Sunday, July 3, 2022
Home ಲೋಕಾಭಿರಾಮ `ಮಾಹೆ' ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮುಕ್ತ

`ಮಾಹೆ’ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮುಕ್ತ

`ಮಾಹೆ’ ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮುಕ್ತ

(ಸುದ್ದಿಕಿರಣ ವರದಿ)
ಮಣಿಪಾಲ: ಕೊರೊನಾ ಸವಾಲುಗಳ ನಡುವೆಯೂ ಅಗತ್ಯ ಸುರಕ್ಷತಾ ಕ್ರಮಗಳೊಂದಿಗೆ ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜುಕೇಶನ್ (ಮಾಹೆ) ಕ್ಯಾಂಪಸ್ ವಿದ್ಯಾರ್ಥಿಗಳಿಗೆ ಮುಕ್ತವಾಗುತ್ತಿದೆ. ಸರಕಾರಿ ನಿಯಮ ಪಾಲನೆಯೊಂದಿಗೆ ಆನ್ ಲೈನ್ ತರಗತಿಗಳ ಬದಲಿಗೆ ಶೀಘ್ರದಲ್ಲಿ ಆಫ್ ಲೈನ್ ತರಗತಿಗಳನ್ನು ಆರಂಭಿಸಲಾಗುವುದು ಎಂದು ಮಾಹೆ ಕುಲಪತಿ ಲೆಫ್ಟಿನಂಟ್ ಜನರಲ್ ಡಾ. ಎಂ. ಡಿ. ವೆಂಕಟೇಶ್ ತಿಳಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸರಕಾರ ಕಾಲೇಜುಗಳನ್ನು ತೆರೆಯಲು ಅನುಮತಿ ನೀಡಿದ್ದು, ಕೋವಿಡ್ ಮಾರ್ಗಸೂಚಿ ಅನುಸರಿಸಿ ತರಗತಿಗಳನ್ನು ಪ್ರಾರಂಭಿಸಲಾಗುತ್ತಿದೆ. ವಿದ್ಯಾರ್ಥಿಗಳು ಕನಿಷ್ಠ ಒಂದು ಡೋಸ್ ಕೋವಿಡ್ ಲಸಿಕೆ ಹಾಕಿಸಿಕೊಂಡಿರಲೇಬೇಕು ಹಾಗೂ 72 ಗಂಟೆ ಮೀರದ ಕೋವಿಡ್ ನೆಗೆಟಿವ್ ವರದಿಯನ್ನು ಕಡ್ಡಾಯವಾಗಿ ಸಲ್ಲಿಸಿ ಕ್ಯಾಂಪಸ್ ನೊಳಗೆ ಪ್ರವೇಶ ಪಡೆಯುವ ಸಂದರ್ಭ ಸಲ್ಲಿಸಬೇಕು.

ಮಹಾರಾಷ್ಟ್ರ ಮತ್ತು ಕೇರಳಗಳಿಂದಾಗಮಿಸುವ ವಿದ್ಯಾರ್ಥಿಗಳು ಒಂದು ವಾರ ಕಾಲ ಕ್ವಾರಂಟೈನ್ ನಲ್ಲಿರಬೇಕು ಎಂಬ ನಿಯಮ ಪಾಲಿಸಲಾಗುತ್ತಿದೆ ಎಂದು ಮಾಹಿತಿ ನೀಡಿದರು.

ರಾಷ್ಟ್ರೀಯ ಶಿಕ್ಷಣ ನೀತಿ ಅನುಷ್ಠಾನ
ದೇಶದ ಪ್ರತಿಷ್ಠಿತ ಖಾಸಗಿ ವಿಶ್ವವಿದ್ಯಾಲಯಗಳಲ್ಲಿ ಮಾಹೆ ಮುಂಚೂಣಿಯಲ್ಲಿದ್ದು, ಮುಂದಿನ ಐದು ವರ್ಷದಲ್ಲಿ ವಿಶ್ವದ ಅತ್ಯುತ್ತಮ ವಿಶ್ವವಿದ್ಯಾಲಯಗಳ ಪಟ್ಟಿಯಲ್ಲಿ ಸ್ಥಾನ ಪಡೆದುಕೊಳ್ಳಲು ಯೋಜನೆ ಸಿದ್ಧಪಡಿಸಲಾಗಿದೆ. ಅದರ ಭಾಗವಾಗಿ 2021- 22ನೇ ಸಾಲಿನಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿಯನ್ವಯ ಪಠ್ಯಕ್ರಮ ಹಾಗೂ ಹೊಸ ಕೋರ್ಸ್ ಗಳನ್ನು ಮಾಹೆ ಅನುಷ್ಠಾನಕ್ಕೆ ತರುತ್ತಿದೆ ಎಂದರು.

ರಾಷ್ಟ್ರೀಯ ಶಿಕ್ಷಣ ನೀತಿಯಲ್ಲಿರುವ ಅಂಶಗಳನ್ನು ಅಳವಡಿಸಿಕೊಳ್ಳಲು 6 ತಿಂಗಳಿಂದ ನಿರಂತರ ಶ್ರಮ ವಹಿಸಲಾಗಿದ್ದು ವಿದ್ಯಾರ್ಥಿಗಳ ಕೌಶಲ, ಆಸಕ್ತಿ, ಅಭಿರುಚಿಗೆ ಅನುಗುಣವಾದ ಕೋರ್ಸ್ ಗಳನ್ನು ಆರಂಭಿಸಲಾಗಿದೆ. ರಾಷ್ಟ್ರೀಯ ಶಿಕ್ಷಣ ನೀತಿ ದೇಶದ ಶಿಕ್ಷಣ ವ್ಯವಸ್ಥೆಯಲ್ಲಿ ಕ್ರಾಂತಿಕಾರಕ ಬದಲಾವಣೆ ತರಲಿದೆ ಎಂದವರು ಅಭಿಪ್ರಾಯಪಟ್ಟರು.

ವಿಶ್ವದ 220 ವಿಶ್ವವಿದ್ಯಾಲಯಗಳೊಂದಿಗೆ ಮಾಹೆ ಅಕಾಡೆಮಿಕ್ ಸಹಭಾಗಿತ್ವ ಹೊಂದಿದ್ದು ಸಂಶೋಧನೆ, ಹೊಸತನಕ್ಕೆ ಒತ್ತುನೀಡುತ್ತಿದೆ. ಕೋವಿಡ್ ಸಂದರ್ಭದಲ್ಲಿಯೂ ವರ್ಚ್ಯುವಲ್ ವೇದಿಕೆ ಮೂಲಕ ಅಂತಾರಾಷ್ಟ್ರೀಯ ಮಟ್ಟದ ಕಾರ್ಯಾಗಾರಗಳನ್ನು ಯಶಸ್ವಿಯಾಗಿ ಮಾಡಿದೆ. 400ಕ್ಕೂ ಹೆಚ್ಚು ಸಂಶೋಧನಾ ಬರಹಗಳನ್ನು ಪ್ರಕಟಿಸಿದೆ ಎಂದರು.

ಮೂಲ ಸೌಕರ್ಯ ಅಭಿವೃದ್ಧಿಗೆ 1,000 ಕೋಟಿ ಬಂಡವಾಳ ಹೂಡುತ್ತಿದ್ದು, ಟಾಟಾ ಗ್ರೂಪ್ ನೊಂದಿಗೆ ಒಪ್ಪಂದ ಮಾಡಿಕೊಂಡು ಮಾಹೆಯ ಉನ್ನತ ಶಿಕ್ಷಣ ಕ್ಷೇತ್ರ ವಿಸ್ತರಿಸಿಕೊಂಡಿದೆ. ಕೋವಿಡ್ ನಿಂದಾಗಿ ಬೋಧನಾ ಕ್ರಮವನ್ನು ಸಂಪೂರ್ಣವಾಗಿ ಡಿಜಿಟಲ್ ಗೆ ರೂಪಾಂತರಗೊಳಿಸಲಾಗಿದೆ ಎಂದರು.

ಮಾಹೆ ಸಹ ಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಕೋವಿಡ್ ಕಾರಣದಿಂದ ಮಣಿಪಾಲ ಗ್ರೂಪ್ ನ ಆದಾಯ ಗಣನೀಯವಾಗಿ ಇಳಿಕೆಯಾಗಿದ್ದರೂ ಸಿಬ್ಬಂದಿಗೆ ಪೂರ್ಣ ವೇತನ ನೀಡಲಾಗಿದೆ. ಜೊತೆಗೆ ಈ ವರ್ಷ ವೇತನವನ್ನೂ ಹೆಚ್ಚಳ ಮಾಡಲಾಗಿದೆ ಎಂದರು.

ಜಿಲ್ಲಾಡಳಿತದ ಮನವಿಯ ಮೇರೆಗೆ ಕಳೆದ ವರ್ಷ ಉಡುಪಿಯ ಡಾ. ಟಿ.ಎಂ.ಎ ಪೈ ಆಸ್ಪತ್ರೆಯನ್ನು ಕೋವಿಡ್ ಆಸ್ಪತ್ರೆಯನ್ನಾಗಿ ಪರಿವರ್ತಿಸಲಾಗಿತ್ತು. ಸದ್ಯ ಎಂಐಟಿ ಹಾಸ್ಟೆಲ್ ಕಟ್ಟಡವನ್ನು ಕೋವಿಡ್ ಕೇರ್ ಕೇಂದ್ರವನ್ನಾಗಿ ಮಾಡಲಾಗಿದೆ. ಕೋವಿಡ್ ನಿಯಂತ್ರಿಸಲು ಜಿಲ್ಲಾಡಳಿತಕ್ಕೆ ಮಾಹೆ ಅಗತ್ಯ ಸಹಕಾರ ನೀಡುತ್ತಿದೆ ಎಂದರು.

ಟ್ಯಾಪ್ಮಿ ವಿಲೀನ
ಮಾಹೆ ವಿ.ವಿ.ಯೊಂದಿಗೆ ಟ್ಯಾಪ್ಮಿ ವಿಲೀನವಾಗಿದ್ದು, ಮುಂದಿನ ವರ್ಷದಿಂದ ಟ್ಯಾಪ್ಮಿ ವಿದ್ಯಾರ್ಥಿಗಳು ಮಾಹೆ ಮೂಲಕ ಪ್ರವೇಶ ಪಡೆದುಕೊಳ್ಳಬೇಕು. ಅದರಿಂದ ಟ್ಯಾಪ್ಮಿ ಕಾರ್ಯಕ್ಷೇತ್ರ ವಿಸ್ತಾರಗೊಂಡಂತಾಗಿದೆ ಎಂದು ಬಲ್ಲಾಳ್ ಹೇಳಿದರು.

ಸುದ್ದಿಗೋಷ್ಠಿಯಲ್ಲಿ ಮಾಹೆ ರಿಜಿಸ್ಟ್ರಾರ್ ನಾರಾಯಣ ಸಭಾಹಿತ್, ಸಾರ್ವಜನಿಕ ಸಂಪರ್ಕ, ಮಾಧ್ಯಮ ಹಾಗೂ ಸಾಮಾಜಿಕ ಮಾಧ್ಯಮ ವಿಭಾಗದ ನಿರ್ದೇಶಕ ಎಸ್. ಪಿ. ಕಾರ್ ಇದ್ದರು.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!