Thursday, July 7, 2022
Home ಲೋಕಾಭಿರಾಮ ಆರೋಗ್ಯ ಪೋಲಿಯೊ ನಿರ್ಮೂಲನೆಗೆ ಸಹಕರಿಸಿ

ಪೋಲಿಯೊ ನಿರ್ಮೂಲನೆಗೆ ಸಹಕರಿಸಿ

ಸುದ್ದಿಕಿರಣ ವರದಿ
ಭಾನುವಾರ, ಫೆಬ್ರವರಿ 27

ಪೋಲಿಯೊ ನಿರ್ಮೂಲನೆಗೆ ಸಹಕರಿಸಿ
ಉಡುಪಿ: ಎಲ್ಲಾ ಪೋಷಕರು 5 ವರ್ಷದೊಳಗಿನ ತಮ್ಮ ಮಕ್ಕಳಿಗೆ ತಪ್ಪದೇ ಪೋಲಿಯೊ ಹನಿ ಹಾಕಿಸುವ ಮೂಲಕ ವಿಶ್ವದಿಂದ ಪೋಲಿಯೊ ನಿರ್ಮೂಲನೆ ಮಾಡಲು ಸಹಕರಿಸಬೇಕು ಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಮನವಿ ಮಾಡಿದರು.

ಇಲ್ಲಿನ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯಲ್ಲಿ ನಡೆದ ಪಲ್ಸ್ ಪೋಲಿಯೊ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಭಾರತದಲ್ಲಿ 2011ರಿಂದ ಪೋಲಿಯೊ ಪ್ರಕರಣ ಕಂಡುಬಂದಿಲ್ಲ. ಆದರೆ, ಪಕ್ಕದ ದೇಶದಲ್ಲಿ ಪೋಲಿಯೊ ಪ್ರಕರಣ ಕಂಡುಬಂದಿದ್ದು, ಆ ದೇಶಗಳಿಂದ ಆಗಮಿಸುವ ಪ್ರಯಾಣಿಕರ ಮೂಲಕ ಹರಡುವ ಸಾಧ್ಯತೆಗಳಿದೆ. ಆದ್ದರಿಂದ ಎಲ್ಲಾ ಪೋಷಕರು ತಮ್ಮ 5 ವರ್ಷದೊಳಗಿನ ಮಕ್ಕಳಿಗೆ ಲಸಿಕೆ ಹಾಕಿಸುವಂತೆ ತಿಳಿಸಿದ ಜಿಲ್ಲಾಧಿಕಾರಿ, ಇಡೀ ಜಗತ್ತಿನಿಂದ ಪೋಲಿಯೊ ನಿರ್ಮೂಲನೆ ಮಾಡಲು ಎಲ್ಲರೂ ಸಹಕರಿಸಬೇಕು ಎಂದರು.

ಜಿಲ್ಲೆಯಲ್ಲಿ ರಾಷ್ಟ್ರೀಯ ಪಲ್ಸ್ ಪೋಲಿಯೊ ಕಾರ್ಯಕ್ರಮದಲ್ಲಿ ಜಿಲ್ಲೆಯ 5 ವರ್ಷದೊಳಗಿನ 73,995 ಮಕ್ಕಳಿಗೆ ಪೋಲಿಯೊ ಹನಿ ನೀಡಲು ಗುರಿ ಹೊಂದಿದ್ದು, ಗ್ರಾಮೀಣ ಪ್ರದೇಶದಲ್ಲಿ 571 ಹಾಗೂ ನಗರ ಪ್ರದೇಶದಲ್ಲಿ 91 ಸೇರಿದಂತೆ ಒಟ್ಟು 662 ಲಸಿಕಾ ಕೇಂದ್ರ ಮತು 6 ಮೊಬೈಲ್ ಟೀಮ್ ಮತ್ತು 36 ಟ್ರಾನ್ಸಿಟ್ ಬೂತ್ ಗಳನ್ನು ತೆರೆಯಲಾಗಿದೆ. 2,794 ಲಸಿಕಾ ಸ್ವಯಂಸೇವಕರು ಮತ್ತು 125 ಮೇಲ್ವಿಚಾರಕರು ಹಾಗೂ ಆರೋಗ್ಯ ಇಲಾಖೆಯ ಎಲ್ಲಾ ಅಧಿಕಾರಿಗಳು ಮತ್ತು ಸಿಬ್ಬಂದಿಗಳು ಭಾಗವಹಿಸಿದ್ದು, ರೋಟರಿ ಹಾಗೂ ಇತರ ಸ್ವಯಂಸೇವಾ ಸಂಸ್ಥೆಗಳು ಅಗತ್ಯ ಸಹಕಾರ ನೀಡುತ್ತಿವೆ ಎಂದರು.

ಕಾರ್ಯಕ್ರಮದಲ್ಲಿ ಜಿಲ್ಲಾ ಆರ್.ಸಿ.ಎಚ್ ಅಧಿಕಾರಿ ಡಾ. ಎಂ.ಜಿ. ರಾಮ, ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಡುಪ, ಜಿಲ್ಲಾ ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್, ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಡಾ. ಸ್ವರ್ಣಲತಾ, ರೋಟರಿ ಅಧ್ಯಕ್ಷ ಸುರೇಶ್ ಶೆಣ್ಯೆ, ಐ. ಕೆ. ಜಯಚಂದ್ರ ಮೊದಲಾದವರಿದ್ದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಸ್ವಾಗತಿಸಿ, ಜಿಲ್ಲಾ ಸರ್ಜನ್ ಡಾ. ಮಧುಸೂದನ್ ನಾಯಕ್ ವಂದಿಸಿದರು.

96 ಶೇ. ಸಾಧನೆ
ಜಿಲ್ಲೆಯಲ್ಲಿ 96.06 ಶೇ. ಪೋಲಿಯೊ ಹನಿ ನೀಡಿಕೆಯ ಸಾಧನೆಯಾಗಿದೆ.

ತಾಲೂಕುವಾರು ವಿವರ ಇಂತಿದೆ. ಉಡುಪಿ 97.52 ಶೇ., ಕುಂದಾಪುರ 93.83 ಶೇ., ಕಾರ್ಕಳ 96.88 ಶೇ.

ಜಿಲ್ಲೆಯ 5 ವರ್ಷದೊಳಗಿನ 73,995 ಮಕ್ಕಳ ಪೈಕಿ 71,076 ಮಕ್ಕಳಿಗೆ ಹನಿ ನೀಡಲಾಯಿತು.

ಮನೆ ಮನೆ ಭೇಟಿ

ಇನ್ನೂ ಪೋಲಿಯೊ ಹನಿ ಪಡೆಯಲು ಬಾಕಿ ಉಳಿದ ಮಕ್ಕಳನ್ನು ಗುರುತಿಸಲು ಆರೋಗ್ಯ ಕಾರ್ಯಕರ್ತೆಯರು ನಗರ ಪ್ರದೇಶದಲ್ಲಿ ಫೆ. 28ರಿಂದ ಮಾ. 2ರ ವರೆಗೆ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಫೆ. 28 ಮತ್ತು ಮಾ. 1ರಂದು ಮನೆ ಮನೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ.

ಪೋಲಿಯೊ ಹನಿ ಪಡೆಯದ 5 ವರ್ಷದೊಳಗಿನ ಮಕ್ಕಳ ಪೋಷಕರು ಸಮೀಪದ ಆರೋಗ್ಯ ಕೇಂದ್ರದಲ್ಲಿ ತಮ್ಮ ಮಕ್ಕಳಿಗೆ ಪೋಲಿಯೊ ಹನಿ ಕೊಡಿಸುವಂತೆ ಮತ್ತು ಮನೆ ಮನೆ ಭೇಟಿ ನೀಡುವ ಆರೋಗ್ಯ ಕಾರ್ಯಕರ್ತೆಯರಿಗೆ ಅಗತ್ಯ ಸಹಕಾರ ನೀಡುವಂತೆ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ತಿಳಿಸಿದ್ದಾರೆ

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!