Thursday, December 2, 2021
Home ಸಮಾಚಾರ ರಾಷ್ಟ್ರೀಯ ವಾರ್ತೆ ಪ್ರಧಾನಿ ಮೋದಿ ಭೇಟಿ ಮಾಡಿದ ಪೇಜಾವರ ಶ್ರೀ

ಪ್ರಧಾನಿ ಮೋದಿ ಭೇಟಿ ಮಾಡಿದ ಪೇಜಾವರ ಶ್ರೀ

ಪ್ರಧಾನಿ ಮೋದಿ ಭೇಟಿ ಮಾಡಿದ ಪೇಜಾವರ ಶ್ರೀ

ನವದೆಹಲಿ, ನ. 8 (ಸುದ್ದಿಕಿರಣ ವರದಿ): ಅಯೋಧ್ಯೆ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವಿಶ್ವಸ್ಥರೂ ಆಗಿರುವ ಪೇಜಾವರ ಶ್ರೀ ವಿಶ್ವಪ್ರಸನ್ನತೀರ್ಥ ಶ್ರೀಪಾದರು ಸೋಮವಾರ ಸಂಜೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದರು.

ತಮ್ಮ ಗುರುಗಳಾದ ಕೀರ್ತಿಶೇಷ ಶ್ರೀ ವಿಶ್ವೇಶತೀರ್ಥ ಶ್ರೀಪಾದರಿಗೆ ಭಾರತ ಸರ್ಕಾರ ಮರಣೋತ್ತರವಾಗಿ ಘೋಷಿಸಿದ್ದ ಪದ್ಮವಿಭೂಷಣ ಪ್ರಶಸ್ತಿ ಸ್ವೀಕರಿಸಲು ಆಗಮಿಸಿದ್ದ ಸಂದರ್ಭ ಈ ಭೇಟಿ ನಡೆಯಿತು.

ಶ್ರೀಗಳೊಂದಿಗೆ ಕುಶಲೋಪರಿ ನಡೆಸಿದ ಪ್ರಧಾನಿ ಮೋದಿ, ಶ್ರೀ ವಿಶ್ವೇಶತೀರ್ಥ ಶ್ರೀಪಾದರನ್ನು ವಿಶೇಷವಾಗಿ ಸ್ಮರಿಸಿದರು. ಶ್ರೀರಾಮ ಮಂದಿರ ನಿರ್ಮಾಣ ಕಾರ್ಯಗಳ ಪ್ರಗತಿಯ ಕುರಿತೂ ಈರ್ವರು ಸಮಾಲೋಚನೆ ನಡೆಸಿದರು.

ಪ್ರಧಾನಿಗೆ ಕೊಡುಗೆ
ಪ್ರಧಾನಿ ನರೇಂದ್ರ ಮೋದಿ ಅವರಿಗೆ ಯಕ್ಷಗಾನದ ಕೇದಗೆ ಮುಂಡಾಸಿನ ಕಿರೀಟ ತೊಡಿಸಿ ಝರತಾರಿ ಶಾಲು, ಬೆಳ್ಳಿ ತಟ್ಟೆಯಲ್ಲಿ ಉಡುಪಿ ಶ್ರೀಕೃಷ್ಣನ ಗಂಧ, ನಿರ್ಮಾಲ್ಯ ತುಳಸಿ ನೀಡಿ ಪೇಜಾವರ ಶ್ರೀಪಾದರು ಆಶೀರ್ವದಿಸಿದರು.

ಉಡುಪಿಯ ಚಿತ್ರ ಕಲಾವಿದೆ ವಸಂತಲಕ್ಷ್ಮೀ ಹೆಬ್ಬಾರ್ ರಚಿಸಿದ ಮೋದಿ ಉಡುಪಿ ಕೃಷ್ಣನಿಗೆ ಕೈಮುಗಿಯುವ ಭಂಗಿಯ ಸುಂದರ ತೈಲಚಿತ್ರ ಹಾಗೂ ಸಂಸ್ಕೃತ ಕನ್ನಡ ತುಳು ಲಿಪಿಗಳಲ್ಲಿ ನರೇಂದ್ರ ಮೋದಿ ಹೆಸರನ್ನು ಕೆತ್ತಿದ ಸ್ಮರಣಿಕೆಯನ್ನೂ ಶ್ರೀಗಳು ಪ್ರಧಾನಮಂತ್ರಿಗೆ ನೀಡಿದರು

ಈ ಭೇಟಿಯ ಬಗ್ಗೆ ಶ್ರೀಗಳು ಮತ್ತು ಪ್ರಧಾನಮಂತ್ರಿ ಅತೀವ ಸಂತಸ ವ್ತಕ್ತಪಡಿಸಿದರು.

ಕೃಷ್ಣ ದರ್ಶನಕ್ಕೆ ಆಗಮಿಸಲು ಆಹ್ವಾನ
ಪ್ರಧಾನ ಮಂತ್ರಿ ಅಧಿಕಾರದ ಅವಧಿಯಲ್ಲೇ ಉಡುಪಿ ಕೃಷ್ಣ ದರ್ಶನಕ್ಕೆ ಆಗಮಿಸುವಂತೆ ಶ್ರೀಗಳು ಆಹ್ವಾನಿಸಿದರು. ಖಂಡಿತ ಬಂದೇ ಬರುತ್ತೇನೆ, ಚಿಂತೆ ಬೇಡ ಎಂದು ಮೋದಿ ತುಂಬ ಹರ್ಷದಿಂದಲೇ ತಿಳಿಸಿದರು.

ಇದೇ ಸಂದರ್ಭದಲ್ಲಿ ದೇಶದಲ್ಲಿ ಗೋಹತ್ಯಾ ನಿಷೇಧ ಕಾನೂನು ಜಾರಿ, ದೇಶಾದ್ಯಂತ ಹಿಂದೂ ಶ್ರದ್ಧಾಕೇಂದ್ರಗಳನ್ನು ಸರ್ಕಾರಿ ವ್ಯವಸ್ಥೆಯಿಂದ ಸ್ವಾಯತ್ತಗೊಳಿಸುವುದು, ಮಹರ್ಷಿ ವೇದವ್ಯಾಸರ ಜಯಂತಿಯನ್ನು (ಆಷಾಢ ಪೂರ್ಣಿಮಾ ಅಥವಾ ಒಂದು ನಿದರ್ಿಷ್ಟ ದಿನಾಂಕವನ್ನು) ಅಧ್ಯಾತ್ಮ ದಿನ ಎಂದು ಘೋಷಿಸಿ ಸರ್ಕಾರಿ ಆಚರಣೆಗೆ ವ್ಯವಸ್ಥೆಗೊಳಿಸುವುದು ಹಾಗೂ ತುಳು ಭಾಷೆಯನ್ನು ಸಂವಿಧಾನದ 8ನೇ ಪರಿಚ್ಛೇದಕ್ಕೆ ಸೇರ್ಪಡೆಗೊಳಿಸಬೇಕು ಎಂಬ ನಾಲ್ಕು ಅಪೇಕ್ಷೆಯನ್ನು ಶ್ರೀಪಾದರು ಲಿಖಿತವಾಗಿ ನೀಡಿದರು.

ಈ ಬಗ್ಗೆಯೂ ಗಮನಹರಿಸುವುದಾಗಿ ಮೋದಿ ತಿಳಿಸಿದರು.

ಪೇಜಾವರ ಮಠದ ದಿವಾನ ಎಂ. ರಘುರಾಮಾಚಾರ್ಯ, ಡಿ. ಪಿ. ಅನಂತ್, ಸಾಮಾಜಿಕ ಕಾರ್ಯಕರ್ತ ಶ್ರೀಗಳ ಆಪ್ತ ವಾಸುದೇವ ಭಟ್ ಪೆರಂಪಳ್ಳಿ ಇದ್ದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!