Sunday, July 3, 2022
Home ಲೋಕಾಭಿರಾಮ ಇಂದಿನ ವಿದ್ಯಾರ್ಥಿಗಳಲ್ಲಿ ಕಾಡುತ್ತಿರುವ ತಾಳ್ಮೆಯ ಕೊರತೆ

ಇಂದಿನ ವಿದ್ಯಾರ್ಥಿಗಳಲ್ಲಿ ಕಾಡುತ್ತಿರುವ ತಾಳ್ಮೆಯ ಕೊರತೆ

ಇಂದಿನ ವಿದ್ಯಾರ್ಥಿಗಳಲ್ಲಿ ಕಾಡುತ್ತಿರುವ ತಾಳ್ಮೆಯ ಕೊರತೆ

(ಸುದ್ದಿಕಿರಣ ವರದಿ)
ಉದ್ಯಾವರ: ಇಂದಿನ ವಿದ್ಯಾರ್ಥಿಗಳು ಉತ್ತಮ ಅಂಕ ಗಳಿಸುತ್ತಾರೆ. ತಮ್ಮ ಮುಂದಿನ ಬದುಕು ಕಟ್ಟಿಕೊಳ್ಳಲು ಶಕ್ತರಾಗಿದ್ದಾರೆ. ಆದರೆ, ಕಷ್ಟ ಸಹಿಸುವ ಗುಣ ಬೆಳೆಸಿಕೊಳ್ಳುವುದಿಲ್ಲ. ಬದುಕಿನ ಸವಾಲು ಎದುರಿಸುವಲ್ಲಿ ಸೋಲುತ್ತಿದ್ದಾರೆ ಎಂದು ಉದ್ಯಾವರ ಪಶು ವೈದ್ಯಾಧಿಕಾರಿ ಡಾ. ಸಂದೀಪ್ ಶೆಟ್ಟಿ ಅಭಿಪ್ರಾಯ ವ್ಯಕ್ತಪಡಿಸಿದರು.

ಇಲ್ಲಿನ ಸಾಂಸ್ಕೃತಿಕ ಸಂಘಟನೆ ಉದ್ಯಾವರ ಫ್ರೆಂಡ್ಸ್ ಸರ್ಕಲ್ ಆಶ್ರಯದಲ್ಲಿ ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ಗ್ರಾಮದ 7ನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ಯು. ಪದ್ಮನಾಭ ಶೆಟ್ಟಿಗಾರ್ ಮತ್ತು ಕೆ. ಸದಾನಂದ ಕಾಂಚನ್, 10ನೇ ತರಗತಿಯ ಅರ್ಹ ವಿದ್ಯಾರ್ಥಿಗಳಿಗೆ ಟಿ. ವೈ. ಶಾಬುದ್ಧೀನ್ ಮತ್ತು ಪಿಯುಸಿ ಅರ್ಹ ವಿದ್ಯಾರ್ಥಿಗಳಿಗೆ ಐರಿನ್ ಮಿನೇಜಸ್ ಸ್ಮಾರಕ ವಿದ್ಯಾರ್ಥಿ ವೇತನ ವಿತರಿಸಿ ಮಾತನಾಡಿದರು.

ಯಾವುದೇ ವಿಷಯದ ಬಗ್ಗೆ ತಾಳ್ಮೆಯಿಂದ ಗ್ರಹಿಸುವ ಶಕ್ತಿ ವಿದ್ಯಾರ್ಥಿಗಳಲ್ಲಿಲ್ಲ. ಮಕ್ಕಳಿಗೆ ಗೆಲುವನ್ನು ಕಲಿಸಿದಂತೆ ಸೋಲುವುದನ್ನೂ ಕಲಿಸಬೇಕಾಗಿದೆ. ಆಗ ಮಾತ್ರ ಭವಿಷ್ಯದಲ್ಲಿ ಅವರು ಸದೃಢರಾಗಿ ಬದುಕಲು ಸಾಧ್ಯವಾಗುತ್ತದೆ ಎಂದರು.

ಹೆಚ್ಚುತ್ತಿರುವ ಗೇಲಿ ಟ್ರೆಂಡ್
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆ ನಿರ್ದೇಶಕ, ರಾಜ್ಯಸಭಾ ಸದಸ್ಯ ಆಸ್ಕರ್ ಫೆರ್ನಾಂಡಿಸ್ ಆಪ್ತ ಕಾರ್ಯದರ್ಶಿ ಉದ್ಯಾವರ ನಾಗೇಶ್ ಕುಮಾರ್, ಸುಮಾರು 200 ವರ್ಷ ಕಾಲ ದೇಶವನ್ನಾಳಿದ ಬ್ರಿಟೀಷರಿಂದ ನಮ್ಮ ದೇಶವನ್ನು ಬಿಡುಗಡೆ ಮಾಡಿ ಸ್ವಾತಂತ್ರ್ಯ ದೊರಕಿಸಿಕೊಟ್ಟ ಮಹಾ ನಾಯಕರ ಸಾಧನೆಯನ್ನು ನಾವು ಸ್ಮರಿಸಬೇಕಾಗಿದೆ.

ಆದರೆ, ಇಂದಿನ ಕ್ಷುಲ್ಲಕ ರಾಜಕೀಯ ಕಾರಣಗಳಿಗಾಗಿ ಅವರ ಸೇವೆ, ಬಲಿದಾನವನ್ನು ಲೆಕ್ಕಿಸದೆ ಅವರನ್ನು ಅವಮಾನಿಸುವ, ಗೇಲಿ ಮಾಡುವ ಟ್ರೆಂಡ್ ಜಾಸ್ತಿಯಾಗುತ್ತಿದೆ. ಅದಕ್ಕೆ ಕಾರಣ ನಮ್ಮಲ್ಲಿರುವ ಅಜ್ಞಾನ. ಈ ದೇಶದ ಸ್ವಾತಂತ್ರ್ಯಕ್ಕಾಗಿ ತಮ್ಮ ಬದುಕು ನಾಶಪಡಿಸಿಕೊಂಡ ಮಹನೀಯರ ಬದುಕನ್ನು ನಾವು ಅರಿತುಕೊಳ್ಳಬೇಕಾಗಿದೆ ಎಂದರು.

ಬದಲಾದ ರಾಷ್ಟ್ರಪ್ರೇಮ ವ್ಯಾಖ್ಯಾನ
ಇಂದು ದೇಶಪ್ರೇಮ ಎನ್ನವುದು ಬೇರೆಯೇ ವ್ಯಾಖ್ಯಾನಕ್ಕೊಳಗಾಗಿದೆ. ರಾಷ್ಟ್ರಧ್ವಜಕ್ಕೆ ಸೆಲ್ಯೂಟ್ ಹೊಡೆದು ಮೂರು ರಸ್ತೆ ಸೇರುವಲ್ಲಿ ಭಾರತ್ ಮಾತಾಕಿ ಜೈ ಎಂದರೆ ಅದು ರಾಷ್ಟ್ರ ಪ್ರೇಮ ಎಂದು ಸುಲಭವಾಗಿ ಕರೆಯಲಾಗುತ್ತಿದೆ. ಆದರೆ, ಅದರೊಂದಿಗೆ ನಮಗಿಂತ ಕೆಳಗಿನವರ ಬದುಕು ಸರಿಗಟ್ಟಲು ಅವರಿಗೆ ಕೈನೀಡುವುದೂ ರಾಷ್ಟ್ರಪ್ರೇಮ ಎಂಬುದನ್ನು ನಾವು ಮನಗಾಣಬೇಕು. ಈ ನಿಟ್ಟಿನಲ್ಲಿ ನಾವು ಆಲೋಚಿಸಿ ಕಾರ್ಯಪ್ರವೃತ್ತರಾದರೆ ಮಾತ್ರ ಭವ್ಯ ಭಾರತದ ಪರಂಪರೆ ಉಳಿಸಿಕೊಳ್ಳಲು ಸಾಧ್ಯ. ಇಲ್ಲವಾದಲ್ಲಿ ದೇಶದ ಭವಿಷ್ಯದ ಬಗ್ಗೆ ಆಲೋಚಿಸಲೂ ಸಾಧ್ಯವಿಲ್ಲ ಎಂದರು.

ಮುಖ್ಯ ಅತಿಥಿ, ಉದ್ಯಾವರ ಜಾಮಿಯಾ ಮಸೀದಿ ಅಧ್ಯಕ್ಷ ಅಬ್ದುಲ್ ಸತ್ತಾರ್ ಶುಭ ಹಾರೈಸಿದರು.

ಸಂಸ್ಥೆ ಅಧ್ಯಕ್ಷ ಶೇಖರ್ ಕೆ. ಕೋಟ್ಯಾನ್ ರಾಷ್ಟ್ರಧ್ವಜವರಳಿಸಿ, ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ರಿಯಾಜ್ ಪಳ್ಳಿ ವಂದಿಸಿದರು. ಮಾಜಿ ಅಧ್ಯಕ್ಷ ಅನೂಪ್ ಕುಮಾರ್ ನಿರೂಪಿಸಿದರು. ಇನ್ನೋರ್ವ ಮಾಜಿ ಅಧ್ಯಕ್ಷ ತಿಲಕ್ ರಾಜ್ ಸಾಲ್ಯಾನ್ ಫಲಾನುಭವಿ ವಿದ್ಯಾರ್ಥಿಗಳ ಹೆಸರು ವಾಚಿಸಿದರು.

ಈ ಸಂದರ್ಭದಲ್ಲಿ ಗ್ರಾಮದ 7ನೇ ತರಗತಿ, ಎಸ್.ಎಸ್.ಎಲ್.ಸಿ. ಮತ್ತು ದ್ವಿತೀಯ ಪಿ.ಯು.ಸಿ.ಯ ಅರ್ಹ ವಿದ್ಯಾರ್ಥಿಗಳಿಗೆ ಸುಮಾರು ಒಂದು ಲಕ್ಷ ರೂ. ವಿದ್ಯಾರ್ಥಿ ವೇತನ ವಿತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!