Monday, July 4, 2022
Home ಲೋಕಾಭಿರಾಮ ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ

ಭ್ರೂಣ ಲಿಂಗ ಪತ್ತೆ ಶಿಕ್ಷಾರ್ಹ ಅಪರಾಧ

ಉಡುಪಿ: ಭ್ರೂಣ ಲಿಂಗ ಪತ್ತೆಮಾಡುವುದು ಶಿಕ್ಷರ್ಹ ಅಪರಾಧವಾಗಿದ್ದು, ವೈದ್ಯರು ಭ್ರೂಣ ಲಿಂಗ ಪತ್ತೆಮಾಡಿದ್ದಲ್ಲಿ ಅಂಥವರಿಗೆ 3 ವರ್ಷ ಸೆರೆವಾಸ ಹಾಗೂ 50 ಸಾವಿರ ವರೆಗೆ ದಂಡ ವಿಧಿಸಲಾಗುತ್ತಿದೆ. ಮತ್ತೂ ಅಪರಾಧ ಮುಂದುವರಿದಲ್ಲಿ ಶಾಶ್ವತವಾಗಿ ವೈದ್ಯಕೀಯ ಮಂಡಳಿಯಿಂದ ಹೆಸರು ತೆಗೆದುಹಾಕಲಾಗುವುದು. ಮಹಿಳೆ, ಆಕೆಯ ಪತಿ, ಸಂಬಂಧಿಕರು ಭ್ರೂಣ ಲಿಂಗ ಪತ್ತೆಗೆ ಒತ್ತಾಯಿಸಿದ್ದಲ್ಲಿ ಅವರೂ ಶಿಕ್ಷೆಗೊಳಪಡುತ್ತಾರೆ ಎಂದು ಹಿರಿಯ ಸಿವಿಲ್ ನ್ಯಾಯಾಧೀಶೆ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸದಸ್ಯ ಕಾರ್ಯದರ್ಶಿ ಕಾವೇರಿ ಹೇಳಿದರು.

ಬುಧವಾರ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಕಚೇರಿಯಲ್ಲಿ ಜಿಲ್ಲಾಡಳಿತ, ಜಿ. ಪಂ., ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸಕ್ಷಮ ಪ್ರಾಧಿಕಾರ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಉಡುಪಿ ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ಸಂಯುಕ್ತಾಶ್ರಯದಲ್ಲಿ ನಡೆದ ಗರ್ಭಪೂರ್ವ ಮತ್ತು ಪ್ರಸವ ಪೂರ್ವ ಭ್ರೂಣ ಲಿಂಗ ಪತ್ತೆ ಕಾಯ್ದೆ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಜಾಗತಿಕವಾಗಿ ಹೆಣ್ಣು ಮಕ್ಕಳ ಸಂಖ್ಯೆ ಕಡಿಮೆಯಾಗಿದ್ದು, ಗರ್ಭದಲ್ಲಿರುವ ಮಗು ಗಂಡು ಅಥವಾ ಹೆಣ್ಣು ಎಂದು ಪತ್ತೆಹಚ್ಚುವ ಯಂತ್ರ ನಿಷೇಧಿಸಬೇಕು. ಭ್ರೂಣ ಲಿಂಗ ಪತ್ತೆ, ಭ್ರೂಣ ಲಿಂಗ ಆಯ್ಕೆಗೆ ಸಂಬಂಧಿಸಿದಂತೆ ಯಾವುದೇ ರೀತಿಯ ಜಾಹಿರಾತು ಪ್ರಸಾರವನ್ನು ಕಾಯ್ದೆ ನಿಷೇಧಿಸಿದೆ ಎಂದರು.

ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀರಾಮ್ ರಾವ್ ಕೆ. ಪ್ರಾಸ್ತಾವಿಕವಾಗಿ ಮಾತನಾಡಿ, ಪಿ.ಸಿ ಮತ್ತು ಪಿ.ಎನ್.ಡಿ.ಟಿ ಬಗ್ಗೆ ಪ್ರತಿವರ್ಷ ಅರಿವು ಮೂಡಿಸಲಾಗುತ್ತಿದೆ. ಆದರೂ ಉಡುಪಿಯಂಥ ಬುದ್ಧಿವಂತರ ಜಿಲ್ಲೆಯಲ್ಲಿ ಹೆಣ್ಣು ಮಕ್ಕಳ ಸಂಖ್ಯೆ ವರ್ಷದಿಂದ ವರ್ಷಕ್ಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಗ್ರಾಮ ಗ್ರಾಮಗಳಲ್ಲಿ ಕಾನೂನು ಅರಿವು ಮೂಡಿಸುವಲ್ಲಿ ಆಶಾ ಕಾರ್ಯಕರ್ತೆಯರು ಸಹಕರಿಸಬೇಕು ಎಂದರು.

ಜಿಲ್ಲೆಯಲ್ಲಿ 73 ಸ್ಕ್ಯಾನಿಂಗ್ ಸೆಂಟರ್ ಗಳಿವೆ. ಆಸ್ಪತ್ರೆಗಳಲ್ಲಿ ಭ್ರೂಣ ಲಿಂಗ ಪತ್ತೆಮಾಡುವುದಿಲ್ಲ ಎಂದು ಕಡ್ಡಾಯವಾಗಿ ನಾಮಫಲಕ ಹಾಕುವುದರಿಂದ ಜನರಲ್ಲಿ ಜಾಗೃತಿ ಮೂಡಿಸಬಹುದು. ಯಾವುದೇ ಸಂಸ್ಥೆಯವರು ಭ್ರೂಣ ಲಿಂಗ ಪತ್ತೆಮಾಡುವುದು ಕಂಡುಬಂದಲ್ಲಿ ಸಾಕ್ಷ್ಯಾಧಾರ ಸಹಿತ ದೂರು ನೀಡಿದಲ್ಲಿ 5 ಲಕ್ಷ ರೂ. ಬಹುಮಾನ ನೀಡಲಾಗುವುದು ಎಂದರು.

ಜಿಲ್ಲಾ ಪಿ.ಸಿ ಮತ್ತು ಪಿ.ಎನ್.ಡಿ.ಟಿ ಸಲಹಾ ಸಮಿತಿ ಪ್ರಸೂತಿತಜ್ಞ ಡಾ. ಪ್ರತಾಪ್ ಕುಮಾರ್ ಭ್ರೂಣ ಲಿಂಗ ಪತ್ತೆ ಕಾಯ್ದೆ ಕುರಿತ ಕರಪತ್ರ ಬಿಡುಗಡೆಗೊಳಿಸಿ, ಬೇರೆ ಬೇರೆ ರೀತಿಯಲ್ಲಿ ಭ್ರೂಣ ಲಿಂಗ ಪತ್ತೆಮಾಡಲು ಪ್ರಯತ್ನಿಸುತ್ತಾರೆ. ಅದು ಸರಿಯಲ್ಲ. ವೈದ್ಯರು ಇಂಥ ಕೃತ್ಯಕ್ಕೆ ಸಹಕಾರ ನೀಡಬಾರದು ಎಂದರು.

ಸಾರ್ವಜನಿಕರು ನಕಲಿ ವೈದ್ಯರನ್ನು ನಂಬಿ ಯಾವುದೇ ಆಮಿಷಗಳಿಗೆ ಒಳಗಾಗಬೇಡಿ ಎಂದು ಮನವಿ ಮಾಡಿದರು. ಗಂಡು, ಹೆಣ್ಣು ಎಂಬ ತಾರತಮ್ಯವಿಲ್ಲದೆ ಮಗುವನ್ನು ಪಡೆಯಬೇಕು. ಸೂಕ್ತ ಶಿಕ್ಷಣ ನೀಡಬೇಕು ಎಂದರು.

ಶಿಶು ಅಭಿವೃದ್ಧಿ ಅಧಿಕಾರಿ ವೀಣಾ ವಿವೇಕಾನಂದ, ಆಶಾ ಕಾರ್ಯಕರ್ತೆಯರು, ಮೆಂಟರ್ ಗಳು ಭಾಗವಹಿಸಿದ್ದರು. ಸರ್ಕಾರಿ ನೌಕರರ ಸಂಘದ ಜಿಲ್ಲಾಧ್ಯಕ್ಷ ಸುಬ್ರಹ್ಮಣ್ಯ ಶೇರಿಗಾರ್ ವಂದಿಸಿ, ನಿರೂಪಿಸಿದರು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!