Sunday, October 2, 2022
Home ಲೋಕಾಭಿರಾಮ ಆರೋಗ್ಯ ನ್ಯುಮೋನಿಯಾ ತಡೆಗೆ ಮಕ್ಕಳಿಗೆ ತಪ್ಪದೇ ನ್ಯುಮೊಕೋಕಲ್ ಲಸಿಕೆ ಹಾಕಿಸಿ

ನ್ಯುಮೋನಿಯಾ ತಡೆಗೆ ಮಕ್ಕಳಿಗೆ ತಪ್ಪದೇ ನ್ಯುಮೊಕೋಕಲ್ ಲಸಿಕೆ ಹಾಕಿಸಿ

ನ್ಯುಮೋನಿಯಾ ತಡೆಗೆ ಮಕ್ಕಳಿಗೆ ತಪ್ಪದೇ ನ್ಯುಮೊಕೋಕಲ್ ಲಸಿಕೆ ಹಾಕಿಸಿ

ಉಡುಪಿ, ನ. 4 (ಸುದ್ದಿಕಿರಣ ವರದಿ): ದೇಶದಲ್ಲಿ ನ್ಯುಮೋನಿಯಾದಿಂದ ಸಂಭವಿಸುವ ಸಾವುಗಳಲ್ಲಿ 5 ವರ್ಷದೊಳಗಿನ ಮಕ್ಕಳ ಪ್ರಮಾಣ 15 ಶೇ.ದಷ್ಟಿದೆ ಎಂಬ ವರದಿಗಳಿದ್ದು, ಮಕ್ಕಳನ್ನು ನ್ಯುಮೋನಿಯಾದಿಂದ ರಕ್ಷಿಸಲು ಪೋಷಕರು ತಪ್ಪದೇ ಮಕ್ಕಳಿಗೆ ನ್ಯುಮೊಕೋಕಲ್ ಲಸಿಕೆ ಕೊಡಿಸುವಂತೆ ಪ್ರಭಾರ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್ ಸಲಹೆ ನೀಡಿದರು.

ಗುರುವಾರ ಜಿಲ್ಲಾ ಪಂಚಾಯತ್ ಉಡುಪಿ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ವತಿಯಿಂದ ಕೂಸಮ್ಮ ಶಂಭು ಶೆಟ್ಟಿ ಮೆಮೋರಿಯಲ್ ಹಾಜಿ ಅಬ್ದುಲ್ಲಾ ಸರಕಾರಿ ತಾಯಿ ಮಕ್ಕಳ ಆಸ್ಪತ್ರೆಯಲ್ಲಿ ಆಯೋಜಿಸಲಾದ ಜಿಲ್ಲಾ ಮಟ್ಟದ ನ್ಯುಮೊಕೋಕಲ್ ಲಸಿಕೆ ನೀಡಿಕೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.

ನ್ಯುಮೊಕೋಕಲ್ ಲಸಿಕೆಯನ್ನು ಪ್ರಸ್ತುತ ಸಾರ್ವತ್ರಿಕ ಲಸಿಕೆ ಕಾರ್ಯಕ್ರಮವಾಗಿ ಪ್ರಾರಂಭಿಸಲಾಗಿದೆ. ಮಕ್ಕಳು ಹುಟ್ಟಿದ ಮೊದಲನೇ ವರ್ಷದಲ್ಲಿ ಗಂಭೀರ ನ್ಯುಮೊಕೋಕಲ್ ಕಾಯಿಲೆ ಉಂಟಾಗುವ ಸಾಧ್ಯತೆಗಳು ಅಧಿಕವಾಗಿದ್ದು, ಈ ಲಸಿಕೆಯನ್ನು 1.5 ತಿಂಗಳು, 3.5 ತಿಂಗಳು ಮತ್ತು 9ನೇ ತಿಂಗಳಲ್ಲಿ ಒಟ್ಟು 3 ಡೋಸ್ ಗಳಲ್ಲಿ ನೀಡಲಾಗುವುದು.

ಈ ಲಸಿಕೆ ಈ ಹಿಂದೆ ಖಾಸಗಿ ಆಸ್ಪತ್ರೆಗಳಲ್ಲಿ ಮಾತ್ರ ಲಭ್ಯವಿತ್ತು. ಪ್ರಸ್ತುತ ಎಲ್ಲಾ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ನೀಡಲಾಗುತ್ತಿದೆ. ಎಲ್ಲ ಪೋಷಕರು ತಮ್ಮ ಮಕ್ಕಳಿಗೆ ಲಸಿಕೆ ಕೊಡಿಸುವ ಮೂಲಕ ಮಕ್ಕಳನ್ನು ನ್ಯುಮೋನಿಯಾ ಮುಕ್ತ ಮಾಡಲು ಸರ್ಕಾರದೊಂದಿಗೆ ಕೈಜೋಡಿಸುವಂತೆ ವಿನಂತಿಸಿದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ, ನ್ಯುಮೊಕೋಕಲ್ ಲಸಿಕೆಯಿಂದ ಯಾವುದೇ ಅಡ್ಡಪರಿಣಾಮಗಳಿಲ್ಲ. ಎಲ್ಲಾ ಪೋಷಕರು ತಮ್ಮ ಮಕ್ಕಳಿಗೆ ಈ ಲಸಿಕೆಯನ್ನು ಕೊಡಿಸಬೇಕು. ಜಿಲ್ಲೆಯಲ್ಲಿ ನವೆಂಬರ್ ತಿಂಗಳಲ್ಲಿ 1,150 ಮಕ್ಕಳಿಗೆ ನ್ಯುಮೊಕೋಕಲ್ ಲಸಿಕೆ ನೀಡುವ ಗುರಿ ಹೊಂದಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ಮಕ್ಕಳ ತಜ್ಞರಾದ ಡಾ. ಸ್ವರ್ಣಲತಾ ಮತ್ತು ಡಾ. ಗುರುಪ್ರಸಾದ್, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ, ಡಾ. ರಾಮ ರಾವ್, ರೋಟರಿಯ ಐ. ಕೆ. ಜಯಚಂದ್ರ ಮೊದಲಾದವರಿದ್ದರು.

ಜಿಲ್ಲಾ ಆರ್.ಸಿ.ಎಚ್. ಅಧಿಕಾರಿ ಡಾ. ಎಂ. ಜಿ. ರಾಮ ಸ್ವಾಗತಿಸಿ, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್ ವಂದಿಸಿದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!