ಸುದ್ದಿಕಿರಣ ವರದಿ
ಶನಿವಾರ, ಜುಲೈ 30
ಸಿಇಟಿ ಪರೀಕ್ಷೆಯಲ್ಲಿ ಅವಳಿ ಸಹೋದರರ ಸಾಧನೆ
ಉಡುಪಿ: ರಾಜ್ಯ ವೃತ್ತಿಪರ ಕೋರ್ಸುಗಳ ಪ್ರವೇಶ ಪರೀಕ್ಷೆಗಾಗಿ ಕರ್ನಾಟಕ ಪರೀಕ್ಷಾ ಪ್ರಾಧಿಕಾರ ಕಳೆದ ತಿಂಗಳು ನಡೆಸಿದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ)ಯಲ್ಲಿ ಮಣಿಪಾಲದ ವೃಜೇಶ್ ವೀಣಾಧರ ಶೆಟ್ಟಿ ಮತ್ತು ವೃಶಾನ್ ವೀಣಾಧರ ಶೆಟ್ಟಿ ಎಂಬ ಅವಳಿ ಸಹೋದರರು ಅಪೂರ್ವ ಸಾಧನೆ ಮಾಡಿದ್ದಾರೆ.
ಐದು ವಿಭಾಗಗಳಲ್ಲಿ ನಡೆದ ಸಿಇಟಿ ಪರೀಕ್ಷೆಯ ನಾಲ್ಕು ವಿಭಾಗಗಳಲ್ಲಿ ಈ ಸಹೋದರರೀರ್ವರು ಒಟ್ಟು 7 ರ್ಯಾಂಕ್ ಪಡೆದಿದ್ದಾರೆ.
ಮಣಿಪಾಲ ಮಾಧವ ಕೃಪಾ ಆಂಗ್ಲ ಮಾಧ್ಯಮ ಶಾಲೆಯ ಅವಳಿ ಸಹೋದರರಾದ ವೃಜೇಶ್ 4 ವಿಭಾಗಗಳಲ್ಲಿ ರ್ಯಾಂಕ್ ಪಡೆದರೆ, ವೃಶಾನ್ 3 ವಿಭಾಗಗಳಲ್ಲಿ ರ್ಯಾಂಕ್ ಗಳಿಸಿದ್ದಾರೆ.
ನ್ಯಾಚುರೋಪಥಿ, ಯೋಗ ವಿಜ್ಞಾನ ಕೋರ್ಸ್ ನಲ್ಲಿ ವೃಜೇಶ್ 2ನೇ ರ್ಯಾಂಕ್ (ಶೇ. 98.34) ಪಡೆದರೆ, ವೃಶಾನ್ 4ನೇ ರ್ಯಾಂಕ್ (ಶೇ. 98) ಪಡೆದಿದ್ದಾರೆ. ಬಿಎಸ್ಸಿ (ಕೃಷಿ)ಯಲ್ಲಿ ವೃಜೇಶ್ 9ನೇ ರ್ಯಾಂಕ್ (ಶೇ. 94.79) ಪಡೆದಿದ್ದಾರೆ. ಪಶು ವೈದ್ಯ ವಿಜ್ಞಾನ (ವೆಟರ್ನರಿ) ವಿಭಾಗದಲ್ಲಿ ವೃಶಾನ್ 5ನೇ ರ್ಯಾಂಕ್ (ಶೇ. 96.67) ಹಾಗೂ ವೃಜೇಶ್ 6ನೇ ರ್ಯಾಂಕ್ (ಶೇ. 96.66) ಸಂಪಾದಿಸಿದ್ದಾರೆ. ಬಿ. ಫಾರ್ಮಾ (ಫಾರ್ಮೆಸಿ) ವಿಭಾಗದಲ್ಲಿ ವೃಜೇಶ್ 7ನೇ ರ್ಯಾಂಕ್ (ಶೇ. 96.67) ಹಾಗೂ ವೃಶಾನ್ 8ನೇ ರ್ಯಾಂಕ್ (ಶೇ. 96.66) ಪಡೆದಿದ್ದಾರೆ.
ವೈದ್ಯರಾಗುವುದು ಇಬ್ಬರೂ ಸಹೋದರರ ಗುರಿಯಾಗಿದ್ದು, ಅದಕ್ಕಾಗಿ ನೀಟ್ ಪರೀಕ್ಷೆ ಫಲಿತಾಂಶದ ನಿರೀಕ್ಷೆಯಲ್ಲಿದ್ದಾರೆ. ಅಖಿಲ ಭಾರತ ಮಟ್ಟದ ನೀಟ್ ಪರೀಕ್ಷೆಯಲ್ಲಿ ಟಾಪ್ ರ್ಯಾಂಕ್ ಪಡೆದು ನವದೆಹಲಿಯ ಏಮ್ಸ್ (ಎಐಐಎಂಎಸ್)ನಲ್ಲಿ ವೈದ್ಯ ಪದವಿ ಪಡೆಯುವತ್ತ ಇಬ್ಬರೂ ಗುರಿ ಇರಿಸಿಕೊಂಡಿದ್ದಾರೆ. ಒಂದು ವೇಳೆ ದೆಹಲಿ ಏಮ್ಸ್ ನಲ್ಲಿ ಸೀಟು ಸಿಗದಿದ್ದಲ್ಲಿ ಮಣಿಪಾಲ ಕೆಎಂಸಿಯಲ್ಲಿ ಎಂಬಿಬಿಎಸ್ ಓದುವುದಾಗಿ ವೃಜೇಶ್ ಹೇಳಿದರು.
ಇಂಜಿನಿಯರಿಂಗ್ ತಮ್ಮ ಆಸಕ್ತಿಯ ವಿಷಯವಾಗಿರಲಿಲ್ಲ ಎಂದು ವೃಜೇಶ್ ತಿಳಿಸಿದರು.
ಮಣಿಪಾಲದಲ್ಲಿ ಫೈನಾನ್ಸಿಯಲ್ ಕನ್ಸಲ್ವೆಂಟ್ ಆಗಿರುವ ವೀಣಾಧರ ಶೆಟ್ಟಿ ಹಾಗೂ ಗೃಹಿಣಿ ರೇಖಾ ಶೆಟ್ಟಿ ದಂಪತಿ ಪುತ್ರರಾಗಿರುವ ವೃಜೇಶ್ ಹಾಗೂ ವೃಶಾನ್ ತಮ್ಮ ಆರಂಭಿಕ 1ರಿಂದ 7ನೇ ತರಗತಿ ವರೆಗಿನ ಶಿಕ್ಷಣವನ್ನು ದುಬೈಯಲ್ಲಿ ಪಡೆದು, 8ರಿಂದ 12ನೇ ತರಗತಿ ಶಿಕ್ಷಣವನ್ನು ಮಣಿಪಾಲದ ಮಾಧವ ಕೃಪಾದಲ್ಲಿ ಪಡೆದರು.
ಅವರೀರ್ವರ ತಂಗಿ ಮಾಧವ ಕೃಪಾದ ಮೂರನೇ ತರಗತಿಯ ವಿದ್ಯಾರ್ಥಿನಿ.
ನೀಟ್ ಮತ್ತು ಸಿಇಟಿಗಾಗಿ ಉಡುಪಿಯ ಬೇಸ್ ನಲ್ಲಿ ಕೋಚಿಂಗ್ ಪಡೆದಿದ್ದಾಗಿ ವೃಜೇಶ್ ತಿಳಿಸಿದರು