Sunday, July 3, 2022
Home ಸಮಾಚಾರ ಜಿಲ್ಲಾ ಸುದ್ದಿ ಕಾಪು ಮಾರಿಗುಡಿ ಶಿಲಾ ಸೇವೆ ಸಮರ್ಪಣೆ ಸಂಪನ್ನ

ಕಾಪು ಮಾರಿಗುಡಿ ಶಿಲಾ ಸೇವೆ ಸಮರ್ಪಣೆ ಸಂಪನ್ನ

ಕಾಪು: ಸುಮಾರು 35 ಕೋ. ರೂ. ವೆಚ್ಚದಲ್ಲಿ ಸಮಗ್ರವಾಗಿ ಜೀರ್ಣೋದ್ಧಾರಗೊಳ್ಳಲಿರುವ ಇಲ್ಲಿನ ಶ್ರೀ ಹೊಸ ಮಾರಿಗುಡಿ ದೇವಸ್ಥಾನದಲ್ಲಿ ಶಿಲಾ ಸೇವೆ ಸಮರ್ಪಣೆ ಸಮಾರಂಭ ಮಂಗಳವಾರ ವಿಧ್ಯುಕ್ತವಾಗಿ ಸಂಭ್ರಮದಿಂದ ಸಂಪನ್ನಗೊಂಡಿತು.

ಕ್ಷೇತ್ರದ ತಂತ್ರಿಗಳಾದ ವಿದ್ವಾನ್ ಕೊರಂಗ್ರಪಾಡಿ ರಾಘವೇಂದ್ರ ತಂತ್ರಿ ಮತ್ತು ಕುಮಾರಗುರು ತಂತ್ರಿ ಹಾಗೂ ಅರ್ಚಕ ಶ್ರೀನಿವಾಸ ತಂತ್ರಿ ನೇತೃತ್ವದಲ್ಲಿ ಶಿಲಾ ಸೇವೆ ಸಮರ್ಪಣಾಪೂರ್ವಕ ಧಾರ್ಮಿಕ ವಿಧಿ ವಿಧಾನಗಳು ನಡೆದವು.

ಕಾಪು ಶಾಸಕ ಲಾಲಾಜಿ ಆರ್. ಮೆಂಡನ್, ಜಿಲ್ಲಾಧಿಕಾರಿ ಜಿ. ಜಗದೀಶ್, ಕಾಪು ಪುರಸಭೆ ಅಧ್ಯಕ್ಷ ಅನಿಲ್ ಕುಮಾರ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಗಣ್ಯರಾದ ಡಾ| ಬಿ. ಆರ್. ಶೆಟ್ಟಿ, ರವಿ ಸುಂದರ ಶೆಟ್ಟಿ, ಪ್ರಕಾಶ್ ಶೆಟ್ಟಿ ಬಂಜಾರ, ರಾಜಶೇಖರ ಕೋಟ್ಯಾನ್, ಅನಿಲ್ ಬಲ್ಲಾಳ್, ವಿಕ್ರಂ ಕಾಪು, ಧರ್ಮಪಾಲ ದೇವಾಡಿಗ, ಮಾಧವ ಜೋಷಿ, ರತ್ನಾಕರ ಹೆಗ್ಡೆ, ವಿರಾರ್ ಶಂಕರ ಶೆಟ್ಟಿ, ಕಾಪು ಶ್ರೀ ಲಕ್ಷ್ಮೀ ಜನಾರ್ದನ ದೇವಸ್ಥಾನದ ಕಾರ್ಯನಿರ್ವಹಣಾಧಿಕಾರಿ ಸುಧೀರ್ ಕುಮಾರ್ ಶೆಟ್ಟಿ, ಮಾಜಿ ಆಡಳಿತ ಮೊಕ್ತೇಸರ ನಡಿಕೆರೆ ರತ್ನಾಕರ ಶೆಟ್ಟಿ, ನಿರ್ಮಲ್ ಕುಮಾರ್ ಹೆಗ್ಡೆ ಅಭ್ಯಾಗತರಾಗಿದ್ದರು.

ಕಾಪು ಶ್ರೀ ಹೊಸಮಾರಿಗುಡಿ ದೇವಸ್ಥಾನ ಅಭಿವೃದ್ಧಿ ಸಮಿತಿ ಅಧ್ಯಕ್ಷ ಕೆ. ವಾಸುದೇವ ಶೆಟ್ಟಿ, ಕಾರ್ಯಾಧ್ಯಕ್ಷ ಸುರೇಶ್ ಶೆಟ್ಟಿ ಗುರ್ಮೆ, ಪ್ರಧಾನ ಕಾರ್ಯದರ್ಶಿ ಮತ್ತು ವ್ಯವಸ್ಥಾಪನ ಸಮಿತಿ ಅಧ್ಯಕ್ಷ ರಮೇಶ್ ಹೆಗ್ಡೆ ಕಲ್ಯ, ಕೋಶಾಧಿಕಾರಿ ಮತ್ತು ಕಾರ್ಯನಿರ್ವಹಣಾಧಿಕಾರಿ ಪ್ರಶಾಂತ ಕುಮಾರ್ ಶೆಟ್ಟಿ, ಆರ್ಥಿಕ ಸಮಿತಿ ಪ್ರಧಾನ ಸಂಚಾಲಕ ಉದಯ ಸುಂದರ ಶೆಟ್ಟಿ, ಪ್ರಚಾರ ಸಮಿತಿ ಪ್ರಧಾನ ಸಂಚಾಲಕ ಯೋಗೀಶ್ ಶೆಟ್ಟಿ ಬಾಲಾಜಿ, ಉಪಾಧ್ಯಕ್ಷರಾದ ಕಾಪು ದಿವಾಕರ ಶೆಟ್ಟಿ, ಮಾಧವ ಆರ್. ಪಾಲನ್, ಡಾ| ದೇವಿಪ್ರಸಾದ್ ಶೆಟ್ಟಿ ಬೆಳಪು, ಗಂಗಾಧರ ಸುವರ್ಣ ಮತ್ತು ಮನೋಹರ ಶೆಟ್ಟಿ ಕಾಪು, ವ್ಯವಸ್ಥಾಪನ ಸಮಿತಿ ಸದಸ್ಯರಾದ ಚಂದ್ರಶೇಖರ್ ಅಮೀನ್, ಜಗದೀಶ್ ಬಂಗೇರ, ರವೀಂದ್ರ ಎಂ., ರೇಣುಕಾ ದೇವಾಡಿಗ, ಶೈಲಜಾ ಪುರುಷೋತ್ತಮ್, ಬಾಬು ಮಲ್ಲಾರು, ಮಾರಿಗುಡಿ ಪಾತ್ರಿಗಳಾದ ಗುರುಮೂರ್ತಿ ಮತ್ತು ಸಚಿನ್ ಮೊದಲಾದವರಿದ್ದರು.

ಕರಾವಳಿಯ ವಿವಿಧ ದೇವಸ್ಥಾನಗಳ ಆಡಳಿತ ಮೊಕ್ತೇಸರರು, ವ್ಯವಸ್ಥಾಪನ ಸಮಿತಿಯ ಅಧ್ಯಕ್ಷರು, ಧಾರ್ಮಿಕ, ಸಾಮಾಜಿಕ, ರಾಜಕೀಯ ಮುಖಂಡರು, ಜನಪ್ರತಿನಿಧಿಗಳು, ಸಂಘಸಂಸ್ಥೆಗಳ ಪ್ರತಿನಿಧಿಗಳು ಪಾಲ್ಗೊಂಡಿದ್ದರು.

ಕಾಪು ಹೊಸಮಾರಿಗುಡಿ ಅಭಿವೃದ್ಧಿ ಸಮಿತಿ ಕಾರ್ಯಾಧ್ಯಕ್ಷ ಸುರೇಶ್ ಪಿ. ಶೆಟ್ಟಿ ಗುರ್ಮೆ ಸ್ವಾಗತಿಸಿದರು.

ಉಪಾಧ್ಯಕ್ಷ ಡಾ| ದೇವಿಪ್ರಸಾದ್ ಶೆಟ್ಟಿ ಪ್ರಸ್ತಾವನೆಗೈದರು. ಗಂಗಾಧರ ಸುವರ್ಣ ವಂದಿಸಿದರು. ನಿತೇಶ್ ಶೆಟ್ಟಿ ಎಕ್ಕಾರು ಮತ್ತು ಅರ್ಪಿತಾ ಪಿ. ಶೆಟ್ಟಿ ಕಟಪಾಡಿ ನಿರೂಪಿಸಿದರು.

ಶಿಲಾ ಸೇವೆ ಸಮರ್ಪಣೆಗೆ ನಿರಂತರ ಅವಕಾಶ
ಕೊರೊನಾ ನಿಯಂತ್ರಣ ವ್ಯವಸ್ಥೆಗಳೊಂದಿಗೆ ಬೆಳಿಗ್ಗೆ 9.59ಕ್ಕೆ ಶಿಲಾ ಸೇವೆ ಸಮರ್ಪಣೆಗೆ ಅಧಿಕೃತ ಚಾಲನೆ ನೀಡಲಾಯಿತು. ಬುಧವಾರ ಸಂಜೆ 6 ಗಂಟೆ ವರೆಗೆ ಸರತಿಯ ಸಾಲಿನಲ್ಲಿ ಬಂದು ಶಿಲಾ ಸೇವೆ ಸಮರ್ಪಿಸಲು ಅವಕಾಶ ಕಲ್ಪಿಸಲಾಗಿದೆ. ಶಿಲಾ ಸೇವೆ ಸಮರ್ಪಣೆಗಾಗಿ ನವದುರ್ಗೆಯರ ಹೆಸರಿನಲ್ಲಿ 9 ಕೌಂಟರ್ ತೆರೆಯಲಾಗಿದ್ದು, ಭಕ್ತರು ಕೌಂಟರ್ ನಿಂದ ಶಿಲಾಸೇವೆಯ ರಶೀದಿ ಪಡೆದುಕೊಂಡು, ಭಕ್ತರಿಗೆ ದೇವಿ ದರ್ಶನ, ನಿಧಿಕುಂಭ ದರ್ಶನ, ಶಿಲಾಸೇವೆ ಅರ್ಪಣೆ ಜೊತೆಗೆ ಪುಷ್ಪಾರ್ಚನೆಗೆ ವ್ಯವಸ್ಥೆ ಮಾಡಲಾಗಿದೆ.
ಶಿಲಾ ಸೇವೆ ನೀಡುವ ಭಕ್ತರು ತಮ್ಮ ಸುರಕ್ಷತೆಗಾಗಿ ಕಡ್ಡಾಯವಾಗಿ ಮಾಸ್ಕ್ ಧರಿಸಿಯೇ ಕ್ಷೇತ್ರಕ್ಕೆ ಬರಬೇಕಿದ್ದು, ವ್ಯಕ್ತಿಗತ ಅಂತರ ಪಾಲನೆಯೊಂದಿಗೆ ಸರತಿಯ ಸಾಲಿಗಾಗಿ ಉತ್ತಮ ವ್ಯವಸ್ಥೆ ಮಾಡಲಾಗಿದೆ.

ಒಂದು ಶಿಲಾ ಸೇವೆಗೆ ರೂ 999 ರೂ. 9 ಶಿಲಾ ಸೇವೆಗೆ ರೂ. 9,999 ರೂ., 99 ಶಿಲಾಸೇವೆಗೆ 99,999 ರೂ. ಮತ್ತು 999 ಶಿಲಾ ಸೇವೆಗೆ 9,99,999 ರೂ. ನಿಗದಿಪಡಿಸಲಾಗಿದೆ.

ವರ್ಷಪೂರ್ತಿ ಶಿಲಾ ಸೇವೆ ಸಮರ್ಪಣಾ ಕಾರ್ಯಕ್ರಮ ನಡೆಯಲಿದ್ದು ಪ್ರತಿಯೊಬ್ಬ ಭಕ್ತಾದಿಗಳೂ ತಮ್ಮ ಹೆಸರಿನಲ್ಲಿ ಕನಿಷ್ಟ 1 ಶಿಲಾ ಸೇವೆಯನ್ನು ಅಮ್ಮನ ಸನ್ನಿಧಾನಕ್ಕೆ ನೀಡಬೇಕೆನ್ನುವುದು ಸಮಿತಿಯ ಸಂಕಲ್ಪವಾಗಿದೆ ಎಂದು ಸಮಿತಿ ಅಧ್ಯಕ್ಷ ವಾಸುದೇವ ಶೆಟ್ಟಿ ತಿಳಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!