Wednesday, July 6, 2022
Home ಲೋಕಾಭಿರಾಮ ಆರಂಬ ಮನೆಯಾಗಿದೆ ನರ್ಸರಿ: ಪುಷ್ಪ ಪ್ರೇಮ ಮೆರೆಯುತ್ತಿರುವ ಉರಿಯಲ್ ಸೋನ್ಸ್

ಮನೆಯಾಗಿದೆ ನರ್ಸರಿ: ಪುಷ್ಪ ಪ್ರೇಮ ಮೆರೆಯುತ್ತಿರುವ ಉರಿಯಲ್ ಸೋನ್ಸ್

ಮನೆಯಾಗಿದೆ ನರ್ಸರಿ: ಪುಷ್ಪ ಪ್ರೇಮ ಮೆರೆಯುತ್ತಿರುವ ಉರಿಯಲ್ ಸೋನ್ಸ್

(ಸುದ್ದಿಕಿರಣ ವರದಿ)
ಉಡುಪಿ: ಈ ಮನೆಯ ಸುತ್ತಮುತ್ತ ನೋಡಿದರೆ, ವಿವಿಧ ಹೂಗಿಡಗಳ ಸೌಂದರ್ಯ. ಒಂದಕ್ಕಿಂತ ಇನ್ನೊಂದು ವಿಭಿನ್ನ ಶೈಲಿಯ ಸಸ್ಯ ಪ್ರಬೇಧಗಳು… ಕಣ್ಣು ಹಾಯಿಸಿದಲ್ಲೆಲ್ಲಾ ಕಾಣುವುದು ಹೂಗಿಡಗಳೇ..

ಮನೆಯೇ ದೇವಾಲಯ ಎಂಬ ಮಾತಿದೆ. ಆದರೆ, ಇಲ್ಲಿ ಮನೆಯೇ ಪುಷ್ಪಾಲಯವಾಗಿದೆ. ಮನೆಯ ಸುತ್ತ ಒಂದಿಂಚೂ ಜಾಗ ಬಿಡದೇ ವಿವಿಧ ಹೂ ಗಿಡಗಳನ್ನು ಬೆಳೆಸಲಾಗಿದೆ.

ಇಂಥ ದೃಶ್ಯ ಕಂಡುಬಂದಿರುವುದು ಉಡುಪಿ ಚಂದು ಮೈದಾನ ಬಳಿ.

ಅಲ್ಲಿನ ನಿವಾಸಿ ಉರಿಯಲ್ ಸೋನ್ಸ್, ಕಳೆದ 20 ವರ್ಷದಿಂದ ವಿವಿಧ ಜಾತಿಯ ಗಿಡಗಳನ್ನು ಮನೆಯ ಸುತ್ತಮುತ್ತ ಬೆಳೆಸಿ ಮನೆಯನ್ನೇ ನರ್ಸರಿ ಮಾಡಿಕೊಂಡಿದ್ದಾರೆ. ಅವರ ಈ ನರ್ಸರಿ ಪ್ರೇಮಕ್ಕೆ ತಾಯಿಯೇ ಪ್ರೇರಣೆಯಂತೆ! ಅದಕ್ಕಾಗಿಯೇ ತಾಯಿ ನಂದಾ ಸೋನ್ಸ್ ಹೆಸರಿನಲ್ಲಿ ನಂದಾ ನರ್ಸರಿ ಆರಂಭಿಸಿದ್ದಾರೆ.

5 ಸಾವಿರಕ್ಕೂ ಅಧಿಕ ಹೂಗಿಡಗಳು!
ಮನೆಯ ಸುತ್ತ ಸುಮಾರು 12 ಸೆಂಟ್ಸ್ ಜಾಗದಲ್ಲಿ 5 ಸಾವಿರಕ್ಕೂ ಅಧಿಕ ಹೂಗಿಡಗಳನ್ನು ಅವರು ಬೆಳೆದಿದ್ದು, ಅಲ್ಲಿನ ಸಸ್ಯಗಳಿಗೆ ಭಾರೀ ಡಿಮ್ಯಾಂಡ್ ಇದೆ.

ಮೊದಲು ಹವ್ಯಾಸಕ್ಕೆಂದು ಆರಂಭಿಸಿದ್ದ ಗಿಡ ಬೆಳೆಸುವ ಕಾರ್ಯ, ಇದೀಗ ನರ್ಸರಿ ರೂಪ ಪಡೆದಿದೆ. ದೂರ ದೂರದಿಂದ ಜನರು ಬಂದು ಇಲ್ಲಿನ ಗಿಡಗಳನ್ನು ಕೊಂಡುಹೋಗುತ್ತಿದ್ದಾರೆ. ಅದಕ್ಕೆ ಕಾರಣ ಅವರು ಹೂವಿನ ಗಿಡಗಳನ್ನು ಬೆಳೆಸಿದ ರೀತಿ.

ಸೋನ್ಸ್ ಅವರೇ ಮನೆಯಲ್ಲಿ ಸಿದ್ಧಪಡಿಸುವ ಗೊಬ್ಬರ ಹಾಗೂ ಮಣ್ಣನ್ನು ಗಿಡಗಳಿಗೆ ಬಳಸುತ್ತಿದ್ದು, ಇತರ ನರ್ಸರಿಗಳಿಗಿಂತ ವಿಭಿನ್ನ ರೀತಿಯಲ್ಲಿ ಅವರು ಗಿಡಗಳನ್ನು ಬೆಳೆಸುತ್ತಾರೆ. ಯಾವುದೇ ರಾಸಾಯನಿಕಗಳನ್ನು ಬಳಸದೇ ನೈಸರ್ಗಿಕವಾಗಿ ಗಿಡಗಳನ್ನು ಬೆಳೆಸಲಾಗುತ್ತಿದ್ದು, ಗಿಡಗಳನ್ನು ಖರೀದಿಸಿದವರು ಸಂತಸಪಟ್ಟುಕೊಳ್ಳುತ್ತಿದ್ದಾರೆ.

ಗಿಡಗಳನ್ನು ಕಡಿಮೆ ಬೆಲೆಗೆ ನೀಡುತ್ತಿರುವ ಉರಿಯಲ್ ಸೋನ್ಸ್, ಗಿಡಗಳ ಪೋಷಣೆಯ ಬಗ್ಗೆಯೂ ಗ್ರಾಹಕರಿಗೆ ಮಾಹಿತಿ ನೀಡುತ್ತಾರೆ.

ಉರಿಯಲ್ ಸೋನ್ಸ್ ಮುಂಬೈಯಲ್ಲಿ ವಾಸವಾಗಿದ್ದವರು. ಮುಂಬೈಯಲ್ಲಿ ಇಂಜಿನಿಯರಿಂಗ್ ಕಂಪೆನಿ ಆರಂಭಿಸಿದ್ದರೂ ಗಿಡಗಳ ಮೇಲಿನ ಪ್ರೀತಿ ಕಡಿಮೆಯಾಗಿರಲಿಲ್ಲ. ಅಲ್ಲಿಯೇ ನರ್ಸರಿ ಆರಂಭಿಸಿ ಪ್ರಕೃತಿ ಪ್ರೇಮ ಮೆರೆದಿದ್ದರು.

ಆದರೆ ಹೃದ್ರೋಗಪೀಡಿತರಾದ ಬಳಿಕ ಇಂಜಿನಿಯರಿಂಗ್ ಕಂಪೆನಿ ಬಿಟ್ಟು, ಉಡುಪಿಗೆ ಬಂದು ಇಲ್ಲಿನ ಚಂದು ಮೈದಾನದಲ್ಲಿ ನೆಲೆಸಿದ್ದಾರೆ. ಇಲ್ಲಿ ಮತ್ತೆ ಅವರ ಹೂ ಗಿಡಗಳ ಮೇಲಿನ ಪ್ರೀತಿ ಚಿಗುರಿದ್ದು, ಅದಕ್ಕಾಗಿಯೇ ಮನೆಯ ಸುತ್ತಮುತ್ತ ನಂದಾ ನರ್ಸರಿ ಆರಂಭಿಸಿ, ಗಿಡ ಬೆಳೆಸುವ ಮೂಲಕ ಪರಿಸರ ಪ್ರೇಮ ಮೆರೆಯುತ್ತಿದ್ದಾರೆ.

ನಂದಾ ನರ್ಸರಿಯಲ್ಲಿ ವಿವಿಧ ಜಾತಿಯ 5 ಸಾವಿರಕ್ಕೂ ಅಧಿಕ ಹೂ ಗಿಡಗಳಿವೆ. ತರಕಾರಿ ತೋಟ ಇದೆ. ಆಫೀಸ್, ಕಚೇರಿಗಳಳೊಳಗೆ ಇಡುವ ಗಿಡಗಳು, ಹೊರಾಂಗಣದಲ್ಲಿ ಬೆಳೆಸುವ ಹೂವಿನ ಗಿಡಗಳಿದ್ದು ಹೊಸ ಹೊಸ ಜಾತಿಯ ಗಿಡಗಳಿದ್ದರೆ ಅದನ್ನು ತಂದು ಬೆಳೆಸುತ್ತಿದ್ದಾರೆ.

ಉರಿಯಲ್ ಸೋನ್ಸ್ ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದರೂ ಆಸಕ್ತಿಗೆ ಅನಾರೋಗ್ಯ ಅಡ್ಡಿಯಾಗದು ಎಂಬುದಕ್ಕೆ ಉದಾಹರಣೆಯಾಗಿದ್ದಾರೆ. ಸಾಧನೆಗೆ ವಯಸ್ಸು ಅಡ್ಡಿಯಾಗದು ಎಂಬ ಮಾತಿಗೆ ಪುಷ್ಟಿ ನೀಡುವ ಮೂಲಕ ಮನೆಯಲ್ಲೂ ನರ್ಸರಿ ಮಾಡಬಹುದು ಎಂಬುದನ್ನು ಸಾಧಿಸಿ ತೋರಿಸಿದ್ದಾರೆ ಉರಿಯಲ್ ಸೋನ್ಸ್.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!