ಸುದ್ದಿಕಿರಣ ವರದಿ
ಶುಕ್ರವಾರ, ಜುಲೈ 8
ನಾರಾಯಣ ಗುರು ವಿಚಾರ ಸೇರ್ಪಡೆಗೆ ಆಗ್ರಹ
ಉಡುಪಿ: ಸಮಾಜ ವಿಜ್ಞಾನ ಪಠ್ಯದಲ್ಲಿ ನಾರಾಯಣ ಗುರು ವಿಚಾರ ಸೇರ್ಪಡೆಗೊಳಿಸುವಂತೆ ನಾರಾಯಣಗುರು ವಿಚಾರ ವೇದಿಕೆ ರಾಜ್ಯಾಧ್ಯಕ್ಷ ಸತ್ಯಜಿತ್ ಸುರತ್ಕಲ್ ಆಗ್ರಹಿಸಿದರು.
ಪಠ್ಯ ಪುಸ್ತಕ ಪರಿಷ್ಕರಣೆಯಲ್ಲಿ ಬ್ರಹ್ಮಶ್ರೀ ನಾರಾಯಣ ಗುರುಗಳ ಪಠ್ಯವನ್ನು ಸಮಾಜ ವಿಜ್ಞಾನದಿಂದ ಕೈಬಿಟ್ಟಿರುವುದನ್ನು ಖಂಡಿಸಿ ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ನೇತೃತ್ವದಲ್ಲಿ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಎದುರು ನಡೆದ ಪ್ರತಿಭಟನೆಯಲ್ಲಿ ಮಾತನಾಡಿದರು.
ವಿದ್ಯಾರ್ಥಿಗಳು ನಾರಾಯಣ ಗುರು ಬಗ್ಗೆ ಅಧ್ಯಯನ ಮಾಡಿದಲ್ಲಿ ಅಸ್ಪೃಶ್ಯತೆ ಹೆಸರಿನಲ್ಲಿ ಮೇಲ್ವರ್ಗದವರು ಹಿಂದುಳಿದ ವರ್ಗದವರಿಗೆ ಮಾಡುತ್ತಿದ್ದ ದೌರ್ಜನ್ಯ ತಿಳಿಯುತ್ತದೆ ಎಂಬ ಕಾರಣಕ್ಕೆ ಪಠ್ಯದಿಂದ ನಾರಾಯಣ ಗುರುಗಳ ವಿಚಾರವನ್ನು ತೆಗೆದು ಹಾಕಲಾಗಿದೆ ಎಂದವರು ಆರೋಪಿಸಿದರು.
ಬಿಲ್ಲವರ ಅವಗಣನೆ
ಕವಿ ಕಯ್ಯಾರ ಕಿಞಣ್ಣ ರೈ ಅವರಿಗೆ ಅನ್ಯಾಯವಾಗಿರುವ ಕಾರಣಕ್ಕೆ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲು, ಬಂಟರ ಸಂಘದ ಅಧ್ಯಕ್ಷರ ಮನೆಗೆ ಓಡುತ್ತಾರೆ. ಆದರೆ, ನಾರಾಯಣ ಗುರುಗಳಿಗೆ ಅನ್ಯಾಯವಾದರೂ ಬಿಲ್ಲವ ಸಮುದಾಯದ ಮಂತ್ರಿಗಳನ್ನು ಮುಂದಿಟ್ಟು ಒಡೆಯುವ ಪ್ರಯತ್ನ ಮಾಡಲಾಗುತ್ತಿದೆ. ಹೋರಾಟ ಮಾಡುತ್ತಿರುವ ನಮ್ಮನ್ನು ಜಾತಿವಾದಿ ಎಂಬ ಹಣೆಪಟ್ಟಿ ಕಟ್ಟಲಾಗುತ್ತದೆ. ಒಟ್ಟಿನಲ್ಲಿ ಬಿಲ್ಲವರ ಅವಗಣೆ ನಡೆಯುತ್ತಿದೆ ಎಂದು ಸತ್ಯಜಿತ್ ಖೇದ ವ್ಯಕ್ತಪಡಿಸಿದರು.
ಪ್ರತಿಭಟನೆಯಲ್ಲಿ ವಿಶ್ವನಾಥ ಕ್ಷೇತ್ರ ಅಧ್ಯಕ್ಷ ಬಿ. ಎನ್. ಶಂಕರ ಪೂಜಾರಿ, ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಆಡಳಿತ ಮಂಡಳಿ ಕೋಶಾಧಿಕಾರಿ ಪದ್ಮರಾಜ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮುಖಂಡರಾದ ಕಟಪಾಡಿ ಶಂಕರ ಪೂಜಾರಿ, ಬಿಜೆಪಿ ನಾಯಕಿ ಗೀತಾಂಜಲಿ ಸುವರ್ಣ, ರಮೇಶ್ ಕಾಂಚನ್, ದೀಪಕ್ ಕೋಟ್ಯಾನ್ ಮೊದಲಾದವರಿದ್ದರು.
ಅದಕ್ಕೂ ಮುನ್ನ ಮಣಿಪಾಲದ ಕಾಯಿನ್ ಸರ್ಕಲ್ ನಿಂದ ಜಿಲ್ಲಾಧಿಕಾರಿ ಕಚೇರಿ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಯಿತು.