Sunday, July 3, 2022
Home ಸಮಾಚಾರ ರಾಷ್ಟ್ರೀಯ ವಾರ್ತೆ ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿದ ನಂದನ್ ಕೃಷ್ಣ

ನೌಕಾಪಡೆಯಲ್ಲಿ ಸಬ್ ಲೆಫ್ಟಿನೆಂಟ್ ಹುದ್ದೆ ಅಲಂಕರಿಸಿದ ನಂದನ್ ಕೃಷ್ಣ

ಉಡುಪಿ: ಇಲ್ಲಿನ ದೊಡ್ಡಣಗುಡ್ಡೆ ನಿವಾಸಿ, ಕೇರಳದ ನಿವೃತ್ತ ಡಿ.ವೈ.ಎಸ್.ಪಿ ಶ್ರೀರಾಮ್ ಮತ್ತು ಗಾಯತ್ರಿ ದಂಪತಿಯ ಏಕಮಾತ್ರ ಪುತ್ರ ನಂದನ್ ಕೃಷ್ಣ ಅವರು ನೌಕಾಪಡೆಯ ಸಬ್ ಲೆಫ್ಟಿನೆಂಟ್ ಆಗಿ ಸೇವೆ ಆರಂಭಿಸಿದ್ದಾರೆ. ಪ್ರಸ್ತುತ ಅವರ ಕಾರ್ಯಕ್ಷೇತ್ರ ಗುಜರಾತ್ ರಾಜ್ಯದ ಜಾಮ್ ನಗರದ ಐ.ಎನ್.ಎಸ್ ವಲ್ಸುರದಲ್ಲಿದೆ. ಕೇರಳದ ಪಯ್ಯನೂರಿನಲ್ಲಿ ತರಬೇತಿ ಪಡೆದ ಅವರು ನವೆಂಬರ್ನಲ್ಲಿ ಈ ಹುದ್ದೆ ಅಲಂಕರಿಸಿದ್ದಾರೆ.

ನಂದನ್ ಕೃಷ್ಣ ಅವರಿಗೆ ಇನ್ನೂ 21ರ ಹರೆಯ. ಅಳಿಕೆಯಲ್ಲಿ ವಿಜ್ಞಾನ ವಿಷಯದಲ್ಲಿ ಪಿಯುಸಿ ಓದಿದ ನಂದನ್ ಕೃಷ್ಣ, ನಾಲ್ಕು ವರ್ಷ ಕಾಲ ನೌಕಾಪಡೆಯಲ್ಲಿ ತರಬೇತಿ ಪಡೆದರು. ತಂದೆಯವರ ಪೊಲೀಸ್ ಕರ್ತವ್ಯ ಮತ್ತು ದೊಡ್ಡಪ್ಪ ಶ್ರೀಧರ ಕಾರ್ಣಿಕ್ ಅವರ ನೌಕಾಪಡೆಯ ಸೇವೆ ಸ್ಪೂರ್ತಿ ನೀಡಿದೆ.

ಶ್ರೀಧರ ಕಾರ್ಣಿಕ್ ಅವರು ಕಾರವಾರದ ನೌಕಾನೆಲೆಯಲ್ಲಿ ಕಮಾಂಡರ್ ಆಗಿದ್ದರು. ಗುಜರಾತ್ ಭೂಕಂಪ ಪರಿಹಾರ ಕಾರ್ಯದಲ್ಲಿ ತೋರಿದ್ದ ಸಾಧನೆಗಾಗಿ ಅವರಿಗೆ ಅತ್ಯುನ್ನತವಾದ ನೌಕಾಸೇನಾ ಪದಕ ಲಭಿಸಿತ್ತು. ಕಾರವಾರದಲ್ಲಿ ಕಮಾಂಡರ್ ಆಗಿದ್ದಾಗ ನೌಕಾನೆಲೆಗೆ ಹೋಗಿ ಅಲ್ಲಿನ ಕಾರ್ಯನಿರ್ವಹಣೆಯನ್ನು ಹತ್ತಿರದಿಂದ ಕಂಡಿದ್ದರು. ತಂದೆ ಶ್ರೀರಾಮ್ ಅವರಿಗೆ ಕೇರಳ ಸರಕಾರದ ಮುಖ್ಯಮಂತ್ರಿ ಪದಕ ಮತ್ತು ರಾಷ್ಟ್ರಪತಿ ಪದಕ ಲಭಿಸಿದೆ. ಮೂಲತಃ ಕಾಸರಗೋಡು ಜಿಲ್ಲೆ ಬಾಯಾರಿನವರಾದ ಶ್ರೀರಾಮ್, ನಿವೃತ್ತಿ ಬಳಿಕ ಉಡುಪಿಗೆ ಬಂದು ನೆಲೆಸಿದ್ದಾರೆ.

ಸೇನಾ ಕ್ಷೇತ್ರದಲ್ಲಿ ಶಿಸ್ತಿನ ಜೀವನವಿರುತ್ತದೆ. ನಮ್ಮ ಭವಿಷ್ಯ ಹೇಗೆ ರೂಪಿಸಿಕೊಳ್ಳಬೇಕು ಎಂಬ ನಿಖರತೆ ಇರುತ್ತದೆ. ದೇಶ ಸೇವೆಗೆ ಬಹಳಷ್ಟು ಅವಕಾಶ ಇದೆ. ತಂದೆಯವರ ಪೊಲೀಸ್ ಕಾರ್ಯಕ್ಷಮತೆ ಮತ್ತು ದೊಡ್ಡಪ್ಪನವರ ನೌಕಾಪಡೆಯ ಕಾರ್ಯದಕ್ಷತೆ ನನ್ನ ಮೇಲೆ ಪರಿಣಾಮ ಬೀರಿತು. ಹೀಗಾಗಿ ನಾನು ನೌಕಾಪಡೆಯನ್ನು ಸೇರಿದ್ದೇನೆ ಎಂದು ನಂದನ್ ಕೃಷ್ಣ ಹೇಳಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!