Thursday, July 7, 2022
Home ಲೋಕಾಭಿರಾಮ ಉದ್ಯೋಗ ಉಡುಪಿಯಲ್ಲಿ 5 ಕೋ. ವೆಚ್ಚದಲ್ಲಿ ಕರಕುಶಲವಸ್ತು ಶೋರೂಮ್

ಉಡುಪಿಯಲ್ಲಿ 5 ಕೋ. ವೆಚ್ಚದಲ್ಲಿ ಕರಕುಶಲವಸ್ತು ಶೋರೂಮ್

ಉಡುಪಿ: ಕರ್ನಾಟಕ ಕರಕುಶಲ ಅಭಿವೃದ್ಧಿ ನಿಗಮ ವತಿಯಿಂದ ಉಡುಪಿಯಲ್ಲಿ 5 ಕೋ. ರೂ. ವೆಚ್ಚದಲ್ಲಿ ಕರಕುಶಲ ವಸ್ತುಗಳ ಶೋರೂಮ್ ಹಾಗೂ ಕುಂದಾಪುರದಲ್ಲಿ ಉತ್ಪಾದನಾ ಘಟಕವನ್ನು ಮುಂದಿನ ಮೂರು ತಿಂಗಳಲ್ಲಿ ಆರಂಭಿಸಲಾಗುವುದು ಎಂದು ನಿಗಮದ ಅಧ್ಯಕ್ಷ ಡಾ. ಬೇಳೂರು ರಾಘವೇಂದ್ರ ಶೆಟ್ಟಿ ತಿಳಿಸಿದರು.

ಇಲ್ಲಿನ ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಆಯೋಜಿಸಲಾದ ಆರು ದಿನಗಳವಧಿಯ ಕರಕುಶಲ ಮೇಳದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಈ ಬಗ್ಗೆ ಮುಖ್ಯಮಂತ್ರಿ ಯಡಿಯೂರಪ್ಪ ಜೊತೆ ಮಾತುಕತೆ ನಡೆಸಲಾಗಿದ್ದು, ಅವರು ಸಮ್ಮತಿಸಿದ್ದಾರೆ. ಈ ಭಾಗದ ಕರಕುಶಲಕರ್ಮಿಗಳಿಗೆ ಉತ್ತಮ ಕಟ್ಟಡ ನಿರ್ಮಾಣ ಮಾಡಿ, ಅವರಿಗೆ ಅಗತ್ಯವಿರುವ ಎಲ್ಲಾ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದರು.

ಸ್ಥಳೀಯವಾಗಿ ಉತ್ಪಾದನೆಯಾಗುವ ವಸ್ತುಗಳಿಗೆ ಹೆಚ್ಚಿನ ಒತ್ತುನೀಡುವ ಕಾರ್ಯ ಮಾಡಲಾಗುವುದು. ಸ್ವಾವಲಂಬಿ ಬದುಕು ನಡೆಸುತ್ತಿರುವ ಕರಕುಶಲಕರ್ಮಿಗಳು ಉತ್ಪಾದಿಸುವ ವಸ್ತುಗಳನ್ನು ಖರೀದಿಸುವ ಮೂಲಕ ಅವರಿಗೆ ಹೆಚ್ಚಿನ ಬೆಂಬಲ ನೀಡಬೇಕು. ವಿದೇಶಿ ವಸ್ತುಗಳಿಗೆ ಪ್ರೋತ್ಸಾಹ ನೀಡುವ ಬದಲು, ದೇಸೀ ವಸ್ತುಗಳನ್ನು ಖರೀದಿ ಮಾಡಬೇಕಾದ ಆವಶ್ಯಕತೆ ಇದೆ ಎಂದರು.

ಕರಕುಶಲ ವಸ್ತುಗಳನ್ನು ತಯಾರಿಸಲು ಕುಶಲಕರ್ಮಿಗಳಿಗೆ ಸಬ್ಸಿಡಿ ದರದಲ್ಲಿ ಗಂಧದ ಪರಿಕರ ನೀಡಲಾಗುವುದು. ಇಡೀ ರಾಜ್ಯದಲ್ಲಿ ಹೊಸದಾಗಿ 12 ಶೋರೂಮ್ ಗಳನ್ನು ಸ್ಥಾಪಿಸುವ ಉದ್ದೇಶವಿದ್ದು, ಕರ್ನಾಟಕದ ಪರಂಪರೆ ಬಿಂಬಿಸುವ ಹಂಪಿ, ಮೈಸೂರು ಅರಮನೆ, ಬೇಲೂರು, ಹಳೆಬೀಡು ಮಾದರಿಯ ವಸ್ತು ತಯಾರಿಸುವಂತೆ ಕರಕುಶಲಕರ್ಮಿಗಳಿಗೆ ಮನವಿ ಮಾಡಿರುವುದಾಗಿ ತಿಳಿಸಿದರು.

ಪರ್ಯಾಯ ಅದಮಾರು ಶ್ರೀ ವಿಶ್ವಪ್ರಿಯತೀರ್ಥ ಶ್ರೀಪಾದರು ಮತ್ತು ಸೋದೆ ಶ್ರೀ ವಿಶ್ವವಲ್ಲಭತೀರ್ಥ ಶ್ರೀಪಾದರು, ಅದಮಾರು ಮಠ ವ್ಯವಸ್ಥಾಪಕ ಗೋವಿಂದರಾಜ್ ಇದ್ದರು.

ಇದೇ ಸಂದರ್ಭದಲ್ಲಿ ಗುಡಿಕೈಗಾರಿಕೆಗಳಾದ ಮಡಿಕೆ ಹಾಗೂ ಬಿದಿರಿನ ಕರಕುಶಲ ವಸ್ತುಗಳ ಪ್ರದರ್ಶನ ನಡೆಸಲಾಯಿತು

ನಿಮಗೆ ಈ ಸುದ್ದಿ ಇಷ್ಟವಾಯ್ತಾ?
ಹಾಗಾದರೆ ಇತರರಿಗೂ SHARE ಮಾಡಿ ಓದಿಸಿ...

ಕಾಮೆಂಟ್ ಮಾಡಿ

error: Content is protected !!