Sunday, October 2, 2022
Home ಸಮಾಚಾರ ಜಿಲ್ಲಾ ಸುದ್ದಿ ವಿದ್ಯಾರ್ಥಿನಿ ಶೈಕ್ಷಣಿಕ ವೆಚ್ಚ ಭರಿಸುವ ಭರವಸೆ

ವಿದ್ಯಾರ್ಥಿನಿ ಶೈಕ್ಷಣಿಕ ವೆಚ್ಚ ಭರಿಸುವ ಭರವಸೆ

ಸುದ್ದಿಕಿರಣ ವರದಿ
ಶನಿವಾರ, ಮೇ 21

ವಿದ್ಯಾರ್ಥಿನಿ ಶೈಕ್ಷಣಿಕ ವೆಚ್ಚ ಭರಿಸುವ ಭರವಸೆ
ಉಡುಪಿ: ಈ ಬಾರಿಯ ಎಸ್.ಎಸ್.ಎಲ್.ಸಿ. ಪರೀಕ್ಷೆಯಲ್ಲಿ 625 ಅಂಕ ಗಳಿಸಿದ ಇಲ್ಲಿನ ಬಾಲಕಿಯರ ಸರ್ಕಾರಿ ಪ್ರೌಢಶಾಲೆ ವಿದ್ಯಾರ್ಥಿನಿ ಗಾಯತ್ರಿ, ಹೃದ್ರೋಗ ತಜ್ಞೆಯಾಗುವ ಆಸೆ ಹೊಂದಿದ್ದು, ಆಕೆಯ ಶೈಕ್ಷಣಿಕ ವೆಚ್ಚವನ್ನು ವೈಯಕ್ತಿಕ ನೆಲೆಯಲ್ಲಿ ತಾನು ಭರಿಸುವುದಾಗಿ ಕಾಲೇಜು ಆಡಳಿತ ಮಂಡಳಿ ಉಪಾಧ್ಯಕ್ಷ ಯಶಪಾಲ್ ಸುವರ್ಣ ಭರವಸೆ ನೀಡಿದ್ದಾರೆ.

ಅವರು ಶನಿವಾರ ಶನಿವಾರ ವಿದ್ಯಾರ್ಥಿನಿ ಗಾಯತ್ರಿಯನ್ನು ಅಭಿನಂದಿಸಿದರು.

ಶಿಕ್ಷಣವೇ ಮುಖ್ಯ: ಸಾಬೀತು
ಇದೇ ಪ್ರೌಢಶಾಲೆಯ ಆವರಣದಲ್ಲಿರುವ ಬಾಲಕಿಯರ ಸರಕಾರಿ ಪದವಿ ಪೂರ್ವ ಕಾಲೇಜಿನ ಹಿಜಾಬ್ ಹೋರಾಟಗಾರ್ತಿಯರು ಶಿಕ್ಷಣಕ್ಕಿಂತ ಇಸ್ಲಾಂ ಮತವೇ ಮುಖ್ಯ ಎಂದು ಜಗತ್ತಿಗೆ ಸಾರಿದ್ದರು.

ಆದರೆ, ಶಿಕ್ಷಣವೇ ಮುಖ್ಯ ಎಂದು ರಾಜ್ಯಕ್ಕೆ ಪ್ರಥಮ ಸ್ಥಾನಿಯಾಗುವ ಮೂಲಕ ಗಾಯತ್ರಿ ಸಾಬೀತುಪಡಿಸಿದ್ದಾಳೆ ಎಂದು ಯಶಪಾಲ್ ಹರ್ಷ ವ್ಯಕ್ತಪಡಿಸಿದ್ದಾರೆ.

ಜೀವನದಲ್ಲಿ ಶಿಕ್ಷಣಕ್ಕೆ ಮಹತ್ವ ಕೊಟ್ಟಲ್ಲಿ ಯಾವುದೇ ಸಮಸ್ಯೆ ಅಡ್ಡಿಯಾಗುವುದಿಲ್ಲ. ಉಡುಪಿಯ ಈ ಕಾಲೇಜಿಗೆ ವಿಶೇಷ ಮಾನ್ಯತೆ ಇದೆ. ಬಡವರ ಮನೆ ಮಕ್ಕಳಿಗೆ ಸಂಪೂರ್ಣ ಉಚಿತ ಶಿಕ್ಷಣ ನೀಡುವ ಜೊತೆಗೆ ಸರಕಾರೇತರ ಸಂಸ್ಥೆಗಳ ಸಹಾಯವನ್ನೂ ಇಲ್ಲಿ ನೀಡಲಾಗುತ್ತದೆ.

ಆದರೆ, ಹಿಜಾಬ್ ವಿವಾದದ ನಂತರ ಆಡಳಿತ ಮಂಡಳಿ ಮತ್ತು ಶಿಕ್ಷಕರು ಕುಸಿದು ಹೋಗಿದ್ದರು. ಇದೀಗ ಈ ಶಾಲೆಯ ಆಡಳಿತ ಮಂಡಳಿಗೆ ಗಾಯತ್ರಿ ಬೂಸ್ಟರ್ ಡೋಸ್ ಕೊಟ್ಟಿದ್ದಾಳೆ ಎಂದು ಯಶಪಾಲ್ ಬಣ್ಣಿಸಿದರು.

ಸರಕಾರಿ ಶಾಲೆ ಕೀಳರಿಮೆ ಕೂಡದು
625 ಅಂಕ ಲಭಿಸುವ ನಿರೀಕ್ಷೆ ಇರಲಿಲ್ಲ. ಆದರೆ, ರ್ಯಾಂಕ್ ಬರಬೇಕೆಂಬ ಆಸೆ ಇತ್ತು. ಪ್ರಯತ್ನ ಮಾಡಿದ್ದೆ. ಪ್ರತಿದಿನ ಮಾಡಿದ ಪಾಠದ ಪಾಯಿಂಟ್ ಮಾಡಿ ಕಲಿಯುತ್ತಿದ್ದೆ ಎಂದು ಗಾಯತ್ರಿ ಹೇಳಿದರು.

ನಾನು ಸರಕಾರಿ ಶಾಲೆಯಲ್ಲಿ ಕಲಿತರೂ ಎಲ್ಲ ಸೌಲಭ್ಯ ಇತ್ತು, ಉತ್ತಮ ಗುಣಮಟ್ಟದ ಶಿಕ್ಷಕರು ಇದ್ದಾರೆ. ಕೆಲವರು ಸರಕಾರಿ ಶಾಲೆಯ ಬಗ್ಗೆ ಕೀಳರಿಮೆ ಬೆಳೆಸಿಕೊಂಡಿದ್ದಾರೆ. ಅದು ಮೊದಲು ಅವರ ಮನಸ್ಸಿನಿಂದ ಹೋಗಬೇಕು ಎಂದರು.

ಮುಂದೆ ವಿಜ್ಞಾನ ವಿಭಾಗದಲ್ಲಿ ಪಿಸಿಎಂಬಿಯೊಂದಿಗೆ ಹೃದ್ರೋಗ ತಜ್ಞೆಯಾಗಬೇಕೆಂಬ ಆಸೆಯಿದೆ ಎಂದು ಗಾಯತ್ರಿ ಪುನರುಚ್ಚರಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!