ಕಲಬುರಗಿ: ಕಾಂಗ್ರೆಸ್ ಸೇರಲು ಅನೇಕ ಮಂದಿ ಶಾಸಕರು ಮತ್ತು ಇತರ ರಾಜಕೀಯ ಪಕ್ಷಗಳ ಕಾರ್ಯಕರ್ತರು ಆಸಕ್ತಿ ತೋರಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ. ಕೆ ಶಿವಕುಮಾರ್ ಹೇಳಿದ್ದಾರೆ.
ವಿಜಯಪುರ ಜಿಲ್ಲೆಯ ಸಿಂಧಗಿಗೆ ತೆರಳುವ ಮುನ್ನ ಇಲ್ಲಿನ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಪಿಸಿಸಿ ಕಾರ್ಯಕಾರಿ ಅಧ್ಯಕ್ಷ ಈಶ್ವರ್ ಖಂಡ್ರೆ ಮತ್ತು ಮಾಜಿ ಸಚಿವ ಎಂ. ಬಿ. ಪಾಟೀಲ್ ಕಾಂಗ್ರೆಸ್ ಸೇರಲು ಆಸಕ್ತಿ ತೋರಿಸಿದ ಶಾಸಕರು ಹಾಗೂ ಕಾರ್ಯಕರ್ತರೊಂದಿಗೆ ಚರ್ಚೆ ನಡೆಸುತ್ತಿದ್ದಾರೆ ಎಂದರು.
ಕಾಂಗ್ರೆಸ್ ನಲ್ಲಿ ಮುಂದಿನ ಮುಖ್ಯಮಂತ್ರಿಯಾಗಲು ಮ್ಯೂಸಿಕಲ್ ಚೇರ್ ಆಟ ಪ್ರಾರಂಭವಾಗಿದೆ ಎಂಬ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಆರೋಪಕ್ಕೆ ಪ್ರತಿಕ್ರಿಯಿಸಿದ ಶಿವಕುಮಾರ್, ಮ್ಯೂಸಿಕಲ್ ಚೇರ್ ಆಟ ಆಡುತ್ತಿರುವವರು ಯಾರು ಎಂದು ಎಲ್ಲರೂ ತಿಳಿದಿದ್ದಾರೆ. ಯಡಿಯೂರಪ್ಪನವರನ್ನು ಸಿಎಂ ಕುರ್ಚಿಯಿಂದ ಇಳಿಸಲು ಅನೇಕ ಬಿಜೆಪಿ ಶಾಸಕರು ದೆಹಲಿಗೆ ಹೋಗಿ ಬರುತ್ತಿದ್ದಾರೆ. ಇನ್ನು ಯಡಿಯೂರಪ್ಪನವರ ಬೆಂಬಲಿಗರು ಬಿಎಸ್.ವೈ ತಲೆದಂಡಕ್ಕೆ ಒತ್ತಾಯಿಸುವವರ ವಿರುದ್ಧ ಕ್ರಮ ಕೈಗೊಳ್ಳುವಂತೆ ಹೈಕಮಾಂಡ್ ಮೇಲೆ ಒತ್ತಡ ಹೇರುತ್ತಿದ್ದಾರೆ.
ಚುನಾವಣೆ ಇನ್ನೂ ದೂರವಿದೆ. ಕೊರೊನಾ ಆತಂಕದಿಂದಾಗಿ ನಾವು ಸಾರ್ವಜನಿಕ ಸಭೆ ನಡೆಸಲು ಸಾಧ್ಯವಾಗುತ್ತಿಲ್ಲ. ಹೀಗಾಗಿ ಜನರೊಂದಿಗೆ ಸಂಪರ್ಕದಲ್ಲಿರುವುದು ಮತ್ತು ಅವರ ಸಮಸ್ಯೆ ಪರಿಹರಿಸಲು ಪ್ರಯತ್ನಿಸುವುದು ರಾಜಕೀಯ ಪಕ್ಷಗಳ ಕರ್ತವ್ಯ. ಕಾಂಗ್ರೆಸ್ ಮುಖಂಡರು ಮತ್ತು ಪಕ್ಷ ಕಾರ್ಯಕರ್ತರು ಮನೆ ಮನೆ ಭೇಟಿ ನೀಡುವ ಮೂಲಕ ಸಾರ್ವಜನಿಕರ ಕುಂದುಕೊರತೆ ಆಲಿಸುತ್ತಿದ್ದಾರೆ ಎಂದರು