Sunday, July 3, 2022
Home ಲೋಕಾಭಿರಾಮ ಆರಂಬ ಹಲಸು ಮೇಳಕ್ಕೆ ಚಾಲನೆ

ಹಲಸು ಮೇಳಕ್ಕೆ ಚಾಲನೆ

ಸುದ್ದಿಕಿರಣ ವರದಿ
ಶುಕ್ರವಾರ, ಜೂನ್ 17

ಹಲಸು ಮೇಳಕ್ಕೆ ಚಾಲನೆ
ಉಡುಪಿ: ಹಲಸು ಬೆಳೆಗಾರರು ಗ್ರಾಹಕರಿಗೆ ನೇರವಾಗಿ ತಾವು ಬೆಳೆದ ಉತ್ಪನ್ನಗಳನ್ನು ಮಾರಾಟ ಮಾಡಿ ಲಾಭ ಪಡೆಯಲು ಹಲಸು ಮೇಳ ಹೆಚ್ಚಿನ ಪ್ರಯೋಜನಕಾರಿಯಾಗಲಿದೆ ಎಂದು ನಗರಸಭೆ ಅಧ್ಯಕ್ಷೆ ಸುಮಿತ್ರಾ ಎಸ್. ನಾಯಕ್ ಹೇಳಿದರು.

ಶುಕ್ರವಾರ ದೊಡ್ಡಣಗುಡ್ಡೆ ಶಿವಳ್ಳಿ ಮಾದರಿ ತೋಟಗಾರಿಕೆ ಕ್ಷೇತ್ರದ ರೈತ ಸೇವಾ ಕೇಂದ್ರದಲ್ಲಿ ನಡೆದ ಹಲಸು ಮತ್ತು ಜೇನು ಪ್ರದರ್ಶನ ಹಾಗೂ ಮಾರಾಟ ಮೇಳ ಉದ್ಘಾಟಿಸಿ ಮಾತನಾಡಿದರು.

ರೈತರು ತಾವು ಬೆಳೆದಂಥ ಹಲಸನ್ನು ಸಗಟು ಮಾರಾಟಗಾರರಿಗೆ ಅಲ್ಪ ಮೊತ್ತಕ್ಕೆ ಮಾರಾಟ ಮಾಡಿ ಆರ್ಥಿಕ ನಷ್ಟ ಹೊಂದುತ್ತಿದ್ದರು. ಅವರಿಗೆ ಅನುಕೂಲ ಮಾಡಿಕೊಡುವ ಉದ್ದೇಶದಿಂದ ಹಲಸು, ಮಾವು ಮತ್ತಿತರ ಉತ್ಪನ್ನಗಳ ಮೇಳಗಳನ್ನು ನಡೆಸಲಾಗುತ್ತಿದೆ. ರೈತ ಬಾಂಧವರು ಇಂಥ ಮೇಳಗಳ ಲಾಭ ಪಡೆದುಕೊಳ್ಳಬೇಕು ಎಂದರು.

ಮೇಳದಲ್ಲಿ ತೂಬುಗೆರೆ ಹಲಸು, ಚೇಳೂರು ಭಾಗದ ಚಂದ್ರ ಹಲಸು, ಕೆಂಪು ರುದ್ರಾಕ್ಷಿ ಹಲಸು, ಹಳದಿ ಹಲಸು, ಏಕಾದಶಿ ಹಲಸು, ಶಿವರಾತ್ರಿ ಹಲಸು ಜೊತೆಗೆ ಹಲಸಿನ ಹಣ್ಣಿನ ಪದಾರ್ಥಗಳಾದ ಹಪ್ಪಳ, ಹೋಳಿಗೆ, ಹಲಸಿನ ಕಡಬು, ಹಲಸಿನ ಕಾಯಿ ಕಬಾಬ್, ಹಲಸಿನ ಬೀಜದ ಬಿಸ್ಕೆಟ್ ಇತ್ಯಾದಿಗಳ ಮಾರಾಟವಿತ್ತು.

ಕಲ್ಪರಸ ಹಾಗೂ ಅದರ ಉತ್ಪನ್ನಗಳು, ಜಿಲ್ಲೆಯ ಅಪರೂಪದ ಬೆಳೆಗಳಲ್ಲೊಂದಾದ ರಂಬೂಟಾನ್ ಹಣ್ಣು ಜೊತೆಗೆ ಶುದ್ಧ ಜೇನುತುಪ್ಪವೂ ಲಭ್ಯವಿತ್ತು.

ಜಿ. ಪಂ. ಸಿಇಓ ಪ್ರಸನ್ನ ಎಚ್. ಮಾತನಾಡಿ, ಸರ್ಕಾರ ಹಲಸು ಬೆಳೆಗೆ ಪ್ರೋತ್ಸಾಹ ನೀಡಲು ಅನೇಕ ಯೋಜನೆಗಳನ್ನು ರೂಪಿಸಲು ಚಿಂತಿಸಿದೆ. ಅದರ ಭಾಗವಾಗಿ ಹಲಸು ಮೇಳವೂ ಒಂದಾಗಿದೆ.

ಸಾರ್ವಜನಿಕರು ತಮಗೆ ಇಷ್ಟವಾದ ನಮೂನೆಯ ಹಲಸನ್ನು ಮೇಳಗಳಲ್ಲಿ ಕಡಿಮೆ ದರದಲ್ಲಿ ಖರೀದಿಸಬಹುದು. ಮೇಳವು 2 ದಿನಗಳ ವರೆಗೆ ನಡೆಯಲಿದ್ದು, ರೈತರು ತಾವು ಬೆಳದ ಹಲಸನ್ನು ನೇರವಾಗಿ ಮಾರಾಟ ಮಾಡಲಿದ್ದಾರೆ ಎಂದರು.

ತೋಟಗಾರಿಕೆ ಇಲಾಖೆ ಉಪನಿರ್ದೇಶಕಿ ಭುವನೇಶ್ವರಿ, ಕೃಷಿ ಇಲಾಖೆ ಸಹಾಯಕ ನಿರ್ದೇಶಕ ನಿಧೀಶ್ ಹೊಳ್ಳ ಮೊದಲಾದವರಿದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!