Saturday, August 13, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ಉಡುಪಿಯ ಸಿನಿ ಶೆಟ್ಟಿ ಮಿಸ್ ಇಂಡಿಯಾ 2022

ಉಡುಪಿಯ ಸಿನಿ ಶೆಟ್ಟಿ ಮಿಸ್ ಇಂಡಿಯಾ 2022

ಸುದ್ದಿಕಿರಣ ವರದಿ
ಸೋಮವಾರ, ಜುಲೈ 4

ಉಡುಪಿಯ ಸಿನಿ ಶೆಟ್ಟಿ ಮಿಸ್ ಇಂಡಿಯಾ 2022
ಮುಂಬೈ: ಉಡುಪಿ ಮೂಲದ, ಮುಂಬೈ ಕುವರಿ ಸಿನಿ ಶೆಟ್ಟಿ ಮಿಸ್ ಇಂಡಿಯಾ 2022 ಸ್ಪರ್ಧೆಯಲ್ಲಿ ವಿಜೇತರಾಗಿದ್ದಾರೆ.

ಭಾನುವಾರ ಸ್ಪರ್ಧೆ ನಡೆದಿತ್ತು. ರಾಜಸ್ಥಾನದ ರುಬಲ್ ಶೆಖಾವತ್ ಹಾಗೂ ಉತ್ತರ ಪ್ರದೇಶದ ಶಿನಾತಾ ಚೌಹಾಣ್ 1ನೇ ಹಾಗೂ 2ನೇ ರನ್ನರ್ ಅಪ್ ಆದರು.

21ರ ಹರೆಯದ ಸಿನಿ ಶೆಟ್ಟಿ, ಭರತನಾಟ್ಯ ಕಲಾವಿದೆಯೂ ಆಗಿದ್ದಾರೆ. ಮುಂದೆ ಮಿಸ್ ವಲ್ಡ್ ಸ್ಪರ್ಧೆಯಲ್ಲಿ ಭಾರತವನ್ನು ಪ್ರತಿನಿಧಿಸಲಿದ್ದಾರೆ. ಮಿಸ್ ಇಂಡಿಯಾ ಸ್ಪರ್ಧೆಗೆ ಮಲೈಕಾ, ಅರೋರಾ, ನೇಹಾ ಧೂಪಿಯಾ, ಡಿನೋ ಮೊರಿಯಾ, ಮಿಥಾಲಿ ರಾಜ್ ಮುಂತಾದವರು ಜೂರಿಗಳಾಗಿದ್ದರು.

ಸಿನಿ ಶೆಟ್ಟಿ ಪ್ರಸ್ತುತ ಚಾರ್ಟರ್ಡ್ ಫೈನಾನ್ಶಿಯಲ್ ಅನಾಲಿಸ್ಟ್ ವೃತ್ತಿಪರ ಕೋರ್ಸ್ ಮಾಡುತ್ತಿದ್ದಾರೆ. ನೃತ್ಯ ಎಂದರೆ ಅವರಿಗೆ ಅಚ್ಚುಮೆಚ್ಚು. ತನ್ನ 4ನೇ ವಯಸ್ಸಿನಲ್ಲಿಯೇ ನೃತ್ಯ ಮಾಡಲು ಪ್ರಾರಂಭಿಸಿದ್ದು, 14 ವರ್ಷದವಳಾಗಿದ್ದಾಗ ಭರತನಾಟ್ಯ ರಂಗ ಪ್ರವೇಶ ಮಾಡಿದ್ದರು.

ವಿಶ್ವ ಸುಂದರಿ ಆಗ್ತಾಳೆ
ಸಿನಿ ಶೆಟ್ಟಿ ಮಿಸ್ ಇಂಡಿಯಾ ಸ್ಪರ್ಧೆಯಲ್ಲಿ ವಿಜಯಿಯಾಗಿರುವ ಸುದ್ದಿ ಬಿತ್ತರಗೊಳ್ಳುತ್ತಿರುವಂತೆಯೇ ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ ಅವರ ಸೋದರಮಾವ, ಉಡುಪಿ ಜಿಲ್ಲೆಯ ಕಾಪು ತಾಲೂಕು ಇನ್ನಂಜೆ ಗ್ರಾಮದ ಮಡಂಬು ನಿವಾಸಿ ರಾಮಣ್ಣ ಶೆಟ್ಟಿ ಮನೆಯಲ್ಲಿ ಸಂತಸ ಮಡುಗಟ್ಟಿದೆ.

ನಮ್ಮ ಮನೆ ಮಗಳು ವಿಶ್ವ ಸುಂದರಿ ಆಗ್ತಾಳೆ ಎಂಬುದಾಗಿ ಮಡಂಬು ರಾಮಣ್ಣ ಶೆಟ್ಟಿ ಹಾಗೂ ಶಶಿಕಲಾ ಸಂತಸದಿಂದ ಹೇಳಿದರು.

ಸಿನಿ ಸಾಧನೆಯನ್ನು ನೆನಪಿಸಿ, ಸಂತಸಪಟ್ಟ ಕುಟುಂಬದ ಹಿರಿಯರಾದ ರಾಮಣ್ಣ ಶೆಟ್ಟಿ ಹಾಗೂ ಅವರ ಪತ್ನಿ ಶಶಿಕಲಾ ಮೊಮ್ಮಗಳ ಸಾಧನೆಯನ್ನು ಕೊಂಡಾಡಿದರು.

ವರ್ಷಕ್ಕೊಮ್ಮೆ ಹುಟ್ಟೂರಿಗೆ ಬರುತ್ತಾಳೆ ಸಿನಿ ಶೆಟ್ಟಿ ಎಂದು ಸಂತಸದಿಂದಲೇ ತಿಳಿಸಿದರು. ಸಿನಿ ಶೆಟ್ಟಿ ತಂದೆ ಸದಾನಂದ ಶೆಟ್ಟಿ 80ರ ದಶಕದಲ್ಲಿ ಮುಂಬೈಗೆ ತೆರಳಿದ್ದರು. ಅಲ್ಲಿ ಹೋಟೆಲ್ ಉದ್ಯಮ ನಡೆಸುತ್ತಿರುವ ಸದಾನಂದ ಶೆಟ್ಟಿ ಪುತ್ರಿ ಸಿನಿ ಶೆಟ್ಟಿ, ಮುಂಬೈಯಲ್ಲಿಯೇ ಹುಟ್ಟಿ ಬೆಳೆದಾಕೆ.

ಕಲಿಕೆ ನೃತ್ಯ ಮಾಡಲಿಂಗ್ ನಲ್ಲಿ ಆಕೆ ಪರಿಣತೆ. ಒಂದಲ್ಲ ಒಂದು ದಿನ ನಮ್ಮನೆ ಮಗಳು ವಿಶ್ವಸುಂದರಿ ಆಗಿಯೇ ಆಗುತ್ತಾಳೆ ಎಂದು ಆನಂದಾಶ್ರುಭರಿತರಾಗಿ ರಾಮಣ್ಣ ಶೆಟ್ಟಿ ಹೇಳಿದಾಗ, ಅವರ ಮಾತಿಗೆ ಶಶಿಕಲಾ ಶೆಟ್ಟಿ ಧ್ವನಿಗೂಡಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!