Wednesday, July 6, 2022
Home ಲೋಕಾಭಿರಾಮ ಆರಂಬ ಕೃಷಿಕರೇ ಯೋಜನೆ ರೂಪಿಸಲು ಸಲಹೆ

ಕೃಷಿಕರೇ ಯೋಜನೆ ರೂಪಿಸಲು ಸಲಹೆ

ಸುದ್ದಿಕಿರಣ ವರದಿ
ಭಾನುವಾರ, ಮಾರ್ಚ್ 6

ಕೃಷಿಕರೇ ಯೋಜನೆ ರೂಪಿಸಲು ಸಲಹೆ
ಉಡುಪಿ: ಕೃಷಿಕರೇ ಯೋಜನೆಗಳನ್ನು ರೂಪಿಸಿ, ಅದನ್ನು ಅನುಷ್ಠಾನಗೊಳಿಸುವಂತೆ ಸರ್ಕಾರದ ಮೇಲೆ ಒತ್ತಡ ಹೇರುವ ಕೆಲಸವಾಗಬೇಕು ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ. ಜಯಪ್ರಕಾಶ್ ಹೆಗ್ಡೆ ಹೇಳಿದರು.

ಭಾನುವಾರ ಕುಂಜಿಬೆಟ್ಟು ಶ್ರೀ ಶಾರದಾ ಮಂಟಪ ಆವರಣದಲ್ಲಿ ಜಿಲ್ಲಾ ಕೃಷಿಕ ಸಂಘದ ವತಿಯಿಂದ ನಡೆದ ಜಿಲ್ಲಾ ರೈತ ಸಮಾವೇಶ ಉದ್ಘಾಟಿಸಿ ಮಾತನಾಡಿದರು.

ಸಾವಯವ ಕೃಷಿಯಿಂದ ಭೂಮಿಯ ಫಲವತ್ತತೆ ಹೆಚ್ಚುವುದರಿಂದ ಹೆಚ್ಚಿನ ರೈತರು ಆ ವಿಧಾನ ಅನುಸರಿಸಲು ಪ್ರಾರಂಭಿಸಿದ್ದಾರೆ. ರೈತರೇ ಅದನ್ನು ಜನಪ್ರಿಯಗೊಳಿಸಿದ ಬಳಿಕ ಸರ್ಕಾರ ಸಾವಯವ ಕೃಷಿಗೆ ಪ್ರೋತ್ಸಾಹ ನೀಡಲು ಪ್ರಾರಂಭಿಸಿತು ಎಂದವರು ಉದಾಹರಿಸಿದರು.

ರೈತರಿಗೆ ಮೂಲ ಸೌಲಭ್ಯ ಕಲ್ಪಿಸುವುದು ಸರ್ಕಾರದ ಕರ್ತವ್ಯ. ಮುಖ್ಯವಾಗಿ ನೀರು, ಸ್ಥಳೀಯ ಮಾರುಕಟ್ಟೆ, ಉತ್ತಮ ಸಂಪರ್ಕ ರಸ್ತೆ ಒದಗಿಸಬೇಕು. ಜೊತೆಗೆ ರೈತರಿಗೆ ತಮ್ಮ ವಸ್ತುಗಳನ್ನು ಮಾರಾಟ ಮಾಡಲು ಸೂಕ್ತ ಜಾಗ ನಿಗದಿ ಮಾಡಬೇಕು ಎಂದರು.

ಇಳುವರಿ ಸಮಯದಲ್ಲೇ ಸರ್ಕಾರ ಬೆಂಬಲ ಬೆಲೆ ಘೋಷಿಸಬೇಕು. ಸರ್ಕಾರ ದರ ನಿಗದಿ ಮಾಡಿದಾಗ ಮಾರುಕಟ್ಟೆಯಲ್ಲಿ ಎಂ.ಆರ್.ಪಿ ರೀತಿಯಲ್ಲಿ ರೈತರಿಗೆ ಪ್ರಯೋಜನಕ್ಕೆ ಬರಲಿದೆ ಎಂದರು.

ಬ್ರಹ್ಮಾವರ ಸಕ್ಕರೆ ಕಾರ್ಖಾನೆ ನಡೆಸುವುದು ಕಷ್ಟ
ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಮತ್ತೆ ಪ್ರಾರಂಭವಾಗುವ ಯಾವುದೇ ಭರವಸೆಯಿಲ್ಲ. ಕಾರಣ ಕಬ್ಬು ಬೆಳೆಯುತ್ತಿದ್ದ ಸ್ಥಳೀಯ ರೈತರು ಪ್ರಸ್ತುತ ವಾಣಿಜ್ಯ ಬೆಳೆಗಳತ್ತ ಮುಖಮಾಡಿದ್ದಾರೆ. ಹಾಗಾಗಿ ಶಿವಮೊಗ್ಗ ಸೇರಿದಂತೆ ಹೊರ ಜಿಲ್ಲೆಯಿಂದ ಕಬ್ಬು ತರಿಸಿಕೊಂಡು ಸಕ್ಕರೆ ಉತ್ಪಾದಿಸುವುದು ಲಾಭದಾಯಕವಲ್ಲ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದರು.

ಮುಖ್ಯ ಅತಿಥಿಗಳಾಗಿ ಶಾಸಕ ಕೆ. ರಘುಪತಿ ಭಟ್, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಕರ್ಣಾಟಕ ಬ್ಯಾಂಕ್ ಪ್ರಾದೇಶಿಕ ಕಚೇರಿ ಎಜಿಎಂ ರಾಜಗೋಪಾಲ ಎಸ್., ಉದ್ಯಮಿ ಮಂಜುನಾಥ ಉಪಾಧ್ಯ ಆಗಮಿಸಿದ್ದರು.

ಜಿಲ್ಲಾ ಕೃಷಿಕ ಸಂಘದ ಅಧ್ಯಕ್ಷ ರಾಮಕೃಷ್ಣ ಶರ್ಮ ಬಂಟಕಲ್ಲು ಅಧ್ಯಕ್ಷತೆ ವಹಿಸಿದ್ದರು. ಶಂಕರ ಸುವರ್ಣ ರೈತ ಗೀತೆ ಹಾಡಿದರು. ಉಪಾಧ್ಯಕ್ಷ ಶ್ರೀನಿವಾಸ ಬಲ್ಲಾಳ್ ಮಲ್ಲಂಪಳ್ಳಿ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ಭಟ್ ಕುದಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಕಾರ್ಯದರ್ಶಿ ರವೀಂದ್ರ ಪೂಜಾರಿ ಗುಜ್ಜರಬೆಟ್ಟು ನಿರೂಪಿಸಿದರು.

ವೈಜ್ಞಾನಿಕ ಕೃಷಿ ಮಾಡುತ್ತಿರುವ 24 ಮಂದಿ ಕೃಷಿಕರನ್ನು ಸಮ್ಮಾನಿಸಲಾಯಿತು.

20ಕ್ಕೂ ಅಧಿಕ ಮಳಿಗೆಗಳಲ್ಲಿ ಕೃಷಿ ಉತ್ಪನ್ನ ಹಾಗೂ ಯಂತ್ರೋಪಕರಣ ಪ್ರದರ್ಶನ ಮತ್ತು ಮಾರಾಟ ಮೇಳ ನಡೆಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!