Thursday, July 7, 2022
Home ಸಮಾಚಾರ ರಾಜ್ಯ ವಾರ್ತೆ ಬೊಮ್ಮಾಯಿ- ದೇವೇಗೌಡ ಭೇಟಿಗೆ ಅಪಾರ್ಥ ಬೇಡ

ಬೊಮ್ಮಾಯಿ- ದೇವೇಗೌಡ ಭೇಟಿಗೆ ಅಪಾರ್ಥ ಬೇಡ

ಬೊಮ್ಮಾಯಿ- ದೇವೇಗೌಡ ಭೇಟಿಗೆ ಅಪಾರ್ಥ ಬೇಡ

(ಸುದ್ದಿಕಿರಣ ವರದಿ)
ಉಡುಪಿ: ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಬಸವರಾಜ ಬೊಮ್ಮಾಯಿ ಅವರು ಮಾಜಿ ಪ್ರಧಾನಿ ಎಚ್. ಡಿ. ದೇವೇಗೌಡ ಅವರನ್ನು ಭೇಟಿಯಾದ ಬಗ್ಗೆ ಅಪಾರ್ಥ ಕಲ್ಪಿಸಬೇಕಾಗಿಲ್ಲ ಎಂದು ನವಲಗುಂದದ ಮಾಜಿ ಶಾಸಕ ಹಾಗೂ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ರಾಜಕೀಯ ಕಾರ್ಯದರ್ಶಿ ಎನ್. ಎಚ್. ಕೋನರಡ್ಡಿ ಹೇಳಿದರು.

ಭಾನುವಾರ ಇಲ್ಲಿನ ಜೆಡಿಎಸ್ ಜಿಲ್ಲಾ ಕಚೇರಿಯಲ್ಲಿ ಸುದ್ದಿಗೋಷ್ಟಿಯಲ್ಲಿ ಮಾತನಾಡಿದ ಅವರು, ಹಾಸನ ಶಾಸಕ ಪ್ರೀತಂ ಗೌಡ ಅವರು ಬೊಮ್ಮಾಯಿ ಮತ್ತು ದೇವೇಗೌಡರ ಸೌಹಾರ್ದ ಭೇಟಿಯನ್ನು ರಾಜಕೀಯ ದೃಷ್ಟಿಯಿಂದ ನೋಡಿದ್ದು, ಇದು ಬಿಜೆಪಿ ಮತ್ತು ಜೆಡಿಎಸ್ ಹೊಂದಾಣಿಕೆ ಎಂದು ವಿಶ್ಲೇಷಿಸಿದ್ದಾರೆ. ಇಂಥ ಹುಚ್ಚುತನದ ಹೇಳಿಕೆ ನೀಡಿರುವ ಪ್ರೀತಂ ಗೌಡ ನಿಮ್ಹಾನ್ಸ್ ಆಸ್ಪತ್ರೆಗೆ ಸೇರುವುದು ಉತ್ತಮ ಎಂದು ಸಲಹೆ ನೀಡಿದರು.

ರಾಜ್ಯದ ಸಮಸ್ಯೆ ಬಂದಾಗಲೆಲ್ಲ ಈ ಹಿಂದೆಯೂ ದೇವೇಗೌಡರನ್ನು ಯಡಿಯೂರಪ್ಪ, ಸಿದ್ಧರಾಮಯ್ಯ ಡಿ.ವಿ. ಸದಾನಂದ ಗೌಡ, ಜಗದೀಶ ಶೆಟ್ಟರ್ ಮೊದಲಾದವರು ಭೇಟಿಯಾಗಿ ಸಲಹೆ ಪಡೆದಿದ್ದಾರೆ. ಮಾಜಿ ಪ್ರಧಾನಿಯಾಗಿ ತನ್ನದೇ ಆದ ವರ್ಚಸ್ಸು ಹೊಂದಿರುವ ದೇವೇಗೌಡರು ಪ್ರಧಾನಿ ಮೋದಿ, ಸೋನಿಯಾ ಗಾಂಧಿ, ಮಮತಾ ಬ್ಯಾನರ್ಜಿ ಮೊದಲಾದವರೊಂದಿಗೆ ಸೌಹಾರ್ದ ಸಂಬಂಧ ಹೊಂದಿದ್ದಾರೆ.

ಬಸವರಾಜ ಬೊಮ್ಮಾಯಿ ಜನತಾ ಪರಿವಾರದಿಂದ ರಾಜಕೀಯ ಪ್ರವೇಶ ಮಾಡಿದವರು. ಮಾಜಿ ಮುಖ್ಯಮಂತ್ರಿ ಎಸ್. ಆರ್. ಬೊಮ್ಮಾಯಿ ಪುತ್ರನ ನೆಲೆಯಲ್ಲಿ ದೇವೇಗೌಡರು ಬೊಮ್ಮಾಯಿ ಬಗ್ಗೆ ವಿಶೇಷ ಪ್ರೀತಿ ಹೊಂದಿದ್ದಾರೆ. ಈ ಎಲ್ಲ ಕಾರಣಗಳಿಂದಾಗಿ ಬೊಮ್ಮಾಯಿ ಅವರು ದೇವೇಗೌಡರನ್ನು ಭೇಟಿ ಮಾಡಿ ಅವರ ಆಶೀರ್ವಾದ ಪಡೆದಿದ್ದಾರೆಯೇ ಹೊರತು ರಾಜಕೀಯ ಕಾರಣಗಳಿಂದಲ್ಲ ಎಂದು ಕೋನರಡ್ಡಿ ಸ್ಪಷ್ಟಪಡಿಸಿದರು.

2023ರಲ್ಲಿ ಕುಮಾರಸ್ವಾಮಿ ಸಿಎಂ!
ರಾಜ್ಯದಲ್ಲಿ ಜಾತ್ಯತೀತ ಜನತಾದಳ ಪಕ್ಷ ಬಲವರ್ಧನೆಗೆ ಪಕ್ಷದ ಹಿರಿಯರಾದ ದೇವೇಗೌಡ, ಎಚ್. ಡಿ. ಕುಮಾರಸ್ವಾಮಿ ಮೊದಲಾದವರ ನೇತೃತ್ವದಲ್ಲಿ ಕಾರ್ಯಕ್ರಮ ರೂಪಿಸಲಾಗುತ್ತಿದೆ. ಕುಮಾರಸ್ವಾಮಿ ಮುಖ್ಯಮಂತ್ರಿ ಅವಧಿಯ ಯೋಜನೆಗಳ ಆಧಾರದಲ್ಲಿ ಪಕ್ಷ ಸಂಘಟನೆ ಮಾಡಲಾಗುತ್ತಿದೆ.

ಜನತೆ ಕಾಂಗ್ರೆಸ್ ಮತ್ತು ಬಿಜೆಪಿಗಳಿಗೆ ಪರ್ಯಾಯವಾಗಿ ಜೆಡಿಎಸ್ ಬೆಂಬಲಿಸುವ ವಿಶ್ವಾಸವಿದೆ. ದೇಶದ ವಿವಿಧೆಡೆಗಳಲ್ಲಿ ಪ್ರಾದೇಶಿಕ ಪಕ್ಷಗಳನ್ನು ಮತದಾರರು ಬೆಂಬಲಿಸಿದಂತೆ, ಕರ್ನಾಟಕದಲ್ಲೂ ಜೆಡಿಎಸ್ ಮುಂದಿನ ಚುನಾವಣೆಯಲ್ಲಿ ಸ್ವಂತ ಬಲದಿಂದ ಅಧಿಕಾರಕ್ಕೆ ಬರಲಿದೆ. 2023ರಲ್ಲಿ ಎಚ್. ಡಿ. ಕುಮಾರಸ್ವಾಮಿ ಮುಖ್ಯಮಂತ್ರಿಯಾಗುವುದು ಸೂರ್ಯ ಚಂದ್ರರಿರುವಷ್ಟೇ ಸತ್ಯ ಎಂದು ಕೋನರೆಡ್ಡಿ ವಿಶ್ವಾಸ ವ್ಯಕ್ತಪಡಿಸಿದರು.

ಚುನಾವಣೆಯಲ್ಲಿ ಸ್ಪರ್ಧೆ
ಮುಂಬರುವ ಜಿ.ಪಂ. ಮತ್ತು ತಾ. ಪಂ. ಹಾಗೂ ಕೆಲವೆಡೆ ನಡೆಯುವ ಸ್ಥಳೀಯಾಡಳಿತ ಚುನಾವಣೆಗಳಲ್ಲಿ ಜೆಡಿಎಸ್ ಸ್ಪರ್ಧಿಸಲಿದೆ.

ಉಡುಪಿ ಜಿಲ್ಲೆಯಲ್ಲಿ ಪಕ್ಷ ಬಲಪಡಿಸಲು ಕಾರ್ಯಯೋಜನೆ ರೂಪಿಸಲಾಗಿದ್ದು, ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ನೇತೃತ್ವದಲ್ಲಿ ಪಕ್ಷ ಸಂಘಟಿಸಲಾಗುವುದು. 20 ಮಂದಿ ಹಿರಿಯ ನಾಯಕರ ತಂಡ ರಚಿಸಿ ಪಕ್ಷ ಬಲವರ್ಧನೆಗೆ ಪೂರಕ ಸಹಕಾರ ನೀಡಲಾಗುವುದು ಎಂದರು.

ಬಿಜೆಪಿ ಬಗ್ಗೆ ಮಾತನಾಡಲಾರೆ!
ಬೊಮ್ಮಾಯಿ ಸರಕಾರ ಅವಧಿ ಪೂರೈಸುವ ವಿಶ್ವಾಸ ವ್ಯಕ್ತಪಡಿಸಿದ ಕೋನರೆಡ್ಡಿ, ಪ್ರಸ್ತುತ ಬಿಜೆಪಿಗೆ ಬಹುಮತದ ಕೊರತೆ ಇಲ್ಲ. ಖಾತೆ ಹಂಚಿಕೆ, ಸಚಿವ ಸ್ಥಾನ ನೀಡಿಕೆ ವಿಚಾರದಲ್ಲಿ ಆಂತರಿಕ ಭಿನ್ನಾಭಿಪ್ರಾಯ ಉಂಟಾಗಿದ್ದರೂ ಶಿಸ್ತಿನ ಪಕ್ಷವಾದ ಬಿಜೆಪಿ ಅದೆಲ್ಲವನ್ನೂ ನಿಭಾಯಿಸಲಿದೆ. ಬಿಜೆಪಿ ಆಂತರಿಕ ವಿಚಾರದಲ್ಲಿ ಮಾತನಾಡುವುದು ಸರಿಯಲ್ಲ ಎಂದರು.

ಕುಂದಾಪುರ ಶಾಸಕ ಹಾಲಾಡಿ ಶ್ರೀನಿವಾಸ ಶೆಟ್ಟಿ ಅವರಿಗೆ ಸಚಿವ ಖಾತೆ ನೀಡಬೇಕಿತ್ತು ಎಂದು ಕೋನರೆಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.

ಬಿಜೆಪಿಯಿಂದ ನಿಯಮ ಉಲ್ಲಂಘನೆ
ಕೊರೊನಾ ಸಂದರ್ಭದಲ್ಲಿ ಮಂತ್ರಿ ಮಂಡಲ ರಚನೆಯಾಗಿದ್ದು, ಈ ಅವಧಿಯಲ್ಲಿ ಕೊರೊನಾ ನಿಯಮಾವಳಿ ಪಾಲಿಸಬೇಕಾದ ಜನಪ್ರತಿನಿಧಿಗಳಿಂದಲೇ ನಿಯಮ ಉಲ್ಲಂಘನೆಯಾಗಿದೆ. ಸಚಿವ ಸಂಪುಟ ರಚನೆಯಾದ ತಕ್ಷಣ ಕೊರೊನಾ ನಿರ್ವಹಣೆ ಮತ್ತು ನೆರೆ ಪರಿಹಾರ ಅನುಷ್ಠಾನಕ್ಕಾಗಿ ಮುಖ್ಯಮಂತ್ರಿ ಬೊಮ್ಮಾಯಿ ಸಚಿವರನ್ನು ನಿಯೋಜನೆ ಮಾಡಿದರೆ, ನೂತನ ಸಚಿವರು ಅಭಿನಂದನೆ ಕಾರ್ಯಕ್ರಮ, ಮೆರವಣಿಗೆ ಇತ್ಯಾದಿಗಳ ಮೂಲಕ ಕೊರೊನಾ ನಿಯಮ ಉಲ್ಲಂಘಿಸಿದ್ದಾರೆ ಎಂದು ಕೋನರಡ್ಡಿ ಆರೋಪಿಸಿದರು.

ಪತ್ರಿಕಾಗೋಷ್ಟಿಯಲ್ಲಿ ಜೆಡಿಎಸ್ ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ, ರಾಜ್ಯ ಕಾರ್ಯದರ್ಶಿ ಜಯಕುಮಾರ್ ಪರ್ಕಳ, ಜಿಲ್ಲಾ ಕಾರ್ಯಾಧ್ಯಕ್ಷ ವಾಸುದೇವ ರಾವ್, ಪ್ರಧಾನ ಕಾರ್ಯದರ್ಶಿ ಜಯರಾಮ ಆಚಾರ್ಯ, ಕಾಪು ಬ್ಲಾಕ್ ಅಧ್ಯಕ್ಷ ಇಕ್ಬಾಲ್ ಆತ್ರಾಡಿ, ಪಕ್ಷ ಪ್ರಮುಖರಾದ ಅಬ್ದುಲ್ ರಝಾಕ್ ಉಚ್ಚಿಲ, ರಂಗ ಕೋಟ್ಯಾನ್ ಮೊದಲಾದವರಿದ್ದರು.

ಈ ಸಂದರ್ಭದಲ್ಲಿ ಎನ್. ಎಚ್. ಕೋನರಡ್ಡಿ ಅವರನ್ನು ಜಿಲ್ಲಾಧ್ಯಕ್ಷ ಯೋಗೀಶ ಶೆಟ್ಟಿ ಗೌರವಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!