಉಡುಪಿ ಬಡಗಬೆಟ್ಟು ಕ್ರೆಡಿಟ್ ಕೋ ಆಪರೇಟಿವ್ ಸೊಸೈಟಿ ನಿಕಟಪೂರ್ವ ಮಹಾಪ್ರಬಂಧಕ ಹಾಗೂ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ ಶೆಟ್ಟಿ ಇಂದ್ರಾಳಿ ಉದ್ಘಾಟಿಸುವರು.

ಅಪರಾಹ್ನ 3 ಗಂಟೆಗೆ ಮಿಷನ್ ಆಸ್ಪತ್ರೆ ಚಾಪೆಲ್ ನಲ್ಲಿ ಸಿಎಸ್.ಐ ಕರ್ನಾಟಕ ದಕ್ಷಿಣ ಧರ್ಮಪ್ರಾಂತ್ಯ ಉಪಾಧ್ಯಕ್ಷೆ ವಂ. ಭಗಿನಿ ಸುಜಾತಾ ನೇತೃತ್ವದಲ್ಲಿ ಕೃತಜ್ಞತಾರ್ಪಣೆ ನಡೆಯಲಿದೆ.

ಲೊಂಬಾರ್ಡ್ ಆಸ್ಪತ್ರೆ ಆವರಣದಲ್ಲಿ ಸಂಜೆ 5 ಗಂಟೆಗೆ ಪ್ರಧಾನ ಕಾರ್ಯಕ್ರಮ ನಡೆಯಲಿದೆ. ನರ್ಸಿಂಗ್ ಕಾಲೇಜಿನ ಹೊಸ ಬ್ಲಾಕ್ ನ್ನು ನಿಟ್ಟೆ ಡೀಮ್ಡ್ ವಿಶ್ವವಿದ್ಯಾನಿಲಯದ ಕುಲಪತಿ ಮತ್ತು ನಿಟ್ಟೆ ಎಜುಕೇಶನ್ ಟ್ರಸ್ಟ್ ಅಧ್ಯಕ್ಷ ಎನ್. ವಿನಯ್ ಹೆಗ್ಡೆ ಉದ್ಘಾಟಿಸುವರು. ಜಿಲ್ಲಾಧಿಕಾರಿ ಕೂರ್ಮರಾವ್ ಮತ್ತು ಉಡುಪಿ ಕ್ಯಾಥೋಲಿಕ್ ಧರ್ಮಪ್ರಾಂತ್ಯ ಬಿಷಪ್ ಡಾ| ಜೆರಾಲ್ಡ್ ಐಸಾಕ್ ಲೋಬೊ ಅಭ್ಯಾಗತರಾಗಿ ಭಾಗವಹಿಸುವರು ಎಂದು ಡಾ. ಸುಶಿಲ್ ಜತನ್ನಾ ತಿಳಿಸಿದರು.

ವರ್ಷಪೂರ್ತಿ ಆಚರಣೆ
ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯ ಶತಮಾನೋತ್ಸವವನ್ನು ವರ್ಷಪೂರ್ತಿ ವಿವಿಧ ಚಟುವಟಿಕೆಗಳೊಂದಿಗೆ ಆಚರಿಸಲಾಗುವುದು.

ಯೋಜಿತ ವಾರ್ಷಿಕ ಕಾರ್ಯಕ್ರಮದಲ್ಲಿ ಪ್ರಾರ್ಥನಾ ಶಿಬಿರ, ಶೈಕ್ಷಣಿಕ ಸಮ್ಮೇಳನ, ರಸಪ್ರಶ್ನೆ ಮತ್ತು ಸಂಗೀತ ಸ್ಪರ್ಧೆ, ಆಹಾರೋತ್ಸವ, ಉಪಶಾಮಕ ಆರೈಕೆ ಕೇಂದ್ರ ಉದ್ಘಾಟನೆ ಮತ್ತು ಪ್ಯಾರಾಮೆಡಿಕಲ್ ಕಾಲೇಜಿಗೆ ಹೊಸ ಆವರಣ ಇತ್ಯಾದಿ ಚಟುವಟಿಕೆ ಒಳಗೊಂಡಿವೆ. ವರ್ಷದಲ್ಲಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮಗಳೂ ನಡೆಯಲಿದ್ದು, 2023ರ ಜೂನ್ 15ರಂದು ಮಿಷನ್ ಆಸ್ಪತ್ರೆಯ ಇತಿಹಾಸದ ಕುರಿತ ಪುಸ್ತಕ ಅನಾವರಣ ಮತ್ತು ಗ್ರ್ಯಾಂಡ್ ಫಿನಾಲೆಯೊಂದಿಗೆ ಸಮಾರೋಪ ಸಮಾರಂಭದೊಂದಿಗೆ ಶತಮಾನೋತ್ಸವ ಕಾರ್ಯಕ್ರಮ ಮುಕ್ತಾಯಗೊಳ್ಳಲಿದೆ ಎಂದು ಡಾ. ಸುಶಿಲ್ ವಿವರಿಸಿದರು.

ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ
1923ರ ಜೂನ್ 15ರಂದು ಸ್ಥಾಪಿತವಾದ ಲೊಂಬಾರ್ಡ್ ಸ್ಮಾರಕ (ಮಿಷನ್) ಆಸ್ಪತ್ರೆ, ಕರಾವಳಿ ಕರ್ನಾಟಕದ ಅತ್ಯಂತ ಹಳೆಯ ಆಸ್ಪತ್ರೆಗಳಲ್ಲಿ ಒಂದಾಗಿದೆ. ಪ್ರಾಯಃ ಈ ಪ್ರದೇಶದಲ್ಲಿ ತಾಯಿ ಮತ್ತು ಮಕ್ಕಳ ಕೇಂದ್ರೀಕೃತ ಮೊದಲ ಘಟಕವಾಗಿದೆ. ಡಾ. ಇವಾ ಲೊಂಬಾರ್ಡ್ ಎಂಬ ಯುವ ಸ್ವಿಸ್ ಮಿಷನರಿ ವೈದ್ಯೆ ಈ ಪ್ರದೇಶದ ಬಡ ಮತ್ತು ದೀನ ದಲಿತ ಜನರಿಗೆ ಸೇವೆ ಸಲ್ಲಿಸುವ ಉದ್ದೇಶದೊಂದಿಗೆ ಸ್ಥಾಪಿಸಿದರು.

ಕೇವಲ 6 ಹಾಸಿಗೆಗಳೊಂದಿಗೆ ಪ್ರಾರಂಭಗೊಂಡ ಆಸ್ಪತ್ರೆ ಪ್ರಸ್ತುತ 120 ಹಾಸಿಗೆಗಳ ಸಾಮರ್ತ್ಯ ಹೊಂದಿದೆ. ಕ್ಯಾಶುವಾಲಿಟಿ, ತೀವ್ರ ನಿಗಾ ಘಟಕ, ಆಪರೇಷನ್ ಥಿಯೇಟರ್, ಲೇಬರ್ ಥಿಯೇಟರ್, ಡಯಾಲಿಸಿಸ್ ಘಟಕ, ಜನರಲ್ ಮೆಡಿಸಿನ್, ಜನರಲ್ ಸರ್ಜರಿ, ಪೀಡಿಯಾಟ್ರಿಕ್ಸ್, ಪ್ರಸೂತಿ ಮತ್ತು ಸ್ತ್ರೀರೋಗ, ಅರಿವಳಿಕೆ, ನೆಫ್ರಾಲಜಿ, ಕಾರ್ಡಿಯಾಲಜಿ, ಇಎನ್.ಟಿ, ಡೆಂಟಲ್, ಆರ್ಥೊಪೆಡಿಕ್ಸ್, ಆಯುರ್ವೇದ ಮತ್ತು ಡರ್ಮೆಟಾಲಜಿಗಳಂಥ ಎಲ್ಲಾ ಪ್ರಮುಖ ವೈದ್ಯಕೀಯ ವಿಶೇಷ ಘಟಕಗಳು ಇಲ್ಲಿವೆ.

ಲಕ್ಷ ಚದರ ಅಡಿ ವಿಸ್ತೀರ್ಣ
ಒಂದು ಲಕ್ಷ ಚದರ ಅಡಿಗಳಷ್ಟು ವಿಸ್ತೀರ್ಣ ಹೊಂದಿರುವ ಈ ಆಸ್ಪತ್ರೆಯಲ್ಲಿ ಅತ್ಯುತ್ತಮ ತರಬೇತಿ ಪಡೆದ ಅನುಭವಿ ವೈದ್ಯರು, ದಾದಿಯರು ಮತ್ತು ಅರೆವೈದ್ಯಕೀಯ ಸಿಬ್ಬಂದಿ ಸೇರಿದಂತೆ 170 ಸಿಬ್ಬಂದಿ ತಂಡ ಸೇವೆ ಸಲ್ಲಿಸುತ್ತಿದೆ. ಪ್ರಸ್ತುತ ಆಸ್ಪತ್ರೆಯು ಎನ್ಎಬಿಎಚ್ ಮಾನ್ಯತೆ ಪಡೆಯುವ ಪ್ರಕ್ರಿಯೆಯಲ್ಲಿದೆ.

ಆಸ್ಪತ್ರೆಯು ಶುಶ್ರೂಷೆ ಮತ್ತು ಅರೆವೈದ್ಯಕೀಯ ವಿಜ್ಞಾನ ಕೋರ್ಸ್ ನೀಡುವ ಮತ್ತು ಶಿಶುವಿಹಾರ ಸೇರಿದಂತೆ ಐದು ಶಿಕ್ಷಣ ಸಂಸ್ಥೆಗಳನ್ನೂ ನಡೆಸುತ್ತಿದೆ. ಆಸ್ಪತ್ರೆಯ ಸಮುದಾಯ ಆಧಾರಿತ ಉಪಕ್ರಮಗಳಲ್ಲಿ ಕರುಣಾಲಯ (ವೃದ್ಧರ ಶುಶ್ರೂಷಾ ಸೇವಾ ಕೇಂದ್ರ) ಮತ್ತು ಸಹಜೀವನ ವೃದ್ಧಾಶ್ರಮ ಸೇರಿವೆ.

ಆಸ್ಪತ್ರೆ ಶತಮಾನೋತ್ಸವದ ಕನಸು
ಲೊಂಬಾರ್ಡ್ ಸ್ಮಾರಕ ಆಸ್ಪತ್ರೆ ಶತಮಾನೋತ್ಸವ ಸಂದರ್ಭದಲ್ಲಿ ಮೂರು ಸ್ಪಷ್ಟ ಉದ್ದೇಶದೊಂದಿಗೆ ವಿಸ್ತರಣೆಯ ಹೊಸ ಪಯಣ ಪ್ರಾರಂಭಿಸಲಿದೆ ಎಂದು ಡಾ. ಸುಶಿಲ್ ಜತನ್ನಾ ಹೇಳಿದರು.

ಮೊದಲನೆಯದಾಗಿ ಮಿಷನ್ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆಯಾಗಿ ಅಭಿವೃದ್ಧಿಪಡಿಸುವುದು, ಎರಡನೆಯದಾಗಿ ಮುಂದಿನ ದಿನಗಳಲ್ಲಿ ಉಡುಪಿಯಲ್ಲಿ ಲೊಂಬಾರ್ಡ್ ವೈದ್ಯಕೀಯ ಕಾಲೇಜು ಸ್ಥಾಪನೆ ಉದ್ದೇಶದಿಂದ ನರ್ಸಿಂಗ್ ಮತ್ತು ಸಂಬಂಧಿತ ವೈದ್ಯಕೀಯ ಶಾಸ್ತ್ರಗಳಲ್ಲಿ ಹೆಚ್ಚಿನ ಕೋರ್ಸ್ಗಳೊಂದಿಗೆ ತನ್ನ ಶೈಕ್ಷಣಿಕ ನೆಲೆಯನ್ನು ವಿಸ್ತರಿಸುವುದು. ಮತ್ತು ಮೂರನೆಯದಾಗಿ ಉಡುಪಿ ಜಿಲ್ಲೆಯ ಗ್ರಾಮೀಣ ಪ್ರದೇಶಗಳಲ್ಲಿ ಉಪಶಾಮಕ ಆರೈಕೆ ಕೇಂದ್ರ, ಹೋಮ್ ಕೇರ್ ಸೇವೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಚಿಕಿತ್ಸಾಲಯ (ಔಟ್ ರೀಚ್ ಕ್ಲಿನಿಕ್)ಗಳ ಸ್ಥಾಪನೆಯಂಥ ಸಮುದಾಯ ಆಧರಿತ ಸೇವೆ ನೀಡುವುದು. ಒಟ್ಟಿನಲ್ಲಿ ಲೊಂಬಾರ್ಡ್ ಸ್ಮಾರಕ ಆಸ್ಪತ್ರೆಯನ್ನು ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಮತ್ತು ಅತ್ಯುತ್ತಮ ಗುಣಮಟ್ಟದ ಶಿಕ್ಷಣವನ್ನು ಒದಗಿಸುವ ಸಂಸ್ಥೆಯನ್ನಾಗಿ ಮಾಡುವುದು ಮತ್ತು ಗಡಿಗಳಿಲ್ಲದ ಆಸ್ಪತ್ರೆಯನ್ನಾಗಿಸುವುದು ಉದ್ದೇಶ ಎಂದು ತನ್ನ ಕನಸನ್ನು ಬಿಚ್ಚಿಟ್ಟರು.

2014ರಿಂದ ಆಸ್ಪತ್ರೆಯ ಪುನರುಜ್ಜೀವನ
ಆಸ್ಪತ್ರೆ ಮುಚ್ಚುವ ಹಂತದಲ್ಲಿದ್ದಾಗ ಮಂಗಳೂರು ಕೆಎಂಸಿಯಲ್ಲಿ ಎಂಬಿಬಿಎಸ್ ಮುಗಿಸಿದ ಮಂಗಳೂರಿನವರಾದ ಡಾ. ಸುಶಿಲ್ ಜತನ್ನಾ ಅವರನ್ನು 2014ರ ಸೆಪ್ಟೆಂಬರ್ ನಲ್ಲಿ ನಿರ್ದೇಶಕರನ್ನಾಗಿ ನೇಮಿಸಲಾಯಿತು.

ಡಾ. ಸುಶಿಲ್ ಉನ್ನತ ಶಿಕ್ಷಣಕ್ಕಾಗಿ ಇಂಗ್ಲೆಂಡಿಗೆ ತೆರಳುವ ಮೊದಲು 1982ರಲ್ಲಿ ಮಿಷನ್ ಆಸ್ಪತ್ರೆಯಲ್ಲಿ ನಿವಾಸಿ ವೈದ್ಯಕೀಯ ಅಧಿಕಾರಿಯಾಗಿ ಕಾರ್ಯನಿರ್ವಹಿಸಿದ್ದರು. ಅವರು ಇಂಗ್ಲೆಂಡಿನಲ್ಲಿ ವೈದ್ಯಕೀಯ ಮತ್ತು ಸಾರ್ವಜನಿಕ ಆರೋಗ್ಯ ಕ್ಷೇತ್ರಗಳಲ್ಲಿ 32 ವರ್ಷ ಕಾಲ ಸುದೀರ್ಘ ಸೇವೆ ಸಲ್ಲಿಸಿ ಅಪಾರ ಅನುಭವ ಹೊಂದಿದ್ದಾರೆ. ಅವರು ಕೇಂಬ್ರಿಡ್ಜ್ ಶೈರ್ ನಲ್ಲಿ ರಾಷ್ಟ್ರೀಯ ಆರೋಗ್ಯ ಸೇವೆ (ಎನ್.ಎಚ್.ಎಸ್)ಯಲ್ಲಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಯಾಗಿ ಸೇವೆ ಸಲ್ಲಿಸಿದ ಮೊದಲ ಭಾರತೀಯರಾಗಿದ್ದರು.

ಅದಕ್ಕೂ ಮೊದಲು ಕೇರ್ ಯುಕೆ ಪಿಎಲ್.ಸಿಯ ಹೆಲ್ತ್ ಕೇರ್ ವಿಭಾಗದ ವ್ಯವಸ್ಥಾಪಕ ನಿರ್ದೇಶಕರಾಗಿದ್ದರು.

ಮಿಷನ್ ಆಸ್ಪತ್ರೆ 2014ರಿಂದ ಹಳೆಯ ಕಟ್ಟಡ ಮತ್ತು ವಾರ್ಡ್ ಗಳ ನವೀಕರಣದೊಂದಿಗೆ ಆಧುನೀಕರಣ ಮತ್ತು ರೂಪಾಂತರದ ಬೃಹತ್ ಕಾರ್ಯಸೂಚಿ ಕಂಡಿದೆ. ಹೊಸ ಉಪಕರಣಗಳ ಖರೀದಿಯಂಥ ಸೌಲಭ್ಯಗಳ ಉನ್ನತೀಕರಣ, ಐಸಿಯುನಂಥ ಹೊಸ ಸೇವೆಗಳ ಸ್ಥಾಪನೆ, ಹೊಸ ಸಿಬ್ಬಂದಿ ನೇಮಕ ಮತ್ತು ಸಮುದಾಯ ಸೇವೆಗಳ ವಿಸ್ತರಣೆ ಕಂಡಿದೆ. ಕಾಲೇಜ್ ಆಫ್ ನರ್ಸಿಂಗ್, ಪ್ಯಾರಾಮೆಡಿಕಲ್ ಕಾಲೇಜು, ಅಕಾಡೆಮಿ ಆಫ್ ಹೆಲ್ತ್ ಸೈನ್ಸಸ್ ಮತ್ತು ಎಬಿಸಿ ಸ್ಕೂಲ್ ಸ್ಥಾಪನೆಯೊಂದಿಗೆ ಶಿಕ್ಷಣ ಸಂಸ್ಥೆಗಳ ವಿಸ್ತರಣೆಯಾಗಿದೆ. ಪ್ರಸ್ತುತ ಶಿಕ್ಷಣ ಸಂಸ್ಥೆಗಳಲ್ಲಿ 350ಕ್ಕೂ ಹೆಚ್ಚು ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದು, 2014ರಲ್ಲಿ ಕೇವಲ 9 ಮಂದಿ ಓದುತ್ತಿದ್ದರು.

ಒಂದು ಕಾಲದಲ್ಲಿ ಉಡುಪಿ ಜನತೆಯ ಆಶಾಕಿರಣವಾಗಿದ್ದ ಮಿಷನ್ ಆಸ್ಪತ್ರೆ ಮತ್ತೊಮ್ಮೆ ಪ್ರಜ್ವಲಿಸುತ್ತಿದೆ. ಇದೀಗ ಆಸ್ಪತ್ರೆ ಸಹಾನುಭೂತಿ ಮತ್ತು ಸಮರ್ಪಣಾ ಮನೋಭಾವದಿಂದ ಅತ್ಯುತ್ತಮ ಗುಣಮಟ್ಟದ ಚಿಕಿತ್ಸೆ ನೀಡುವ ಮೂಲಕ ಜನರ ವಿಶ್ವಾಸ ಮರಳಿ ಪಡೆದಿದೆ ಎಂದು ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿ ಡಾ. ಗಣೇಶ ಕಾಮತ್ ತಿಳಿಸಿದರು.

ಸುದ್ದಿಗೋಷ್ಟಿಯಲ್ಲಿ ಆಸ್ಪತ್ರೆ ಆಡಳಿತಾಧಿಕಾರಿ ಡೀನಾ ಪ್ರಭಾವತಿ, ನರ್ಸಿಂಗ್ ಕಾಲೇಜು ಪ್ರಾಂಶುಪಾಲೆ ಡಾ. ಪ್ರೊ. ಸುಜಾತಾ ಕರ್ಕಡ, ಸಾರ್ವಜನಿಕ ಸಂಪರ್ಕಾಧಿಕಾರಿ ರೋಹಿ ರತ್ನಾಕರ ಇದ್ದರು.

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!