Wednesday, July 6, 2022
Home ಲೋಕಾಭಿರಾಮ ಆರೋಗ್ಯ ಆಹಾರದಲ್ಲಿ ರಾಸಾಯನಿಕಗಳ ಬಳಕೆಯಿಂದ ಅನಾರೋಗ್ಯ

ಆಹಾರದಲ್ಲಿ ರಾಸಾಯನಿಕಗಳ ಬಳಕೆಯಿಂದ ಅನಾರೋಗ್ಯ

ಸುದ್ದಿಕಿರಣ ವರದಿ
ಶನಿವಾರ, ಏಪ್ರಿಲ್ 23

ಆಹಾರದಲ್ಲಿ ರಾಸಾಯನಿಕಗಳ ಬಳಕೆಯಿಂದ ಅನಾರೋಗ್ಯ
ಉಡುಪಿ: ಪ್ರತಿನಿತ್ಯ ಉಪಯೋಗಿಸುವ ಆಹಾರದಲ್ಲಿ ರಾಸಾಯನಿಕ ವಸ್ತುಗಳ ಹೆಚ್ಚಿನ ಬಳಕೆಯಿಂದ ಕ್ಯಾನ್ಸರ್, ಕಿಡ್ನಿ ಸಮಸ್ಯೆಯಂಥ ಮಾರಕ ಕಾಯಿಲೆಗಳು ಕಂಡುಬರುತ್ತಿದ್ದು, ಸಾರ್ವಜನಿಕರು ತಮ್ಮ ಅರೋಗ್ಯದ ಕುರಿತಂತೆ ಹೆಚ್ಚಿನ ಕಾಳಜಿ ವಹಿಸಬೇಕು ಎಂದು ಕೇಂದ್ರ ಕೃಷಿ ಮತ್ತು ರೈತರ ಕಲ್ಯಾಣ ಖಾತೆ ರಾಜ್ಯ ಸಚಿವೆ ಹಾಗೂ ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಶನಿವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಖೆ, ಜಿಲ್ಲಾ ಆಸ್ಪತ್ರೆ ಉಡುಪಿ, ಜಿಲ್ಲಾ ಆಯುಷ್ ವಿಭಾಗ, ತಾಲೂಕು ಆರೋಗ್ಯಾಧಿಕಾರಿ ಕಚೇರಿ, ರೋಟರಿ ಮಿಡ್ ಟೌನ್, ರಾಷ್ಟ್ರೀಯ ಆರೋಗ್ಯ ಅಭಿಯಾನ, ಸ್ವಾತಂತ್ರ್ಯ ಅಮೃತ ಮಹೋತ್ಸವ ಅಂಗವಾಗಿ ಉಡುಪಿ ಜಿಲ್ಲಾಸ್ಪತ್ರೆ ಆವರಣದಲ್ಲಿ ನಡೆದ ಉಡುಪಿ ತಾಲೂಕು ಮಟ್ಟದ ಬೃಹತ್ ಆರೋಗ್ಯ ಮೇಳ ಉದ್ಘಾಟಿಸಿ ಮಾತನಾಡಿದರು.

ಕೂಡಲೇ ವೈದ್ಯರನ್ನು ಸಂಪರ್ಕಿಸಿ
ದೈನಂದಿನ ಬದುಕಿನ ಒತ್ತಡ ಹಾಗೂ ಬದಲಾದ ಜೀವನ ಶೈಲಿಯಿಂದ ಅನೇಕ ರೋಗಗಳು ಕಾಡುತ್ತಿದ್ದು, ರೋಗ ಲಕ್ಷಣಗಳು ಕಂಡ ಕೂಡಲೇ ವೈದ್ಯರನ್ನು ಸಂಪರ್ಕಿಸಿ ಅಗತ್ಯ ಚಿಕಿತ್ಸೆ ಪಡೆಯಬೇಕು.

ಸ್ವಾತಂತ್ರ್ಯದ ಅಮೃತ ಮಹೋತ್ಸವ ಅಂಗವಾಗಿ ದೇಶದಾದ್ಯಂತ ನಡೆಯುವ ಆರೋಗ್ಯ ಸಪ್ತಾಹ ಮೂಲಕ ಸಾರ್ವಜನಿಕರಿಗೆ ಆರೋಗ್ಯಕ್ಕೆ ಸಂಬಂಧಿಸಿದ ಎಲ್ಲಾ ವೈದ್ಯಕೀಯ ಸೇವೆಗಳನ್ನು ಒಂದೇ ಸೂರಿನಡಿ ನೀಡುವ ಉದ್ದೇಶದಿಂದ ಆರೋಗ್ಯ ಮೇಳ ಆಯೋಜಿಸಲಾಗಿದೆ.

ಕೇಂದ್ರ ಮತ್ತು ರಾಜ್ಯ ಸರ್ಕಾರದ ಎಲ್ಲಾ ಇಲಾಖೆಗಳು ಮತ್ತು ಅವುಗಳ ಯೋಜನೆಗಳು ಜನಸಾಮಾನ್ಯರಿಗೆ ತಲುಪಬೇಕು ಎನ್ನುವುದು ಪ್ರಧಾನಿ ಆಶಯ ಎಂದರು.

ಆಯುಷ್ಮಾನ್ ಆರೋಗ್ಯ ಕಾರ್ಡ್ ಯೋಜನೆ ಮೂಲಕ ನಿಗದಿತ ಆಸ್ಪತ್ರೆಗಳಲ್ಲಿ 5 ಲಕ್ಷ ರೂ. ವರೆಗೆ ಉಚಿತ ಚಿಕಿತ್ಸೆ ಪಡೆಯಬಹುದಾಗಿದ್ದು, ಸಾರ್ವಜನಿಕರು ಅದರ ಪ್ರಯೋಜನ ಪಡೆಯಬೇಕು. ಕೇಂದ್ರ ಸರ್ಕಾರ ಆಯುಷ್ ಚಿಕಿತ್ಸೆ ಬಗ್ಗೆಯೂ ಒತ್ತುನೀಡಿದೆ.

ಉಡುಪಿ ಜಿಲ್ಲೆಯ ವಿಕಲಚೇತನರಿಗೆ ಕೇಂದ್ರ ಸರ್ಕಾರದ ಎಲಿಮ್ಕೋ ವತಿಯಿಂದ ಉಚಿತ ಸಾಧನ ಸಲಕರಣೆ ವಿತರಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.

ಮೆಡಿಕಲ್ ಕಾಲೇಜು ಸ್ಥಾಪನೆ
ಅಧ್ಯಕ್ಷತೆ ವಹಿಸಿದ್ದ ಶಾಸಕ ರಘುಪತಿ ಭಟ್, ಉಡುಪಿಯಲ್ಲಿ 150 ಕೋಟಿ ರೂ. ವೆಚ್ಚದಲ್ಲಿ 250 ಹಾಸಿಗೆಗಳ ಸುಸಜ್ಜಿತ ಹೈಟೆಕ್ ಆಸ್ಪತ್ರೆ ನಿರ್ಮಾಣವಾಗುತ್ತಿದ್ದು, 200 ಹಾಸಿಗೆ ಸಾಮರ್ಥ್ಯದ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯನ್ನೂ ಸರ್ಕಾರದ ಸುಪರ್ದಿಗೆ ಪಡೆಯಲಾಗುತ್ತಿದೆ.

ಉಡುಪಿಯಲ್ಲಿ ಪಿಪಿಪಿ ಮಾದರಿಯಲ್ಲಿ ಮೆಡಿಕಲ್ ಕಾಲೇಜು ನಿರ್ಮಾಣ ಬಗ್ಗೆ ಡಿಪಿಆರ್ ತಯಾರಿ ನಡೆಯುತ್ತಿದೆ. ಡಿಪಿಆರ್ ಪೂರ್ಣಗೊಂಡ ನಂತರ ಜಿಲ್ಲೆಯ ಸಾರ್ವಜನಿಕರು ಮತ್ತು ಜನಪ್ರತಿನಿಧಿಗಳ ಸಭೆಯಲ್ಲಿ ಚರ್ಚಿಸಿ ಗ್ಲೋಬಲ್ ಟೆಂಡರ್ ಮೂಲಕ ನಿರ್ಮಾಣ ಕಾರ್ಯ ಕೈಗೊಳ್ಳಲಾಗುವುದು.

ಮೆಡಿಕಲ್ ಕಾಲೇಜು ಹಾಗೂ ಜಿಲ್ಲಾಸ್ಪತ್ರೆಯ ಮೂಲಕ ಜಿಲ್ಲೆಯ ಜನತೆಗೆ ಎಲ್ಲಾ ರೀತಿಯ ಉತ್ತಮ ಆರೋಗ್ಯ ಸೇವೆ ದೊರೆಯಲಿದೆ ಎಂದರು.

ಕರಾವಳಿ ಅಭಿವೃಧ್ದಿ ಅಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಮಟ್ಟಾರು ರತ್ನಾಕರ ಹೆಗ್ಡೆ, ನಗರಸಭೆ ಅಧ್ಯಕ್ಷೆ ಸುಮಿತ್ರಾ ನಾಯಕ್, ಸದಸ್ಯೆ ಲಕ್ಷ್ಮೀ ಭಟ್, ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ., ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ನವೀನ್ ಭಟ್, ಜಿಲ್ಲಾ ಸರ್ಜನ್ ಡಾ. ಮಧುಸೂದನ ನಾಯಕ್, ಜಿಲ್ಲಾ ಆಯುಷ್ ವೈದ್ಯಾಧಿಕಾರಿ ಡಾ. ಸತೀಶ್, ಸರಕಾರಿ ನೌಕರರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ಮೊದಲಾದವರಿದ್ದರು.

ವಿವಿಧ ಫಲಾನುಭವಿಗಳಿಗೆ ಆಯುಷ್ಮಾನ್ ಕಾರ್ಡ್ ಹಾಗೂ ಯು.ಡಿ.ಐ.ಡಿ. ವಿತರಿಸಲಾಯಿತು.

ಅರೋಗ್ಯ ಮೇಳದಲ್ಲಿ 20ಕ್ಕೂ ಅಧಿಕ ಉಚಿತ ವೈದ್ಯಕೀಯ ಸೇವೆ ಮತ್ತು ಯೋಜನೆಗಳ ಸೌಲಭ್ಯಗಳನ್ನು ಸಾರ್ವಜನಿಕರಿಗೆ ನೀಡಲಾಯಿತು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಾಗಭೂಷಣ ಉಡುಪ ಸ್ವಾಗತಿಸಿದರು. ಉಡುಪಿ ತಾಲೂಕು ಆರೋಗ್ಯಾಧಿಕಾರಿ ಡಾ. ವಾಸುದೇವ ಉಪಾಧ್ಯಾಯ ವಂದಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!