Saturday, August 13, 2022
Home ಸಮಾಚಾರ ಜಿಲ್ಲಾ ಸುದ್ದಿ ಮಿಸ್ ಇಂಡಿಯಾ ಸಿನಿ ಶೆಟ್ಟಿಗೆ ಅದ್ದೂರಿ ಸ್ವಾಗತ

ಮಿಸ್ ಇಂಡಿಯಾ ಸಿನಿ ಶೆಟ್ಟಿಗೆ ಅದ್ದೂರಿ ಸ್ವಾಗತ

ಸುದ್ದಿಕಿರಣ ವರದಿ
ಮಂಗಳವಾರ, ಜುಲೈ 19

ಮಿಸ್ ಇಂಡಿಯಾ ಸಿನಿ ಶೆಟ್ಟಿಗೆ ಅದ್ದೂರಿ ಸ್ವಾಗತ
ಉಡುಪಿ: ಫೆಮಿನಾ ಮಿಸ್ ಇಂಡಿಯಾ ಸಿನಿ ಶೆಟ್ಟಿ ಮಂಗಳವಾರ ತವರೂರು ಉಡುಪಿಗೆ ಆಗಮಿಸಿದ್ದು, ಅವರನ್ನು ಅದ್ದೂರಿಯಾಗಿ ಬರಮಾಡಿಕೊಳ್ಳಲಾಯಿತು.

ನಗರದ ಜೋಡುಕಟ್ಟೆಯಿಂದ ತೆರೆದ ವಾಹನದಲ್ಲಿ ಮೆರವಣಿಗೆ ಮೂಲಕ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣಕ್ಕೆ ಕರೆತರಲಾಯಿತು. ಮಹಿಳೆಯರು ಆರತಿ ಬೆಳಗಿ ಸ್ವಾಗತಿಸಿದರು.

ತನ್ನ ಸಾಧನೆಗೆ ಅಜ್ಜಿ ಸ್ಪೂರ್ತಿ ಎಂದು ಅಜ್ಜಿ ಶಶಿಕಲಾ ಶೆಟ್ಟಿ ಅವರನ್ನು ಕಂಡು ಭಾವುಕರಾಗಿ ನುಡಿದರು.

ಕುಟುಂಬದ ದೈವದೇವರುಗಳ ದರ್ಶನ ಪಡೆಯುವುದಾಗಿ ತಿಳಿಸಿದ ಸಿನಿ ಶೆಟ್ಟಿ, ಅಜ್ಜಿಯೊಂದಿಗೆ ಒಂದಷ್ಟು ಕಾಲ ಕಳೆಯುವ ಮನದಾಸೆ ಪ್ರಕಟಿಸಿದರು.

ನ್ಯತ್ಯಾಭ್ಯಾಸ ಪೂರಕ
ಬಳಿಕ ಅಮ್ಮಣ್ಣಿ ರಾಮಣ್ಣ ಶೆಟ್ಟಿ ಸಭಾಂಗಣದಲ್ಲಿ ಬಂಟರ ಯಾನೆ ನಾಡವರ ಸಂಘ ವತಿಯಿಂದ ತವರೂರ ಸನ್ಮಾನ ಏರ್ಪಡಿಸಲಾಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಸಿನಿ ಶೆಟ್ಟಿ, ನೃತ್ಯಾಭ್ಯಾಸ ನೂರಾರು ಮಂದಿಯ ನಡುವಿನ ಸಂವಹನಕ್ಕೆ ರಹದಾರಿ. ಆತ್ಮವಿಶ್ವಾಸ ವೃದ್ಧಿಸಲು ಭರತನಾಟ್ಯ ಕಾರಣವಾಗಿದ್ದು, ಅದರಿಂದ ಸಭಾಕಂಪನ ದೂರವಾಗಿತ್ತು ಎಂದರು.

ಅನೇಕ ಬಾರಿ ಮನಸ್ಸಿಗೆ ಬೇಜಾರಾದಾಗ ಒಬ್ಬಳೇ ಕೊಠಡಿಯಲ್ಲಿ ಸುಮಾರು ಒಂದು ಗಂಟೆ ಕಾಲ ನೃತ್ಯ ಮಾಡುತ್ತೇನೆ. ಆ ಬಳಿಕ ನಾನು ಸಹಜ ಸ್ಥಿತಿಗೆ ಮರುಳುತ್ತೇನೆ. ಆಸಕ್ತಿಯ ಕ್ಷೇತ್ರದಲ್ಲಿ ಛಲಬಿಡದೆ ಮುಂದುವರಿದಾಗ ಸಾಧನೆ ಮಾಡಲು ಸಾಧ್ಯವಾಗುತ್ತದೆ ಎಂದರು.

ಮಿಸ್ ವರ್ಲ್ಡ್ ಸ್ಪರ್ಥೆಯತ್ತ ಗಮನಹರಿಸಿದ್ದು, ಸ್ಪರ್ಧೆಯಲ್ಲಿ ಗೆಲವು ಪಡೆದ ಬಳಿಕವೂ ಉಡುಪಿಗೆ ಬರುವುದಾಗಿ ತಿಳಿಸಿದರು.

ಯುವತಿಯರಿಗೆ ಮಾದರಿ
ಅಭಿನಂದನಾ ಮಾತುಗಳನ್ನಾಡಿದ ಸಂಗೀತ ನಿರ್ದೇಶಕ ಗುರುಕಿರಣ್, ಸಿನಿ ಶೆಟ್ಟಿ ಸಣ್ಣ ವಯಸ್ಸಿನಲ್ಲಿ ದೊಡ್ಡ ಸಾಧನೆ ಮಾಡಿದ್ದಾರೆ. ಮಾತೃಭಾಷೆ ಮೇಲೆ ಅಪಾರ ಪ್ರೀತಿ ಹೊಂದಿರುವ ಸಿನಿ, ಯುವತಿಯರಿಗೆ ಮಾದರಿ ಎಂದರು.

ಈಚಿನ ದಿನಗಳಲ್ಲಿ ದಕ್ಷಿಣ ಭಾರತದ ಚಿತ್ರರಂಗದಲ್ಲಿ ಬಂಟ ಸಮುದಾಯದ ನಟಿಯರು ಗಮನಾರ್ಹ ಸಾಧನೆ ಮಾಡುತ್ತಿದ್ದಾರೆ ಎಂದರು.

ಬ್ರ್ಯಾಂಡ್ ಅಂಬಾಸಿಡರ್
ಅಧ್ಯಕ್ಷತೆ ವಹಿಸಿದ್ದ ಬಂಟರ ಯಾನೆ ನಾಡವರ ಮಾತೃ ಸಂಘ ಅಧ್ಯಕ್ಷ ಅಜಿತ್ ಕುಮಾರ್ ರೈ ಮಾಲಾಡಿ, 114 ವರ್ಷ ಇತಿಹಾಸ ಹೊಂದಿರುವ ಸಂಘದಿಂದ ಬಂಟರ ವಿಶ್ವಕೋಶ ಸಿದ್ಧಪಡಿಸಲಾಗುತ್ತಿದ್ದು, ಸಿನಿ ಶೆಟ್ಟಿ ಅವರು ಬ್ರ್ಯಾಂಡ್ ಅಂಬಾಸಿಡರ್ ಆಗಬೇಕು ಎಂದು ಮನವಿ ಮಾಡಿದರು.

ಉದ್ಯಮಿ ಗುರ್ಮೆ ಸುರೇಶ್ ಶೆಟ್ಟಿ, ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ, ತಾಯಿ ಹೇಮಾ ಶೆಟ್ಟಿ, ಅಭಿನಂದನಾ ಸಮಿತಿ ಸಂಚಾಲಕ ಜಯರಾಜ್ ಹೆಗ್ಡೆ, ಬೆಳಪು ದೇವಿಪ್ರಸಾದ ಶೆಟ್ಟಿ, ಜಯಕರ ಶೆಟ್ಟಿ ಇಂದ್ರಾಳಿ, ಮುನಿಯಾಲು ಉದಯ ಶೆಟ್ಟಿ, ವೀಣಾ ಶೆಟ್ಟಿ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!