Monday, August 15, 2022
Home ಸಮಾಚಾರ ರಾಜ್ಯ ವಾರ್ತೆ ದ.ಕ., ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಕ್ರಮ

ದ.ಕ., ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಕ್ರಮ

ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 29

ದ.ಕ., ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಕ್ರಮ
ಬೆಂಗಳೂರು: ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಗಳಲ್ಲಿ ವಿಶೇಷ ಪೊಲೀಸ್ ಕ್ರಮಗಳನ್ನು ತೆಗೆದುಕೊಳ್ಳಲು ತೀರ್ಮಾನಿಸಲಾಗಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.

ಶುಕ್ರವಾರ ಆರ್.ಟಿ. ನಗರದ ತಮ್ಮ ನಿವಾಸದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.

ದಕ್ಷಿಣ ಕನ್ನಡ ಮತ್ತು ಉಡುಪಿ ಸೇರಿದಂತೆ ಕರಾವಳಿ ಪ್ರದೇಶದಲ್ಲಿ ಇನ್ನಷ್ಟು ಕಠಿಣ ಕ್ರಮ ತೆಗೆದುಕೊಳ್ಳುವ ಸಂಬಂಧ ಇಂದು ಪೊಲೀಸ್ ಹಿರಿಯ ಅಧಿಕಾರಿಗಳೊಂದಿಗೆ ಉನ್ನತ ಮಟ್ಟದ ಸಭೆ ನಡೆಸಲಾಗುವುದು.

ಕೇರಳ ಗಡಿ ಭಾಗದಲ್ಲಿ 55 ರಸ್ತೆಗಳನ್ನು ನಿಭಾಯಿಸುವುದು, ನಿರ್ಬಂಧ ಹೇರಿಕೆ ಇತ್ಯಾದಿ ಪ್ರಮುಖ ತೀರ್ಮಾನಗಳ ಬಗ್ಗೆ ಸಭೆಯಲ್ಲಿ ಚರ್ಚಿಸಲಾಗುವುದು ಎಂದರು.

ಸರ್ಕಾರ ಗಂಭೀರ ಪರಿಗಣನೆ
ಪ್ರವೀಣ್ ನೆಟ್ಟಾರು ಮನೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಮತ್ತೊಂದು ಕೊಲೆಯ ಮಾಹಿತಿ ಬಂದಿದೆ. ಮೂರೂ ಕೊಲೆ ಪ್ರಕರಣಗಳನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ.

ಪ್ರತಿಯೊಬ್ಬ ನಾಗರಿಕನ ಜೀವವೂ ಸರ್ಕಾರಕ್ಕೆ ಮುಖ್ಯ. ತನಿಖೆ ನಡೆಯುತ್ತಿದೆ. ಮೂರು ಕೊಲೆಗಳಾಗಿರುವುದು ಜನರಲ್ಲಿ ಆತಂಕ ಮೂಡಿಸಿರುವುದು ಸಹಜ.

ಸಮಾಜದಲ್ಲಿ ಇಂಥ ಘಟನೆಗಳು ನಡೆಯಬಾರದು. ಸಮಾಜಘಾತುಕ ಶಕ್ತಿಗಳಿಗೆ ಕುಮ್ಮಕ್ಕು ನೀಡಲಾಗಿದೆ. ರಾಜಕೀಯ ಪ್ರೇರಣೆಯೂ ಅದರ ಹಿಂದಿದೆ. ಅದರಲ್ಲಿ ಹಲವು ಆಯಾಮಗಳಿವೆ. ಅವೆಲ್ಲವುಗಳನ್ನು ನಿಗ್ರಹಿಸಲು ಕಠಿಣ ಕ್ರಮ ತೆಗೆದುಕೊಳ್ಳುವುದಾಗಿ ಸಿಎಂ ತಿಳಿಸಿದರು.

ಸರ್ಕಾರದ ಕ್ರಮ ತಿಳಿಯಲಿದೆ
ಮಸೂದ್ ಕೊಲೆ ಆರೋಪಿಗಳನ್ನು ದಸ್ತಗಿರಿ ಮಾಡಲಾಗಿದೆ. ಇನ್ನೆರಡು ಕೊಲೆ ಪ್ರಕರಣದಲ್ಲಿ ಆರೋಪಿಗಳನ್ನು ಪತ್ತೆಹಚ್ಚಲಾಗುತ್ತಿದೆ. ಸರ್ಕಾರ ಈ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸುತ್ತಿದೆ. ಅದರ ಹಿಂದೆ ದೊಡ್ಡ ಸಂಘಟನೆಗಳಿವೆ. ಇದು ಕೇವಲ ಕೊಲೆ ಎಂದು ಪರಿಗಣಿಸಲಾಗುತ್ತಿಲ್ಲ. ಇದೊಂದು ಯೋಜನಾಬದ್ಧ ದುಷ್ಕೃತ್ಯವಾಗಿದ್ದು, ಅದರ ಹಿಂದಿರುವ ಸಮಾಜಘಾತುಕ ಸಂಘಟನೆಗಳನ್ನು ಸದೆಬಡೆಯುವ ಮಹತ್ವದ ಕೆಲಸ ಮಾಡಲಾಗುತ್ತಿದೆ. ಇನ್ನು ಕೆಲವೇ ದಿನಗಳಲ್ಲಿ ಈ ಎಲ್ಲಾ ಕ್ರಮಗಳು ಜನರಿಗೆ ವೇದ್ಯವಾಗಲಿದೆ ಎಂದರು.

ವೇದವಾಕ್ಯವಲ್ಲ
ಮಾಜಿ ಸಿಎಂ ಸಿದ್ಧರಾಮಯ್ಯ ಕಾಲದಲ್ಲಿ 32 ಸರಣಿ ಕೊಲೆಗಳಾಗಿದ್ದವು. ಆಗ ಅವರು ಏನು ಮಾಡುತ್ತಿದ್ದರು ಎಂದು ಪ್ರಶ್ನಿಸಿದ ಮುಖ್ಯಮಂತ್ರಿ ಬೊಮ್ಮಾಯಿ, ಎಲ್ಲಾ ವಿಷಯಗಳಲ್ಲಿ ರಾಜಕಾರಣ ಮಾಡಬಾರದು. ಅವರ ಹೇಳಿಕೆಗೆ ಹೆಚ್ಚಿನ ಮಹತ್ವವಿಲ್ಲ ಎಂದರು.

ಶಾಸಕ ತನ್ವೀರ್ ಸೇಠ್ ಮೇಲೆ ಎಸ್.ಡಿ.ಪಿ.ಐ ಹಾಗೂ ಪಿ.ಎಫ್.ಐ ಸಂಘಟನೆಯ ಸುಮಾರು 200 ಜನರನ್ನು ದಾಳಿ ನಡೆಸಿದ ಪ್ರಕರಣದಿಂದ ಅವರನ್ನು ಮುಕ್ತಗೊಳಿಸಲಾಗಿತ್ತು. ಅವರು ಈಗ ಪುನಃ ಸಮಾಜಘಾತುಕ ಕೃತ್ಯಗಳನ್ನು ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಕೇವಲ ಹೇಳಿಕೆಗಳನ್ನು ನೀಡುತ್ತಾರೆ ಎಂದರು.

ಸರ್ಕಾರ ಕ್ಷಿಪ್ರ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಸರ್ಕಾರ ತೆಗೆದುಕೊಂಡಿರುವ ಕ್ರಮಗಳು ಜನರ ಮುಂದಿವೆ. ಎಸ್.ಡಿ.ಪಿ.ಐ, ಪಿಎಫ್.ಐ ಸಂಘಟನೆಗಳಿಗೆ ಫಂಡಿಂಗ್ ಮಾಡುತ್ತಿರುವುದೇ ಬಿಜೆಪಿ ಪಕ್ಷ ಎಂಬುದು ಅತ್ಯಂತ ಹಾಸ್ಯಾಸ್ಪದ ಹೇಳಿಕೆ. ಇದು ಕಾಂಗ್ರೆಸ್ಸಿನ ರಾಜಕೀಯ ದಿವಾಳಿತನವನ್ನು ಬಿಂಬಿಸುತ್ತದೆ.

ಸರ್ಕಾರದಲ್ಲಿ ಯಾರೂ ರಾಜೀನಾಮೆ ಕೊಡುವ ಅಗತ್ಯವಿಲ್ಲ. ಇಂಥ ಸಂದರ್ಭದಲ್ಲಿ ಕರ್ತವ್ಯದಿಂದ ವಿಮುಖರಾಗುವುದಿಲ್ಲ. ಗಟ್ಟಿಯಾಗಿ ನಿಂತು ಕಠಿಣ ನಿಲುವುಗಳನ್ನು ತೆಗೆದುಕೊಂಡು ಕೆಲಸ ಮಾಡಲಾಗುತ್ತಿದೆ ಎಂದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!