Monday, July 4, 2022
Home ಸಮಾಚಾರ ಜಿಲ್ಲಾ ಸುದ್ದಿ ಕ್ರಿಸ್ಮಸ್ ಪ್ರೀತಿ ವಿಶ್ವಾಸದ ಪ್ರತೀಕವಾಗಲಿ

ಕ್ರಿಸ್ಮಸ್ ಪ್ರೀತಿ ವಿಶ್ವಾಸದ ಪ್ರತೀಕವಾಗಲಿ

ಉಡುಪಿ: ವಿಶ್ವಕ್ಕೇ ಪ್ರೀತಿ ಸೌಹಾರ್ದತೆಯನ್ನು ಸಾರಿದ ಭಗವಾನ್ ಏಸು ಕ್ರಿಸ್ತ ಜಯಂತಿ ಕ್ರಿಸ್ಮಸ್ ಆಚರಣೆ ಪ್ರೀತಿ ವಿಶ್ವಾಸದ ಪ್ರತೀಕವಾಗಲಿ ಎಂದು ಉಡುಪಿ ಬಿಷಪ್ ವಂ| ಡಾ| ಐಸಾಕ್ ಲೋಬೊ ಆಶಿಸಿದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯ ಹಾಗೂ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಹಯೋಗದೊಂದಿಗೆ ಶನಿವಾರ ಇಲ್ಲಿನ ಶೋಕಮಾತಾ ಇಗರ್ಜಿ ಆವರಣದಲ್ಲಿ ನಡೆದ ಮಾಧ್ಯಮ ಮಿತ್ರರೊಂದಿಗೆ ಕ್ರಿಸ್ಮಸ್ ಸೌಹಾರ್ದ ಕೂಟದಲ್ಲಿ ಮಾತನಾಡಿದರು.

ಸರಳ ಆಚರಣೆಗೆ ಸಲಹೆ
ಕೊರೊನಾ ಹಿನ್ನೆಲೆಯಲ್ಲಿ ಈ ಬಾರಿಯ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆ ಸರಳವಾಗಿ ಆಚರಿಸುವಂತೆ ಸಲಹೆ ನೀಡಿದ ಬಿಷಪ್ ಡಾ| ಲೋಬೊ, ಆಧ್ಯಾತ್ಮಿಕ ನೆಲೆಯಲ್ಲಿ ಬಾಹ್ಯಾಡಂಬರಗಳಿಗೆ ಆಸ್ಪದ ನೀಡದಂತೆ ಆತ್ಮೀಯ ನೆಲೆಯಲ್ಲಿ ಸಂಭ್ರಮಿಸಲು ತಿಳಿಸಿದರು. ಆಡಂಬರಗಳಿಗೆ ವೆಚ್ಚ ಮಾಡುವ ಹಣವನ್ನು ಬಡಬಗ್ಗರಿಗೆ ನೀಡುವ ಮೂಲಕ ಮಾನವೀಯತೆ ಮೆರೆಯುವಂತೆ ಸೂಚಿಸಿದರು.

ತಮ್ಮ ಸಲಹೆಯನ್ನು ಎಲ್ಲ ಕ್ರೈಸ್ತ ಬಾಂಧವರೂ ಅನುಸರಿಸುವಂತೆ ಮನವಿ ಮಾಡಿದರು.

ಕೊರೊನಾ ಸಂತ್ರಸ್ತರಿಗೆ ನೆರವು
ಕೊರನಾ ಲಾಕ್ ಡೌನ್ ಅವಧಿಯಲ್ಲಿ ಉಡುಪಿ ಕ್ರೈಸ್ತ ಧರ್ಮ ಪ್ರಾಂತ್ಯ ವತಿಯಿಂದ ಜಾತಿ, ಧರ್ಮ ಬೇಧವಿಲ್ಲದೆ ಎಲ್ಲ ವಿಧದ ಸಂತ್ರಸ್ತರಿಗೆ ಮಾನವೀಯ ನೆಲೆಯಲ್ಲಿ ಸಹಕಾರ ನೀಡಲಾಗಿದೆ. ಸುಮಾರು 40 ಲಕ್ಷ ರೂ.ಗಳಷ್ಟು ಕೋವಿಡ್ ಸಂತ್ರಸ್ತರಿಗೆ ನೆರವು, 63 ಲಕ್ಷ ರೂ. ಮೊತ್ತದ ಆಹಾರ ಧಾನ್ಯ ಕಿಟ್ ವಿತರಣೆ, 15 ಲಕ್ಷ ರೂ. ಮೊತ್ತದ ಸಹಕಾರ ನೀಡಲಾಗಿದೆ ಎಂದು ಸ್ಮರಿಸಿದರು.

ಕ್ರೈಸ್ತ ಮಹಾಗುರು ಪೋಪ್ ಸಂದೇಶದಂತೆ ಮನುಕುಲದ ಉಳಿವಿಗಾಗಿ ಪರಿಸರ ರಕ್ಷಣೆಯ ಆಶಯದಂತೆ ವಿವಿಧ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಈ ಸಂದರ್ಭದಲ್ಲಿ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ| ಚೇತನ್ ಲೋಬೊ ಅವರ ಅಂಕಣ ಬರಹಗಳ ಸಂಗ್ರಹ ಚೇತನ ಚಿಂತನ ಪುಸ್ತಕ ಅನಾವರಣಗೊಳಿಸಲಾಯಿತು.

ಪ್ರಸಕ್ತ ಸಾಲಿನ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಮಾಧ್ಯಮ ಪ್ರತಿನಿಧಿಗಳಾದ ಉದಯ ಪಡಿಯಾರ್ (ದೂರದರ್ಶನ ವರದಿಗಾರ) ಮತ್ತು ಶ್ರೀಪತಿ ಹೆಗಡೆ ಹಕ್ಲಾಡಿ (ವಿಜಯವಾಣಿ ವರದಿಗಾರ) ಹಾಗೂ ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಸದಸ್ಯ ನಝೀರ್ ಪೊಲ್ಯ (ವಾರ್ತಾ ಭಾರತಿ ವರದಿಗಾರ) ಅವರನ್ನು ಗೌರವಿಸಲಾಯಿತು.

ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಗಣೇಶ ಪ್ರಸಾದ ಪಾಂಡೇಲು ಮತ್ತು ಉಡುಪಿ ಶೋಕಮಾತಾ ಇಗರ್ಜಿ ಧರ್ಮಗುರು ಫಾ| ಚಾರ್ಲ್ಸ್ ಮಿನೇಜಸ್ ಇದ್ದರು.

ಉಡುಪಿ ಕ್ರೈಸ್ತ ಧರ್ಮಪ್ರಾಂತ್ಯದ ಸಾರ್ವಜನಿಕ ಸಂಪರ್ಕಾಧಿಕಾರಿ ಫಾ| ಚೇತನ್ ಲೋಬೊ ಸ್ವಾಗತಿಸಿ, ಮಾಧ್ಯಮ ಪ್ರತಿನಿಧಿ ಮೈಕೆಲ್ ರಾಡ್ರಿಗಸ್ ವಂದಿಸಿದರು. `ಉಜ್ವಾಡೊ’ ಸಂಪಾದಕ ಫಾ| ರಾಯ್ಸನ್ ಫೆರ್ನಾಂಡಿಸ್ ನಿರೂಪಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!