Wednesday, July 6, 2022
Home ಲೋಕಾಭಿರಾಮ ಭಾವತರಂಗ ಚಲನಚಿತ್ರ ಕ್ಷೇತ್ರದ ದಿಗ್ಗಜ ಗಿರೀಶ್ ಕಾಸರವಳ್ಳಿಯವರಿಗೆ ವಿಶ್ವಪ್ರಭಾ ಪುರಸ್ಕಾರದ ಗರಿ

ಚಲನಚಿತ್ರ ಕ್ಷೇತ್ರದ ದಿಗ್ಗಜ ಗಿರೀಶ್ ಕಾಸರವಳ್ಳಿಯವರಿಗೆ ವಿಶ್ವಪ್ರಭಾ ಪುರಸ್ಕಾರದ ಗರಿ

ಚಲನಚಿತ್ರ ಕ್ಷೇತ್ರದ ದಿಗ್ಗಜ ಗಿರೀಶ್ ಕಾಸರವಳ್ಳಿಯವರಿಗೆ ವಿಶ್ವಪ್ರಭಾ ಪುರಸ್ಕಾರದ ಗರಿ

ಹೆಮ್ಮೆಯ ಕನ್ನಡಿಗ, ಚಲನ ಚಿತ್ರೀಕರಣದ ಮೂಲಕ ನೆಲದ ಸೊಗಡನ್ನು ದಾಖಲಿಸಿದ ಸಂಸ್ಕೃತಿಪ್ರಿಯ ಡಾ| ಗಿರೀಶ ಕಾಸರವಳ್ಳಿ ಅವರಿಗೆ ಉಡುಪಿ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ನೀಡುವ 2022ನೇ ಸಾಲಿನ ಪ್ರತಿಷ್ಠಿತ ವಿಶ್ವಪ್ರಭಾ ಪುರಸ್ಕಾರ ಪ್ರಾಪ್ತವಾಗುತ್ತಿದೆ. ಈ ಸದವಸರದಲ್ಲಿ ರಾಜೇಶ್ ಭಟ್ ಪಣಿಯಾಡಿ ಅವರು ಕಾಸರವಳ್ಳಿಯವರನ್ನು ಪರಿಚಯಿಸಿದ್ದಾರೆ.

ಜನವರಿ 31ರಂದು ಉಡುಪಿ ಎಂಜಿಎಂ ಕಾಲೇಜು ಮುದ್ದಣ ಮಂಟಪದಲ್ಲಿ ನಡೆಯುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತಿದೆ.

ಡಾ| ಗಿರೀಶ್ ಕಾಸರವಳ್ಳಿ, ಕರುನಾಡಿನ ಕನ್ನಡಿಗ. ನಮ್ಮ ನೆಲ ಕಲೆ, ನುಡಿ ಹಾಗೂ ಸಂಸ್ಕೃತಿಯ ಸೊಗಡನ್ನು ಅರಿತು ಅದನ್ನು ಚಿತ್ರೀಕರಣದ ಮೂಲಕ ದಾಖಲೆಯಾಗಿಸಿಟ್ಟ ಶ್ರೇಷ್ಠ ಚಲನಚಿತ್ರ ನಿರ್ದೇಶಕ. ಅವರು ಮುಟ್ಟಿದ್ದೆಲ್ಲವೂ ಬೆಳ್ಳಿ, ಬಂಗಾರ!

ಗಿರೀಶ್ ಕಾಸರವಳ್ಳಿಯವರ ಬಯೋಗ್ರಫಿಯನ್ನು ಪುಸ್ತಕಗಳಿಂದ ಪುಟಗಳಿಗೆ ಬಟ್ಟಿ ಇಳಿಸಿ ಬರೆಯುವುದು, ಅದರಲ್ಲೂ ಪುಟಗಳಿಗೆ ಸೀಮಿತಗೊಳಿಸುವುದು ಸುಲಭ ಸಾಧ್ಯದ ಮಾತಲ್ಲ.

ಶಿವಮೊಗ್ಗ ಜಿಲ್ಲೆಯ ಗಿರಿವನಗಳ ತಾಣ ತೀರ್ಥಹಳ್ಳಿಯ ಸಮೀಪದ ಪುಟ್ಟ ಊರು ಕೆಸಲೂರು. ಅದೇ ಕಾಸರವಳ್ಳಿಯವರ ತವರೂರು. ಕಳೆದ ಡಿಸೆಂಬರ್ 3ರಿಂದ ಜೀವನ ಪಯಣದ 72ನೇ ಮೆಟ್ಟಿಲಿಗೆ ಪಾದಾಪರ್ಪಣೆ ಮಾಡಿದ್ದಾರೆ.

ಗಿರೀಶ್ ತನ್ನ ಪ್ರಾಥಮಿಕ ಹಾಗೂ ಪ್ರೌಢ ವಿದ್ಯಾಭ್ಯಾಸವನ್ನು ತನ್ನೂರು ಕೆಸಲೂರು ಹಾಗೂ ಕಮ್ಮರಡಿಯಲ್ಲಿ ಪೂರೈಸಿ, ಶಿವಮೊಗ್ಗದ ಸಹ್ಯಾದ್ರಿ ಕಾಲೇಜಿನಲ್ಲಿ ಪದವಿ ಶಿಕ್ಷಣ ಪಡೆದರು.

ಅವರ ತಾಯಿ ಲಕ್ಷ್ಮೀದೇವಿ, ತಂದೆ ಗಣೇಶ್ ರಾವ್. ಅವರು ಯಕ್ಷಗಾನ ಪ್ರೇಮಿಯೂ ಕಲಾವಿದರೂ ಹೌದು. ಜೊತೆಗೆ ಸ್ವಾತಂತ್ರ್ಯ ಸಮರದಲ್ಲಿ ತಾಯ್ನಾಡಿಗಾಗಿ ಸೇವೆಗೈದವರು.

ಹಾಗಾಗಿ ಬಾಲ್ಯದಿಂದಲೇ ಕಾಸರವಳ್ಳಿಯವರಿಗೆ ಸುತ್ತಲಿನ ಪರಿಸರ, ಜನಜೀವನ, ಕಲೆ, ಸಂಸ್ಕೃತಿ ಬಗ್ಗೆ ಒಂದಷ್ಟು ಒಲವು ಮೂಡತೊಡಗಿತ್ತು. ಬಾಲ್ಯದಲ್ಲಿ ಅವರ ಕನಸುಗಳಿಗೆ ಪ್ರೇರಕ ಶಕ್ತಿಯಾಗಿ ನಿಂತವರು ಕಾಲೇಜು ಜೀವನದ ಪ್ರೊ. ಜಿ. ಎಸ್.ಶಿವರುದ್ರಪ್ಪ ಹಾಗೂ ಶ್ರೇಷ್ಠ ನಟ, ನಾಟಕಕಾರ, ನೀನಾಸಂ ರಂಗಶಾಲೆಯ ಸಂಸ್ಥಾಪಕ ಮತ್ತು ಸಂಬಂಧಿ ಕೆ. ವಿ. ಸುಬ್ಬಣ್ಣ.

ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಮಣಿಪಾಲದ ಫಾರ್ಮೆಸಿ ಕಾಲೇಜಲ್ಲಿ ಬಿ-ಫಾರ್ಮಾಕ್ಕೆ ಸೇರ್ಪಡೆಗೊಂಡ ಸಂದರ್ಭದಲ್ಲಿ ಸಾಂಸ್ಕೃತಿಕ ರಂಗದ ಅವರ ಆಸಕ್ತಿಗೆ ಒಂದಷ್ಟು ಪುಷ್ಟಿ ದೊರೆತರೂ ತಾನು ಕಲಿಯಬೇಕಾದುದು ಇನ್ನೇನೋ ಇದೆ ಎಂದು ನೇರವಾಗಿ ಪುಣೆಯತ್ತ ಹೆಜ್ಜೆ ಹಾಕಿದರು. ಅಲ್ಲಿ ರಾಷ್ಟ್ರೀಯ ಚಲನಚಿತ್ರ ತರಬೇತಿ (FTII) ಸಂಸ್ಥೆಯ ನಿರ್ದೇಶನ ವಿಭಾಗದಲ್ಲಿ ಪರಿಣತಿ ಪಡೆದು ಚಿನ್ನದ ಪದಕದೊಂದಿಗೆ ಡಿಪ್ಲೊಮಾ ಮುಗಿಸಿದರು. ಆ ಪದವಿಗಾಗಿ ಅಂದು ರಚಿಸಿದ ಕಿರುಚಿತ್ರ ಅವಶೇಷ ಪ್ರಥಮ ಬಾರಿಗೆ ರಾಷ್ಟ್ರಪತಿ ಕೈಯಿಂದ ರಜತ ಕಮಲ ಪ್ರಶಸ್ತಿ ಪಡೆಯುವಂತಾಯಿತು.

ಆದರೆ, ಅವರಿಗೆ ಜೀವನದಲ್ಲಿ ಅದೃಷ್ಟದ ತಿರುವು ನೀಡಿದ ಅವರ ಪ್ರಥಮ ಚಲನಚಿತ್ರ ಘಟಶ್ರಾದ್ಧ. ತನ್ನ 28ನೇ ವರ್ಷದಲ್ಲಿ ರಾಷ್ಟ್ರಪತಿ ಕೈಯಿಂದ ಸ್ವರ್ಣ ಕಮಲ ಪ್ರಶಸ್ತಿ ಪಡೆದ ಅತಿ ಕಿರಿಯ ನಿರ್ದೇಶಕ ಎಂಬ ಹೆಗ್ಗಳಿಕೆಗೆ ಪಾತ್ರರಾದವರು ಗಿರೀಶ್ ಕಾಸರವಳ್ಳಿ.

ಭಾರತೀಯ ಸಿನೆಮಾದ 100 ವರ್ಷದ ಇತಿಹಾಸದಲ್ಲಿ ಮೂಡಿಬಂದ 20 ಶ್ರೇಷ್ಠ, ಅತ್ಯುತ್ತಮ ಚಿತ್ರಗಳಲ್ಲಿ ಇದೂ ಒಂದು. ಕಳೆದ 4 ದಶಕಗಳಲ್ಲಿ ಅವರಿಂದ ಜನ್ಮ ತಳೆದ 16 ಚಲನಚಿತ್ರಗಳ ಪೈಕಿ ಘಟಶ್ರಾದ್ಧದ ನಂತರ ತಬರನ ಕಥೆ, ತಾಯಿ ಸಾಹೇಬ ಮತ್ತು ದ್ವೀಪ ಚಿತ್ರಗಳು ಸ್ವರ್ಣ ಕಮಲ ರಾಷ್ಟ್ರ ಪ್ರಶಸ್ತಿ ಪಡೆದರೆ, ಇನ್ನುಳಿದ 7 ಚಿತ್ರಗಳು ರಜತ ಕಮಲ ಪ್ರಶಸ್ತಿ ತನ್ನದಾಗಿಸಿಕೊಂಡವು. 4 ಸ್ವರ್ಣ ಕಮಲ ಪ್ರಶಸ್ತಿ ಪಡೆದ ರಾಷ್ಟ್ರದ 4ನೇ ಶ್ರೇಷ್ಠ ನಿರ್ದೇಶಕ ಎಂಬ ಗೌರವವೂ ಕಾಸರವಳ್ಳಿ ಪಾಲಿಗಿದೆ.

ಗೃಹಭಂಗ ಎಂಬ ಟಿವಿ ಧಾರವಾಹಿ ಮತ್ತು ಕೆಲವು ಟೆಲಿ ಚಿತ್ರಗಳೂ ದಾಖಲೆಯನ್ನು ಬರೆದಿವೆ. ಒಟ್ಟಾರೆ ಅವರ 16 ಚಿತ್ರಗಳು ಈವರೆಗೆ 25ಕ್ಕೂ ಮಿಕ್ಕಿದ ರಾಷ್ಟ್ರೀಯ ಪ್ರಶಸ್ತಿ, 45ಕ್ಕೂ ಹೆಚ್ಚು ರಾಜ್ಯ ಪ್ರಶಸ್ತಿ ಹಾಗೂ 21ಕ್ಕೂ ಮಿಕ್ಕಿ ಅಂತಾರಾರಷ್ಟ್ರೀಯ ಪ್ರಶಸ್ತಿಗಳು ಅವರ ಬದ್ಧತೆ ಹಾಗೂ ವೃತ್ತಿ ನಿಷ್ಠೆಗೆ ಸಂದ ಗೌರವ.

ಕಾಸರವಳ್ಳಿ ಹಾಗೂ ಅವರ ಚಿತ್ರಗಳ ಬಗ್ಗೆ ಶಕ್ತಿ ಸೇನ್ ಗುಪ್ತಾ, ಜಾನ್ ವುಡ್, ಓ. ಪಿ. ಶ್ರೀವಾಸ್ತವರಂಥ ಲೇಖಕರು ಕೃತಿಗಳನ್ನು ರಚಿಸಿದ್ದಾರೆ.

ಮಾಸ್ಕೋ, ಐಸೋಲಾ, ಏಷ್ಯಾನ್ ಫೆಸಿಫಿಕ್, ಬಾರ್ಸಿಲೋನಾ, ಮೋಮಿ ಓಶ್ಯನ್ ಫಿಲ್ಮ್ ಫೆಸ್ಟಿವಲ್ ಗಳಲ್ಲಿ ಅವರ ಚಿತ್ರಗಳು ವಿವಿಧ ಪ್ರಶಸ್ತಿಗಳನ್ನು ತನ್ನ ಮುಡಿಗೇರಿಸಿಕೊಂಡಿವೆ. ಮನೆ, ಬಣ್ಣದ ವೇಷ, ಕ್ರೌರ್ಯ, ದ್ವೀಪ, ಹಸೀನಾ, ಗುಲಾಬಿ ಟಾಕೀಸ್, ಕೂರ್ಮಾವತಾರ ಇತ್ಯಾದಿ ಚಲನಚಿತ್ರಗಳು ಒಂದಲ್ಲ ಒಂದು ಪ್ರಶಸ್ತಿ ಗಿಟ್ಟಿಸಿಕೊಂಡು ತನ್ನ ಮೆರುಗನ್ನು ದೃಢಪಡಿಸಿಕೊಂಡಿವೆ.

ಕಾಸರವಳ್ಳಿಯವರು ಫಿಲ್ಮ್ ಸ್ಕೂಲ್ ಪ್ರಾಂಶುಪಾಲರಾಗಿ 8 ವರ್ಷ ಕಾರ್ಯನಿರ್ವಹಿಸಿದ್ದಾರೆ. ಚಿತ್ರ ಸಮೂಹದ ಸ್ಥಾಪಕ ಅಧ್ಯಕ್ಷರಾಗಿಯೂ ಕರ್ತವ್ಯ ನಿರ್ವಹಿಸಿದ್ದಾರೆ. ಪ್ರಸ್ತುತ ಕೆ. ಆರ್. ನಾರಾಯಣನ್ ಫಿಲ್ಮ್ ಇನ್ ಸ್ಟಿಟ್ಯೂಟ್ ಅಕಾಡೆಮಿ ಕೌನ್ಸಿಲ್ ನ ಚೇರ್ಮನ್ ಆಗಿ ವೃತ್ತಿ ಜೀವನ ನಡೆಸುತ್ತಿದ್ದಾರೆ.

2009ರಲ್ಲಿ ದಕ್ಷಿಣ ಏಷ್ಯಾ ಫೆಡರೇಶನ್ ಕ್ರಿಸ್ಟಲ್ ಗ್ಲೋಬ್ ಪ್ರಶಸ್ತಿ, 2011ರಲ್ಲಿ ಪ್ರತಿಷ್ಠಿತ ಪದ್ಮಶ್ರೀ ಪ್ರಶಸ್ತಿ, ಕುವೆಂಪು ವಿಶ್ವವಿದ್ಯಾಲಯ ನೀಡಿದ ಗೌರವ ಡಾಕ್ಟರೇಟ್, ಪುಟ್ಟಣ್ಣ ಕಣಗಾಲ್ ಪ್ರಶಸ್ತಿ, ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಇತ್ಯಾದಿ ಪ್ರಶಸ್ತಿ ಪುರಸ್ಕಾರಗಳು ಗಿರೀಶ್ ಸಾಧನೆಗೆ ಹಿಡಿದ ಕೈಗನ್ನಡಿ.

ಗಿರೀಶ್ ಕಾಸರವಳ್ಳಿಯವರ ಸಂಸಾರದ ಬಗ್ಗೆ ಹೇಳಬೇಕಾದರೆ, ಅವರ ಪತ್ನಿ ವೈಶಾಲಿ ಕಾಸರವಳ್ಳಿ ಕೂಡಾ ಸಮಾಜಕ್ಕೆ ಅನುಪಮ ಸೇವೆ ನೀಡಿದವರು. ಉತ್ತಮ ನಟಿ, ನಿರ್ದೇಶಕಿ, ಲೇಖಕಿ, ವಸ್ತ್ರವಿನ್ಯಾಸಕಿ ಹೀಗೆ ಬಹುಮುಖ ಪ್ರತಿಭೆಯ ಖನಿಯಾಗಿ ಮೆರೆದು ಮರೆಯಾದವರು.

ಇನ್ನು ಇಬ್ಬರು ಮಕ್ಕಳು ತಂದೆಯ ಪಾಲಿಗೆ ಮಿನುಗು ನಕ್ಷತ್ರಗಳು. ಚಲನ ಚಿತ್ರಕ್ಕೆ ಸಂಬಂಧಪಟ್ಟಂತೆ ಪದವಿ ಪಡೆದು ಹಲವಾರು ಚಿತ್ರಗಳು ಟಿ.ವಿ. ಧಾರವಾಹಿಗಳಲ್ಲಿ ಅಭಿನಯ, ಚಿತ್ರಕಥೆ, ವಸ್ತ್ರವಿನ್ಯಾಸ, ಲೇಖನ ಹೀಗೆ ತಂದೆ ತಾಯಿಯರ ಜಾಡು ಹಿಡಿದು ವೃತ್ತಿನಿರತರಾಗಿ ಶ್ರೇಷ್ಠತೆ ಸಂಪಾದಿಸಿಕೊಂಡಿರುವುದು ತಂದೆಗೂ ಹೆಮ್ಮೆಯ ವಿಷಯ.

ಹೀಗೆ ನಮ್ಮ ನಾಡು ನುಡಿ ಸಂಸ್ಕೃತಿಯನ್ನು ಎತ್ತಿಹಿಡಿದು ಚಲನಚಿತ್ರ ಕ್ಷೇತ್ರದಲ್ಲಿ ಕ್ರಾಂತಿ ಮೂಡಿಸಿದ, ಅಪಾರ ಕೊಡುಗೆ ನೀಡಿದ ರಾಷ್ಟ್ರದ ಶ್ರೇಷ್ಠ ನಿರ್ದೇಶಕರಲ್ಲೊಬ್ಬರಾದ, ಮೌಲ್ಯಯುತ ಚಲನಚಿತ್ರಗಳನ್ನು ಸಮಾಜಕ್ಕೆ ನೀಡಿದ ಗಿರೀಶ್ ಕಾಸರವಳ್ಳಿಯವರಿಗೆ ಸಂಸ್ಕೃತಿ ವಿಶ್ವ ಪ್ರತಿಷ್ಠಾನ ಉಡುಪಿ ತನ್ನ ಸಂಸ್ಕೃತಿ ಉತ್ಸವ ಸಂದರ್ಬದಲ್ಲಿ ಪ್ರಭಾ- ವಿಶ್ವನಾಥ ಶೆಣೈ ಪ್ರಾಯೋಜಿತ ಒಂದು ಲಕ್ಷ ರೂ. ಮೊತ್ತದೊಂದಿಗೆ ನೀಡುತ್ತಿರುವ ವಿಶ್ವ ಪ್ರಭಾ ಪುರಸ್ಕಾರ ಅತ್ಯಂತ ಉಚಿತವೂ, ಯೋಗ್ಯವೂ ಆಗಿದೆ.

ರಾಜೇಶ್ ಭಟ್ ಪಣಿಯಾಡಿ

 

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!