Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಮುಖ್ಯಮಂತ್ರಿ ಪಕ್ಷಪಾತ ನಿಲುವಿಗೆ ಖಂಡನೆ

ಮುಖ್ಯಮಂತ್ರಿ ಪಕ್ಷಪಾತ ನಿಲುವಿಗೆ ಖಂಡನೆ

ಸುದ್ದಿಕಿರಣ ವರದಿ
ಶನಿವಾರ, ಜುಲೈ 30

ಮುಖ್ಯಮಂತ್ರಿ ಪಕ್ಷಪಾತ ನಿಲುವಿಗೆ ಖಂಡನೆ
ಉಡುಪಿ: ಇತ್ತೀಚೆಗೆ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ನಡೆದ ಮಸೂದ್, ಪ್ರವೀಣ್ ಹಾಗೂ ಪಾಝಿಲ್ ಕೊಲೆ ಕೃತ್ಯ ಖಂಡನೀಯ. ಅಂಥ ರಾಕ್ಷಸೀ ಕೃತ್ಯವನ್ನು ಜಿಲ್ಲಾ ಮುಸ್ಲಿಂ ಒಕ್ಕೂಟ ಉಗ್ರವಾಗಿ ಖಂಡಿಸುತ್ತದೆ. ಅಂತೆಯೇ ಘಟನೆಯಲ್ಲಿ ಬಿಜೆಪಿ ಸರ್ಕಾರದ ನಡೆ ಮತ್ತು ಮುಖ್ಯಮಂತ್ರಿ ಪಕ್ಷಪಾತ ಧೋರಣೆಯನ್ನೂ ಉಡುಪಿ ಜಿಲ್ಲಾ ಮುಸ್ಲಿಮ್ ಒಕ್ಕೂಟ ಖಂಡಿಸುತ್ತದೆ ಎಂದು ಒಕ್ಕೂಟ ಅಧ್ಯಕ್ಷ ಇಬ್ರಾಹಿಂ ಕೋಟ ತಿಳಿಸಿದ್ದಾರೆ.

ರಾಜ್ಯದಲ್ಲಿ ಕಳೆದ ಕೆಲವು ಸಮಯಗಳಿಂದ ಹಲವಾರು ಅಮಾಯಕ ಯುವಕರ ಕೊಲೆಗಳು ನಡೆಯುತ್ತಿದ್ದು, ಬಿಜೆಪಿ ಸರ್ಕಾರ ಶವದ ಮೇಲೆ ಆಡಳಿತ ನಡೆಸುತ್ತಿದೆ. ಮೊದಲ ಘಟನೆ ನಡೆದ ಕೂಡಲೇ ಸರ್ಕಾರ ಸೂಕ್ತ ಕ್ರಮ ಕೈಗೊಂಡಿದ್ದಲ್ಲಿ ಮುಂದೆ ಇಂಥ ಘಟನೆಗಳು ಮರುಕಳಿಸುತ್ತಿರಲಿಲ್ಲ. ಸರ್ಕಾರದ ಪಕ್ಷಪಾತ ಧೋರಣೆ, ಬಿಜೆಪಿಯ ನಾಯಕರ ಉದ್ರೇಕಕಾರಿ ಹೇಳಿಕೆಗಳ ಪರಿಣಾಮವಾಗಿ ದಿನನಿತ್ಯ ಅಮಾಯಕ ಯುವಕರು ಕೊಲೆಯಾಗುತಿದ್ದಾರೆ ಎಂದು ಇಬ್ರಾಹಿಂ ಹೇಳಿದ್ದಾರೆ.

ಮುಖ್ಯಮಂತ್ರಿ ಬೊಮ್ಮಾಯಿ ಈಚೆಗೆ ಕೊಲೆಯಾದ ಪ್ರವೀಣನ ಮನೆಗೆ ಭೇಟಿ ನೀಡಿ ಕುಟುಂಬದವರಿಗೆ ಸಾಂತ್ವನ ಹೇಳಿ ಪರಿಹಾರಧನ ಚೆಕ್ ವಿತರಿಸಿದರು. ಆದರೆ, ಅದೇ ಊರಿನಲ್ಲಿ ಅದಕ್ಕಿಂತ ಮುಂಚೆ ಕೊಲೆಯಾದ ಮಸೂದ್ ಮನೆಗೆ ಭೇಟಿ ನೀಡದೇ ವಾಪಾಸಾದರು. ರಾಜ್ಯದ ಮುಖ್ಯಮಂತ್ರಿಯ ಈ ರೀತಿಯ ಪಕ್ಷಪಾತದ ನಡೆ ನಾಗರಿಕ ಸಮಾಜ ಒಪ್ಪುವುದಿಲ್ಲ. ಸರ್ಕಾರ ಕೂಡಲೇ ಎಚ್ಚೆತ್ತುಕೊಂಡು ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು.

ಸಾರ್ವಜನಿಕರು ಯಾವುದೇ ಪ್ರಚೋದನೆಗೊಳಗಾಗದೇ ಸಮಾಜದಲ್ಲಿ ಶಾಂತಿ ಸುವ್ಯವಸ್ಥೆ ಕಾಪಾಡುವಲ್ಲಿ ಸಹಕರಿಸುವಂತೆ ಒಕ್ಕೂಟ ಮನವಿ ಮಾಡುವುದಾಗಿ ತಿಳಿಸಿದ್ದಾರೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!