Thursday, July 7, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ ಕೆ. ಕೆ. ಮುಹಮ್ಮದ್ ಆಯ್ಕೆ

ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ ಕೆ. ಕೆ. ಮುಹಮ್ಮದ್ ಆಯ್ಕೆ

ಉಡುಪಿ: ಇಲ್ಲಿನ ಡಾ| ಪಾದೂರು ಗುರುರಾಜ ಭಟ್ ಟ್ರಸ್ಟ್ ನೀಡುವ ಪ್ರಸಕ್ತ ಸಾಲಿನ ಪಾದೂರು ಗುರುರಾಜ ಭಟ್ ಸ್ಮಾರಕ ಪ್ರಶಸ್ತಿಗೆ ಖ್ಯಾತ ಪುರಾತತ್ವಜ್ಞ ಪದ್ಮಶ್ರೀ ಕೆ. ಕೆ. ಮುಹಮ್ಮದ್ ಆಯ್ಕೆಯಾಗಿದ್ದಾರೆ ಎಂದು ಟ್ರಸ್ಟ್ ಅಧ್ಯಕ್ಷ ಪ್ರೊ. ಪಿ. ಶ್ರೀಪತಿ ತಂತ್ರಿ ತಿಳಿಸಿದರು.

ಸೋಮವಾರ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಕರಾವಳಿಯ ಇತಿಹಾಸಜ್ಞ ಪಾದೂರು ಗುರುರಾಜ ಭಟ್ ನೆನಪಿನಲ್ಲಿ ನೀಡುವ ಈ ಪ್ರಶಸ್ತಿ ಈ ಬಾರಿಯಿಂದ 1 ಲಕ್ಷ ರೂ. ನಗದು ಮೊತ್ತ ಹೊಂದಿದೆ.

ಚಿದಾನಂದಮೂರ್ತಿ, ಎನ್. ಜಯರಾಂ, ಎ. ಸುಂದರ ಅಡಿಗ ಮತ್ತು ಎ. ವಿ. ನರಸಿಂಹಮೂರ್ತಿ ಅವರಿಗೆ ಈಗಾಗಲೇ ಪ್ರಶಸ್ತಿ ನೀಡಲಾಗಿದೆ. ಈ ಬಾರಿ ಅಯೋಧ್ಯೆಯಲ್ಲಿ ಉತ್ಖನನ ನಡೆಸಿ ಸತ್ಯಾಂಶ ಬಹಿರಂಗಪಡಿಸಿದ ಪುರಾತತ್ತ್ವಜ್ಞ, ಮೂಡುಬಿದಿರೆ ಮೂಲದ ಕೆ. ಕೆ. ಮುಹಮ್ಮದ್ ಅವರಿಗೆ ನೀಡಲಾಗುವುದು ಎಂದರು.

ಪ್ರಶಸ್ತಿ ಪ್ರದಾನ ಕಾರ್ಯಕ್ರಮ ಈ ತಿಂಗಳ 28ರಂದು ಇಲ್ಲಿನ ವಿದ್ಯೋದಯ ಪಬ್ಲಿಕ್ ಸ್ಕೂಲ್ ನಲ್ಲಿ ನಡೆಯಲಿದೆ. ಅಂದು ಬೆಳಿಗ್ಗೆ 9 ಗಂಟೆಗೆ ಪುತ್ತಿಗೆ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಕಾರ್ಯಕ್ರಮ ಉದ್ಘಾಟಿಸುವರು. ಶಾಸಕ ರಘುಪತಿ ಭಟ್ ಅಭ್ಯಾಗತರಾಗಿದ್ದು, ಕೆ. ಕೆ. ಮುಹಮ್ಮದ್ ಅಯೋಧ್ಯಾ ಉತ್ಖನನ ಹಾಗೂ ಮಧ್ಯಪ್ರದೇಶ ಮತ್ತು ಜಾರ್ಖಂಡ್ ಉತ್ಖನನ ಕುರಿತು ವಿಶೇಷ ಉಪನ್ಯಾಸ ನೀಡುವರು.

ಅಪರಾಹ್ನ 12.15ಕ್ಕೆ ಪಲಿಮಾರು ಶ್ರೀ ವಿದ್ಯಾಧೀಶತೀರ್ಥ ಶ್ರೀಪಾದರು ಪ್ರಶಸ್ತಿ ಪ್ರದಾನ ಮಾಡುವರು. ಸಚಿವ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ವಿ.ವಿ. ವಿಶ್ರಾಂತ ಕುಲಪತಿ ಪ್ರೊ. ಕೆ. ಭೈರಪ್ಪ ಮುಖ್ಯ ಅತಿಥಿಗಳಾಗಿದ್ದಾರೆ ಎಂದರು.

ಸುದ್ದಿಗೋಷ್ಠಿಯಲ್ಲಿ ಟ್ರಸ್ಟ್ ಕೋಶಾಧಿಕಾರಿ ಪರಶುರಾಮ ಭಟ್, ಸದಸ್ಯರಾದ ಯು. ರಘುಪತಿ ರಾವ್, ಪಿ. ವೆಂಕಟೇಶ್ ಭಟ್ ಹಾಗೂ ಹಿತೈಷಿಗಳಾದ ವಾಸುದೇವ ಭಟ್ ಪೆರಂಪಳ್ಳಿ ಮತ್ತು ಎಸ್. ವಿ. ಭಟ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!