Saturday, July 2, 2022
Home ಲೋಕಾಭಿರಾಮ `ಗೆಲುವಿನ ಹೆಜ್ಜೆ' ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ

`ಗೆಲುವಿನ ಹೆಜ್ಜೆ’ ವಿದ್ಯಾರ್ಥಿಗಳಿಗೆ ಪ್ರೇರಣೆಯಾಗಲಿ

ಉಡುಪಿ: ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಎಸ್.ಎಸ್.ಎಲ್.ಸಿ ತರಗತಿಗಳು ಕೋವಿಡ್ ಕಾರಣದಿಂದಾಗಿ 7 ತಿಂಗಳು ವಿಳಂಬವಾಗಿ ಆರಂಭವಾಗಿದೆ. ಆದ್ದರಿಂದ ಎಲ್ಲಾ ವಿಷಯಗಳಿಗೆ ಸರಳ ಅಧ್ಯಯನ ಕ್ರಮ ಅನುಸರಿಸಿ ನಿಧಾನಗತಿಯ ವಿದ್ಯಾರ್ಥಿಗಳು ಓದಿ ಕಲಿತು ಪರೀಕ್ಷೆ ಪಾಸಾಗಲು ಯೋಗ್ಯವಾಗಿರುವ 280 ಪುಟಗಳ ಗೆಲುವಿನ ಹೆಜ್ಜೆ ಪುಸ್ತಕ ಸಿದ್ಧವಾಗಿದೆ ಎಂದು ಜಿಲ್ಲಾಧಿಕಾರಿ ಜಿ. ಜಗದೀಶ್ ಹೇಳಿದರು.

ಉಡುಪಿ ಸಾರ್ವಜನಿಕ ಶಿಕ್ಷಣ ಇಲಾಖೆ ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗಾಗಿ ಸಿದ್ಧಪಡಿಸಿದ `ಗೆಲುವಿನ ಹೆಜ್ಜೆ’ ಪುಸ್ತಕವನ್ನು ಸೋಮವಾರ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಅನಾವರಣಗೊಳಿಸಿ ಮಾತನಾಡಿದರು.

ಪುಸ್ತಕ ಮುದ್ರಣಕ್ಕೆ ನೆರವು ನೀಡಿದ ಅಂಬಲಪಾಡಿ ಜಿ. ಶಂಕರ್ ಫ್ಯಾಮಿಲಿ ಟ್ರಸ್ಟ್ ಪ್ರವರ್ತಕ ನಾಡೋಜ ಡಾ| ಜಿ. ಶಂಕರ್ 3 ಸಾವಿರ ಪ್ರತಿಗಳನ್ನು ಮುದ್ರಿಸಿ, ಮಕ್ಕಳ ಕಲಿಕೆಗಾಗಿ ನೀಡಿದ್ದು ಅವರಿಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು.

ಎಸ್.ಎಸ್.ಎಲ್.ಸಿ.ಯಲ್ಲಿ ನಿಧಾನ ಗತಿಯಲ್ಲಿರುವ ವಿದ್ಯಾರ್ಥಿಗಳಿಗೆ ಗೆಲುವಿನ ಹೆಜ್ಜೆ ಪುಸ್ತಕ ನೀಡಲಾಗುತ್ತದೆ. ಕಲಿಕೆಯಲ್ಲಿ ಹಿಂದಿರುವ ವಿದ್ಯಾರ್ಥಿಗಳನ್ನು ಮುಂದೆ ತರುವ ಪ್ರಯತ್ನ ಹಾಗೂ ಉತ್ತೀರ್ಣರಾಗಿಸುವುದು ಈ ಪುಸ್ತಕ ಪ್ರಕಟಣೆಯ ಉದ್ದೇಶ ಎಂದರು.

ಶಿಕ್ಷಕರು ಈ ಪುಸ್ತಕವನ್ನು ಸೀಮಿತ ವಿದ್ಯಾರ್ಥಿಗಳಿಗೆ ಮಾತ್ರ ಬಳಕೆ ಮಾಡಬೇಕು. ಪಿ.ಯು.ಸಿ ವಿದ್ಯಾರ್ಥಿಗಳಿಗೂ ಇದೇ ರೀತಿಯ ಪುಸ್ತಕ ಹೊರತರುವ ಪ್ರಯತ್ನ ಮಾಡಿದ್ದು, ಪುಸ್ತಕ ಮುದ್ರಣ ಹಂತದಲ್ಲಿದೆ. ಮುಂದಿನ ದಿನಗಳಲ್ಲಿ ಬಿಡುಗಡೆಗೊಳಿಸಲಾಗುತ್ತದೆ ಎಂದರು.

ನಾಡೋಜ ಡಾ| ಜಿ. ಶಂಕರ್ ಮಾತನಾಡಿ, ಬಡವರ ಮಕ್ಕಳಿಗೆ ಈ ಪುಸ್ತಕ ಪ್ರೇರಣೆಯಾಗಲಿ. ಅಲ್ಲದೆ, ಕಲಿಕೆಯಲ್ಲಿ ನಿಧಾನಗತಿಯಲ್ಲಿರುವ ಎಸ್.ಎಸ್.ಎಲ್.ಸಿ. ವಿದ್ಯಾರ್ಥಿಗಳಿಗೆ ಸಹಕಾರಿಯಾಗಲಿ. ಈ ಪುಸ್ತಕ ಮುಂದಿನ ಭವಿಷ್ಯದ ಮಕ್ಕಳಿಗೆ ಪ್ರೇರಣೆಯಾಗಲಿ ಎಂದು ಹಾರೈಸಿದರು.

ಈ ಸಂದರ್ಭದಲ್ಲಿ ಜಿ. ಶಂಕರ್ ಅವರನ್ನು ಸನ್ಮಾನಿಸಲಾಯಿತು.

ಡಿಡಿಪಿಐ ಎನ್. ಎಚ್. ನಾಗೂರ, ವೇದಮೂರ್ತಿ, ಜಿಲ್ಲಾ ಮಟ್ಟದ ವಿವಿಧ ಅಧಿಕಾರಿಗಳು, ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳು ಇದ್ದರು.

ಎಸ್.ಎಸ್.ಎಲ್.ಸಿ ವಿದ್ಯಾರ್ಥಿಗಳಿಗೆ ಗೆಲುವಿನ ಹೆಜ್ಜೆ ಪುಸ್ತಕ ವಿತರಿಸಲಾಯಿತು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!