Tuesday, May 17, 2022
Home ಲೋಕಾಭಿರಾಮ ಭಾವತರಂಗ ಉಡುಪಿ ಬಾಲಭವನದಲ್ಲಿ ಮಕ್ಕಳ ಕಲರವ

ಉಡುಪಿ ಬಾಲಭವನದಲ್ಲಿ ಮಕ್ಕಳ ಕಲರವ

ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಸಹಯೋಗದೊಂದಿಗೆ ಏಪ್ರಿಲ್ 28ರಿಂದ ಮೇ 7ರ ವರೆಗೆ ನಡೆದ ಉಚಿತ ಬೇಸಿಗೆ ಶಿಬಿರದಲ್ಲಿ ಮಕ್ಕಳು ಸಂತಸದಿಂದ ಭಾಗವಹಿಸಿ, ಸಂಭ್ರಮಿಸಿದ್ದನ್ನು ಮಕ್ಕಳೊಂದಿಗೆ ಮಕ್ಕಳಾದ ಮಗುಮನದ ಉಡುಪಿ ಲಕ್ಷ್ಮೀನಗರದ ಅನುಪಮಾ ಕೋಟ ಮನಸ್ಸಿಗೆ ಮುದ ನೀಡುವಂತೆ ಅಕ್ಷರಗಳನ್ನು ಪೋಣಿಸಿ ಸುದ್ದಿಕಿರಣ.ಕಾಂ ಓದುಗರಿಗೆ ಪದರಸಾಯನವುಣಬಡಿಸಿದ್ದಾರೆ.

ಉಡುಪಿ ಬಾಲಭವನದಲ್ಲಿ ಮಕ್ಕಳ ಕಲರವ
ಉಡುಪಿ: ರಾಜ್ಯ ಬಾಲಭವನ ಸೊಸೈಟಿ ಬೆಂಗಳೂರು, ಜಿಲ್ಲಾ ಬಾಲ ಭವನ ಸಮಿತಿ ಉಡುಪಿ ಹಾಗೂ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಡುಪಿ ಸಹಯೋಗದೊಂದಿಗೆ ಏ. 28ರಿಂದ 10 ದಿನಗಳ ಕಾಲ ಉಚಿತ ಬೇಸಿಗೆ ಶಿಬಿರವನ್ನು ಇಲ್ಲಿನ ಬ್ರಹ್ಮಗಿರಿಯಲ್ಲಿರುವ ಬಾಲ ಭವನದಲ್ಲಿ ಏರ್ಪಡಿಸಲಾಗಿತ್ತು.

5ರಿಂದ 15ರ ಹರೆಯದ ಸುಮಾರು 70ಕ್ಕೂ ಅಧಿಕ ಮಂದಿ ಮಕ್ಕಳು ಶಿಬಿರದಲ್ಲಿ ಭಾಗವಹಿಸಿದ್ದರು. ವಿಶೇಷ ಚೇತನ ಮಕ್ಕಳೂ ಭಾಗವಹಿಸಿರುವುದು ವಿಶೇಷವಾಗಿತ್ತು.

ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 4 ಗಂಟೆ ವರೆಗೆ ನಡೆಯುತ್ತಿದ್ದ ಶಿಬಿರದಲ್ಲಿ ಮಕ್ಕಳಿಗೆ ಉಚಿತ ಊಟ ತಿಂಡಿ ವ್ಯವಸ್ಥೆ ಮಾಡಲಾಗಿತ್ತು. ಜೊತೆಗೆ ಮಕ್ಕಳಿಗೆ ಸದಭಿರುಚಿಯ ವಿವಿಧ ಕಲೆಗಳನ್ನು ನುರಿತ ಶಿಕ್ಷಕರಿಂದ ಅಚ್ಚುಕಟ್ಟಾಗಿ ಕಲಿಸಿಕೊಡಲಾಗಿತ್ತು.

ದರ್ಪಣ ಸ್ಕೂಲ್ ಅಫ್ ಪರ್ಫಾಮಿಂಗ್ ಆರ್ಟ್ಸ್ ನ ಶಿಕ್ಷಕಿಯರಾದ ರಮ್ಯ ಮತ್ತು ರಕ್ಷಾ ಹಾಗೂ ತಂಡದವರು ನೃತ್ಯ ಕಲೆ, ಹೇಮಲತಾ ಅವರಿಂದ ಸಂಗೀತ, ಮಂಜುನಾಥ ಬೈಲೂರು ಚಿತ್ರ ಮತ್ತು ವರ್ಲಿ ಕಲೆ, ಸಂತೋಷ ಭಾಷಣ ಕಲೆ, ನಮಿತಾ ವಿವಿಧ ಕರಕುಶಲ ಕಲೆಗಳ ಬಗ್ಗೆ ತಿಳಿಸಿಕೊಟ್ಟರು.

ಈ ಎಲ್ಲಾ ಕಲೆಗಳನ್ನು ಕೇವಲ 10 ದಿನಗಳಲ್ಲಿ ಮಕ್ಕಳಿಗೆ ಕಲಿಸಿಕೊಟ್ಟ ಗುರುಗಳ ಚಾಕಚಕ್ಯತೆ ಪ್ರಶಂಸನೀಯ.

ಮೇ 7ರಂದು ಶಿಬಿರಾರ್ಥಿಗಳಿಗೆ ಮಣಿಪಾಲದ ಸಾಲುಮರದ ತಿಮ್ಮಕ್ಕನ ಪಾರ್ಕಿಗೆ ಪ್ರವಾಸ ಕೈಗೊಂಡು, ಅಪರಾಹ್ನ 3 ಗಂಟೆಯ ನಂತರ ಸಮಾರೋಪ ಸಭೆ ಆಯೋಜಿಸಲಾಗಿತ್ತು. ಅತಿಥಿ ಅಭ್ಯಾಗತರು ಹಾಗೂ ಪೋಷಕರು ಮಕ್ಕಳ ಪ್ರಯತ್ನ ಕಂಡು ಬೆರಗಾಗಿ ಎಲ್ಲಾ ಮಕ್ಕಳ ಶ್ರೇಯೋಭಿವೃದ್ಧಿಯನ್ನು ಹಾರೈಸಿದರು.

ಮಕ್ಕಳೇ ಕಾರ್ಯಕ್ರಮ ನಿರೂಪಿಸಿದರು. ಕೆಲವು ಮಂದಿ ಮಕ್ಕಳು ಬೇಸಿಗೆ ಶಿಬಿರದ ಅನುಭವ ಹಂಚಿಕೊಂಡರು. ಶಿಬಿರದಲ್ಲಿ ಕಲಿತ ಸಂಗೀತ, ನೃತ್ಯ ಪ್ರದರ್ಶಿಸಿದರು.

ಬೇಸಿಗೆ ಶಿಬಿರದ ಮುತುವರ್ಜಿ ವಹಿಸಿದ ಇಲಾಖೆಯ ರಮ್ಯ ಶಾಮ್ ಅವರಿಗೆ ಮಕ್ಕಳು ಮತ್ತು ಪೋಷಕರು ಚಿರಋಣಿ.

ಇಲಾಖೆಯಿಂದ ಇಂಥ ಕಾರ್ಯಕ್ರಮಗಳು ಹೆಚ್ಚು ಹೆಚ್ಚಾಗಿ ನಡೆಯಲಿ. ಮಕ್ಕಳು, ಪೋಷಕರು ಅದರ ಸದುಪಯೋಗ ಪಡೆಯುವಂತಾಗಲಿ.

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!