Wednesday, August 10, 2022
Home ಸಮಾಚಾರ ಜಿಲ್ಲಾ ಸುದ್ದಿ ಉಚ್ಚಿಲ ಮೊಗವೀರ ಭವನ ಉದ್ಘಾಟನೆ

ಉಚ್ಚಿಲ ಮೊಗವೀರ ಭವನ ಉದ್ಘಾಟನೆ

ಉಚ್ಚಿಲ ಮೊಗವೀರ ಭವನ ಉದ್ಘಾಟನೆ

ಕಾಪು, ನ. 20 (ಸುದ್ದಿಕಿರಣ ವರದಿ): ಊರೊಂದರ ಬೆಳವಣಿಗೆಯಾಗಬೇಕಿದ್ದಲ್ಲಿ ಅಲ್ಲಿನ ಜನರಿಗೆ ಉಪಯೋಗವಾಗುವ ಯೋಜನೆಗಳು ರೂಪಿತವಾಗಬೇಕು. ಅದು ಶೈಕ್ಷಣಿಕ ಅಥವಾ ಸಾಮಾಜಿಕ ಯಾವುದೇ ಆಗಿರಲಿ ಅದರಿಂದ ಆ ಪ್ರದೇಶದ ಅಭಿವೃದ್ಧಿಗೆ ಸಹಕಾರಿಯಾಗಲಿದೆ ಎಂದು ಎಂ.ಆರ್.ಪಿ.ಎಲ್ ಗ್ರೂಪ್ ಜನರಲ್ ಮ್ಯಾನೇಜರ್ ಕೃಷ್ಣ ಹೆಗ್ಡೆ ಹೇಳಿದರು.

ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ ಹಾಗೂ ಎಂ.ಆರ್.ಪಿ.ಎಲ್ ಸಿ.ಎಸ್.ಆರ್ ಸಹಯೋಗದೊಂದಿಗೆ ಉಚ್ಚಿಲದಲ್ಲಿ ನಿರ್ಮಿಸಲಾಗಿರುವ ಮೊಗವೀರ ಭವನದ ಉದ್ಘಾಟನಾ ಸಮಾರಂಭದಲ್ಲಿ ಭಾನುವಾರ ಭಾಗವಹಿಸಿ ಮಾತನಾಡಿದರು.

ಮೊಗವೀರ ಭವನದ ನಿರ್ಮಾಣದಲ್ಲಿ ಎಂ.ಆರ್.ಪಿ.ಎಲ್ ಸಂಸ್ಥೆ ಸಹಭಾಗಿಯಾಗಿರುವುದು ಹೆಮ್ಮೆಯ ವಿಚಾರವಾಗಿದ್ದು ಈವರೆಗೆ ನಮ್ಮ ಸಂಸ್ಥೆ ಉಡುಪಿ ಮತ್ತು ದ.ಕ. ಜಿಲ್ಲೆಗಳಲ್ಲಿ 100 ಕೋಟಿಗೂ ಅಧಿಕ ಮೊತ್ತವನ್ನು ಸಿ.ಎಸ್.ಆರ್ ಯೋಜನೆಯಡಿ ವಿನಿಯೋಗಿಸಿದೆ. ಮಂಗಳೂರಿನ ಆಸ್ಪತ್ರೆಯ ಬಳಿಕ ಅತೀ ಹೆಚ್ಚು ಮೊತ್ತ ನೀಡಿರುವುದು ಮೊಗವೀರ ಭವನಕ್ಕಾಗಿದೆ.

ಕಳೆದ ಎರಡು ವರ್ಷದಿಂದ ಕೊರೊನಾ ಸಮಸ್ಯೆಯಿಂದಾಗಿ ಆರ್ಥಿಕ ಪರಿಸ್ಥಿತಿ ಉತ್ತಮವಾಗಿರದ ಕಾರಣ ಹೊಸ ಯೋಜನೆಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗಿಲ್ಲ. ಮುಂದೆ ಪರಿಸ್ಥಿತಿ ಸುಧಾರಣೆಯಾದ ಬಳಿಕ ಇನ್ನಷ್ಟು ಯೋಜನೆಗಳನ್ನು ಸಮಾಜಕ್ಕೆ ನೀಡಲಾಗುವುದು ಎಂದರು.

ಸ್ವಾಭಿಮಾನದ ಸಂಕೇತ
ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್, ಮೊಗವೀರ ಭವನ, ಸಮುದಾಯದ ಸ್ವಾಭಿಮಾನದ ಸಂಕೇತವಾಗಿದ್ದು ಸುಮಾರು 14 ಕೋ. ರೂ. ವೆಚ್ಚದಲ್ಲಿ ನಿರ್ಮಾಣವಾಗಿದ್ದು ಅದರಿಂದ ಬರುವ ಆದಾಯ ಬಡ ವಿದ್ಯಾರ್ಥಿಗಳ ಶಿಕ್ಷಣ ಮತ್ತು ಬಡ ರೋಗಿಗಳ ವೈದ್ಯಕೀಯ ಚಿಕಿತ್ಸೆಗೆ ವಿನಿಯೋಗವಾಗಲಿದೆ ಎಂದರು.

ಸಂಸದ ನಳಿನ್ ಕುಮಾರ್ ಕಟೀಲ್, ಶಾಸಕರಾದ ಲಾಲಾಜಿ ಆರ್. ಮೆಂಡನ್ ಮತ್ತು ರಘುಪತಿ ಭಟ್, ಮಾಜಿ ಸಚಿವರಾದ ವಿನಯ ಕುಮಾರ್ ಸೊರಕೆ ಮತ್ತು ಪ್ರಮೋದ್ ಮಧ್ವರಾಜ್, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶಪಾಲ್ ಸುವರ್ಣ, ದಕ್ಷಿಣ ಕನ್ನಡ ಮೊಗವೀರ ಮಹಾಜನ ಸಂಘ ಅಧ್ಯಕ್ಷ ಜಯ ಸಿ. ಕೋಟ್ಯಾನ್, ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮ ಮಂಗಳೂರು ಅಧ್ಯಕ್ಷ ನಿತಿನ್ ಕುಮಾರ್, ಮಲ್ಪೆ ಮೀನುಗಾರರ ಸಂಘದ ಅಧ್ಯಕ್ಷ ದಯಾನಂದ ಕೆ. ಸುವರ್ಣ, ಬಾರ್ಕೂರು ಶ್ರೀ ಕುಲಮಹಾಸ್ತ್ರೀ ಅಮ್ಮನವರ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್, ಉಚ್ಚಿಲ ಶ್ರೀ ಮಹಾಲಕ್ಷ್ಮಿ ದೇವಸ್ಥಾನದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ವಾಸುದೇವ ಸಾಲ್ಯಾನ್, ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಹರಿಯಪ್ಪ ಕೋಟ್ಯಾನ್, ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಗುಂಡು ಬಿ. ಅಮೀನ್, ಉದ್ಯಾವರ ಸದಿಯ ಸಾಹುಕಾರ್ ಮನೆತನದ ಪ್ರತಿನಿಧಿ ಯು. ಗಣೇಶ್, ಬಗ್ವಾಡಿ ಹೋಬಳಿ ಮೊಗವೀರ ಮಹಾಜನ ಸಂಘ ಕುಂದಾಪುರ ಶಾಖಾಧ್ಯಕ್ಷ ಕೆ. ಕೆ ಕಾಂಚನ್, ದಕ್ಷಿಣ ಕನ್ನಡ ಮೊಗವೀರ ಮಹಿಳಾ ಸಂಘ ಅಧ್ಯಕ್ಷೆ ಅಪ್ಪಿ ಎಸ್. ಸಾಲ್ಯಾನ್ ಹಾಗೂ ಪ್ರಮುಖರಾದ ಅಜಿತ್ ಸುವರ್ಣ, ಲೋಕೇಶ್ ಪುತ್ರನ್, ಸುಭಾಶ್ಚಂದ್ರ ಕಾಂಚನ್, ರಾಜು ವಂಡ್ಸೆ, ಶಿವರಾಮ್ ಕೋಟ, ಸುರೇಶ್ ಕಾಂಚನ್, ಮೌಲಾಲಿ, ಸುನೇತಾ ಅಪ್ಪಣ್ಣ, ರಾಘವೇಂದ್ರ ಉಪಾಧ್ಯಾಯ, ಶಿವರಾಮ್ ಕೆ. ಮೊದಲಾದವರಿದ್ದರು.

ದ.ಕ ಜಿಲ್ಲಾ ಮೊಗವೀರ ಮಹಾಜನ ಸಂಘ ಉಚ್ಚಿಲ ಕಾರ್ಯದಶರ್ಿ ಸುಧಾಕರ ಕುಂದರ್ ವಂದಿಸಿದರು. ಚಂದ್ರೇಶ್ ಪಿತ್ರೋಡಿ ನಿರೂಪಿಸಿದರು.

ಸಭಾಭವನದ ವಿಶೇಷತೆ
ಅತ್ಯುಧುನಿಕ ತಂತ್ರಜ್ಞಾನ ಬಳಸಿಕೊಂಡು ಸಭಾಭವನ ನಿರ್ಮಿಸಲಾಗಿದ್ದು, ಸಂಪೂರ್ಣ ಹವಾನಿಯಂತ್ರಿತವಾಗಿದೆ. ಎರಡು ವಿಶಾಲ ಸಭಾಂಗಣಗಳನ್ನು ಒಳಗೊಂಡಿದೆ. 1,100 ಮಂದಿ ಸಾಮರ್ಥ್ಯದ ಮಾಧವ ಮಂಗಲ ಸಭಾಂಗಣ ಹಾಗೂ ಕುಲಮಹಾಸ್ತ್ರೀ ಸಭಾಂಗಣ 900 ಮಂದಿ ಕುಳಿತುಕೊಳ್ಳುವ ಸಾಮರ್ಥ್ಯ ಹೊಂದಿದೆ.

ಸಸ್ಯಾಹಾರ ಮತ್ತು ಮಾಂಸಹಾರದ ಪ್ರತ್ಯೇಕ ಅಡುಗೆ ಕೋಣೆಗಳು ಹಾಗೂ ವಿಶಾಲ ಭೋಜನ ಗೃಹ ಇದೆ.

ಅತ್ಯಾಧುನಿಕ ಲಿಫ್ಟ್, ಜನರೇಟರ್, ಸಿಸಿಟಿವಿ ಕಣ್ಗಾವಲು ಹಾಗೂ ಏಕಕಾಲದಲ್ಲಿ 550 ಕಾರು ನಿಲುಗಡೆ ಸಾಮರ್ಥ್ಯದ ವಿಶಾಲ ಪಾರ್ಕಿಂಗ್ ಸೌಲಭ್ಯ ಹೊಂದಿದೆ. ಉಚ್ಚಿಲ ಮಹಾಲಕ್ಷ್ಮೀ ಕ್ಷೇತ್ರದ ಜೀರ್ಣೋದ್ಧಾರ ಕಾರ್ಯ ಭರದಿಂದ ಸಾಗುತ್ತಿದ್ದು, ಶೀಘ್ರದಲ್ಲೇ ಬ್ರಹ್ಮಕಲಶೋತ್ಸವ ನೆರವೇರಲಿದೆ.

ಈ ಹಿನ್ನೆಲೆಯಲ್ಲಿ ಎಲ್ಲ ವರ್ಗದ ಜನರಿಗೆ ಕೈಗೆಟಕುವ ದರದಲ್ಲಿ ಶುಭಸಮಾರಂಭಗಳನ್ನು ನಡೆಸಲು ಅತ್ಯಾಧುನಿಕ ಸೌಕರ್ಯಗಳನ್ನು ಒಳಗೊಂಡ ಸಭಾಭವನ ನಿರ್ಮಾಣ ಮಾಡಬೇಕೆಂಬ ಆಶಯವನ್ನು ಸಂಘ ಹೊಂದಿತ್ತು. ಅದರಂತೆ ಸಮಾಜದ ಮಾರ್ಗದರ್ಶಕ ಡಾ| ಜಿ. ಶಂಕರ್ ನೇತೃತ್ವದಲ್ಲಿ ದ.ಕ. ಮೊಗವೀರ ಮಹಾಜನ ಸಂಘ ಉಚ್ಚಿಲ, ಎಂ.ಆರ್.ಪಿ.ಎಲ್ ಕಾರ್ಪೊರೇಟ್ ಸೋಶಿಯಲ್ ರೆಸ್ಪಾನ್ಸಿಬಿಲಿಟಿ ಇನಿಷಿಯೇಟಿವ್ (ಸಿ.ಎಸ್.ಆರ್.) ಸಹಯೋಗದೊಂದಿಗೆ ಸಮಾಜದ ಹಿರಿಯರಾದ ಉದ್ಯಾವರ ದಿ. ಸದಿಯ ಸಾಹುಕಾರ್ ಅವರು ದೇವಸ್ಥಾನಕ್ಕೆ ನೀಡಿದ 14 ಎಕರೆ ಜಾಗದಲ್ಲಿ ಈ ಭವ್ಯ ಸಭಾಭವನ ನಿರ್ಮಿಸಲಾಗಿದೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!