Wednesday, July 6, 2022
Home ಲೋಕಾಭಿರಾಮ ಭಾವತರಂಗ ಅಮ್ಮನ ಪ್ರೀತಿಗೆ ಮೈದಳೆಯಿತು ಗೋ ವಿಹಾರ

ಅಮ್ಮನ ಪ್ರೀತಿಗೆ ಮೈದಳೆಯಿತು ಗೋ ವಿಹಾರ

ಅಮ್ಮನ ಪ್ರೀತಿಗೆ ಮೈದಳೆಯಿತು ಗೋ ವಿಹಾರ

ಕಾಪು: ಮಾತೃದೇವೋ ಭವ ಎನ್ನುತ್ತದೆ ಸನಾತನ ಸಂಸ್ಕೃತಿ. ನವಮಾಸ ಹೊತ್ತು, ಹೆತ್ತು ಸಾಕಿ ಸಲಹುವ ತಾಯಿ ಪ್ರತ್ಯಕ್ಷ ದೇವತೆ.

ಸರ್ವ ಸಂಗ ಪರಿತ್ಯಾಗಿಗಳಾದ ಸಂತ ಮಹಂತರೂ ತಾಯಿಯನ್ನು ಆದರಿಸುತ್ತಾರೆ, ನಮಸ್ಕರಿಸುತ್ತಾರೆ.

ಮಗು- ತಾಯಿಯದು ಹೊಕ್ಕಳಬಳ್ಳಿಯ ಸಂಬಂಧ, ಅವಿನಾಭಾವ ಅನುಬಂಧ.

ತಾಯಿಯ ನಂತರ ಮಾತೆಯ ಸ್ಥಾನದಲ್ಲಿ ನಿಲ್ಲುವುದು ಗೋವು.

ತಾಯಿಯ ಎದೆಹಾಲನ್ನು ಕೆಲವೇ ಸಮಯದ ವರೆಗೆ ಮಾನವ ಕುಡಿಯಬಲ್ಲನಾದರೆ, ದನದ ಹಾಲನ್ನು ಜೀವನದುದ್ದಕ್ಕೂ ಸೇವಿಸಲು ಸಾಧ್ಯವಿದೆ. ಭೂಲೋಕದ ಪಂಚ ಅಮೃತಗಳಲ್ಲಿ ಹಾಲಿಗೆ ಮೊದಲ ಸ್ಥಾನ. ಅಂಥ ಅಮೃತ ಸದೃಶ ಹಾಲು ನೀಡುವ ಗೋವನ್ನು ಭಾರತೀಯರು ಮಾತೆ ಎಂದೇ ಗೌರವಿಸುತ್ತಾರೆ. ಗಾವೋ ವಿಶ್ವಸ್ಯ ಮಾತರಃ

ಅಮ್ಮ ಎಂಬ ಎರಡಕ್ಷರ ಪರಬ್ರಹ್ಮ ವಾಚಕ. ಮಗುವಿಗೆ ಸಂಸ್ಕಾರ ಕಲಿಸಿ, ಸಂಸ್ಕೃತಿ ತಿಳಿಸಿ ಉತ್ತಮ ವ್ಯಕ್ತಿತ್ವ ರೂಪಿಸುವ ದಿವ್ಯಶಕ್ತಿ. ಎಂದೇ ತಾಯಿಯೇ ಮೊದಲ ಗುರು.

ಮಗ, ತಾಯಿಯ ಪ್ರೀತಿಗಾಗಿ ಮಾಡುವ ಕಾರ್ಯ ದೇವಸಂಪ್ರೀತಿಯದು ಎನ್ನುತ್ತದೆ ಶಾಸ್ತ್ರ.

ಈ ಮಾತಿಗೆ ಇಂಬು ಕೊಡುವಂತೆ ತಾಯಿಗೆ ಪ್ರೀತಿಯಾಗಿದ್ದ ಗೋಸೇವೆಯನ್ನು ಕರ್ತವ್ಯ ದೃಷ್ಟಿಯಿಂದ ನಿರ್ವಹಿಸುತ್ತಿರುವ ಜನಾನುರಾಗಿ, ಧರ್ಮನಿಷ್ಠ, ಉದ್ಯಮಿ, ರಾಜಕಾರಣಿ ಸ್ನೇಹ ಔದಾರ್ಯದ ಖಣಿ ಗುರ್ಮೆ ಸುರೇಶ ಶೆಟ್ಟಿ ಅವರು ಕಾಪು ಸಮೀಪದ ಗುರ್ಮೆ ಎಂಬ ಕುಗ್ರಾಮದಲ್ಲಿ ಗುರ್ಮೆ ಗೋ ವಿಹಾರ ನಿರ್ಮಿಸಿದ್ದಾರೆ.

ಮಾತೃಶ್ರೀಯವರಾದ ಭಾಗೀರಥಿ ಶೆಟ್ಟಿಯವರ ಚತುರ್ಥ ಪುಣ್ಯಸ್ಮರಣೆಯ ಸಂದರ್ಭದಲ್ಲಿ ಚತುಷ್ಪಾದಿಗಳಾದ ಗೋವುಗಳ ಸ್ವಚ್ಛಂದ ವಿಹಾರಕ್ಕೆ ಅನುವು ಮಾಡಿಕೊಡುವ ಮೂಲಕ ಅಮ್ಮನ ಪ್ರೀತಿಗೆ ಪಾತ್ರರಾಗಿದ್ದಾರೆ.

ಕೃಷಿಕ ಕುಟುಂಬದಿಂದ ಬಂದಿರುವ ಗುರ್ಮೆ ಸುರೇಶ ಶೆಟ್ಟಿಯವರಿಗೆ ಗೋವುಗಳೆಂದರೆ ಅಚ್ಚುಮೆಚ್ಚು. ಅವರ ತಾಯಿ ಕೀರ್ತಿಶೇಷ ಭಾಗೀರಥಿ ಶೆಟ್ಟಿಯವರಿಗೂ ಕೃಷಿ, ಗೋಸಾಕಣೆ ಇಷ್ಟದ ಕಾಯಕವಾಗಿತ್ತು.

ಶರಣರನ್ನು ಮರಣದಲ್ಲಿ ಕಾಣು ಎಂಬಂತೆ ಅನಾಯಾಸ ಜೀವನ ಪೂರೈಸಿ, ಇಚ್ಛಾಮರಣಿಯಂತೆ ಯಾರಿಗೂ ಭಾರವಾಗದೇ ಇಹಲೋಕ ತ್ಯಜಿಸಿದ ಭಾಗೀರಥಿಯವರ ಸ್ಮರಣಾರ್ಥ ಕಳೆದ ನಾಲ್ಕು ವರ್ಷದ ಹಿಂದೆ ಭಾಗೀರಥಿ ಗೋ ಗೃಹ ಸ್ಥಾಪಿಸಿ ವಿವಿಧ ಜಾತಿಯ ಸುಮಾರು 70 ಹಸುಗಳನ್ನು ಸಲಹುತ್ತಿದ್ದಾರೆ ಗುರ್ಮೆ ಸುರೇಶ ಶೆಟ್ಟಿ.

ಭಾಗೀರಥಿ ಗೋ ಗೃಹದಲ್ಲಿ ದೇಸೀ ಗೋ ತಳಿಗಳಲ್ಲದೆ ಉತ್ತರ ಭಾರತದ ಅಪೂರ್ವ ತಳಿಗಳಾದ ಗೀರ್, ಸಾಹಿವಾಲ್, ಕಾಂಕ್ರೇಝ್, ತಾರಾಪಾರ್ಕರ್ ಮೊದಲಾದ ಗೋತಳಿವೆ. ಅವುಗಳ ವಂಶಾಭಿವೃದ್ಧಿ ಮಾಡಿ ಸ್ಥಳೀಯ ಆಸಕ್ತರಿಗೆ ನೀಡುವ ಆಶಯವನ್ನೂ ಸುರೇಶ ಶೆಟ್ಟಿ ಹೊಂದಿದ್ದಾರೆ.

ತಮ್ಮ ಹಿರೀಕರ ಭೂಮಿಯೊಂದಿಗೆ ಮತ್ತಷ್ಟನ್ನು ಖರೀದಿಸಿ ಸುಮಾರು 3 ಎಕರೆ ವಿಸ್ತಾರ ಜಾಗದಲ್ಲಿ ಸುಸಜ್ಜಿತ ಗುರ್ಮೆ ಗೋ ವಿಹಾರ ನಿರ್ಮಿಸಿರುವ ಸುರೇಶ ಶೆಟ್ಟಿ ಅವರು ಗೋವುಗಳ ಸ್ವಚ್ಛಂಧ ವಿಹಾರಕ್ಕೆ ಅನುವು ಮಾಡಿಕೊಡಲಿದ್ದಾರೆ.

ಸದ್ಯೋಭವಿಷ್ಯದಲ್ಲಿ ಗುರ್ಮೆ ಗೋವಿಹಾರ ಸುವಿಹಾರಿ ತಾಣವಾಗಿ ಪ್ರೇಕ್ಷಣೀಯ ತಾಣವಾಗುವುದರಲ್ಲಿ ಎರಡು ಮಾತಿಲ್ಲ.

ಹಿಂದೂಗಳಿಗೆ ಪುನರ್ಜನ್ಮದಲ್ಲಿ‌ ನಂಬಿಕೆ ಇದೆ. ನಮ್ಮ ತಾಯಿ ಅದೃಶ್ಯ ರೂಪದಿಂದ ಇಲ್ಲಿ ಸಂಚರಿಸುತ್ತಿದ್ದಾಳೆ ಎಂಬ ನಂಬುಗೆ ಸುರೇಶ ಶೆಟ್ಟಿಯವರಿಗಿದೆ. ತಾಯಿ ಭಾಗೀರಥಿಯಮ್ಮ ಎಂದಿಗೂ ಹೇಳುತ್ತಿದ್ದ ನಡೆ- ನುಡಿ ಏಕತ್ರವಾಗಿರಬೇಕು ಎಂಬಂತೆ ತಾಯಿಗೆ ಪ್ರೀತಿಯಾದ ಗೋ ಸೇವೆ ಜೊತೆಗೆ ಸತ್ಪಾತ್ರರಿಗೆ ನೆರವು ಇತ್ಯಾದಿ ನೆರವೇರಿಸಿದಲ್ಲಿ ನಮ್ಮ ತಾಯಿಯ ಆತ್ಮಕ್ಕೆ ಖಂಡಿತ ಶಾಂತಿ ಸಿಗುತ್ತದೆ ಎಂಬುದು ಗುರ್ಮೆ ಅವರ ಅಚಲ ವಿಶ್ವಾಸ.

ಈ ನಿಟ್ಟಿನಲ್ಲಿ ಕೀರ್ತನಸಾಂತ್ವನ- ಯಕ್ಷಗಾನ ಎಂಬ ವಿನೂತನ ಕಾರ್ಯಕ್ರಮದ ಮೂಲಕ ಫೆ. 20 ಭಾನುವಾರ ಸಮಾಜದ ದುರ್ಬಲರು ಅಸಹಾಯಕರು ನೊಂದವರಿಗೆ ನೆರವು, ಆಶಾ ಕಾರ್ಯಕರ್ತೆಯರು ಪೌರಕಾರ್ಮಿಕರಿಗೆ ಆದರ ನೀಡುವ ಮೂಲಕ ಕಲಾರಾಧನೆ, ಸಂಕೀರ್ತನೆಯ ಮೂಲಕ ಮಾನವ- ಮಾಧವ ಸೇವೆಯ ಕೈಂಕರ್ಯ ಧಾರ್ಮಿಕ ಸಾಮಾಜಿಕ ರಾಜಕೀಯ ನಾಯಕರ ಸಮಕ್ಷಮ ನಡೆಯಲಿದೆ.

ಆ ಮೂಲಕ ಅಮ್ಮನ ಪ್ರೀತಿಗಾಗಿ ಗೋವಿಹಾರ ಮೈದಳೆಯಲಿದೆ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!