Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ರಾಯಣ್ಣ ಹೆಸರಿನ ವೃತ್ತ ನಿರ್ಮಾಣ ಹೋರಾಟಕ್ಕೆ ಮುತಾಲಿಕ್ ಬೆಂಬಲ

ರಾಯಣ್ಣ ಹೆಸರಿನ ವೃತ್ತ ನಿರ್ಮಾಣ ಹೋರಾಟಕ್ಕೆ ಮುತಾಲಿಕ್ ಬೆಂಬಲ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ರಾಯಣ್ಣ ಹೆಸರಿನ ವೃತ್ತ ನಿರ್ಮಾಣ ಹೋರಾಟಕ್ಕೆ ಮುತಾಲಿಕ್ ಬೆಂಬಲ
ಉಡುಪಿ: ಕ್ರಾಂತಿ ವೀರ ಸಂಗೊಳ್ಳಿ ರಾಯಣ್ಣ ಹೆಸರಿನ ವೃತ್ತವೊಂದನ್ನು ಉಡುಪಿಯಲ್ಲಿ ನಿರ್ಮಿಸುವ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದವರ ಹೋರಾಟಕ್ಕೆ ಶ್ರೀರಾಮ ಸೇನೆ ಪ್ರಮುಖ ಪ್ರಮೋದ್ ಮುತಾಲಿಕ್ ಬೆಂಬಲ ಘೋಷಿಸಿದ್ದಾರೆ.

ಶುಕ್ರವಾರ ಉಡುಪಿಗಾಗಮಿಸಿದ್ದ ಮುತಾಲಿಕ್ ಇಲ್ಲಿನ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾ ಕಚೇರಿಗೆ ಭೇಟಿ ನೀಡಿ, ಬಳಗದ ಸಮಾಜಸೇವೆಯನ್ನು ಶ್ಲಾಘಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಂಗೊಳ್ಳಿ ರಾಯಣ್ಣ ಕೇವಲ ಬೆಳಗಾವಿ ಜಿಲ್ಲೆಗಷ್ಟೇ ಸೀಮಿತವಲ್ಲ. ಈ ನಿಟ್ಟಿನಲ್ಲಿ ಸಿದ್ದಬಸಯ್ಯಸ್ವಾಮಿ ಅವರು ಅಭಿಮಾನಿ ಬಳಗ ಕಟ್ಟಿಕೊಂಡು ಮಾಡುತ್ತಿರುವ ಹೋರಾಟ ಅಭಿನಂದನಾರ್ಹ. ಅವರಿಗೆ ಶ್ರೀರಾಮ ಸೇನೆ ವತಿಯಿಂದ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.

ಮುಂದಿನ ದಿನಗಳಲ್ಲಿ ಕರಾವಳಿ ಜಿಲ್ಲೆಯ ಮನೆ ಮನೆಗೂ ರಾಯಣ್ಣನ ಆದರ್ಶ, ತತ್ವ ತಿಳಿಸುವ ಕಾರ್ಯ ಅವರಿಂದಾಗಲಿ ಎಂದು ಆಶಿಸಿ, ರಾಯಣ್ಣ ಹೆಸರಿನ ವೃತ್ತ ನಿರ್ಮಾಣಕ್ಕಾಗಿ ನಡೆಸುವ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲ ಇದೆ. ಸಂಬಂಧಪಟ್ಟ ಅಧಿಕಾರಿಗಳು ಮನವಿಗೆ ಸ್ಪಂದಿಸಿ ರಾಯಣ್ಣನಿಗೆ ಗೌರವ ಸಲ್ಲಿಸಬೇಕು ಎಂದು ಮನವಿ ಮಾಡಿದರು.

ಸಂಗೊಳ್ಳಿ ರಾಯಣ್ಣ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸಿದ್ದಬಸಯ್ಯ ಸ್ವಾಮಿ ಚಿಕ್ಕಮಠ, ಉಪಾಧ್ಯಕ್ಷ ಈರಪ್ಪ ಗೌಂಡಿ, ಲಕ್ಷ್ಮಣ್ ಕೋಲ್ಕಾರ್, ಸಿದ್ದಣ್ಣ ಪೂಜಾರಿ, ಕರ್ನಾಟಕ ರಕ್ಷಣಾ ವೇದಿಕೆ ಉಡುಪಿ ತಾಲೂಕು ಅಧ್ಯಕ್ಷ ಪ್ರಭಾಕರ ಪೂಜಾರಿ, ಶ್ರೀರಾಮ ಸೇನೆ ಜಿಲ್ಲಾಧ್ಯಕ್ಷ ಜಯರಾಮ್ ಅಂಬೆಕಲ್ಲು, ವಿಭಾಗ ಅಧ್ಯಕ್ಷ ಮೋಹನ ಭಟ್, ಜಿಲ್ಲಾ ವಕ್ತಾರ ಶರತ್ ಮಣಿಪಾಲ್, ಜಿಲ್ಲಾ ಪ್ರಮುಖ್ ಪ್ರಶಾಂತ ಭಟ್ ಪೆರಂಪಳ್ಳಿ,ಸಂದೀಪ್ ಮೂಡುಬೆಟ್ಟು, ಉದ್ಯಮಿ ಚಂದ್ರಕಾಂತ ಶೆಟ್ಟಿ ಮುಂಬೈ, ಅಕ್ಷಯ ಮೂಡುಬೆಟ್ಟು ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!