ಉಡುಪಿ: ಜಿಲ್ಲೆಯಲ್ಲಿ ಈಚಿನ ದಿನಗಳಲ್ಲಿ ಕೊರೊನಾ ಪೀಡಿತರ ಸಂಖ್ಯೆ ಹೆಚ್ಚಲು ಜವಾಬ್ದಾರಿಯುತ ವ್ಯಕ್ತಿಗಳೇ ಕಾರಣ. ಜವಾಬ್ದಾರಿ ಸ್ಥಾನದಲ್ಲಿರುವವರು ಕೋವಿಡ್ ನಿಯಮ ಪಾಲಿಸಿದಲ್ಲಿ ಸಾರ್ವಜನಿಕರು ಪಾಲಿಸುತ್ತಾರೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ವಿಷಾದಯುತವಾಗಿ ಹೇಳಿದರು.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಜವಾಬ್ದಾರಿ ಸ್ಥಾನದಲ್ಲಿರುವವರು ಮೊದಲು ಕೊರೊನಾ ಮಾರ್ಗಸೂಚಿ ಅನುಸರಿಸಬೇಕು. ಜನಪ್ರತಿನಿಧಿಗಳು, ಅಧಿಕಾರಿಗಳು ಕೋವಿಡ್ ಮಾರ್ಗಸೂಚಿ ಪಾಲಿಸುವ ಮೂಲಕ ಜನತೆಗೆ ಮಾದರಿಯಾಗಬೇಕು. ಸಭೆ, ಸಮಾರಂಭ ನಡೆಸುವುದನ್ನು ನಿಲ್ಲಿಸಬೇಕು. ಸೋಂಕು ಹೆಚ್ಚಿದ ಬಳಿಕ ಎಚ್ಚೆತ್ತುಕೊಂಡರೆ ಉಪಯೋಗ ಇಲ್ಲ ಎಂದರು.
ಜಿಲ್ಲೆಯ ಪಾಸಿಟಿವಿಟಿ ದರ ಪ್ರಸ್ತುತ 3 ಶೇ. ಆಸುಪಾಸಿನಲ್ಲಿದೆ. ಕಳೆದ ಎರಡು- ಮೂರು ದಿನದಿಂದ ಶೇ. 5 ಪಾಸಿಟಿವಿಟಿ ದರ ಬರುತ್ತಿದೆ. ಕೇರಳ ಮತ್ತು ಮಹಾರಾಷ್ಟ್ರದೊಂದಿಗೆ ಉಡುಪಿ ಜಿಲ್ಲೆ ಸಂಪರ್ಕದಲ್ಲಿರುವ ಕಾರಣ ಪಾಸಿಟಿವ್ ಸಂಖ್ಯೆ ಹೆಚ್ಚಾಗಲು ಕಾರಣ. ಪ್ರಾಥಮಿಕ ಸಂಪರ್ಕದಲ್ಲಿ ಅತಿ ಹೆಚ್ಚು ಸೋಂಕಿತರನ್ನು ಜಿಲ್ಲೆಯಲ್ಲಿ ಕಾಣಬಹುದು ಎಂದು ಡಿಸಿ ಹೇಳಿದರು.
ಜಿಲ್ಲೆಯಲ್ಲಿ ಕೋವಿಡ್ 2ನೇ ಅಲೆ ಇನ್ನು ಮುಗಿದಿಲ್ಲ. ಆದರೆ, ಜನತೆ ಕೊರೊನಾ ಮುಗಿದಿದೆ ಎಂಬಂತೆ ಭ್ರಮಿಸುತ್ತಿದ್ದಾರೆ. ನೂರಾರು ಜನ ಸೇರುವ ಕಾರ್ಯಕ್ರಮಗಳು ಅವ್ಯಾಹತವಾಗಿ ನಡೆಯುತ್ತಿದೆ. ಇದು ಸರಿಯಲ್ಲ.
ಈ ಬಗ್ಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜೊತೆ ಮಾತನಾಡಿದ್ದೇನೆ. ಎಲ್ಲಾ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮಾಸ್ಕ್ ಇಲ್ಲದವರಿಗೆ ದಂಡ ವಿಧಿಸಲಾಗುವುದು ಎಂದು ಡಿಸಿ ಜಗದೀಶ್ ಎಚ್ಚರಿಸಿದರು.
ಪಾಸಿಟಿವ್ ಸಂಖ್ಯೆ ಹೆಚ್ಚಾಗಿರುವಾಗಲೂ ಕಾರ್ಯಕ್ರಮಗಳು ನಿರಂತರ ನಡೆಯುತ್ತಲೇ ಇದ್ದಲ್ಲಿ ಕೋವಿಡ್ ಮೂರನೇ ಅಲೆಯ ಆಹ್ವಾನಕ್ಕೆ ಅದೇ ಕಾರಣವಾಗುತ್ತದೆ. ಕಾರ್ಯಕ್ರಮ ಆಯೋಜಿಸುವವರಿಂದ ಸಾಮಾನ್ಯ ಜನರ ಜೀವನಕ್ಕೆ ತೊಂದರೆಯಾಗಲಿದೆ. ಸಕ್ರಿಯ ಪ್ರಕರಣದ ಸಂಖ್ಯೆ ಈಗ ಸಾವಿರಕ್ಕೆ ಏರಿಕೆಯಾಗಿದೆ. ಈ ಬಗ್ಗೆ ಜನ ಎಚ್ಚೆತ್ತುಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಜಾಗೃತವಾಗಿರುವ ಕೊರೊನಾ ನಡುವೆಯೂ ಜಿಲ್ಲೆಯಲ್ಲಿ ಎಗ್ಗಿಲ್ಲದೆ ನಡೆಯುತ್ತಿರುವ ಕಾರ್ಯಕ್ರಮಗಳ ಬಗ್ಗೆ ಸುದ್ದಿಕಿರಣ ಆತಂಕಿತ ವರದಿ ಪ್ರಕಟಿಸಿದ್ದನ್ನಿಲ್ಲಿ ಸ್ಮರಿಸಬಹುದು