Saturday, July 2, 2022
Home ಸಮಾಚಾರ ಜಿಲ್ಲಾ ಸುದ್ದಿ ಬೂತ್ ಮಟ್ಟದಲ್ಲಿ ಪ್ರಜಾಪ್ರತಿನಿಧಿ ಸಮಿತಿ ರಚಿಸಲು ಸೂಚನೆ

ಬೂತ್ ಮಟ್ಟದಲ್ಲಿ ಪ್ರಜಾಪ್ರತಿನಿಧಿ ಸಮಿತಿ ರಚಿಸಲು ಸೂಚನೆ

ಉಡುಪಿ: ಕಾಲ ಸಂದರ್ಭಕ್ಕೆ ಅನುಸಾರವಾಗಿ ಕಾಂಗ್ರೆಸ್ ನ ಆಚಾರ, ವಿಚಾರ ಬದಲಾಗಬೇಕು. ಶಿಸ್ತು ಅಳವಡಿಸಿಕೊಳ್ಳಬೇಕು ಎಂದು ತಿಳಿಸಿದ ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್, ಪ್ರತಿಯೊಂದೂ ಬೂತ್ ಮಟ್ಟದಲ್ಲಿ ಪ್ರಜಾಪ್ರತಿನಿಧಿ ಸಮಿತಿ ರಚಿಸುವಂತೆ ಸಲಹೆ ನೀಡಿದರು.
ಭಾನುವಾರ ಇಲ್ಲಿನ ಮಿಷನ್ ಕಂಪೌಂಡ್ ಬಾಸೆಲ್ ಮಿಷನ್ ಸಭಾಂಗಣದಲ್ಲಿ ನಡೆದ ಕಾರ್ಯಕರ್ತರ ಸಮಾವೇಶದಲ್ಲಿ ಮಾತನಾಡಿದರು.
ಪಕ್ಷದ ಎಲ್ಲಾ ಘಟಕಗಳೂ ಜಿಲ್ಲಾಧ್ಯಕ್ಷರ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು. ಡಿಜಿಟಲೈಸೇಶನ್ ಗೆ ಆದ್ಯತೆ ನೀಡಬೇಕು. ಪ್ರತೀ ಬೂತ್ ನಲ್ಲಿ ಡಿಜಿಟಲ್ ಯೂತ್ ತಂಡ ರಚಿಸಬೇಕು ಎಂದರು. ಎಲ್ಲ ಘಟಕಗಳ ಕಾರ್ಯನಿರ್ವಹಣೆ ಜಿಪಿಎಸ್ ನಿಗಾವಣೆ ಮಾಡಲಾಗುವುದು. ಕಾಟಾಚಾರದಲ್ಲಿ ಸಂಘಟನೆ ಮಾಡುವುದನ್ನು ಇನ್ನು ಮುಂದೆ ಸಹಿಸಲಾಗದು ಎಂದು ಎಚ್ಚರಿಸಿದರು.
ಧರ್ಮ, ಜಾತಿ ಆಧಾರದಲ್ಲಿ ರಾಜಕೀಯ ನಡೆಸುವ ಬಿಜೆಪಿ ಆಟ ಹೆಚ್ಚು ದಿನ ನಡೆಯದು. ಹಿಂದುತ್ವ ಯಾರೊಬ್ಬರ ಆಸ್ತಿ ಅಲ್ಲ. ಎಲ್ಲ ಧರ್ಮಗಳ ಸಾರ ಒಂದೇ ಎಂದು ಡಿಕೆಶಿ ಹೇಳಿದರು.
ಕೊರೊನಾ ಅವಧಿಯಲ್ಲಿ ಕೇಂದ್ರ ಸರಕಾರ 20 ಲಕ್ಷ ಕೋ. ರೂ. ಬಿಡುಗಡೆ ಮಾಡಿದೆ ಎಂದು ಹೇಳುತ್ತಿದೆ. ಆದರೆ, ಆ ಹಣ ಯಾರಿಗೆ ಲಭಿಸಿದೆ ಎಂಬುದು ಪ್ರಶ್ನೆಯಾಗಿದೆ. ರೈತರನ್ನು ಸಂಪೂರ್ಣ ಕಡೆಗಣಿಸಲಾಗಿದೆ. ರೈತ ವಿರೋಧಿ ಮಸೂದೆ ಜಾರಿಗೊಳಿಸಲಾಗಿದೆ. ಕಸ್ತೂರಿ ರಂಗನ್ ವರದಿ ಬಗ್ಗೆ ಯಾವ ಸಂಸದರೂ ಮಾತನಾಡುತ್ತಿಲ್ಲ. ಈ ಎಲ್ಲ ವಿಚಾರಗಳ ಬಗ್ಗೆ ಜನತೆಗೆ ತಿಳಿಸಬೇಕಾಗಿದೆ ಎಂದರು.

ಚಾಡಿ ಮಾತು ಕೇಳೊಲ್ಲ
ವ್ಯಕ್ತಿಗಿಂತ ಪಕ್ಷಕ್ಕೆ ಆದ್ಯತೆ ನೀಡಬೇಕು. ತನ್ನಿಂದಲೇ ಪಕ್ಷ ಎಂದು ಬೀಗಿಕೊಳ್ಳುವವರಿಗೆ ಬೆಲೆ ನೀಡಬೇಕಾಗಿಲ್ಲ ಎಂದರು. ಚಾಡಿ ಮಾತನಾಡುವುದನ್ನು ಬಿಡಬೇಕು. ಚಾಡಿ ಮಾತು ನಾನು ಕೇಳೊಲ್ಲ ಎಂದು ಖಡಕ್ ಸಂದೇಶ ನೀಡಿದ ಅವರು, ಪಕ್ಷದ ತತ್ವ ಸಿದ್ಧಾಂತಗಳಿಗೆ ವಿರುದ್ಧವಾಗಿ ನಡೆಯುವವರು ಪಕ್ಷ ಬಿಡುವುದಿದ್ದರೆ ಅವರನ್ನು ತಡೆಯುವುದಿಲ್ಲ ಎಂದರು.
ಪಕ್ಷದ ಜಿಲ್ಲಾಧ್ಯಕ್ಷ ಅಶೋಕಕುಮಾರ್ ಕೊಡವೂರು ಅಧ್ಯಕ್ಷತೆ ವಹಿಸಿದ್ದರು. ಕೆಪಿಸಿಸಿ ಮಹಿಳಾ ಘಟಕ ಅಧ್ಯಕ್ಷೆ ಪುಷ್ಪಾ ಅಮರನಾಥ, ಕಿಸಾನ್ ಘಟಕ ರಾಜ್ಯಾಧ್ಯಕ್ಷ ಸಚಿನ್ ಮೀಗ, ಯುವ ಕಾಂಗ್ರೆಸ್ ರಾಜ್ಯಾಧ್ಯಕ್ಷ ಮಂಜುನಾಥ, ಮಾಜಿ ಸಚಿವ ವಿನಯಕುಮಾರ್ ಸೊರಕೆ ಮತ್ತು ಅಭಯಚಂದ್ರ ಜೈನ್, ಮಾಜಿ ಶಾಸಕ ಯು. ಆರ್. ಸಭಾಪತಿ ಮತ್ತು ಗೋಪಾಲ ಪೂಜಾರಿ, ವಿಧಾನ ಪರಿಷತ್ ಮಾಜಿ ಸದಸ್ಯ ಐವನ್ ಡಿ’ಸೋಜ, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಗೀತಾ ವಾಗ್ಲೆ, ಯುವ ಕಾಂಗ್ರೆಸ್ ಅಧ್ಯಕ್ಷ ವಿಶ್ವಾಸ್ ಅಮೀನ್, ಪಕ್ಷ ಪ್ರಮುಖರಾದ ಎಂ. ಎ. ಗಫೂರ್, ಪ್ರಶಾಂತ ಜತ್ತನ್ನ, ಅಣ್ಣಯ್ಯ ಶೇರಿಗಾರ್, ಮಿಥುನ್ ರೈ ಮೊದಲಾದವರಿದ್ದರು.

ಮೊದಲ ಭೇಟಿಯಲ್ಲೇ ಭಿನ್ನಮತದ ದರ್ಶನ
ಕೆಪಿಸಿಸಿ ಅಧ್ಯಕ್ಷ ಡಿ. ಕೆ. ಶಿವಕುಮಾರ್ ಅವರ ಉಡುಪಿ ಜಿಲ್ಲೆಯ ಮೊದಲ ಭೇಟಿ ಸಂದರ್ಭದಲ್ಲೇ ಉಡುಪಿ ಕಾಂಗ್ರೆಸ್ ನ ಭಿನ್ನಮತ ಪ್ರದರ್ಶನಗೊಂಡಿತು. ಡಿಕೆಶಿ ಸಭೆಯಲ್ಲಿ ಮಾಜಿ ಸಚಿವ ಪ್ರಮೋದ್ ಮಧ್ವರಾಜ್ ಗೈರಾಗಿದ್ದರು. ಕೆಪಿಸಿಸಿ ಅಧ್ಯಕ್ಷರನ್ನು ಪ್ರಮೋದ್ ಮಧ್ವರಾಜ್ ಸ್ವಾಗತಿಸುವ ಬ್ಯಾನರ್, ಕಟೌಟ್ ಕೂಡಾ ಇರಲ್ಲಿಲ್ಲ!
ಸಮಾವೇಶ ಸ್ಥಳದಲ್ಲಿ ಪ್ರಮೋದ್ ಬೆಂಬಲಿಗರು ಮೌನ ಪ್ರತಿಭಟನೆ ನಡೆಸಲು ಸಿದ್ಧತೆ ನಡೆಸಿದ್ದರು.
ಸಮಾವೇಶ ಉದ್ಘಾಟಿಸಿ ಮಾತನಾಡಿದ ಡಿ.ಕೆ.ಶಿ., ಅಧಿಕಾರ ಎಲ್ಲರಿಗೂ ಸಿಗುತ್ತದೆ. ಆದರೆ ಮೊದಲು ಶಿಸ್ತು ಇರಬೇಕು. ಉಡುಪಿ ಜಿಲ್ಲೆಯಲ್ಲಿ ಒಬ್ಬರೇ ಒಬ್ಬ ಕಾಂಗ್ರೆಸ್ ಶಾಸಕರಿಲ್ಲ. ಎಲ್ಲಿ ತ್ಯಾಗ, ಶ್ರಮ ಇಲ್ಲವೋ ಅಲ್ಲಿ ಬೆಲೆ, ಫಲ ಇರುವುದಿಲ್ಲ. ನನ್ನಿಂದಲೇ ಪಕ್ಷ ಅಂತ ಅಂದುಕೊಂಡಿದ್ದರೆ ಬಿಟ್ಟು ಬಿಡಿ. ಬ್ಲ್ಯಾಕ್ ಮೇಲ್ ಮಾಡಬಹುದು ಎಂದು ಭಾವಿಸಿದ್ದರೆ ಅದು ಭ್ರಮೆ. ಯಾರಾದರೂ ಪಕ್ಷ ಬಿಟ್ಟು ಹೋಗುವವರಿದ್ದರೆ ಗೌರವಯುತವಾಗಿ ಕಳಿಸಿಕೊಡೋಣ ಎಂದರು.
ಕಾಂಗ್ರೆಸ್ ಪಕ್ಷದಲ್ಲಿ ಇರುವುದು ಸೌಭಾಗ್ಯ. ಹಿಂದೆ ಆಗಿದ್ದನ್ನೆಲ್ಲ ಮರೆತುಬಿಡಿ. ವೇದಿಕೆ ಮೇಲೆ ಜಾಗ ಹುಡುಕುತ್ತಾರೆ. ಆದರೆ ಒಬ್ಬರನ್ನೂ ಕರೆದುಕೊಂಡು ಬರುವುದಿಲ್ಲ. ಎಲ್ಲ ಕಡೆಯೂ ಭಿನ್ನಾಭಿಪ್ರಾಯ ಇರುತ್ತವೆ. ಅದೆಲ್ಲವೂ ಮನೆಯ ವಾತಾವರಣದಲ್ಲಿರಬೇಕು ಎಂದು ಭಿನ್ನಮತ ಸೃಷ್ಟಿಸುವ ಎಲ್ಲ ನಾಯಕರಿಗೆ ಡಿಕೆಶಿ ಚಾಟಿ ಬೀಸಿದರು.

ಯಕ್ಷ ಕಿರೀಟ ಗೌರವ
ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಉಡುಪಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಶೋಕ್ ಕುಮಾರ್ ಕೊಡವೂರು ನೇತೃತ್ವದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಕರಾವಳಿ ಪ್ರದೇಶದ ಪ್ರಖ್ಯಾತ ಕಲೆ ಯಕ್ಷಗಾನದ ಕಿರೀಟ ತೊಡಿಸಿ ಸನ್ಮಾನಿಸಲಾಯಿತು.
ಬಡ ವಿದ್ಯಾರ್ಥಿಗಳಿಗೆ ಸೋಲಾರ್ ದೀಪ ಕೊಡುಗೆ ನೀಡಲಾಯಿತು. ವಿವಿಧ ಪಕ್ಷಗಳಿಂದ ಕಾಂಗ್ರೆಸ್ ಗೆ ಆಗಮಿಸಿದವರನ್ನು ಬರಮಾಡಿಕೊಳ್ಳಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!